ಗಾಂಧಿ ಸಾಹಿತ್ಯ - ಕನ್ನಡದ ಅನುಸಂಧಾನ

Update: 2021-03-13 19:30 GMT

ಗಾಂಧಿ ಸಾಹಿತ್ಯದ ಅನುಸಂಧಾನವೆಂದರೆ ಅದೊಂದು ಕೇವಲ ಬೌದ್ಧಿಕ ಕಸರತ್ತಾಗಬಾರದು. ಅನುಸಂಧಾನದ ಚಿಂತನಮಂಥನದ ಫಲ ಇಂದಿನ ಬದುಕಿನಲ್ಲಿ ಅನುಷ್ಠಾನಯೋಗ್ಯವಾದ ನವನೀತವಾಗಬೇಕು. ಅದರಲ್ಲಿ ಅನುಸಂಧಾನದ ಸಾರ್ಥಕತೆ ಇದೆ. ಈ ನಿಟ್ಟಿನಲ್ಲಿ ಈ ಕ್ಷಣ ನಮ್ಮ ಕೈಗೆ ದಕ್ಕುವಂತೆ ಡಾ. ಸಿ. ಎನ್. ರಾಮಚಂದ್ರನ್ ಸಂಪಾದಿಸಿರುವ ‘ಮಹಾತ್ಮ್ಮಾ ಗಾಂಧಿ ಮತ್ತು ಕನ್ನಡ ಸಾಹಿತ್ಯ’ ಒಂದು ಸ್ವಾಗತಾರ್ಹ ಗ್ರಂಥ. ಇದರಲ್ಲಿ ಕನ್ನಡದ ಪ್ರಬುದ್ಧ ಮನಸ್ಸುಗಳು ಗಾಂಧಿ ಸಾಹಿತ್ಯದೊಂದಿಗೆ ಮಾಡಿರುವ ಅನುಸಂಧಾನದ ಫಲಗಳಿವೆ. ಈ ಅನುಸಂಧಾನಗಳು ಮತ್ತೊಂದು ಅನುಸಂಧಾನಕ್ಕೂ ಮೀಟುಗೋಲಾಗಬಹುದು.


ನಮಗೆ ಸ್ವಾತಂತ್ರ್ಯ ಬಂದು, ನಾವು ಒಂದು ರಾಷ್ಟ್ರವಾಗಿ ಹುಟ್ಟು ಪಡೆದು ಎಪ್ಪತ್ತೈದು ವರುಷಗಳಾಗಿವೆ. ಗಣರಾಜ್ಯವಾಗಿ ಎಪ್ಪತ್ತು ವರುಷಗಳಾಗಿವೆ. ಎಪ್ಪತೈದನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ದೇಶದಾದ್ಯಂತ ನಡೆದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲ್ಗೊಂಡಿದ್ದ ತಲೆಮಾರು ಬಹುತೇಕ ಚರಿತ್ರೆಯ ನೇಪಥ್ಯಕ್ಕೆ ಸರಿದಿದೆ. ಸ್ವಾತಂತ್ರ್ಯೋತ್ತರ ಹುಟ್ಟಿದ ಪೀಳಿಗೆ ವಯಸ್ಕರಾಗಿ ಮತದಾನದ ಹಕ್ಕುಗಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟ ಕಾಲದ ಪಳೆಯುಳಿಕೆ ತಲೆಮಾರು ಮತ್ತು ಹೊಸ ತಲೆಮಾರುಗಳು ಪರಸ್ಪರ ನಂಬದ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಸ್ಥಾಪನೆಗೊಂಡ ಈ ದೇಶದ ಭವಿಷ್ಯದ ಬಗ್ಗೆ ಏಕದೃಷ್ಟಿ ಇಲ್ಲದ, ಅವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾಲಘಟ್ಟವಿದು. ಗಾಂಧಿ ಪ್ರಣೀತ ಅಹಿಂಸಾತ್ಮಕತೆ ಮತ್ತು ಜಾತ್ಯತೀತ ಮೌಲ್ಯಗಳನ್ನು ಅಂಗೀಕರಿಸಿರುವ ಸಂವಿಧಾನ ಈ ದೇಶವನ್ನು ಭವಿಷ್ಯದತ್ತ ಮುನ್ನಡೆಸಬೇಕೆ ಅಥವಾ ಜಾತ್ಯತೀತ ಮೌಲ್ಯಗಳನ್ನು ತಿರಸ್ಕರಿಸುವ ಧರ್ಮಾಂಧ ರಾಷ್ಟ್ರೀಯ ಪ್ರಣಾಳಿಕೆ ಭಾರತದ ಭವಿಷ್ಯವನ್ನು ನಿರ್ಧರಿಸಬೇಕೆ ಎಂಬ ತೊಳಲಾಟದಲ್ಲಿ ಸಿಲಿಕಿರುವ ಸಂದಿಗ್ಧ ಪರಿಸ್ಥಿತಿ ಇಂದಿನದು. ಮಹಾತ್ಮ್ಮಾ ಗಾಂಧಿಯವರು ಪ್ರತಿಪಾದಿಸುವ ಅಹಿಂಸೆ, ಅನ್ಯಧರ್ಮ ಸಹಿಷ್ಣುತೆ, ಗ್ರಾಮ ಸ್ವರಾಜ್ಯ ಇವೇ ಮೊದಲಾದ ಜೀವನಮೌಲ್ಯಗಳನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಹಳೆಯ ತಲೆಮಾರಿನ ಒಂದು ವಲಯದಲ್ಲಿ ಅವರ ವಿರೋಧಿ ನಿಲುವಿನಲ್ಲಿ ಏನೂ ಬದಲಾವಣೆಯಾಗಿಲ್ಲ. ಇವರ ಜೊತೆಗೆ ಗಾಂಧಿಯನ್ನು ನೋಡದ, ಓದದ ಹೊಸ ಪೀಳಿಗೆಯ ನವತರುಣತರುಣಿಯರಲ್ಲೂ ಗಾಂಧಿ ಮೌಲ್ಯಗಳನ್ನು ವಿರೋಧಿಸುವ ಪ್ರವೃತ್ತಿಯೂ ಢಾಳವಾಗಿ ಕಾಣಿಸುತ್ತಿದೆ. ಈ ಪ್ರವೃತ್ತಿ ‘ಹೇಟ್ ಗಾಂಧಿ’ ಎನ್ನುವ ವಿಷಮ ಹಂತವನ್ನು ತಲುಪಿದೆ. ದೇಶದ ಈ ಕಾಲಘಟ್ಟದಲ್ಲಿ ಗಾಂಧಿಯನ್ನು ದ್ವೇಷಿಸುವ ಮೊದಲು, ಅವರನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನಾದರೂ ಈ ಪೀಳಿಗೆ ಮಾಡಬೇಕಿದೆ. ‘ಹೇಟ್ ಗಾಂಧಿ’ ಸ್ವಯಂಪ್ರೇರಿತವಲ್ಲ, ಅನ್ಯಪ್ರೇರಿತ ಎನ್ನುವ ಗುಮಾನಿ ಗಾಢವಾಗಿರುವುದರಿಂದ ತಲೆತಿಕ್ಕಿಸಿಕೊಂಡಿರಬಹುದಾದ ಈ ಹೊಸ ಪೀಳಿಗೆಯ ಮಂದಿ ಮಹಾತ್ಮಾ ಗಾಂಧಿಯವರನ್ನು ಅನ್ಯಪ್ರಭಾವವಿಲ್ಲದೆ ಸ್ವಂತ ಅಧ್ಯಯನದಿಂದ ಅರಿತುಕೊಳ್ಳಬೇಕಾದ ಅಗತ್ಯವಿದೆ. ಈ ಅಧ್ಯಯನ ಗಾಂಧಿ ಸಾಹಿತ್ಯದೊಂದಿಗಿನ ಅನುಸಂಧಾನದಿಂದ ಸಾಧ್ಯವಾದೀತು. ಇಂತಹ ಅಧ್ಯಯನಾಪೇಕ್ಷಿಗಳಿಗೆ ಸಹಾಯಕವಾಗುವ ಗ್ರಂಥ: ‘ಮಹಾತ್ಮಾ ಗಾಂಧಿ ಮತ್ತು ಕನ್ನಡ ಸಾಹಿತ್ಯ’. ಡಾ.ಸಿ. ಎನ್.ರಾಮಚಂದ್ರನ್ ಈ ಅಮೂಲ್ಯ ಗ್ರಂಥದ ಸಂಪಾದಕರು. ಪ್ರಕಾಶಕರು: ಸ್ವಪ್ನ.

