ಮಂಗಳನ ಅಂಗಳದ ವಾಸ ಹೇಗಿರುತ್ತೆ?

Update: 2021-03-06 19:30 GMT

ಒಮ್ಮಮ್ಮೆ ಭೂಮಿಯ ಮೇಲಿನ ರೋಗರುಜಿನಗಳು, ಜನರಲ್ಲಿನ ದ್ವೇಷ ಅಸೂಯೆಗಳು ಯಾವಾಗ ಕಡಿಮೆಯಾಗುತ್ತವೆಯೋ ಎನ್ನುವಂತಾಗುತ್ತದೆ. ಕಲುಷಿತ ವಾತಾವರಣದಿಂದ ಬೇಸತ್ತ ಜೀವಕ್ಕೆ ಭೂವಾಸದಿಂದ ಬೇಜಾರಾಗುವುದು ಸಹಜ. ಭೂಗ್ರಹದ ಇಂತಹ ಅನೇಕ ತಾಪತ್ರಯಗಳಿಂದ ರೋಸಿಹೋದ ಮಾನವ ವಾಸಕ್ಕಾಗಿ ಅನ್ಯಗ್ರಹ ಹುಡುಕುತ್ತಿರುವುದು ಸಹಜವಾಗಿಯೇ ಇದೆ. ಇದಕ್ಕಾಗಿ ತನ್ನ ಸಮೀಪದ ಮಂಗಳ ಗ್ರಹದತ್ತ ಕಣ್ಣೋಟ ಹಾಕಿರುವುದು ವೇದ್ಯವಾಗುತ್ತದೆ. ಅದಕ್ಕಾಗಿ ಮಂಗಳ ಗ್ರಹವನ್ನು ವಸಾಹತುವನ್ನಾಗಿ ಮಾಡಿಕೊಳ್ಳುವ ಬಗ್ಗೆ ಜನರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅದು ಈಗಲೇ ಸಂಭವಿಸಿದರೆ ಮಂಗಳನಲ್ಲಿ ಮೊದಲ ಮಾನವರ ಜೀವನ ಹೇಗಿರುತ್ತೆ? ಮಂಗಳನ ಮೇಲ್ಮೈ ಅಂಗಳದಲ್ಲಿ ಸಾಧ್ಯವಾ? ಮಂಗಳ ಗ್ರಹದ ಮೇಲಿನ ವಿಕಿರಣಗಳಿಂದ ನಾವು ತಪ್ಪಿಸಿಕೊಳ್ಳುವುದು ಹೇಗೆ? ಇತ್ಯಾದಿ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಇಂತಹ ನಮ್ಮ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ. ಹಾಗಾದರೆ ಇನ್ಯಾಕೆ ತಡ. ಬನ್ನಿ, ಮಂಗಳನ ಅಂಗಳಕ್ಕೆ ಒಂದಿಷ್ಟು ಸುತ್ತಾಡಿ ಬರೋಣ.

ದೂರ... ದೂರ...
ಭೂಮಿ ಮತ್ತು ಮಂಗಳನ ನಡುವಿನ ದೂರ ಎಷ್ಟು ಗೊತ್ತೇ? ದೂರ ತಿಳಿಯಲು ಅವುಗಳ ಕಕ್ಷಾಪಥ ಹಾಗೂ ಚಲಿಸುವ ವೇಗ ತಿಳಿದಿರಬೇಕು. ಎರಡೂ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ಸೂರ್ಯನ ಸುತ್ತ ಸುತ್ತುತ್ತವೆ. ಈ ಎರಡೂ ಗ್ರಹಗಳ ಕಕ್ಷೆ ಮತ್ತು ಚಲಿಸುವ ವೇಗ ಒಂದೇ ಆಗಿಲ್ಲದ ಕಾರಣ ದೂರದಲ್ಲಿ ವ್ಯತ್ಯಾಸಗಳಾಗುತ್ತವೆ. ಭೂಮಿಯಿಂದ ಮಂಗಳನ ಕನಿಷ್ಠ ದೂರ 54.6 ದಶಲಕ್ಷ ಕಿ.ಮೀ. ಗರಿಷ್ಠ ದೂರ 401 ದಶಲಕ್ಷ ಕಿ.ಮೀ. ಹಾಗೂ ಸರಾಸರಿ ದೂರ 225 ದಶಲಕ್ಷ ಕಿ.ಮೀ. ಆಗಿದೆ.

