ಡಿಜಿಟಲ್ ಮಾಧ್ಯಮ ನಿಯಂತ್ರಣ ಕಾನೂನಿಗೆ ಸರಕಾರದ ಸಂಶಯಗ್ರಸ್ತತೆ ಕಾರಣ: ‘ದಿ ಕಾರವಾನ್’ ವರದಿ

Update: 2021-03-04 19:09 GMT

ಹೊಸದಿಲ್ಲಿ: ಕೊರೋನ ಸೋಂಕಿನ ಪಿಡುಗು ಅತ್ಯಂತ ತೀವ್ರವಾಗಿದ್ದ ಸಂದರ್ಭದಲ್ಲೇ ಡಿಜಿಟಲ್ ಮಾಧ್ಯಮವನ್ನು ಮತ್ತು ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಸಚಿವರ ತಂಡ (ಜಿಒಎಂ) ವರದಿಯನ್ನು ಸಿದ್ಧಪಡಿಸಿದೆ. ಸರಕಾರದ ವಿರುದ್ಧ ಯಾವುದೇ ವಾಸ್ತವಾಂಶವಿಲ್ಲದ ಮತ್ತು ಸುಳ್ಳು ನಿರೂಪಣೆಯನ್ನು ಹೊಂದಿರುವ ವರದಿಗಳನ್ನು ಬರೆಯುತ್ತಿರುವ ಜನರನ್ನು ನಿಯಂತ್ರಿಸುವ ಕಾರ್ಯತಂತ್ರವನ್ನು ನಾವು ಹೊಂದಿರಬೇಕು ಎಂದು ಸಚಿವರ ಸದಸ್ಯ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯವೇ ವರದಿಯ ಸಾರಾಂಶವನ್ನು ಬಿಂಬಿಸುತ್ತದೆ ಎಂದು ವರದಿಯ ಅಂಶವನ್ನು ಉಲ್ಲೇಖಿಸಿ ‘ದಿ ಕಾರವಾನ್’ ಅಭಿಪ್ರಾಯಪಟ್ಟಿದೆ.

ಐವರು ಕ್ಯಾಬಿನೆಟ್ ಸಚಿವರು ಹಾಗೂ ನಾಲ್ಕು ಸಹಾಯಕ ಸಚಿವರು ಜಿಒಎಂನಲ್ಲಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸುಳ್ಳು ಸುದ್ದಿ ಎಂಬುದರ ವ್ಯಾಖ್ಯಾನ ಅಥವಾ ಸುಳ್ಳು ಸುದ್ಧಿಯನ್ನು ಸರಕಾರ ಹೇಗೆ ಗುರುತಿಸುತ್ತದೆ ಎಂಬ ವಿವರಣೆ ವರದಿಯಲ್ಲಿಲ್ಲ. ಮಾಧ್ಯಮಗಳಲ್ಲಿ ಸರಕಾರದ ಪ್ರತಿಷ್ಠೆಯನ್ನು ಹೆಚ್ಚಿಸುವ ಸುದ್ಧಿಗೇ ಆಸ್ಪದ ನೀಡಬೇಕು ಎಂಬುದು ವರದಿಯ ಆಶಯವಾಗಿರುವುದು ಸ್ಪಷ್ಟವಾಗಿದೆ. ಆದರೆ ಇದನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ಅಸ್ಪಷ್ಟತೆಯಿದೆ. ಋಣಾತ್ಮಕ ವರದಿ ಸಿದ್ಧಪಡಿಸುವ ಪತ್ರಕರ್ತರನ್ನು ಗುರುತಿಸುವುದು ಮತ್ತು ಇಂತಹ ಪತ್ರಕರ್ತರಿಗೆ ಇದಿರಾಗಿ, ಸರಕಾರದ ಪ್ರತಿಷ್ಠೆಯನ್ನು ಹೆಚ್ಚಿಸುವ ರೀತಿಯ ವರದಿಯನ್ನು ಬರೆಯುವ ಪತ್ರಕರ್ತರನ್ನು ಸೃಷ್ಟಿಸಿ ಜನರಲ್ಲಿ ಸರಕಾರದ ಪರ ಭಾವನೆ ಮೂಡಿಸುವ ಅಗತ್ಯವನ್ನು ವರದಿಯಲ್ಲಿ ಪ್ರಸ್ತಾವಿಸಲಾಗಿದೆ.

