ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳಾಗುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳು

Update: 2021-03-10 17:38 GMT

ಇತ್ತೀಚೆಗೆ ಜ್ಞಾನದ ಪರಧಿಯನ್ನು ವಿಸ್ತರಿಸಬೇಕಾದ ಬಹುತೇಕ ವಿಶ್ವವಿದ್ಯಾನಿಲಯಗಳು ಸೇರಿದಂತೆ ಅನೇಕ ಉನ್ನತ ಶಿಕ್ಷಣ ಕೇಂದ್ರಗಳು ವಿದ್ಯಾರ್ಥಿಗಳನ್ನು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಕೇಂದ್ರಗಳಾಗಿ ಪರಿವರ್ತಿತವಾಗುತ್ತಿರುವುದು ಕಳವಳಕಾರಿಯಾಗಿದೆ.

ವಿದ್ಯಾಸಂಸ್ಥೆಗಳು ತನ್ನ ವಿದ್ಯಾರ್ಥಿಗಳಲ್ಲಿ ಉದ್ಯೋಗ್ಯಕ್ಕೆ ಬೇಕಾದ ಅಗತ್ಯ ತರಬೇತಿಯನ್ನು ನೀಡುವುದು ಅಗತ್ಯ. ಅದರೆ ಕೆಲಸ ಪಡೆಯಲು ಅವೇ ಅಂತಿಮ ಎಂದು ಬಿಂಬಿಸಿ ಶಿಕ್ಷಣದ ಒಟ್ಟು ಆಶಯವನ್ನು ಮಸುಕುಗೊಳಿಸಲಾಗುತ್ತಿದೆ. ಉನ್ನತ ಶಿಕ್ಷಣ ಕೇಂದ್ರಗಳು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಂಶೋಧನಾ ಕ್ಷೇತ್ರದ ಆಸಕ್ತಿ, ಹೊಸ ಆಲೋಚನೆಗಳನ್ನು ಅವರಲ್ಲಿ ಬಿತ್ತುವ ಮತ್ತು ಅದನ್ನು ಅವರು ಯೋಚಿಸುವಂತೆ, ಸೃಜನಶೀಲತೆಯನ್ನು ಬೆಳೆಸುವ ಜೊತೆಗೆ ವಿಮರ್ಶಾತ್ಮಕ ಧೋರಣೆಯನ್ನು ಬೆಳೆಸುವ, ಪ್ರಶ್ನಿಸುವ ಮನೋಭೂಮಿಕೆಯನ್ನು ವಿದ್ಯಾರ್ಥಿಗಳಲ್ಲಿ ಉತ್ತೇಜಿಸಬೇಕಾದ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೆಲಸದ ಹೆಸರಿನಲ್ಲಿ ಕೇವಲ ಐಎಎಸ್/ಕೆಎಎಸ್, ಬ್ಯಾಂಕಿಂಗ್, ಗುಮಾಸ್ತ ಹುದ್ದೆಗಳಿಗೆ ತಯಾರು ಮಾಡುವ ಕೇಂದ್ರಗಳಾಗುತ್ತಿವೆ.
ಇದರ ಪರಿಣಾಮ, ಮಾನವಿಕ, ಭಾಷಾಶಾಸ್ತ್ರ ಮತ್ತು ಸಮಾಜಶಾಸ್ತ್ರೀಯ ವಿಭಾಗಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದೇ ವರ್ಷ ವರ್ಷ ಕಡಿಮೆಯಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟಿರುವ ಐಎಎಸ್, ಕೆಎಎಸ್‌ನಂತಹ ಹುದ್ದೆಗಳು ದುಬಾರಿ ಸ್ಪರ್ಧಾತ್ಮಕ ಕೇಂದ್ರಗಳಲ್ಲಿ ತರಬೇತಿ ಪಡೆದವರ ಪಾಲಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ದುಬಾರಿ ಸ್ಪರ್ಧಾತ್ಮಕ ಕೇಂದ್ರಗಳನ್ನು ಸೇರಲು ಸಾಧ್ಯವಿಲ್ಲದವರು ಕೇವಲ ಗುಮಾಸ್ತ ಹುದ್ದೆಗಳಿಗೆ ಸೀಮಿತವಾಗುತ್ತಿರುವುದೂ ಇದೆ.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿದರೆ ನಮ್ಮ ಕೆಲಸ ಮುಗಿಯಿತು ಎಂದು ತಿಳಿದಿರುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಅಂಧಕಾರಕ್ಕೆ ತಳ್ಳುತ್ತಿವೆ. ಇವತ್ತಿನ ಜಾಗತಿಕ ಯುಗದಲ್ಲಿ ಕೆಲವೊಂದು skill ಮತ್ತು ಆಂಗ್ಲ ಭಾಷೆಯನ್ನು ಮಾತನಾಡಲು ಬಾರದ ಯುವ ಸಮೂಹಗಳನ್ನು ನಿರುಪಯುಕ್ತ ಎಂದು ಪರಿಗಣಿಸುವ ಹುನ್ನಾರಗಳು ನಡೆಯುತ್ತಿದ್ದು ಉದ್ಯೋಗ ಸೃಷ್ಟಿಸಬೇಕಾದ ಸರಕಾರಗಳು ಯುವ ಸಮೂಹಕ್ಕೆ ಇವತ್ತಿನ ಉದ್ಯೋಗ ಮಾರುಕಟ್ಟೆಯಲ್ಲಿ ಅವರು ಭಾಗವಹಿಸಲು ಅನರ್ಹರು ಎಂದು ತೀರ್ಪು ನೀಡಿ ಅವರಲ್ಲಿ ಕೀಳರಿಮೆಯನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಪರಿಸ್ಥಿತಿಗಳು ಸರಕಾರಗಳನ್ನು ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಇಲ್ಲವಾಗಿಸುತ್ತಿದೆ.