ಮಹಾತ್ಮಾಗಾಂಧಿಯವರ ನೂರೈವತ್ತನೆಯ ಜನ್ಮದಿನವನ್ನು ‘‘ಅರ್ಥಪೂರ್ಣವಾಗಿ ಆಚರಿಸಲು’’ ಭಾರತೀಯ ವಿದ್ಯಾಭವನ ಒಂದು ಮಹತ್ವಪೂರ್ಣ ಯೋಜನೆಯೊಂದನ್ನು ಹಮ್ಮಿಕೊಂಡಿತ್ತು. ಭಾರತೀಯ ಭಾಷೆಗಳಲ್ಲಿ ಸೃಷ್ಟಿಯಾಗಿರುವ ಗಾಂಧಿ ವಾಙ್ಮಯದಿಂದ ಮುಖ್ಯವಾದ ಭಾಗಗಳನ್ನು ಆಯ್ಕೆಮಾಡಿ ಪ್ರಕಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಆಯಾ ಭಾಷೆಗಳಲ್ಲಿ ಪ್ರಕಟಿಸಲಾಗುವ ಈ ಆಯ್ದ ಗಾಂಧಿ ವಾಙ್ಮಯವನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸಲಾಗುವುದೆಂದು ಈ ಯೋಜನೆಯ ಪ್ರಧಾನ ಸಂಪಾದಕರಾದ ಜಿ.ಎನ್.ದೇವಿ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಕನ್ನಡದಲ್ಲಿ ಆಯ್ದ ಗಾಂಧಿ ವಾಙ್ಮಯದ ಕನ್ನಡ ಮತ್ತು ಇಂಗ್ಲಿಷ್ ಎರಡೂ ಆವೃತ್ತಿಗಳ ಸಂಪಾದಕರು ಖ್ಯಾತ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರು.

ಗಾಂಧಿ ವಾಙ್ಮಯವನ್ನು ಮೋಹನದಾಸ್ ಕರಮಚಂದ್ ಗಾಂಧಿಯವರನ್ನು ಕುರಿತು ರಚಿಸಲಾಗಿರುವ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಳಿಸಲಾಗದು. ಗಾಂಧಿಯವರ ವಿಚಾರಧಾರೆ, ಅವರ ಆದರ್ಶ, ಅವರು ಪ್ರತಿಪಾದಿಸುತ್ತಿದ್ದ ಸ್ವಾತಂತ್ರ್ಯ, ಅಹಿಂಸೆ, ಪರಧರ್ಮ ಸಹಿಷ್ಣುತೆ, ಸ್ವದೇಶಿ ಮತ್ತು ಗ್ರಾಮಸ್ವರಾಜ್ಯ ಪರಿಕಲ್ಪನೆ, ಬ್ರಹ್ಮಚರ್ಯೆ ಇತ್ಯಾದಿ ವಿಷಯಗಳನ್ನು ಕುರಿತು ಅವರು ರಚಿಸಿದ ಸಾಹಿತ್ಯವಲ್ಲದೆ, ಹಿಂದ್ ಸ್ವರಾಜ್ ಸೇರಿದಂತೆ ಗಾಂಧಿಯವರು ರಚಿಸಿರುವ ಪುಸ್ತಕಗಳು, ಯಂಗ್ ಇಂಡಿಯಾ ಮತ್ತು ನವಜೀವನ ಪತ್ರಿಕೆಗಳಿಗೆ ಬರೆದ ಲೇಖನಗಳು, ಪ್ರಶ್ನೋತ್ತರಗಳು, ಭಾಷಣಗಳು, ಪತ್ರಿಕಾ ಸಂದರ್ಶನಗಳು ಇವೆಲ್ಲವನ್ನೂ ಪರಾಮರ್ಶಿಸಿದಾಗಲೇ ಗಾಂಧಿ ವಾಙ್ಮಯದ ಪರಿಕಲ್ಪನೆಗೆ ಒಂದು ಸಮಗ್ರತೆ ಪ್ರಾಪ್ತವಾಗುವುದು. ಪ್ರಧಾನ ಸಂಪಾದಕರ ಪ್ರಸ್ತಾವನೆಯಲ್ಲಿ ಗಾಂಧಿ ವಾಙ್ಮಯವನ್ನು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿರುವ ಗಾಂಧೀಜಿಯವರನ್ನು ಕುರಿತ ರಚನೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಆದರೆ ರಾಮಚಂದ್ರನ್ ಅವರು ಕನ್ನಡದಲ್ಲಿನ ಗಾಂಧಿ ವಾಙ್ಮಯವನ್ನು ಸಂಪಾದಿಸುವಾಗ ಸಮಗ್ರ ದೃಷ್ಟಿಯ ಸ್ವಾತಂತ್ರ್ಯವಹಿಸಿರುವುದು ಯೋಗ್ಯವಾದ ಕ್ರಮ.

