ಎಲ್ಲಾ ಬ್ಯಾಂಕ್‌ ಗಳನ್ನು ಖಾಸಗೀಕರಣ ಮಾಡುವುದಿಲ್ಲ: ನಿರ್ಮಲಾ ಸೀತಾರಾಮನ್

Update: 2021-03-16 18:44 GMT

ಹೊಸದಿಲ್ಲಿ, ಮಾ.16: ಎಲ್ಲಾ ಬ್ಯಾಂಕ್‌ಗಳನ್ನೂ ಖಾಸಗೀಕರಣ ಮಾಡುವುದಿಲ್ಲ. ಖಾಸಗೀಕರಣ ಪ್ರಕ್ರಿಯೆ ನಡೆದಾಗ ಅಲ್ಲಿರುವ ಉದ್ಯೋಗಿಗಳ ಹಿತರಕ್ಷಣೆ ಮಾಡಲಾಗುತ್ತದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 ಪ್ರಸ್ತಾವಿತ ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ 9 ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ 2 ದಿನಗಳ ದೇಶವ್ಯಾಪಿ ಮುಷ್ಕರದ ಮಧ್ಯೆಯೇ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ನಿರ್ಮಲಾ ‘ ಖಾಸಗೀಕರಣದ ನಿರ್ಧಾರ ಚೆನ್ನಾಗಿ ಯೋಚಿಸಿ ಕೈಗೊಂಡ ನಿರ್ಧಾರವಾಗಿದೆ. ಬ್ಯಾಂಕ್‌ಗಳಿಗೆ ಹೆಚ್ಚು ಬಂಡವಾಳ ಹರಿದು ಬರಬೇಕು, ಈ ಮೂಲಕ ಬ್ಯಾಂಕ್‌ಗಳು ದೇಶದ ಆಕಾಂಕ್ಷೆಯನ್ನು ಈಡೇರಿಸಲು ಶಕ್ತವಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಯಾವೆಲ್ಲಾ ಬ್ಯಾಂಕ್‌ಗಳು ಖಾಸಗೀಕರಣಗೊಳ್ಳುವ ಸಾಧ್ಯತೆಯಿದೆಯೋ, ಆ ಬ್ಯಾಂಕ್‌ಗಳ ಪ್ರತಿಯೊಬ್ಬ ಉದ್ಯೋಗಿಗಳ ಹಿತಾಸಕ್ತಿಯನ್ನು ರಕ್ಷಿಸಲಾಗುತ್ತದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಮುಂದುವರಿಯುವ ಬಗ್ಗೆ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಕಾರ್ಯನೀತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

ಈ ಮಧ್ಯೆ, ಪ್ರತಿಭಟನಾ ನಿರತ ಬ್ಯಾಂಕ್ ಉದ್ಯೋಗಿಗಳಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ‘ಕೇಂದ್ರ ಸರಕಾರ ಲಾಭವನ್ನು ಖಾಸಗೀಕರಣಗೊಳಿಸಿ, ನಷ್ಟವನ್ನು ರಾಷ್ಟ್ರೀಕರಣಗೊಳಿಸುತ್ತಿದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳನ್ನು ಮೋದಿ ಆಪ್ತ ಉದ್ಯಮಿಗಳಿಗೆ ಮಾರಾಟ ಮಾಡುವುದು ಭಾರತದ ಆರ್ಥಿಕ ಭದ್ರತೆಯಲ್ಲಿ ರಾಜಿ ಮಾಡಿಕೊಂಡಂತಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನಿರ್ಮಲಾ ‘ಈ ಹೇಳಿಕೆಯನ್ನು ಗಮನಿಸಿದರೆ ರಾಹುಲ್ ಗಾಂಧಿ ತಮ್ಮ ಹೇಳಿಕೆಗಳನ್ನೂ ಹೊರಗುತ್ತಿಗೆಗೆ ನೀಡಿದಂತೆ ಭಾಸವಾಗುತ್ತದೆ. ಈ ರೀತಿಯ ಹೇಳಿಕೆ ನೀಡಿದರೆ ಪ್ರಯೋಜನವಿಲ್ಲ, ಗಂಭೀರ ಚರ್ಚೆಗೆ ಮುಂದಾಗಲಿ. ನಮ್ಮ ವಿರುದ್ಧ ಆರೋಪ ಮಾಡುವ ಮೊದಲು ರಾಹುಲ್ ಯೋಚಿಸಬೇಕು, ಮನೆಯಲ್ಲಿ ಸ್ವಲ್ಪ ಅಭ್ಯಾಸ ನಡೆಸಬೇಕು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರವನ್ನು ರಾಷ್ಟ್ರೀಕರಣಗೊಳಿಸಿದ್ದರೆ, ಯುಪಿಎ ಸರಕಾರವಿದ್ದಾಗ ಅವರು ಸರಕಾರದ ಹಣವನ್ನು ಖಾಸಗೀಕರಣಗೊಳಿಸಿದ್ದಾರೆ’ ಎಂದರು.

ಮಹಾತ್ವಾಕಾಂಕ್ಷೆಯ ಬಂಡವಾಳ ಹಿಂದೆಗೆತ ಯೋಜನೆಯ ಮೂಲಕ 1.75 ಲಕ್ಷ ಕೋಟಿ ನಿಧಿ ಸಂಗ್ರಹಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಇದರ ಅಂಗವಾಗಿ ಸಾರ್ವಜನಿಕ ಕ್ಷೇತ್ರದ 2 ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಯೋಜನೆ ರೂಪಿಸಿದೆ. ಇದನ್ನು ವಿರೋಧಿಸಿ ದೇಶದಾದ್ಯಂತ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News