 ದೇಶದ ಅತ್ಯುನ್ನತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಮುಖ್ಯಸ್ಥರಾಗಿದ್ದ ನಾರಾಯಣ ಮೂರ್ತಿಗಳು ಒಮ್ಮೆ ‘‘ಭಾರತದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಯಾರಾಗುವ ಶೇ. 80 ವಿದ್ಯಾರ್ಥಿಗಳು ಕೆಲಸ ಪಡೆಯಲು ಅವರಲ್ಲಿ ಅಗತ್ಯ ತರಬೇತಿ ಇಲ್ಲ’’ ಎನ್ನುವ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಯಾವುದೇ ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಕಲಿಕಾ ಕ್ರಮವಿಲ್ಲದೇ ಕೇವಲ ನೆನಪಿನ ಶಕ್ತಿಯನ್ನು ಮಾತ್ರ ಜ್ಞಾನ ಎಂದು ಪರಿಗಣಿಸುವ ಅದೇ ಮೂಲತತ್ವಗಳನ್ನು ಹೊಂದಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ವಿಶ್ವವಿದ್ಯಾನಿಲಯಗಳು ತೀವ್ರ ಆಸಕ್ತಿ ತೋರುತ್ತಿರುವುದು ಸೂಕ್ತವಲ್ಲ. ಆ್ಯಪಲ್ ಸಹ ಸಂಸ್ಥಾಪಕರಾಗಿದ್ದ ಸ್ಟೀವ್ ಒಜೋನಿಕ್ 2018ರಲ್ಲಿ ಒಂದು ಸಂದರ್ಶನದಲ್ಲಿ ‘‘ಭಾರತೀಯರಲ್ಲಿ ಸೃಜನಶೀಲತೆಯ ಕೊರತೆ ಇದೆ. ಹೀಗಾಗಿ ಅವರಲ್ಲಿ ಸೃಷ್ಟಿಶೀಲ ಕ್ರಿಯೆಗಳು ಕಡಿಮೆ’’ ಎಂದಿದ್ದರು. ಇದಕ್ಕೆ ಉದಾಹರಣೆಯಾಗಿ ಅವರು ಏಕೆ ಭಾರತದಲ್ಲಿ ಆ್ಯಪಲ್, ಗೂಗಲ್ ಮತ್ತು ಇತರ ನಾವೀನ್ಯ ತಂತ್ರಜ್ಞಾನ ಸಂಸ್ಥೆಗಳು ಪ್ರಾರಂಭವಾಗಿಲ್ಲ ಎನ್ನುವುದನ್ನು ಉಲ್ಲೇಖಿಸಿದ್ದರು.

ವಿಶ್ವವಿದ್ಯಾನಿಲಯ ಮತ್ತು ಉನ್ನತ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಹೊಸ ಅರಿವನ್ನು, ಸೃಜನಶೀಲತೆ, ಪ್ರಶ್ನಿಸುವ, ಚಿಂತಿಸುವ ಕಲೆಯನ್ನು ಬಿತ್ತಬೇಕು. ಅದಕ್ಕಾಗಿ ಅಧ್ಯಾಪಕರನ್ನು, ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು. ಅಂತರ್‌ಶಿಸ್ತೀಯ ಅಧ್ಯಯನಗಳು ನಡೆಯುವಂತೆ ನೋಡಿಕೊಳ್ಳಬೇಕು. ಗ್ರಂಥಾಲಯಗಳಲ್ಲಿ, ವಿವಿ ಕ್ಯಾಂಪಸ್‌ಗಳಲ್ಲಿ ನಿರಂತರ ಚರ್ಚೆ ಸಂವಾದಗಳು ಆಯೋಜನೆಗೊಳ್ಳುತ್ತಿರಬೇಕು. ವಿದ್ಯಾರ್ಥಿಗಳ ಆಸಕ್ತಿಯನ್ನು ಕೆರಳಿಸುವ ಪುಸ್ತಕ ಭಂಡಾರಗಳು ಮತ್ತು ಕಲಿಕಾ ಸಾಮಗ್ರಿಗಳು ಅವರಿಗೆ ಸಿಗುವಂತೆ ನೋಡಿಕೊಳ್ಳಬೇಕು.

ಆಗ ಅವರಲ್ಲಿ ಸ್ವಂತಿಕೆಯ ಅರಿವು ಮೂಡಿ ತಮ್ಮ ಆಸಕ್ತಿ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದನ್ನು ಬಿಟ್ಟು ಕೇವಲ ಉದ್ಯೋಗದ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಯಾವುದೇ ರೀತಿಯಲ್ಲಿ ಉತ್ತಮ ಕಲಿಕೆಯಾಗಲಾರದು. ಇದನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಅರಿಯಬೇಕಾಗಿದೆ. ಇಲ್ಲವಾದಲ್ಲಿ ಅವುಗಳು ಇಂಜಿನಿಯರಿಂಗ್ ಕಾಲೇಜುಗಳಂತೆ ಮುಚ್ಚುವ ಹಂತಗಳನ್ನು ತಲುಪುವ ದಿನಗಳು ದೂರವಿಲ್ಲ.

Writer - ವಸಂತ ರಾಜು ಎನ್., ತಲಕಾಡು

contributor

Editor - ವಸಂತ ರಾಜು ಎನ್., ತಲಕಾಡು

contributor

Similar News