  ಕನ್ನಡದಲ್ಲಿ ಗಾಂಧಿ ಸಾಹಿತ್ಯ ವಿಪುಲವಾಗಿದೆ. ಗಾಂಧಿಯವರ ಕೃತಿಗಳ ಅನುವಾದವಲ್ಲದೆ ಅವರನ್ನು ಕುರಿತ ಸ್ವತಂತ್ರ ರಚನೆಗಳು ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಂದಿನವರೆಗೆ ಹೇರಳವಾಗಿ ಪ್ರಕಟಗೊಂಡಿವೆ. ಇಂದಿಗೂ ಪ್ರಕಟವಾಗುತ್ತಲೇ ಇವೆ. ಕಾವ್ಯ, ಕಥೆ, ಕಾದಂಬರಿ, ನಾಟಕಗಳು, ರೇಡಿಯೋ ರೂಪಕಗಳು, ಲೇಖನಗಳು, ಜೀವನಚರಿತ್ರೆ ಹೀಗೆ ಸೃಜನಶೀಲ ಮತ್ತು ಸೃಜನೇತರ(ಫಿಕ್ಷನ್ ಮತ್ತು ನಾನ್‌ಫಿಕ್ಷನ್)ಈ ಎರಡೂ ಪ್ರಕಾರಗಳಲ್ಲಿ ಗಾಂಧಿ ಮತ್ತು ಅವರ ವಿಚಾರಧಾರೆ ಕನ್ನಡದಲ್ಲಿ ಅಭಿವ್ಯಕ್ತಿ ಪಡೆದಿದೆ. ಸ್ವಾತಂತ್ರ್ಯಪೂರ್ವದ ಪೀಳಿಗೆ ಹಾಗೂ ಸ್ವಾತಂತ್ರ್ಯೋತ್ತರ ಪೀಳಿಗೆಯ ಲೇಖಕರ ಬಹುವಿಧ ರಚನೆಗಳನ್ನು ಸಂಶೋಧಿಸಿ, ಅಧ್ಯಯನಮಾಡಿ ಆಯ್ಕೆಗೊಂದು ಮಾನದಂಡ ರೂಪಿಸಿಕೊಳ್ಳುವುದು ಹಾಗೂ ಆಯ್ಕೆಮಾಡುವುದು ಸಾಕಷ್ಟು ಚಿಂತನಮಂಥನ, ಶ್ರಮ, ಪರಿಶ್ರಮ, ಸಮಯ ಮತ್ತು ಸಹನೆಗಳನ್ನು ಬೇಡುವ ಕೆಲಸ. ಈ ಎಲ್ಲದರಲ್ಲಿ ಸಮರ್ಥರಾದ ರಾಮಚಂದ್ರನ್ ಅವರ ಸಾಧನೆ ಏನು-ಎತ್ತ ಎಂಬುದನ್ನು ಇನ್ನು ಗಮನಿಸೋಣ. ಸೃಜನಶೀಲ, ಸೃಜನೇತರ ಮತ್ತು ಚಾರಿತ್ರಿಕ ಕಾಲಘಟ್ಟ-ಇವು ರಾಮಚಂದ್ರನ್ ಅವರ ಆಯ್ಕೆಯ ಮಾನದಂಡದ ಮುಖ್ಯ ಪ್ರಮಾಣವಾಗಿದೆ. ಗಾಂಧಿ ಮತ್ತು ಅವರ ತತ್ತ್ವ-ಆದರ್ಶಗಳನ್ನು ಕುರಿತು ಸಾಹಿತ್ಯ ರಚಿಸಿರುವ ವಿವಿಧ ಪೀಳಿಗೆಯ ಲೇಖಕರ ವರ್ಗೀಕರಣ ಹಾಗೂ ರಚನೆಗಳ ಆಯ್ಕೆಯಲ್ಲಿ ಆಯಾಕಾಲಘಟ್ಟದ ಮನೋಧರ್ಮ- ‘ಕಾಲಜ್ಞಾನ’ಗಳನ್ನು ಗಮನಿಸಿರುವುದು ಮಾನದಂಡದ ನಿಷ್ಕೃಷ್ಟತೆಗೆ ಸಹಾಯಕವಾಗಿದೆ. ಆಯ್ಕೆಯ ಈ ಕ್ರಮದಿಂದಾಗಿ ಗಾಂಧಿ ಮತ್ತು ಅವರ ವಿಚಾರಧಾರೆ, ನಿಲುವುಗಳನ್ನು ಕುರಿತಂತೆ ಸ್ವಾತಂತ್ರ್ಯ ಪೂರ್ವದಿಂದ ದಲಿತ ಬಂಡಾಯಗಳವರೆಗೆ ವಿವಿಧ ಪೀಳಿಗೆಗಳು ಮತ್ತು ಆ ಕಾಲಘಟ್ಟಗಳ ಮನೋಧರ್ಮ,‘ಕಾಲಜ್ಞಾನ’ಗಳು ಸ್ಪಷ್ಟವಾಗುತ್ತದೆ. ಈ ‘ಮನೋಧರ್ಮ’ಪ್ರಾತಿನಿಧಿಕವೂ ಆಗುತ್ತದೆ. 

