ಉಯಿಘರ್ ಮಹಿಳೆಯರ ಮೇಲೆ ಚೀನಾ ಆಡಳಿತದ ಬರ್ಬರ ದೌರ್ಜನ್ಯ

Update: 2021-03-07 16:57 GMT

 ವಾಶಿಂಗ್ಟನ್,ಮಾ.7: ಚೀನಾ ಆಡಳಿತದಿಂದ ಉಯಿಘರ್ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಎಲ್ಲಾ ಜಾಗತಿಕ ಮಹಿಳಾ ಸಂಘಟನೆಗಳು ಧ್ವನಿಯೆತ್ತಬೇಕೆಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನವಾದ ರವಿವಾರ ಜಗತ್ತಿನಾದ್ಯಂತ ಮಹಿಳಾ ಹಕ್ಕುಗಳ ಹೋರಾಟಗಾರರು ಕರೆ ನೀಡಿದ್ದಾರೆ.

  ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಉಯಿಘರ್ ಮುಸ್ಲಿಮರ ದಮನ ಕಾರ್ಯಾಚರಣೆಯನ್ನು ಚೀನಾ ಆಡಳಿತವು ನಿರಂತರವಾಗಿ ನಡೆಸುತ್ತಿದ್ದು, ಅಲ್ಲಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆಯೆಂದು ಬ್ರಿಟಿಶ್ ಮಾಧ್ಯಮವೊಂದು ವಿವಿಧ ಮಹಿಳಾ ಹಾಗೂ ಮಾನವಹಕ್ಕು ಹೋರಾಟಗಾರರ ಸಂದರ್ಶನಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

  ವಿವಿಧ ದೇಶಗಳಲ್ಲಿ ನೆಲೆಸಿರುವ ಮಹಿಳಾ ಉಯಿಘರ್ ಮುಸ್ಲಿಂ ಕಾರ್ಯಕರ್ತೆಯರು ಶನಿವಾರ ಬಹಿರಂಗಪತ್ರವೊಂದನ್ನು ಬರೆದಿದ್ದು, ಉಯಿಘರ್ ಮಹಿಳೆಯರನ್ನು ಹಾನ್ ಸಮುದಾಯದ ಚೀನಿಯರ ಜೊತೆ ಬಲವಂತವಾಗಿ ವಿವಾಹ ಮಾಡಲಾಗುತ್ತಿದೆ. ಮಕ್ಕಳನ್ನು ತಾಯಂದಿರಿಂದ ಬಲವಂತವಾಗಿ ಬೇರ್ಪಡಿಸಲಾಗುತ್ತಿದ್ದು, ಅವರನ್ನು ಸರಕಾರವು ನಡೆಸುತ್ತಿರುವ ಅನಾಥಾಶ್ರಮಗಳಲ್ಲಿ ಬೆಳೆಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

 ಉಯಿಘರ್ ನಿರಾಶ್ರಿತರ ಪರ ಹೋರಾಟಗಾರ್ತಿಯರಾದ ಮಿಹ್ರಿಗುಲ್ ತುರುಸುನ್, ಕ್ವೆಲಿಬಿನೂರ್ ಸಿದ್ದೀಕ್, ಸಾಯಿರಾಗುಲ್ ಸತ್‌ಬೆ, ತುರ್ಸುನೆಯ್ ಝಿಯಾವುದ್ದೀನ್ ಮತ್ತಿತರರು ಈ ಪತ್ರಕ್ಕೆ ಸಹಿಹಾಕಿದ್ದಾರೆ.

    ‘‘ ಹೆಚ್ಚಿನ ಉಯಿಘರ್ ಮಹಿಳೆಯರ ಪತಿಯಂದಿರನ್ನು ಯಾತನಾಶಿಬಿರಗಳು ಅಥವಾ ಕಾರಾಗೃಹಗಳಲ್ಲಿ ಇರಿಸಲಾಗಿದೆ. ಈ ಮಧ್ಯೆ ‘‘ಅವಳಿ ಸಂಬಂಧಿಗಳು’’ ಯೋಜನೆಯಡಿ ಚೀನಾ ಸರಕಾರದಿಂದ ಪ್ರೇರಿತರಾದ ಚೀನಾ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಉಯಿಘರ್ ಕುಟುಂಬದ ಮೇಲೆ ನಿಗಾವಿರಿಸುತ್ತಾರೆ ಹಾಗೂ ಮೇಲ್ವಿಚಾರಣೆ ನಡೆಸುತ್ತಾರೆ. ಇದೊಂದು ಅತ್ಯಂತ ಅವಮಾನಕಾರಿ ಪರಿಸ್ಥಿತಿಯಾಗಿದ್ದು, ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ’’ ಎಂದು ಪತ್ರವು ತಿಳಿಸಿದೆ.

 ಇದರ ಜೊತೆಗೆ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಚೀನಾ ಆಡಳಿತವು ಸ್ಥಾಪಿಸಿರುವ ಯಾತನಾ ಶಿಬಿರಗಳಲ್ಲಿಯೂ ಉಯಿಘರ್ ಮತ್ತು ಕಝಕ್‌ನ ಸಂತ್ರಸ್ತ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಲೈಂಗಿಕ ಹಿಂಸಾಚಾರವನ್ನು ಎಸಲಾಗುತ್ತಿದೆಯೆಂದು ಪತ್ರವು ಆರೋಪಿಸಿದೆ.