ಮಂಗಳನ ಬಗ್ಗೆ ಒಂದಿಷ್ಟು...
ಮಂಗಳ ಗ್ರಹವು ಸೂರ್ಯನಿಂದ ನಾಲ್ಕನೇ ಗ್ರಹವಾಗಿದ್ದು, ಅಂಗಾರಕ ಹಾಗೂ ಕೆಂಪುಗ್ರಹ ಎಂಬ ಅಭಿನಾಮಗಳಿವೆ. ಭೂಮಿಯ ಶೇಕಡಾ 53 ರಷ್ಟು ಗಾತ್ರ ಹೊಂದಿದೆ. ಸೌರವ್ಯೆಹದಲ್ಲಿ ಬುಧನ ನಂತರ ಎರಡನೇ ಚಿಕ್ಕ ಗ್ರಹವಾಗಿದೆ. ಮಂಗಳ ಗ್ರಹಕ್ಕೆ ಫೋಬೋಸ್ ಮತ್ತು ಡಿಮೋಸ್ ಎಂಬ ಎರಡು ಸ್ವಾಭಾವಿಕ ಉಪಗ್ರಹಗಳಿವೆ. ಮಂಗಳನ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಮುಖ್ಯವಾಗಿದ್ದು, ನೈಟ್ರೋಜನ್, ಆರ್ಗಾನ್, ಅಲ್ಪ ಪ್ರಮಾಣದ ಆಕ್ಸಿಜನ್, ಕಾರ್ಬನ್ ಮೋನಾಕ್ಸೈಡ್, ನೀರಾವಿ, ಧೂಳಿನ ಬಿರುಗಾಳಿ ಇದೆ. ಮಂಗಳ ಗ್ರಹ ನಮ್ಮ ಸೌರಮಂಡಲದಲ್ಲಿಯೇ ಅತೀ ದೊಡ್ಡ ಪರ್ವತ ಹಾಗೂ ಭಯಂಕರ ಧೂಳಿನ ಬಿರುಗಾಳಿಯ ನೆಲೆಯಾಗಿದೆ. ಮಂಗಳ ಗ್ರಹದ ಮೇಲ್ಮೈಯಲ್ಲಿ ಕಬ್ಬಿಣ ಭರಿತ ಖನಿಜ ಹೆಚ್ಚಿರುವುದರಿಂದ ಕೆಂಪು ಬಣ್ಣ ಪಡೆದಿದೆ. ಈ ಕಾರಣಕ್ಕೆ ಮಂಗಳನನ್ನು ಕೆಂಪುಗ್ರಹ ಎಂದೂ ಕರೆಯುತ್ತಾರೆ. ಇಲ್ಲಿನ ಉಷ್ಣತೆ +20º ಸೆಲ್ಸಿಯಸ್(70º ಫ್ಯಾರನ್‌ಹೀಟ್) ಮತ್ತು -153º ಸೆಲ್ಸಿಯಸ್(-225º ಫ್ಯಾರನ್‌ಹೀಟ್) ಇದೆ.

ಮಂಗಳನ ಅಂಗಳಕ್ಕೆ ಕಾಲಿಟ್ಟ ಮಾನವ ನಿರ್ಮಿತ ಮಿಶನ್‌ಗಳು:

