​ಟಿಕೆಟ್ ಹಂಚಿಕೆ ವಿರುದ್ಧ ಆಕ್ರೋಶ : ಬಿಜೆಪಿ ಕಚೇರಿಗೆ ಕಲ್ಲು, ಲಾಠಿಪ್ರಹಾರ

Update: 2021-03-17 04:13 GMT

ಕೊಲ್ಕತ್ತಾ : ನಗರದಲ್ಲಿರುವ ಬಿಜೆಪಿ ಚುನಾವಣಾ ಕಚೇರಿಗೆ ಕಲ್ಲೆಸೆದು, ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ ಘಟನೆ ವರದಿಯಾಗಿದೆ. ಕೆಲ ಕ್ಷೇತ್ರಗಳಿಗೆ ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪಕ್ಷದ ಕಚೇರಿಯತ್ತ ಕಲ್ಲು ತೂರಾಟ ನಡೆಸಿದರು.

ಹೇಸ್ಟಿಂಗ್ಸ್‌ನಲ್ಲಿರುವ ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಬಿಜೆಪಿ ಮುಖಂಡರನ್ನು ಗುರಿ ಮಾಡಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾಗಿ ಉನ್ನತ ಮೂಲಗಳು ಹೇಳಿವೆ. ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

"ಆದರೆ ಬಿಜೆಪಿ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆ ನಡೆಸುವುದು ಅಸಾಧ್ಯ; ಇದರ ಹಿಂದೆ ಪಿತೂರಿ ಅಡಗಿದೆ" ಎಂದು ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘಟನೆ ಬಗೆಗಿನ ವೀಡಿಯೊವೊಂದರಲ್ಲಿ ಕಂಡುಬರುವಂತೆ ವ್ಯಕ್ತಿಯೊಬ್ಬ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು, ಗಾಲ್ಫ್ ಟೊಪ್ಪಿ ಧರಿಸಿದ್ದ, ಭದ್ರತಾ ಪಡೆಯ ಬೆಂಗಾವಲು ಇದ್ದ ವ್ಯಕ್ತಿಯೊಬ್ಬರತ್ತ ಧಾವಿಸುವ ದೃಶ್ಯವಿದೆ. ಆ ವ್ಯಕ್ತಿಯನ್ನು ಸೂಕ್ತ ಬೆಂಗಾವಲಿನೊಂದಿಗೆ ಕಟ್ಟಡದ ಒಳಕ್ಕೆ ಕರೆದೊಯ್ಯುತ್ತಿರುವಾಗ ಆ ವ್ಯಕ್ತಿ ನಾಯಕನತ್ತ ಕಲ್ಲು ಎಸೆಯುತ್ತಿರುವ ದೃಶ್ಯವೂ ಕಾಣಿಸುತ್ತಿದೆ. ಆ ವ್ಯಕ್ತಿಗೆ ಅಥವಾ ಅಲ್ಲಿದ್ದ ಪೊಲೀಸರಿಗೆ ಕಲ್ಲೇಟು ತಗುಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಟ್ಟಡದ ಪ್ರವೇಶದ್ವಾರದ ಬಳಿ ನಿನ್ನೆಯಿಂದಲೂ ಕಾದುಕುಳಿತಿದ್ದ ಪ್ರತಿಭಟನಾಕಾರರನ್ನ ಚದುರಿಸಲು ಲಾಠಿಪ್ರಹಾರ ನಡೆಸಿದರು. ಬಿಜೆಪಿ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕೆ ಇಳಿದಿರುವ ಮಾಜಿ ಟಿಎಂಸಿ ಶಾಸಕ ದೀಪಕ್ ಹಲ್ದಾರ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾಕಾರರಲ್ಲಿ ಸೇರಿದ್ದರು. ಹಲ್ದಾರ್ ಇತ್ತೀಚೆಗೆ ಬಿಜೆಪಿ ಸೇರಿದ್ದರು. ಜಯನಗರ, ಕುಲ್ತಾಲಿ, ಸೌತ್‌ಹಬ್ರಾ ಮತ್ತು ಉದಯನಾರಾಯಣಪುರ ಕಾರ್ಯಕರ್ತರೂ ಕಂಡುಬಂದರು. ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಸೋಮವಾರವಿಡೀ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಲ್ಲದೇ, ಹಿರಿಯ ಮುಖಂಡರಾದ ಮುಕುಲ್ ರಾಯ್, ಅರ್ಜುನ್ ಸಿಂಗ್, ಶಿವಪ್ರಕಾಶ್ ಅವರನ್ನು ತರಾಟೆಗೆ ತೆಗದು ಕೊಂಡರು. ಬಹಳಷ್ಟು ಮಂದಿ ಟಿಎಂಸಿ ಮುಖಂಡರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News