 ಉಯಿಘರ್ ಸಂತ್ರಸ್ತ ಮಹಿಳೆಯರು ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಚೀನಿ ಸರಕಾರದ ಅಧಿಕಾರಿಗಳು ಈ ಮಹಿಳೆಯರ ವಿರುದ್ಧ ವೈಯಕ್ತಿಕ ನಿಂದನೆ ಹಾಗೂ ಚಾರಿತ್ರಹನನದಂತಹ ಕೃತ್ಯಗಳನ್ನು ನಡೆಸಿದ್ದಾರೆಂದು ಪತ್ರವು ಹೇಳಿದೆ.

 ‘‘ ಈ ಬಿಕ್ಕಟ್ಟಿನ ಮುಂಚೂಣಿಯಲ್ಲಿರುವ ಉಯಿಘರ್ ಹಾಗೂ ಕಝಕ್‌ನ ನಿರಾಶ್ರಿತ ಮಹಿಳೆಯರು ಪೂರ್ವ ತುರ್ಕಿಸ್ತಾನ (ಕ್ಸಿನ್‌ಜಿಯಾಂಗ್ ಪ್ರಾಂತ)ದಲ್ಲಿ ಚೀನಿ ಸರಕಾರದ ನರಮೇಧ ನೀತಿಯನ್ನು ಬಹಿರಂಗಪಡಿಸಿದ್ದಾರೆ. ಅತ್ಯಂತ ದಿಟ್ಟವಾಗಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯ ಅವರನ್ನು ಅಭಿನಂದಿಸಬೇಕಾಗಿದೆ’’ ಎಂದು ಪತ್ರವು ಹೇಳಿದೆ.

  ‘‘ಪೂರ್ವ ತುರ್ಕಿಸ್ತಾನದ (ಈಗಿನ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ) ಉಯಿಘರ್ ಹಾಗೂ ಇತರ ಮಹಿಳೆಯರು ಅನುಭ ವಿಸುತ್ತಿರುವ ದೌರ್ಜನ್ಯಗಳ ವಿರುದ್ಧ ಜಗತ್ತಿನ ಎಲ್ಲಾ ಮಹಿಳೆಯರು ಸೆಟೆದು ನಿಲ್ಲಬೇಕಾದ ಅಗತ್ಯವಿದೆ. 2021ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ಜಾಗತಿಕ ಮಹಿಳಾ ಸಂಘಟನೆಗಳು ಹಾಗೂ ಮಹಿಳಾವಾದಿಗಳು ಚೀನಾ ಕಮ್ಯೂನಿಸ್ಟ್ ಪಕ್ಷವು ಉಯಿಘರ್ ಹಾಗೂ ಇತರ ಪೂರ್ವ ತುರ್ಕಿಸ್ತಾನದ ಮಹಿಳೆಯರ ಮೇಲೆ ನಡೆಸುತ್ತಿರುವ ಬರ್ಬರ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಬೇಕಾಗಿದೆ’’ ಎಂದು ಕಾರ್ಯಕರ್ತೆಯರು ಪತ್ರದಲ್ಲಿ ಆಗ್ರಹಿಸಿದ್ದಾರೆ.

 ಈ ಮಧ್ಯೆ ಉಯಿಘರ್ ಮುಸ್ಲಿಮರನ್ನು ಬಂಧನದಲ್ಲಿರಿಸಿರುವ ಶಿಬಿರಗಳ ನಿಖರ ಸಂಖ್ಯೆಯನ್ನು ಚೀನಾ ಸರಕಾರ ಬಹಿರಂಗಪಡಿಸಿಲ್ಲ. ಪ್ರಾರಂಭದಲ್ಲಿ ಬೀಜಿಂಗ್ ಇಂತಹ ಶಿಬಿರಗಳು ಅಸ್ತಿತ್ವದಲ್ಲಿರುವುದನ್ನು ಅಲ್ಲಗಳೆದಿತ್ತು. ಆದರೆ ಇದೀಗ ಈ ಶಿಬಿರಗಳು ಪ್ರತಿಯೊಬ್ಬರಿಗೂ ಪದವಿ ಶಿಕ್ಷಣವನ್ನು ನೀಡುವಂತಹ ಶೈಕ್ಷಣಿಕ ಹಾಗೂ ವೃತ್ತಿಪರ ಕೇಂದ್ರಗಳಾಗಿವೆಯೆಂಬ ಸಮಜಾಯಿಷಿಯನ್ನು ನೀಡುತ್ತಿದೆ.

  10 ಲಕ್ಷಕ್ಕೂ ಅಧಿಕ ಉಯಿಘರ್ ಮುಸ್ಲಿಮರನ್ನು ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ಇರಿಸಲಾಗಿದೆ. ಭಯೋತ್ಪಾದನೆಯ ವಿರುದ್ಧ ತನ್ನ ಅಭಿಯಾನದ ಭಾಗವಾಗಿ ತಾನು ಈ ಶಿಬಿರಗಳನ್ನು ತೆರೆದಿರುವುದಾಗಿ ಚೀನಾ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News