1965ರಲ್ಲಿ ಮೊದಲ ಬಾರಿಗೆ ಮಂಗಳ ಗ್ರಹಕ್ಕೆ ಬಾಹ್ಯಾಕಾಶ ನೌಕೆ ಕಳಿಸಲಾಯಿತು. ಅದರ ಹೆಸರು ಮಾರಿನರ್-4. 1976ರಲ್ಲಿ ಎರಡು ವೈಕಿಂಗ್ ಅಂತರಿಕ್ಷ ನೌಕೆಗಳು ಮಂಗಳನ ಮೇಲೆ ಇಳಿದು ಅತ್ಯುಪಯುಕ್ತ ಮಾಹಿತಿಯನ್ನು ರವಾನಿಸಿದವು. 1997ರಲ್ಲಿ ಅಮೆರಿಕದ ಅಂತರಿಕ್ಷ ನೌಕೆ ‘ಪಾತ್ ಫೈಂಡರ್’ನ ಸೋರ್ಜನರ್ ವಾಹನವು ಅಲ್ಲಿನ ಬಂಡೆಗಳ ರಚನೆ ಬಗ್ಗೆ ಮಾಹಿತಿ ಕಳಿಸಿತು. ಇವುಗಳ ಜೊತೆಗೆ ಫೆಬ್ರವರಿ 1969ರಲ್ಲಿ ಮಾರಿನರ್-6, ಮಾರ್ಚ್ 1969ರಲ್ಲಿ ಮಾರಿನರ್-7, ಮೇ 1971ರಲ್ಲಿ ಮಾರ್ಸ್‌-2 ಮತ್ತು ಮಾರ್ಸ್‌-3, ಮಾರಿನರ್-9, ಆಗಸ್ಟ್ 1975ರಲ್ಲಿ ವೈಕಿಂಗ್-1, ಸೆಪ್ಟಂಬರ್ 1975ರಲ್ಲಿ ವೈಕಿಂಗ್-2, 1996ರಲ್ಲಿ ಮಾರ್ಸ್‌ ಗ್ಲೋಬಲ್ ಸರ್ವೆಯರ್, 2003ರಲ್ಲಿ ಸ್ಪಿರ್ತಿ ಮತ್ತು ಅಪಾರ್ಚುನಿಟಿ, 2004ರಲ್ಲಿ ರೊಸೆಟ್ಟಾ, 2007ರಲ್ಲಿ ಫಿನಿಕ್ಸ್ ಮತ್ತು ಡಾನ್, 2018ರಲ್ಲಿ ಮಾರ್ಕೋ ನೌಕೆಗಳು ಮಂಗಳನ ಅಂಗಳದಲ್ಲಿ ಕಾಲಿಟ್ಟು ವಿವಿಧ ರೀತಿಯ ಮಾಹಿತಿ ಸಂಗ್ರಹಿಸಿ ಭೂಮಿಗೆ ರವಾನಿಸಿವೆ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಮಂಗಳನ ಅಂಗಳದಲ್ಲಿ ಮಾನವ ಜೀವನದ ಕನಸು ಚಿಗುರುತ್ತಿದೆ.

ಮಂಗಳನಲ್ಲಿ ಜೀವನ:
ಮೂವತ್ತು ಸಾವಿರ ವರ್ಷಗಳ ಹಿಂದೆ ಮಂಗಳನ ಅಂಗಳದಿಂದ ಭೂಮಿಗೆ ಬಿದ್ದ ಉಲ್ಕೆಯೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದರು. ಅದರಿಂದ ಮೂರ್ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ಏಕಕೋಶೀಯ ಜೀವಿಗಳು ಇದ್ದಿರಬಹುದೆಂದು ಹೇಳಿದರು. ಅಲ್ಲದೆ ಮಂಗಳನಲ್ಲಿ ನೀರು ಇತ್ತು ಎಂಬುದಕ್ಕೆ ಅನೇಕ ಪುರಾವೆಗಳನ್ನು ವಿಜ್ಞಾನಿಗಳು ಕಂಡುಕೊಂಡರು. ಮಂಗಳನ ಧ್ರುವಗಳಲ್ಲಿ ಮಂಜುಗಡ್ಡೆ ಇತ್ತು ಎಂಬುದಕ್ಕೆ ಅನೇಕ ಪುರಾವೆಗಳನ್ನು ಪತ್ತೆ ಹಚ್ಚಿದ್ದಾರೆ. ಮಂಗಳನಲ್ಲಿ ನೀರಿದೆ ಎಂಬುದು ತಿಳಿಯುತ್ತಿದ್ದಂತೆ, ಆ ಗ್ರಹದಲ್ಲೂ ಮಾನವ ಜೀವನ ನಡೆಸಬಹುದು ಎಂಬ ಕನಸು ಮೂಡತೊಡಗಿತು. 2014ರಲ್ಲಿ ಮಂಗಳನ ಅಂಗಳಕ್ಕೆ ಕಾಲಿಟ್ಟ ನಾಸಾದ ಕ್ಯೂರಿಯಾಸಿಟಿ ರೋವರ್ ಇಲ್ಲಿ ನೀರು ಇರುವುದನ್ನು ದೃಢಪಡಿಸಿತು. ಹಾಗಾಗಿ ಮಂಗಳನಲ್ಲಿ ನೆಲೆಸುವ ಮಾನವನ ಕನಸುಗಳು ಮತ್ತಷ್ಟು ಬಣ್ಣ ಪಡೆದವು. ಹಾಗಾದರೆ ನಾಳೆಯೇ ನಾವು ಮಂಗಳನಲ್ಲಿ ವಾಸಿಸಲು ಪ್ರಾರಂಭಿಸಿದರೆ ಏನಾಗುತ್ತೇ? ಎಂಬುದೇ ನಮ್ಮೆಲ್ಲರ ಕಾತುರ.

