ಬಂಡವಾಳ ಹೂಡಿಕೆಯ ಉದ್ದೇಶದ ಪ್ರಸ್ತಾವ: 2020ನೇ ಸಾಲಿನಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ: ಜಗದೀಶ ಶೆಟ್ಟರ್
ಬೆಂಗಳೂರು, ಮಾ. 15: ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಉದ್ದೇಶದ ಪ್ರಸ್ತಾವ(IEMs)ಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, 2020ನೇ ಸಾಲಿನಲ್ಲಿ 1,64,492 ಕೋಟಿ ರೂಪಾಯಿಗಳ ಹೂಡಿಕೆಯ ಉದ್ದೇಶ ದಾಖಲಾಗುವ ಮೂಲಕ ದೇಶದಲ್ಲೇ ಮೊದಲ ಸ್ಥಾನ ಗಳಿಸಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಕ್ರಾಂತ್ರಿಕಾರಕ ಕೈಗಾರಿಕಾ ಸ್ನೇಹಿ ನೀತಿಗಳು ಹಾಗೂ ಕಾನೂನುಗಳ ಸಕಾರಾತ್ಮಕ ಫಲ ನೀಡಲು ತೊಡಗಿವೆ. ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲೂ ಕೂಡಾ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಉದ್ದೇಶದ ಪ್ರಸ್ತಾವ(IEMs)ಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಡಿಪಿಐಐಟಿ (ಡಿಪಾರ್ಟ್‌ಮೆಂಟ್ ಫಾರ್ ಪ್ರಮೋಷನ್ ಆಫ್ ಇಂಡಸ್ಟ್ರೀ ಆ್ಯಂಡ್ ಇಂಟರ್‌ನಲ್ ಟ್ರೇಡ್) ಇತ್ತೀಚೆಗೆ ನೀಡಿರುವ ಅಂಕಿಅಂಶಗಳು ಇದಕ್ಕೆ ಸಾಕ್ಷಿ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
2018ನೇ ಸಾಲಿನಲ್ಲಿ 142 ಯೋಜನೆಗಳ ಮೂಲಕ 90,583 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯ ಉದ್ದೇಶ ದಾಖಲಾಗಿತ್ತು. 2019ನೇ ಸಾಲಿನಲ್ಲಿ 251 ಯೋಜನೆಗಳ ಮೂಲಕ 83,492 ಕೋಟಿ ರೂಪಾಯಿಗಳ ಹೂಡಿಕೆಯ ಉದ್ದೇಶ ದಾಖಲಾಗಿತ್ತು. ಜನವರಿ 2020ರಿಂದ ಡಿಸೆಂಬರ್ 2020ರವರೆಗೆ ಹಿಂದಿನ ಎರಡೂ ವರ್ಷಗಳ ದಾಖಲೆಯನ್ನು ಹಿಂದಿಕ್ಕಲಾಗಿದ್ದು, 120 ಯೋಜನೆಗಳ ಮೂಲಕ 1,62,492 ಕೋಟಿ ರೂಪಾಯಿಗಳ ಹೂಡಿಕೆಯ ಉದ್ದೇಶವನ್ನು ದಾಖಲಿಸಲಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಶೇಕಡ 39.19 ರ ಪ್ರಮಾಣ ಇದಾಗಿದೆ.
ಬಿ.ಎಸ್.ಯಡಿಯೂರಪ್ಪರ ನೇತೃತ್ವದಲ್ಲಿ ಕೈಗಾರಿಕಾ ಇಲಾಖೆ ಕೈಗೊಂಡಿರುವ ಹಲವಾರು ಕ್ರಾಂತಿಕಾರಕ ನೀತಿಗಳಲ್ಲಿ ಹಾಗೂ ಕಾನೂನುಗಳಲ್ಲಿನ ಬದಲಾವಣೆಗಳು ಇದಕ್ಕೆ ಕಾರಣವಾಗಿವೆ ಎಂದು ಶೆಟ್ಟರ್ ತಿಳಿಸಿದ್ದಾರೆ.
2020ರ ಜನವರಿಯಲ್ಲಿ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ರಾಜ್ಯದಲ್ಲಿದ್ದ ಕ್ಲಿಷ್ಟ ಕೈಗಾರಿಕಾ ನೀತಿಗಳನ್ನು ಸಡಿಲಗೊಳಿಸಲು ಪ್ರಾರಂಭಿಸಲಾಯಿತು. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಉಪಕ್ರಮಗಳು, ಕೈಗಾರಿಕಾ ಸೌಲಭ್ಯ ಅಧಿನಿಯಮದಲ್ಲಿನ ತಿದ್ದುಪಡಿ, ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಾಡಿದ ಭೂಸುಧಾರಣಾ ಕಾಯ್ದೆಗಳು, ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನೂತನ ಕೈಗಾರಿಕಾ ನೀತಿ ಹಾಗೂ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಯೋಜನೆಗಳು ಸುಲಭ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡುತ್ತವೆ. ಇದರ ಫಲಶೃತಿಯಾಗಿ ಬಂಡವಾಳ ಹೂಡಿಕೆಯ ಉದ್ದೇಶದ ಮೂಲಕ ಗೋಚರವಾಗುತ್ತಿದ್ದು, ನಮ್ಮ ಕ್ರಮಗಳಿಗೆ ಸಕಾರಾತ್ಮಕವಾದ ಬೆಂಬಲ ಸಿಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಯಲ್ಲಿ ಉದ್ದೇಶದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.