ಕಾವ್ಯ, ಸಣ್ಣ ಕಥೆ, ಕಾದಂಬರಿ, ಸ್ಮತಿಕೋಶ, ವೈಚಾರಿಕ ಸಾಹಿತ್ಯ ಮತ್ತು ವಾದ-ವಿವಾದಗಳು-ಈ ರೀತಿ ನಾಲ್ಕು ಭಾಗಗಳನ್ನುಳ್ಳ ಈ ಸಂಪುಟದಲ್ಲಿ ಕಾವ್ಯ ಸಿಂಹಪಾಲು ಪಡೆದಂತಿದೆ. ನವೋದಯ, ನವ್ಯ, ದಲಿತ, ಬಂಡಾಯ ಈ ಕಾಲಘಟ್ಟಗಳ ಎಪ್ಪತ್ತೈದು ಕವಿಗಳ ಮಹತ್ವದ ಕವನಗಳು ಇಲ್ಲಿವೆ. ಈ ಕವನಗಳಲ್ಲಿ, ಪೂಜ್ಯಭಾವನೆಯಿಂದ ಹಿಡಿದು ರಾಷ್ಟ್ರಪಿತನನ್ನು ಮರೆಯುವ ತಿರಸ್ಕಾರದವರೆಗೆ ಆಯಾ ಕಾಲಘಟ್ಟದ ಮನೋಧರ್ಮ ಅಭಿವ್ಯಕ್ತಿ ಪಡೆದಿರುವುದನ್ನು ನಾವು ಕಾಣುತ್ತೇವೆ. ಸಣ್ಣ ಕಥೆ ವಿಭಾಗದಲ್ಲಿ, ಗಾಂಧಿಯವರೊಂದಿಗಿನ ಅನುಸಂಧಾನದ ಭಿನ್ನ ದೃಷ್ಟಿಕೋನಗಳನ್ನು ಬಿಂಬಿಸುವ ಮೂರು ಕಥೆಗಳಿವೆ. ಗ್ರಾಮೀಣ ಭಾರತದ ಪ್ರಜ್ಞೆಯಲ್ಲಿ ಗಾಂಧಿ ಹಾಸುಹೊಕ್ಕಾಗಿರುವುದನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸುವ ಬೆಸಗರಹಳ್ಳಿ ರಾಮಣ್ಣನವರ ‘ಗಾಂಧಿ’ ಕಥೆಯಲ್ಲಿ ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳು ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಅಧಃಪತನ ಹೊಂದುತ್ತಿರುವುದರ ವ್ಯಂಗ್ಯವಿದೆ. ಅಲ್ಲದೆ ಸಿ.ಎನ್.ಆರ್. ಹೇಳುವಂತೆ ಅನ್ಯಾಯದ ವಿರುದ್ಧ ಹೋರಾಡುವ ಗ್ರಾಮೀಣರ ನೈತಿಕ ಸ್ಥೈರ್ಯದ ಕಾಣ್ಕೆಯೂ ಇದೆ. ಪೂರ್ಣಚಂದ್ರ ತೇಜಸ್ವಿಯವರ ‘ಗಾಂಧಿಯ ದೆಸೆಯಿಂದ’ ಗಾಂಧಿಯವರ ಬದುಕಿನ ಒಂದು ಪ್ರಸಂಗದ ಪುನರ್ರಚನೆ. ಗಾಂಧಿಯವರು ತಮ್ಮ ತಂದೆಗೆ ಸುಳ್ಳು ಹೇಳಿ ಕೊನೆಗೆ ಪತ್ರದ ಮೂಲಕ ತಪ್ಪೊಪ್ಪಿಕೊಳ್ಳುವ ಪ್ರಸಂಗವದು. ತೇಜಸ್ವಿಯವರ ಕಥೆಯ ಬಾಲಕನೂ ಸುಳ್ಳಾಡಿ ಪತ್ರದ ಮುಖೇನವೇ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಗಾಂಧಿಯಂತೆ ಬದುಕುವ ಇಚ್ಛೆ-ಸಂಕಲ್ಪಗಳು ಇಂದು ನಗೆಪಾಟಲಿಗೆ ಗುರಿಯಾಗುತ್ತಿರುವ ವಿಷಮತೆಯನ್ನು ತೇಜಸ್ವಿ ವಿನೋದ ಲಹರಿಯಲ್ಲೇ ಪರಿಣಾಮಕಾರಿಯಾಗಿಸಿದ್ದಾರೆ. ಬಂಡಾಯ ಕಾಲದ ಕುಂ.ವೀರಭದ್ರಪ್ಪನವರ ‘ಕೂರ್ಮಾವತಾರ’ದಲ್ಲಿ ಗಾಂಧಿಯವರ ತತ್ವಸಿದ್ಧಾಂತಗಳು ಇಂದು ವ್ಯಾಪಾರಿ ಸರಕಾಗಿರುವುದನ್ನು ಕಟುವಾಸ್ತವದ ನೆಲೆಯಲ್ಲಿ ಚಿತ್ರಿಸುವ ಕಥೆ. ಬೊಳುವಾರು ಅವರ ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ’ಯೂ ಗಾಂಧಿ ಬದುಕಿನ ಪುನರ್ರಚನೆಯೇ.