ಮಂಗಳನ ಅಂಗಳಕ್ಕೆ ಪ್ರಯಾಣ:

ಭೂಮಿಯಿಂದ ಮಂಗಳನ ಅಂಗಳ ತಲುಪಲು ಸರಾಸರಿ 225 ದಶಲಕ್ಷ ಕಿ.ಮೀ. ಪ್ರಯಾಣ ಮಾಡಲೇಬೇಕಲ್ಲವೇ? ಭೂಮಿಯಿಂದ ಇದುವರೆಗೂ ಉಡಾವಣೆಯಾದ ಅತೀವೇಗದ ಬಾಹ್ಯಾಕಾಶ ನೌಕೆಯಲ್ಲಿ ಮಂಗಳನತ್ತ ನಮ್ಮ ಪಯಣ ಪ್ರಾರಂಭಿಸಿದರೆ, ನಾವು ಅಲ್ಲಿಗೆ ತಲುಪಲು ಬರೋಬ್ಬರಿ ಒಂಭತ್ತು ತಿಂಗಳು ಬೇಕು. ಈ ಪ್ರಯಾಣದ ಅವಧಿಯಲ್ಲಿ ದಿಗಂತದಿಂದ ಕಾಣುವ ಮಂಗಳ ಶುಷ್ಕ ಹಾಗೂ ನಿರ್ಜೀವ ಗ್ರಹದಂತೆ ಕಾಣುತ್ತದೆ. ಮಂಗಳ ತಲುಪಿದ ಕೂಡಲೇ ಉಸಿರಾಡಲು ಬೇಕಾದ ಆಮ್ಲಜನಕವನ್ನು ಉತ್ಪಾದಿಸಿಕೊಳ್ಳು ವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕು. ಏಕೆಂದರೆ ಮಂಗಳನ ವಾತಾವರಣವು ತುಂಬಾ ತೆಳುವಾಗಿದ್ದು, ಶೇ.95ರಷ್ಟು ಇಂಗಾಲದ ಡೈ ಆಕ್ಸೈಡ್ ಹೊಂದಿದೆ. ಬದುಕಲು ಅಗತ್ಯವಿರುವ ಆಮ್ಲಜನಕವನ್ನು ಎಲ್ಲಿಂದ ತರಬೇಕು ಎಂಬುದೇ ಸಮಸ್ಯೆಯಾಗುತ್ತದೆ. ಇದಕ್ಕಾಗಿ ನಾಸಾವು ಒಂದು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ.

