ಭಾರತೀಯ ಅಮೆರಿಕನ್ನರು ಅಮೆರಿಕಾದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ: ಜೋ ಬೈಡನ್

Update: 2021-03-05 06:21 GMT

ವಾಷಿಂಗ್ಟನ್ : ಭಾರತೀಯ ಅಮೆರಿಕನ್ನರು ಅಮೆರಿಕಾದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದಾರೆ. ತಮ್ಮ ಆಡಳಿತದಲ್ಲಿ  ಹೆಚ್ಚಿನ ಸಂಖ್ಯೆಯ ಭಾರತೀಯ ಅಮೆರಿಕನ್ನರ ನೇಮಕಾತಿಗಳನ್ನು ಉಲ್ಲೇಖಿಸಿ ಅವರು ಮೇಲಿನ ಮಾತುಗಳನ್ನು ಆಡಿದ್ದಾರೆ.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು  50 ದಿನಗಳೂ ಆಗಿಲ್ಲದೇ ಇದ್ದರೂ ಅದಾಗಲೇ ತಮ್ಮ ಆಡಳಿತದ ಪ್ರಮುಖ ಹುದ್ದೆಗಳಿಗೆ ಕನಿಷ್ಠ 55 ಭಾರತೀಯ ಅಮೆರಿಕನ್ನರನ್ನು ಬೈಡನ್ ನೇಮಕಗೊಳಿಸಿದ್ದಾರೆ. ಅವರ ಭಾಷಣ ಬರಹಗಾರರಿಂದ ಹಿಡಿದು ನಾಸಾ ತನಕ ಪ್ರಮುಖ ಹುದ್ದೆಗಳಿಗೆ ಭಾರತೀಯ ಅಮೆರಿಕನ್ನರು ನೇಮಕಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

"ಭಾರತೀಯ ಮೂಲದ ಅಮೆರಿಕನ್ನರು ದೇಶದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ನೀವು (ಸ್ವಾತಿ ಮೋಹನ್), ನನ್ನ ಉಪಾಧ್ಯಕ್ಷೆ (ಕಮಲಾ ಹ್ಯಾರಿಸ್), ನನ್ನ ಭಾಷಣ ಬರಹಗಾರ (ವಿನಯ್ ರೆಡ್ಡಿ),'' ಎಂದು ಮಂಗಳ ಗ್ರಹದಲ್ಲಿ ಇಳಿದ ಪರ್ಸೆವರೆನ್ಸ್ ಮಿಷನ್‍ನಲ್ಲಿ ಪಾಲ್ಗೊಂಡ  ನಾಸಾ ವಿಜ್ಞಾನಿಗಳೊಂದಿಗಿನ ವರ್ಚುವಲ್ ಸಂವಾದದಲ್ಲಿ ಬೈಡೆನ್ ಹೇಳಿದರು.

ನಾಸಾದ ಮಾರ್ಸ್ 2020 ಮಿಷನ್ ಕಾರ್ಯಾಚರಣೆಗಳ ನೇತೃತ್ವವನ್ನು ಭಾರತೀಯ ಅಮೆರಿಕನ್ ವಿಜ್ಞಾನಿ ಸ್ವಾತಿ ಮೋಹನ್ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News