==============
ವೈಚಾರಿಕ ಸಾಹಿತ್ಯದಲ್ಲಿ,ಗಾಂಧಿಯವರ ಆಶ್ರಮವಾಸಿಯಾಗಿದ್ದ, ಅವರನ್ನು ಸಾಮೀಪ್ಯ-ಸಾಹಚರ್ಯಗಳಿಂದ ಮನಸ್ಸಿಗೆ ತಂದುಕೊಂಡ ಸಿದ್ದವನಹಳ್ಳಿ ಕೃಷ್ಣ ಶರ್ಮರು, ‘ಗಾಂಧೀ-ಕಲೆ’ ಲೇಖನದಲ್ಲಿ. ಕಲೆಯ ಬಗೆಗಿನ ಗಾಂಧಿಯವರ ದೃಷ್ಟಿಕೋನವನ್ನು ಪರಾಮರ್ಶಿಸಿ ‘ಜೀವನವು ಸಮಸ್ತ ಕಲೆಗಳಿಗಿಂತ ಶ್ರೇಷ್ಠವಾದುದು ಎನ್ನುವ ಬಾಪೂ ಮಾತನ್ನು ಎತ್ತಿಹಿಡಿಯುತ್ತಾರೆ. ‘ಪೂರ್ಣ ದೃಷ್ಟಿಗೆ ಗಾಂಧೀಜಿ’ ಲೇಖನದಲ್ಲಿ ಕುವೆಂಪು ಗಾಂಧಿಯವರನ್ನು ಧರೆಗಿಳಿದು ಬಂದ ದೇವರೆಂಬಂತೆ ಆರಾಧಿಸುವುದಕ್ಕಿಂತ ಭಿನ್ನವಾದ ನೆಲೆಯಲ್ಲಿ ನೋಡುವ ಪ್ರಯತ್ನ ಮಾಡಿದ್ದಾರೆ. ಗಾಂಧಿ ನಮ್ಮೆಲ್ಲರಂತೆ ಒಬ್ಬ ಮನುಷ್ಯ ಎಂಬ ದೃಷ್ಟಿಕೋನದಿಂದ ಗಾಂಧಿಯವರ ಬದುಕನ್ನು, ರಾಮಕೃಷ್ಣ ಪರಮಹಂಸರನ್ನು ಕುರಿತಂತೆ ರೋಮೆ ರೋಲಾ ಅವರ ಅಭಿಪ್ರಾಯದ ಉದಾಹರಣೆಯೊಂದಿಗೆ ವಿಶ್ಲೇಷಿಸಿದ್ದಾರೆ. ರೋಮೆ ರೋಲಾ ಅವರು ರಾಮಕೃಷ್ಣ ಪರಮಹಂಸರನ್ನು ಕುರಿತು ಆಡಿರುವ ಮಾತುಗಳು ಗಾಂಧಿಯವರ ಬದುಕಿಗೆ ಹೆಚ್ಚಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಸಮರ್ಥನೆಯಿಂದ ಸಾದರಪಡಿಸಿ-

‘‘ಗಾಂಧೀಜಿಯ ಜೀವನವನ್ನು ಆ ದೃಷ್ಟಿಯಿಂದ ಅವಲೋಕಿಸಿದರೆ ದೇಶಭಕ್ತಿ, ಸಮಾಜಸೇವೆ, ಸ್ವಾತಂತ್ರ್ಯದ ಸಂಪಾದನೆ, ಹರಿಜನೋದ್ಧಾರ, ಸ್ವದೇಶೀ, ಖಾದಿ, ಇತ್ಯಾದಿ ರಾಜಕೀಯ ಸಾಮಾಜಿಕ ಆರ್ಥಿಕ ಭೂಮಿಕೆಗಳಿಗೆ ತುರೀಯವಾದ ಶಾಶ್ವತ ತತ್ವವೊಂದು ಬೋಧೆಯಾಗುತ್ತದೆ. ಆ ತತ್ವವೇ ಪೂರ್ಣ ಮನುಷ್ಯತ್ವದ ಸಂಪೂರ್ಣ ವಿಕಾಸಕ್ಕೆ ಕಾರಣ...’’ ಎನ್ನುವ ತೀರ್ಮಾನಕ್ಕೆ ಬರುತ್ತಾರೆ.