MOXIE ಎನ್ನುವ ತಂತ್ರಜ್ಞಾನದ ಮೂಲಕ ಘನರೂಪದ ಇಂಗಾಲದ ಡೈ ಆಕ್ಸೈಡನ್ನು ವಿದ್ಯುದ್ವಿಭಜನೆ ಪ್ರಕ್ರಿಯೆಯ ಮೂಲಕ ಅಲ್ಪ ಪ್ರಮಾಣದ ಆಮ್ಲಜನಕವನ್ನು ಉತ್ಪಾದಿಸಲಾಗುತ್ತದೆ. ಆದರೆ ಸದ್ಯಕ್ಕೆ ಇದು ದುಬಾರಿ ಪ್ರಕ್ರಿಯೆಯಾಗಿದೆ. ಅಲ್ಲದೇ ಇದು ಮಾನವರಿಗಾಗಲೀ ಅಥವಾ ಮಂಗಳನಲ್ಲಿ ವಾಸಿಸುವ ಭೂವಾಸಿಗಳು ಉಸಿರಾಡಲು ಅಗತ್ಯವಾದ ಆಮ್ಲಜನಕ ನೀಡುವುದಿಲ್ಲ. ಅಲ್ಲದೇ ಮಂಗಳನಲ್ಲಿ ನಿಮಗೆ ಆಹಾರದ ಸಮಸ್ಯೆ ತಲೆದೋರುತ್ತದೆ. ಆಹಾರ ಬೆಳೆಯಲು ಮಂಗಳ ಗ್ರಹದಲ್ಲಿನ ಮಣ್ಣು ಯೋಗ್ಯವಾಗಿಲ್ಲ. ಇದಕ್ಕೂ ಒಂದು ಪರಿಹಾರವಿದೆ. ಮಣ್ಣು ಇಲ್ಲದೇ ಬೆಳೆಗಳನ್ನು ಬೆಳೆಯಲು ನಮಗೆ ಹೈಡ್ರೋಫೋನಿಕ್ಸ್ ಪ್ರಕ್ರಿಯೆ ಸಹಾಯ ಮಾಡುತ್ತದೆ.

