ಪೂರ್ವ ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನ: 11 ಮಂದಿ ಮೃತ್ಯು

Update: 2021-03-05 05:44 GMT
ಸಾಂದರ್ಭಿಕ ಚಿತ್ರ

ಅಂಕಾರ: ಪೂರ್ವ ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ವೊಂದು ಗುರುವಾರ ಪತನಗೊಂಡ ಪರಿಣಾಮವಾಗಿ 11 ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದರೆ, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 

ಮೃತಪಟ್ಟವರಲ್ಲಿ ಉನ್ನತ ಶ್ರೇಣಿಯ ಅಧಿಕಾರಿಯೂ ಇದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಕೂಗರ್ ಮಾದರಿಯ ಹೆಲಿಕಾಪ್ಟರ್ ಪ್ರಮುಖವಾಗಿ ಕುರ್ದಿಶ್ ಜನಸಂಖ್ಯೆಯಿರುವ ಬಿಟ್ಲಿಸ್ ಪ್ರಾಂತ್ಯದ ತತ್ವಾನ್ ಪಟ್ಟಣಕ್ಕೆ ಸಮೀಪವಿರುವ ಸೆಕ್ಮೀಸ್ ಗ್ರಾಮದ ಬಳಿ ಪತನಗೊಂಡಿತು. ಇದು ಹತ್ತಿರದ ಪ್ರಾಂತ್ಯ ಬಿಂಗೋಲ್‍ನಿಂದ ತತ್ವಾನ್ ಗೆ ತೆರಳುತ್ತಿದ್ದಾಗ ಮಧ್ಯಾಹ್ನ 2:25ಕ್ಕೆ ಅಧಿಕಾರಿಗಳ ಸಂಪರ್ಕವನ್ನು ಕಳೆದುಕೊಂಡಿತು ಎಂದು ಸಚಿವಾಲಯ ತಿಳಿಸಿದೆ.

ಹೆಲಿಕಾಪ್ಟರ್ ಪತನದಲ್ಲಿ ಬಲಿಪಶುವಾದವರ ಪೈಕಿ ಸೇನಾದಳದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಸ್ಮಾನ್ ಎರ್ಬಾಸ್ ಸೇರಿದ್ದಾರೆ ಎಂದು ಟರ್ಕಿಯ ಪ್ರಮುಖ ರಾಷ್ಟ್ರೀಯವಾದಿ ಪಕ್ಷದ ನಾಯಕರೊಬ್ಬರು  ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸ್ಥಳದಲ್ಲಿ 9 ಮಂದಿ ಸಾವನ್ನಪ್ಪಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಗಂಭೀರ ಗಾಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಪತನ ಒಂದು ಅವಘಡವಾಗಿದ್ದು, ಇದಕ್ಕೆ ಕಾರಣ ತಕ್ಷಣಕ್ಕೆ ಗೊತ್ತಾಗಿಲ್ಲ. ಹಿಮ ಹಾಗೂ ಮಂಜು ಸೇರಿದಂತೆ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಪತನವಾಗಿದೆ ಎಂದು  ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News