ಹಿಂದೂ ಧರ್ಮ ಕುರಿತಂತೆ ಗಾಂಧೀಜಿಯವರ ದೃಷಿಕೋನದ ವಿಚಾರವಿಮರ್ಶೆ(ಜಿ.ವಿ.ನಾರಾಯಣ ಮೂರ್ತಿ) ಹಾಗೂ ಮಹಿಳೆಯರ ಬಗ್ಗೆ ಗಾಂಧಿಯವರ ವಿಚಾರಗಳನ್ನು ನಿರೂಪಿಸುವ (ರಂ.ವಿ.ಲಕ್ಷ್ಮೀ) ಲೇಖನಗಳು ‘ಹಿಂದೂ ಧರ್ಮವೆಂದರೆ ಎಲ್ಲಾ ಧರ್ಮಗಳ ಬಗೆಗೂ ಮುಕ್ತ ಮನಸ್ಸನ್ನು ಹೊಂದಿರುವ ಸರ್ವಧರ್ಮ ಸಮಭಾವ’ ಎಂಬುದನ್ನು ಹಾಗೂ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಕುರಿತ ಕಳಕಳಿಯನ್ನು ಸಮರ್ಪಕವಾಗಿ ನಿರೂಪಿಸುತ್ತವೆ. ವಾದ-ವಿವಾದಗಳು ವಿಭಾಗದಲ್ಲಿ ಮತ್ತಷ್ಟು ಚರ್ಚೆ, ಅನುಸಂಧಾನಗಳಿಗೆ ಪುಟ ಕೊಡುವಂತಹ ಲೇಖನಗಳಿವೆ. ಭಾಷೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಗಾಂಧೀಜಿಯವರ ವಿಚಾರಗಳ ಮೇಲೆ ಗೌರೀಶ ಕಾಯ್ಕಿಣಿಯವರ ಲೇಖನ ಬೆಳಕು ಚೆಲ್ಲುತ್ತದೆ. ನಮ್ಮ ಯುವಕರನ್ನು ಹತಾಶೆಯ ಕೂಪಕ್ಕೆ ತಳ್ಳಿರುವ ಹದಗೆಟ್ಟ ನಮ್ಮ ಬದುಕನ್ನು ಸರಿದಾರಿಗೆ ಹಚ್ಚಲು ಗಾಂಧೀಜಿಯವರ ಶೈಕ್ಷಣಿಕ ವಿಚಾರಧಾರೆಯಲ್ಲಿ ಪರಿಹಾರ ಸಿಗಬಹುದೇ ಎಂಬುದನ್ನು ಮತ್ತೊಮ್ಮೆ ಶೋಧಮಾಡಿ ಕಂಡುಕೊಳ್ಳಬೇಕಾಗಿದೆ ಎನ್ನುವ ಗೌರೀಶ ಕಾಯ್ಕಿಣಿಯವರ ತೀರ್ಮಾನ ಗಾಂಧಿ ಪ್ರಣೀತ ಶಿಕ್ಷಣ ಪದ್ಧತಿಯನ್ನು ಇಂದಿನ ನೆಲೆಯಲ್ಲಿ ಮರು ಪರಾಮರ್ಶಿಸಬೇಕಾದ ಅಗತ್ಯವನ್ನು ಸೂಚಿಸುತ್ತದೆ. ಕನ್ನಡ ಸಾಹಿತ್ಯದ ಮೇಲೆ ಗಾಂಧಿ ಪ್ರಭಾವ ಲೇಖನದಲ್ಲಿ ಅನಂತಮೂರ್ತಿಯವರು, ‘‘ಗಾಂಧಿ ಯುಗ ನಮ್ಮ ಸಾಹಿತ್ಯ ಸನ್ನಿವೇಶದ ಬದಲಾವಣೆಗೆ ಪ್ರೇರಕಶಕ್ತಿಯಾಗಿ ಕೆಲಸ ಮಾಡಿತು’’ ಎಂದು ಹೇಳುತ್ತಲೇ ‘‘ಗಾಂಧಿವಾದ ಕನ್ನಡದಲ್ಲಿ ಈ ತನಕ ಮಾರ್ಕ್ಸ್‌ನ ಡಯಲಿಕ್ಟಿಕ್ನಿಂದ ಪ್ರೇರಿತವಾದ ಸಿಲೋನಿಯ ‘ಫಾಂಟಮಾರ’ ಮತ್ತು ಮಾಲ್ರೋನ ‘ಮ್ಯಾನ್ಸ್ ಫೇಟ್’ನಂಥ ಕೃತಿಯನ್ನು ಕೊಟ್ಟಿಲ್ಲ’’ ಎನ್ನುವ ತೀರ್ಮಾನಕ್ಕೆ ಬರುತ್ತಾರೆ.

 ಗಾಂಧೀಜಿಯವರನ್ನು ತಮ್ಮ ಅಂತರಂಗದೊಂದಿಗೆ ಸಮೀಕರಿಸಿಕೊಂಡು ಅವರು ಬೋಧಿಸುವ ಜೀವನಮೌಲ್ಯಗಳನ್ನು ತದಾತ್ಮತೆಯಿಂದ ಅಂತರಂಗಕ್ಕೆ ತಂದುಕೊಳ್ಳುವ ಪ್ರಾಮಾಣಿಕತೆಯ ಕೊರತೆಯನ್ನು ಎತ್ತಿ ಹೇಳುವ ಕೆ. ಸತ್ಯನಾರಾಯಣ ಗಾಂಧೀಜಿ ವಿಚಾರಗಳು, ಆದರ್ಶಗಳ ಬಗೆಗಿನ ದೇಶದ ಕಾಳಜಿ ಆಷಾಢಭೂತಿತನದ್ದು ಎಂಬ ಸತ್ಯವನ್ನು ತುಂಬ ಮಾರ್ಮಿಕವಾಗಿ ಹೇಳಿದ್ದಾರೆ. ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕುರಿತ ಮೂರು ವಿಭಿನ್ನ ದೃಷ್ಟಿಕೋನದ ಲೇಖನಗಳು ಗಾಂಧಿ ಚಿಂತನೆಗಳ ಅಧ್ಯಯನಯೋಗ್ಯ ಮಾದರಿಗಳಂತಿವೆ. ‘ಹಿಂದ್ ಸ್ವರಾಜ್’ ವಿಶ್ವದ ಆಧುನಿಕ ಮಾನವನ ಧರ್ಮಗ್ರಂಥ ಎನ್ನುವ ಹರಿಹರಪ್ರಿಯ, ಮಾರ್ಕ್ಸ್‌ವಾದ ಮತ್ತು ಜಾಗತಿಕ ಹಿನ್ನೆಲೆಯಲ್ಲಿ ಮತ್ತು ನಮ್ಮ ದೇಶದೊಳಗಿನ ಪರಿಸ್ಥಿತಿಯ ಮುನ್ನೆಲೆಯಲ್ಲಿ ವಿಶ್ಲೇಷಿಸುತ್ತ, ‘‘ವಿಶ್ವದ ಈವರೆಗಿನ ಎಲ್ಲ ನಾಗರಿಕತೆಗಳು ಮಣ್ಣುಪಾಲಾಗಿದ್ದು ಭಾರತ ಮಾತ್ರವೇ ಇನ್ನೂ ದಡದಲ್ಲಿ ಕೊಳೆತಿದೆ, ನೀರು ಶುದ್ಧವಾಗಿದೆ’’ ಎನ್ನುವ ಗಾಂಧಿಯವರ ಅಚಲವಿಶ್ವಾಸದತ್ತ ಗಮನಹರಿಸುತ್ತಾರೆ. ‘‘ಆಧುನಿಕ ನಾಗರಿಕತೆಯ ಅಫೀಮಿನಿಂದ ಆಗುವ ದುಷ್ಪರಿಣಾಮವನ್ನು ಎಳೆಎಳೆಯಾಗಿ ಬಿಡಿಸಿ ಹೇಳುವ ಗಾಂಧೀಜಿ, ಬಹುಮುಖ್ಯವಾಗಿ ಈ ಕಪಟ ಧಾರ್ಮಿಕವಾದಿಗಳ ಮಠಗಳು, ಮಠಾಧೀಶರು, ಭಕ್ತರ ಬಗ್ಗೆಯೇ ಎಚ್ಚರಿಸುತ್ತಾರೆ.’’ ಎನ್ನುವುದನ್ನೂ ಹರಹರಪ್ರಿಯ ಗಂಭೀರವಾಗಿ ಪರಿಗಣಿಸುತ್ತಾರೆ. ‘‘ಧರ್ಮ ಹಾಳಾಗಿದ್ದೇ ಇಂಥವರಿಂದ ಎಂಬುದು ‘ಹಿಂದ್ ಸ್ವರಾಜ್’ ಒತ್ತಿ ಹೇಳುವ ಮಾತು. ಹೀಗಿರುವಾಗ ಗಾಂಧೀಜಿ, ಗಾಂಧಿ ತತ್ವಗಳು ಹರಡದೇ ಇರಲು ಬೇರೆ ಕಾರಣಗಳನ್ನು ಹುಡುಕುವ ಅಗತ್ಯವೇ ಇಲ್ಲ. ಭಾರತ ದೇಶವೇ ಇದಕ್ಕೆ ಮುಳುವಾಗಿದೆ’’ ಎನ್ನುವುದರಲ್ಲಿ ಗಾಂಧೀಜಿಯವರ ಬಗೆಗಿನ ಅವಜ್ಞತೆಗೆ ನಿಕರವಾದ ಕಾರಣವನ್ನು ಗುರುತಿಸುತ್ತಾರೆ. ಇಷ್ಟೆಲ್ಲ ಅನುಸಂಧಾನದ ನಂತರ ‘‘ವಿಶ್ವದ ಯಾವ ಭಾಗದಲ್ಲಿ ಮಾನವ ಧರ್ಮ, ಮಾನವೀಯತೆ ಹಾಳಾಗುತ್ತದೆಯೋ ಅಲ್ಲಿ ‘ಹಿಂದ್ ಸ್ವರಾಜ್’ನ್ನು ಓದುಬಲ್ಲವರು ಓದಿ ತಿಳಿಯುವ, ಹೇಳುವ ಅಗತ್ಯವಿದೆ’’ ಎನ್ನುವ ಹರಹರ ಪ್ರಿಯರ ತೀರ್ಮಾನ ಮನನೀಯವಾದುದು.