ಈ ವಿಧಾನದಲ್ಲಿ ಖನಿಜ ಮತ್ತು ಪೌಷ್ಟಿಕ ದ್ರಾವಣದಲ್ಲಿ ನಮಗೆ ಅಗತ್ಯವಿರುವ ಆಹಾರದ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ವಾಸ್ತವವಾಗಿ ಹೈಡ್ರೋಫೋನಿಕ್ಸ್ ವಿಧಾನದಿಂದ ಶೇ.20ರಷ್ಟು ಆಹಾರವನ್ನು ಮಾತ್ರ ಬೆಳೆಯಬಹುದು. ಉಳಿದ ಆಹಾರ ವಸ್ತುಗಳನ್ನು ಭೂಮಿಯಿಂದಲೇ ಒದಗಿಸಿಕೊಳ್ಳಬೇಕಾಗುತ್ತದೆ. ಭೂಮಿಯಿಂದ ಸಂಸ್ಕರಿಸಿದ ಮಾಂಸವನ್ನು ತೆಗೆದುಕೊಂಡು ಹೋಗಿ ಬಳಸಬಹುದೇ ಹೊರತು ತಾಜಾ ಮಾಂಸವನ್ನು ನಿರೀಕ್ಷಿಸುವಂತಿಲ್ಲ. ಭೂಮಿಯಿಂದ ಒಯ್ಯುವ ಎಲ್ಲಾ ಆಹಾರಗಳನ್ನು ಒಣಗಿಸಿ ಸಂಸ್ಕರಿಸಿ ಕೊಂಡೊಯ್ಯಬೇಕಾಗುತ್ತದೆ. ಮಂಗಳನಲ್ಲಿ ವಸತಿ ಸಮಸ್ಯೆ ನಮ್ಮನ್ನು ಬಾಧಿಸಬಹುದು. ಏಕೆಂದರೆ ಕಟ್ಟಡ ನಿರ್ಮಿಸಲು ಸಕಲ ಸೌಲಭ್ಯಗಳು ಅಲ್ಲಿಲ್ಲ. ಅಲ್ಲದೇ ಸೂರ್ಯನಿಂದ ಬರುವ ವಿಕಿರಣಗಳನ್ನು ತಪ್ಪಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಅಲ್ಲಿನ ವಾತಾವರಣವು ತುಂಬಾ ತೆಳುವಾಗಿರುವುದರಿಂದ ವಿಕಿರಣ ಸೂಸುವಿಕೆ ಪ್ರಮಾಣ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ 2.5 ಪಟ್ಟು ಹೆಚ್ಚಾಗಿದೆ. ಅದು ಮನುಷ್ಯರಿಗೆ ಸಹಿಸಲಾರದಷ್ಟು ವಿಕಿರಣವಾಗಿದೆ. ಮಂಗಳನಲ್ಲಿ ನಮ್ಮ ಉಡುಪುಗಳು ಯಾವಾಗಲೂ ಶುಷ್ಕವಾಗಿರುತ್ತವೆ. ಏಕೆಂದರೆ ಮಂಗಳನಲ್ಲಿ ತಾಪಮಾನವು ತುಂಬಾ ಕಡಿಮೆ. ಮಂಗಳನಲ್ಲಿ ಚಳಿ ಜಾಸ್ತಿಯಾಗಿರುತ್ತದೆ. ಚಳಿಗಾಲದಲ್ಲಿ ಅಲ್ಲಿನ ತಾಪಮಾನ 55ºC (-67ºF)ದಿಂದ 153ºC (243ºF) ಇರುತ್ತದೆ. ಮಂಗಳ ಗ್ರಹದ ಒಂದು ವರ್ಷ ಭೂಮಿಯ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು. ಮಂಗಳದ ಉತ್ತರಾರ್ಧ ಗೋಳದಲ್ಲಿ ವಾಸಿಸಿದರೆ ಏಳೂ ತಿಂಗಳು ವಸಂತಕಾಲ, ಆರು ತಿಂಗಳು ಬೇಸಿಗೆ ಕಾಲ, ಐದು ತಿಂಗಳು ಶರತ್ಕಾಲ ಹಾಗೂ ನಾಲ್ಕು ತಿಂಗಳು ಚಳಿಗಾಲ ಅನುಭವಿಸಬೇಕಾಗುತ್ತದೆ. ಮಂಗಳನಲ್ಲಿ ಆಗಾಗ ಬಲವಾದ ಧೂಳಿನ ಬಿರುಗಾಳಿ ಬೀಸುತ್ತದೆ. ಇದು ಅಲ್ಲಿನ ಎಲ್ಲಾ ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಆ ಸಮಯದಲ್ಲಿ ನಾವು ಭೂಮಿಯೊಂದಿಗೆ ಕೂಡಲೇ ಸಂಪರ್ಕ ಸಾಧಿಸಲು ಆಗುವುದಿಲ್ಲ.