ಇದೇ ಕಾರ್ಯಯೋಜನೆಯನ್ನು ಹೊಂದಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ಕಾನೂನು 2021ನ್ನು ಸರಕಾರ ಇತ್ತೀಚೆಗೆ ಅಧಿಸೂಚನೆ ಮೂಲಕ ಪ್ರಕಟಿಸಿದೆ. ಡಿಜಿಟಲ್ ಮಾಧ್ಯಮದ ಮೇಲೆ ಸರಕಾರ ಅತಿಯಾದ ನಿಯಂತ್ರಣ ಹೇರಲು ಹೊರಟಿದೆ ಎಂದು ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. 2020ರ ಮಧ್ಯಭಾಗದಲ್ಲಿ ಮಾಧ್ಯಮ ಕ್ಷೇತ್ರದ ಪ್ರಮುಖ ವ್ಯಕ್ತಿಗಳೊಂದಿಗೆ ನಡೆಸಿದ 6 ಸಭೆಯ ಅಭಿಪ್ರಾಯ, ಸಲಹೆ ಆಧಾರದಲ್ಲಿ ಈ ವರದಿ ತಯಾರಿಸಲಾಗಿದೆ ಎಂದು ಜಿಒಎಂ ಹೇಳಿದೆ. ಡಿಜಿಟಲ್ ಮಾಧ್ಯಮಗಳ ನಿಯಂತ್ರಣ ಪ್ರಕ್ರಿಯೆಗೂ ಮುನ್ನ ಪತ್ರಕರ್ತರಿಗೆ ಬಣ್ಣ ಸಂಹಿತೆ ರೂಪಿಸಬೇಕೆಂದು ಈ ಹಿಂದೆ ಪತ್ರಕರ್ತರಾಗಿದ್ದ, ಈಗ ರಾಷ್ಟ್ರೀಯ ಭದ್ರತಾ ಸಹೆಗಾರ ಅಜಿತ್ ದೋವಲ್‌ರ ನಿಕಟವರ್ತಿಯಾಗಿರುವ ನಿತಿನ್ ಗೋಖಲೆ ಸಲಹೆ ನೀಡಿದ್ದರು. ಈ ಸಲಹೆಯ ಪ್ರಕಾರ, ಹಸಿರು ಪಟ್ಟಿ ಎಂದರೆ ಅಡ್ಡಗೋಡೆಯಲ್ಲಿ ಕೂತವರು(ಯಾವ ಕಡೆಗೂ ವಾಲಬಲ್ಲವರು), ಕಪ್ಪು ಪಟ್ಟಿ- ಸರಕಾರದ ವಿರುದ್ಧವಿರುವವರು, ಬಿಳಿ- ಸರಕಾರದ ಪರ. ಸರಕಾರದ ಪರ ಇರುವ ಪತ್ರಕರ್ತರಿಗೆ ನೆರವಾಗಿ ಅವರು ಉನ್ನತಿ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಗೋಖಲೆ ಸಲಹೆ ನೀಡಿದ್ದರು.

ಇನ್ನೊಬ್ಬ ಸಲಹೆಗಾರ, ರಿಲಯನ್ಸ್ ಸಂಸ್ಥೆಯೊಂದಿಗೆ ನಿಕಟವಾಗಿರುವ ಕಾಂಚನ್ ಗುಪ್ತರ ಪ್ರಕಾರ ‘ ಆನ್‌ಲೈನ್ ಮಾಧ್ಯಮ ಈಗ ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರ. ಆನ್‌ಲೈನ್ ಮಾಧ್ಯಮದ ಮೇಲೆ ಹೇಗೆ ಪ್ರಭಾವ ಬೀರಬಹುದು ಅಥವಾ ಜಾಗತಿಕ ವ್ಯಾಪ್ತಿಯಿರುವ ನಮ್ಮದೇ ಸ್ವಂತ ಆನ್‌ಲೈನ್ ಪೋರ್ಟಲ್ ಆರಂಭಿಸುವ ಬಗ್ಗೆ ನಿರ್ಧರಿಸುವ ಕಾಲ ಇದಾಗಿದೆ’. ವರದಿ ತಯಾರಿಸುವ ಸಂದರ್ಭ ಜಿಒಎಂ ಸಂಪರ್ಕಿಸಿದ ಮತ್ತೊಬ್ಬ ಗಣ್ಯವ್ಯಕ್ತಿ ಆರೆಸ್ಸೆಸ್ ಸಿದ್ಧಾಂತವಾದಿ ಎಸ್. ಗುರುಮೂರ್ತಿ. ಪೋಖ್ರಾನ್ ವಿಷಯ ಹೆಚ್ಚು ಗಮನ ಸೆಳೆಯಬೇಕಿದ್ದರೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಥವಾ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಬಗ್ಗೆ ಏನಾದರೊಂದು ಹೇಳಬೇಕು. ಮಾಧ್ಯಮಗಳ ಹಗೆತನವನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗುವ ಬಗ್ಗೆ ನಾವು ಗಮನ ಹರಿಸಬೇಕು ಎಂಬುದು ಗುರುಮೂರ್ತಿಯ ಸಲಹೆಯಾಗಿತ್ತು.

ಕೆಲವು ಖ್ಯಾತ ಶಿಕ್ಷಣ ತಜ್ಞರು, ವಿವಿ ಕುಲಪತಿಗಳು, ನಿವೃತ್ತ ಸರಕಾರಿ ಅಧಿಕಾರಿಗಳನ್ನು ಗುರುತಿಸಿ ನಮ್ಮ ಸಾಧನೆ ಮತ್ತು ನಮ್ಮ ಪರಿಕಲ್ಪನೆಯನ್ನು ಜನರಿಗೆ ಕಣ್ಣಿಗೆ ಕಟ್ಟುವಂತೆ ತಿಳಿಸುವ ಕಾರ್ಯವಾಗಬೇಕು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದರು.

ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳು ಆಯಾ ಮಾಧ್ಯಮಗಳಲ್ಲಿ ಹೂಡಿಕೆ ಮಾಡಿರುವ ವಿದೇಶೀ ಸಂಸ್ಥೆಗಳ ಪ್ರಭಾವಕ್ಕೆ ಒಳಗಾಗಿರಬಾರದು . ಆದ್ದರಿಂದ ಸುದ್ದಿ ಮಾಧ್ಯಮದಲ್ಲಿ ವಿದೇಶಿ ಹೂಡಿಕೆಗೆ ಶೇ. 26% ಮಿತಿ ಹೇರಬೇಕು ಎಂದು ವರದಿ ಶಿಫಾರಸು ಮಾಡಿತ್ತು. ಬಳಿಕ, 2019ರ ಆಗಸ್ಟ್‌ನಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಕೇಂದ್ರ ಸರಕಾರ 26% ಮಿತಿ ಹೇರಿರುವುದನ್ನು ಇಲ್ಲಿ ಗಮನಿಸಬಹುದು ಎಂದು ವರದಿಯನ್ನು ಉಲ್ಲೇಖಿಸಿ ‘ದಿ ಕಾರವಾನ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News