 ಮುಂದಿನ ಲೇಖನ ಅರವಿಂದ ಮಾಲಗತ್ತಿಯವರದು. ‘ಹಿಂದ್ ಸ್ವರಾಜ್’ ನಮ್ಮ ಸಮುದಾಯದ ಆಯ್ಕೆಯಾಗದಿರಲು ಐದು ಕಾರಣಗಳನ್ನು ಕೊಡುವುದರೊಂದಿಗೆ ಲೇಖನ ಪ್ರಾರಂಭಿಸಿ, ಆ ನೆಲೆಯಲ್ಲೇ ಕೃತಿಯನ್ನು ಪರಾಮರ್ಶಿಸಿದ್ದಾರೆ. ಮಾಲಗತ್ತಿಯವರು ನಮ್ಮ ಸಮುದಾಯ ಎನ್ನುವುದನ್ನು ವಿಶದಪಡಿಸಿಲ್ಲವಾದರೂ, ಅದನ್ನು ದಲಿತ ಸಮುದಾಯ ಎಂದು ಗ್ರಹಿಸಿ ಅವರ ಲೇಖನವನ್ನು ಓದಿದರೆ ತಪ್ಪಾಗಲಾರದು. ಹಾಗೆ ಗ್ರಹಿಸಿಯೂ ಅದು ಇತರ ಸಮುದಾಯಗಳಿಗೂ ಸ್ವಾಗತಾರ್ಹವಾಗಲಿಲ್ಲ ಅಥವಾ ಸ್ವೀಕೃತವಾಗಿಲ್ಲ ಎಂಬುದನ್ನೂ ನಾವು ನೆನಪಿನಲ್ಲಿಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ಎಡಪಂಥೀಯ ತಾತ್ವಿಕ ನೆಲೆಯಲ್ಲಿ ‘ಹಿಂದ್ ಸ್ವರಾಜ್’ ಕೂಲಂಕಷವಾಗಿ ವಿಶ್ಲೇಷಿಸುವ ವಿ.ಎನ್.ಲಕ್ಷ್ಮೀನಾರಾಯಣ್ ಅವರ ಲೇಖನ ಭಾರತೀಯ ಸಾಮಾಜಿಕ ಸ್ಥಿತಿ ಪರಂಪರೆಯನ್ನೂ ಆಧುನಿಕ ಕಾಲದ ಪಾಶ್ಚಾತ್ಯ ಪ್ರಭಾವಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಗಾಂಧಿ ಆರ್ಥಿಕತೆ ಎಷ್ಟರ ಮಟ್ಟಿಗೆ ಕಾರ್ಯಸಾಧುವಾದುದು ಎಂಬುದನ್ನು ಪರಾಮರ್ಶಿಸುತ್ತದೆ.