ನಾವು ಅಲ್ಲಿಂದ ಕಳಿಸಿದ ಸಂದೇಶ ಭೂಮಿಯನ್ನು ತಲುಪಲು ಕನಿಷ್ಠ 15 ನಿಮಿಷ ಬೇಕಾಗುತ್ತದೆ. ಜೊತೆಗೆ ಮಂಗಳನ ಗುರುತ್ವವು ಭೂಮಿಯ ಮೂರನೇ ಒಂದು ಭಾಗದಷ್ಟಿದೆ ಎಂಬುದನ್ನು ನಾವು ನೆನಪಿಡಬೇಕು. ಇಂತಹ ಕಡಿಮೆ ಗುರುತ್ವದಲ್ಲಿ ನಾವು ವಾಸಿಸಬೇಕು. ನಮ್ಮ ನಡಿಗೆ ಹೇಗಿರಬೇಕೆಂಬುದನ್ನು ಸಹ ಅಭ್ಯಾಸ ಮಾಡಬೇಕು. ಮಂಗಳ ಗ್ರಹವು ತಂಪಾಗಿರುತ್ತದೆ ಎಂಬುದು ತಿಳಿಯಿತು. ಗ್ರಹದಲ್ಲಿ ಕೇವಲ ತಂಪು ಇದ್ದರೆ ಸಾಲದು ಒಂಚೂರು ಬಿಸಿ ವಾತಾವರಣವೂ ಇರಬೇಕಲ್ಲವೇ? ಮಂಗಳ ಗ್ರಹದ ವಾತಾವರಣವನ್ನು ಒಂಚೂರು ಬಿಸಿ ಮಾಡಲು ಬೇರೆ ಗ್ರಹಗಳ ವಾತಾವರಣದಿಂದ ಒಂದಿಷ್ಟು ಅಮೋನಿಯಾ ಸಹಿತ ಮಂಜುಗಡ್ಡೆಯನ್ನು ತರಿಸಿಕೊಳ್ಳಲಾಗುತ್ತದೆ. ಇದರಿಂದ ಮಂಗಳ ಗ್ರಹದ ಉತ್ತರ ಧ್ರುವದಲ್ಲಿನ ಶುಷ್ಕ ಮಂಜುಗಡ್ಡೆಯನ್ನು ಅನಿಲ ರೂಪಕ್ಕೆ ಪರಿವರ್ತಿಸುತ್ತದೆ. ಇದು ಮಂಗಳ ಗ್ರಹದಲ್ಲಿ ಒಂದಿಷ್ಟು ಬಿಸಿ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಆದಾಗ್ಯೂ ಈ ಶಾಖದಿಂದ ಕನಿಷ್ಠ ವಾತಾವರಣ ಒತ್ತಡವನ್ನು ಉಂಟುಮಾಡಲು ಸಾಧ್ಯವಾಗುತ್ತದೆ. ಈ ಬಿಸಿ ವಾತಾವರಣ ಮಂಗಳ ಗ್ರಹದಲ್ಲಿದ್ದ ನಾವು ನಮ್ಮ ಬಾಹ್ಯಾಕಾಶ ಉಡುಪನ್ನು ಸ್ವಲ್ಪಸಮಯ ಕಳಚಿಡಬಹುದಾದಷ್ಟು ಇರುತ್ತದೆ. ಮಂಗಳ ಗ್ರಹದಲ್ಲಿ ಸದ್ಯಕ್ಕೆ ನೀರಿಲ್ಲ. ಆದರೆ ಮಾನವರ ವಾಸಕ್ಕೆ ನೀರು ಬೇಕಲ್ಲವೇ? ಅದಕ್ಕಾಗಿ ಮಂಗಳ ಗ್ರಹದ ಮೇಲ್ಮೈನ ಕೆಳಭಾಗದಲ್ಲಿ ಅಡಕವಾದ ಮಂಜುಗಡ್ಡೆಯಿಂದ ನೀರನ್ನು ಹೊರತೆಗೆಯಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹೀಗೆ ನೀರನ್ನು ಹೊರತೆಗೆದಾಗ ನೀರಾವಿಯು ವಾತಾವರಣ ಸೇರುತ್ತಾ ಸೇರುತ್ತಾ ದಪ್ಪನಾದ ಮೋಡ ರಚನೆಯಾಗುತ್ತದೆ. ಕೊನೆಗೆ ಮಂಗಳ ಗ್ರಹದಲ್ಲಿ ಮಳೆ ಹಾಗೂ ಹಿಮಪಾತ ಉಂಟಾಗುವುದನ್ನು ಕಾಣಬಹುದು ಎಂಬುದು ಅವರ ಲೆಕ್ಕಾಚಾರ. ಈ ಪ್ರಕ್ರಿಯೆ ಸಾವಿರಾರು ವರ್ಷ ಕಳೆದ ನಂತರ ಅಲ್ಲಿ ಮನುಷ್ಯರ ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕ ದೊರೆಯಬಹುದು. ಹೀಗೆ ಮಂಗಳ ಗ್ರಹದಲ್ಲಿ ಮರು ತಾಂತ್ರೀಕರಣದಿಂದ ಮಾತ್ರ ಮಾನವ ವಾಸ ಸಾಧ್ಯವಾಗುತ್ತದೆ.

ಈಗ ಹೇಳಿ! ನೀವೂ ಮಂಗಳನ ಅಂಗಳದಲ್ಲಿ ವಾಸಿಸಲು ಇಚ್ಛಿಸುವಿರಾ? ಅಥವಾ ಭೂಮಿಯಲ್ಲಿಯೇ ಇದ್ದು, ಭೂಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಯ ಸಾಲ ತೀರಿಸುತ್ತೀರಾ? 

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News