ಭಾರತದ ಜತೆಗೆ ಉತ್ತಮ ಬಾಂಧವ್ಯದ ಅಗತ್ಯತೆ ಬಗ್ಗೆ ಮಾತನಾಡಿದ ಪಾಕ್ ಸೇನಾ ಮುಖ್ಯಸ್ಥ

Update: 2021-03-19 10:00 GMT
photo: facebook

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ  ನಡುವೆ  ಉತ್ತಮ ಮತ್ತು ಸ್ಥಿರ ಬಾಂಧವ್ಯ ದಕ್ಷಿಣ ಮತ್ತು ಮಧ್ಯ ಏಷ್ಯಾದ ಹಿತಾಸಕ್ತಿಗಳನ್ನು  ಹಾಗೂ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅಗತ್ಯವಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಹೇಳಿದ್ದಾರೆ.

ಗುರುವಾರ ಅವರು  ತಮ್ಮ ದೇಶದ ರಾಷ್ಟ್ರೀಯ ಸುರಕ್ಷಾ ವಿಭಾಗವು ಆಯೋಜಿಸಿದ್ದ ಪ್ರಥಮ ಎರಡು ದಿನಗಳ ಇಸ್ಲಾಮಾಬಾದ್ ಸುರಕ್ಷತಾ ಸಮಾವೇಶದಲ್ಲಿ ಮಾತನಾಡುತ್ತಿದ್ದರು.

"ಆದರೆ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾಮರ್ಥ್ಯಗಳು  ಎರಡು ಅಣ್ವಸ್ತ್ರ ಹೊಂದಿರುವ ನೆರೆಹೊರೆಯ ರಾಷ್ಟ್ರಗಳ ನಡುವಿನ ವಿವಾದದಿಂದ ಬಳಕೆಯಾಗದೆ ಉಳಿದಿವೆ, ಈ ಸಮಸ್ಯೆಯ ಕೇಂದ್ರ ಬಿಂದು ಕಾಶ್ಮೀರ ವಿವಾದವಾಗಿದೆ" ಎಂದು ಅವರು ಹೇಳಿದರು.

ಕಾಶ್ಮೀರ ಸಮಸ್ಯೆ ಶಾಂತಿಯುತವಾಗಿ ಪರಿಹಾರವಾಗದ ಹೊರತು  ಹೆಜ್ಜೆ ಮುಂದಿಡುವುದು ಸಾಧ್ಯವಿಲ್ಲ ಆದರೆ  ಹಿಂದಿನದೆಲ್ಲವನ್ನೂ ಮರೆತು ಮುಂದಡಿಯಿಡಲು ಈಗ ಸಮಯ ಬಂದಿದೆ ಎಂದು ನನಗನಿಸುತ್ತದೆ. ಎಂದು ಅವರು ಹೇಳಿದರು.

ಬುಧವಾರ ಈ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೂಡ ಇದೇ ವಿಷಯ ಪ್ರಸ್ತಾಪಿಸಿ "ಪಾಕಿಸ್ತಾನ ಮತ್ತು ಭಾರತದ ನಡುವೆ ಶಾಂತಿ ಮೂಡಿದಲ್ಲಿ ಅದು ಭಾರತಕ್ಕೆ ಸಂಪನ್ಮೂಲಭರಿತ ಮಧ್ಯ ಏಷ್ಯಾ ಭಾಗಕ್ಕೆ ನೇರ ಸಂಪರ್ಕ ಸಾಧಿಸುವುದು ಸಾಧ್ಯವಾಗುತ್ತದೆ, ಆದರೆ ಮೊದಲ ಹೆಜ್ಜೆಯಿಡುವುದು ಭಾರತಕ್ಕೆ ಬಿಟ್ಟ ವಿಚಾರ" ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News