ಮಾರ್ಕ್ಸ್‌ವಾದದ ತಿರುಳಾದ ಶ್ರಮಜೀವನ ಕುರಿತಂತೆ ಗಾಂಧಿಯವರ ಅವಜ್ಞತೆಯನ್ನು ಎತ್ತಿತೋರುವ ಲಕ್ಷ್ಮೀನಾರಾಯಣ್, ಮಾರ್ಕ್ಸ್‌ವಾದ ಹಿಂಸೆಯನ್ನು ಬೋಧಿಸುತ್ತದೆ, ಅಲ್ಲಿ ಧಾರ್ಮಿಕ ನಂಬಿಕೆಗೆ ಸ್ಥಾನವಿಲ್ಲ ಎನ್ನುವ ಗಾಂಧಿವಾದಿಗಳ ನಿಲುವನ್ನು ಗಾಂಧಿಯವರ ನಿಕಷಕ್ಕೆ ಒಡ್ಡಿಯೇ ಪ್ರಶ್ನಿಸುತ್ತಾರೆ. ‘‘ಧಾರ್ಮಿಕ ಶಿಕ್ಷಣವಿಲ್ಲದೆ ಏನೂ ನಡೆಯದು. ಹಿಂದೂಸ್ಥಾನ ಎಂದಿಗೂ ನಾಸ್ತಿಕವಾಗದು. ನಾಸ್ತಿಕತೆಯ ಭಾರವನ್ನು ಭರತಭೂಮಿ ಎಂದೂ ಸಹಿಸದು ಎಂದು ದೃಢವಾಗಿ ನಂಬುವಂತೆಯೇ ಅಹಿಂಸೆಯಲ್ಲೂ ಅಷ್ಟೇ ದೃಢವಾದ ನಂಬಿಕೆಯುಳ್ಳವರೆ? ಭಗವದ್ಗೀತೆಗೆ ವ್ಯಾಖ್ಯಾನ ಬರೆದಿರುವ ಗಾಂಧೀಜಿ ತಾವು ನಂಬಿರುವ ಧರ್ಮದ ಅನಿವಾರ್ಯ ಭಾಗವಾಗಿ ಬರುವ ಹಿಂಸೆಯನ್ನು ಪ್ರಶ್ನಿಸುವುದಿಲ್ಲ. ಆದರೆ ಮಾರ್ಕ್ಸ್‌ವಾದದ ಸಂದರ್ಭದಲ್ಲಿ ಅಹಿಂಸೆಯ ಬಗ್ಗೆ ಪದೇಪದೇ ಒತ್ತುಕೊಟ್ಟು, ಪರೋಕ್ಷರೀತಿಯಲ್ಲಿ ಸಮತಾವಾದವನ್ನು ದೂಷಿತ ಸ್ಥಾನದಲ್ಲಿ ನಿಲ್ಲಿಸುತ್ತಾರೆ....ಬಡತನ ಒಂದು ಮೌಲ್ಯವಾಗಿ ಸ್ವೀಕಾರಗೋಳ್ಳುವ ಅವರ ಸ್ವರಾಜ್ಯದಲ್ಲಿ ಶೋಷಣೆಯಿಂದ ಹುಟ್ಟುವ ಕ್ರೌರ್ಯ-ಹಿಂಸೆಗಳು ಪ್ರಶ್ನಾತೀತವಾಗುವುದೇ ಇಲ್ಲ. ಶೋಷಕರು ಧರ್ಮವನ್ನು ಶೋಷಿತರ ವಿರುದ್ಧವೇ ಬಳಸುತ್ತಾರೆ’’ ಎನ್ನುವ ಲಕ್ಷ್ಮೀನಾರಾಯಣರ ಮಾತುಗಳು ಗಾಂಧೀಜಿಯವರ ಚಿಂತನಾಕ್ರಮದಲ್ಲಿನ ವಿಪರ್ಯಾಸದ ಸೂಚಿಯಾಗಿದೆ. ಎಡಪಂಥೀಯ ಆಡಳಿತಗಳು ನೇಪಥ್ಯಕ್ಕೆ ಸರಿದು ಬಲಪಂಥೀಯರು ರಂಗದ ಮಧ್ಯೆ ವಿಜೃಂಭಿಸುತ್ತಿರುವ ಇಂದಿನ ಬದಲಾದ ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಧರ್ಮ ಮತ್ತು ಆರ್ಥಿಕ ಶೋಷಣೆ ಕುರಿತ ಈ ಅನುಸಂಧಾನದ ಮುಂದುವರಿಕೆ ಹೆಚ್ಚು ಪ್ರಸ್ತುತವಾಗಬಹುದು.

ಗಾಂಧೀಜಿ ‘ಹಿಂದ್ ಸ್ವರಾಜ್’ ಪುಸ್ತಕದ ಬಗ್ಗೆ ಹೀಗೆ ಹೇಳುತ್ತಾರೆ:
‘‘ಈ ಪುಸ್ತಕವನ್ನು ಎಳೆಯ ಮಗುವಿಗೂ ಕೊಡಬಹುದು. ಇದು ದ್ವೇಷದ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಹಿಂಸೆಗೆ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಹಿಂಸೆಗೆ ಬದಲು ಆತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ವಿರುದ್ಧವಾಗಿ ಆತ್ಮಬಲವನ್ನು ನೀಡುತ್ತದೆ.’’
ಕೋಮುವಾದದ ಕುರಿತು ಹೀಗೆ ಹೇಳುತ್ತಾರೆ:
‘‘ಹಿಂದೂಸ್ಥಾನದಲ್ಲಿ ಬರೀ ಹಿಂದೂಗಳೇ ಇರಬೇಕು ಎಂದು ಯೋಚಿಸುವ ಹಿಂದೂಗಳು ಕನಸುಕಾಣುತ್ತಿದ್ದಾರೆ. ಈ ದೇಶವನ್ನು ತಮ್ಮದಾಗಿ ಮಾಡಿಕೊಂಡ ಹಿಂದೂ, ಮುಸಲ್ಮಾನ, ಈಸಾಯಿ ಎಲ್ಲರೂ ದೇಶಭ್ರಾತೃಗಳು. ತಮ್ಮ ಹಿತಕ್ಕಾಗಿಯಾದರೂ ಅವರು ಐಕಮತ್ಯದಿಂದ ಬಾಳಬೇಕು. ಒಂದೇ ಧರ್ಮವಿದ್ದರೇನೇ ಒಂದು ರಾಷ್ಟ್ರ ಎಂಬುದು ಎಲ್ಲಿಯೂ ಇಲ್ಲ.’’

Writer - ಜಿ. ಎನ್. ರಂಗನಾಥ ರಾವ್

contributor

Editor - ಜಿ. ಎನ್. ರಂಗನಾಥ ರಾವ್

contributor

Similar News