ವಿಮಾನದಲ್ಲಿ ಹೃದಯಾಘಾತಗೊಂಡ ಮಹಿಳೆಯನ್ನು ಕಾಪಾಡಿದ ಆಪತ್ಬಾಂಧವ ವೈದ್ಯರು ಸ್ವತಃ ಹೃದಯಾಘಾತವಾದಾಗ ಯಾರೂ ಇರಲಿಲ್ಲ !

Update: 2021-03-21 05:40 GMT
ಡಾ. ಕಾಸಿಮ್

ಕಳೆದ ವರ್ಷ ನಡೆದ ಘಟನೆಯಿದು. ಸೌದಿಯ ಜಿದ್ದಾದಿಂದ ಮುಂಬೈಗೆ ಆಗಮಿಸುವ ಜೆಟ್ ಏರ್'ವೇಸ್ ನಲ್ಲಿ 55 ವರ್ಷದ ಮಹಿಳೆಗೆ ಹೃದಯಾಘಾತವಾಗುತ್ತದೆ. ಗಗನಸಖಿ ಇದರಲ್ಲಿ ಯಾರಾದರೂ ವೈದ್ಯರಿದ್ದಾರೆಯೇ ಎಂದು ಅನೌನ್ಸ್ ಮಾಡುತ್ತಾಳೆ. ಓರ್ವ ವೈದ್ಯರು ತಕ್ಷಣ ಎದ್ದು ಬಂದು ಮಹಿಳೆಯ ಚಿಕಿತ್ಸೆಗೆ ಅಣಿಯಾಗುತ್ತಾರೆ. ಮಹಿಳೆಗೆ ಸಂಪೂರ್ಣ ಶ್ವಾಸ ನಿಂತಿತ್ತು. ಹಾರ್ಟ್ ಬೀಟ್ ಗೆ ಬೇಕಾದ ಪ್ರಾಥಮಿಕ ಚಿಕಿತ್ಸಾ ಕ್ರಮದಲ್ಲಿ ವೈದ್ಯರು ತೊಡಗುತ್ತಾರೆ. ಕೆಲವೇ ಸಮಯದಲ್ಲಿ ಪಲ್ಸ್ ಬರುತ್ತೆ. ನಿಂತ ಉಸಿರಾಟ ಮತ್ತೆ ಪ್ರಾರಂಭವಾಗುತ್ತದೆ.

ವಿಮಾನದ ಫಸ್ಟ್ ಏಯ್ಡ್ ಕಿಟ್ ನಲ್ಲಿದ್ದ ಚುಚ್ಚುಮದ್ದು ನೀಡುತ್ತಾರೆ. ಎಮರ್ಜೆನ್ಸಿ ಲ್ಯಾಂಡ್ ಆಗಬೇಕಿದ್ದ ವಿಮಾನ ವೈದ್ಯರ ಕಾರ್ಯಕ್ಷಮತೆಯಿಂದ ನಿರೀಕ್ಷಿತ ಸ್ಥಳದಲ್ಲೇ ಇಳಿಯುತ್ತದೆ. ಆ ಮಧ್ಯರಾತ್ರಿ ಎರಡು ತಾಸುಗಳ ಕಾಲ ವಿಮಾನದಲ್ಲಿ ನಿದ್ದೆಗೆಟ್ಟು ವೈದ್ಯರು ಹೃದಯಾಘಾತವಾದ ಮಹಿಳೆಯ ಶುಶ್ರೂಷೆ ಮಾಡಿ ಯಶಸ್ವಿಯಾಗುತ್ತಾರೆ. ಮುಂಬೈ ಇಳಿದ ತಕ್ಷಣ ಆಂಬುಲೆನ್ಸ್ ನಲ್ಲಿ ಹೋದ ಮಹಿಳೆ ಆಸ್ಪತ್ರೆ ಸೇರಿ ಗುಣಮುಖರಾಗುತ್ತಾರೆ. ವಿಮಾನದಲ್ಲಿ ಆಪತ್ಬಾಂಧವರಾಗಿ ಸ್ಪಂದಿಸಿದ ವೈದ್ಯರಿಗೆ ಅಭಿನಂದನೆಯ ಮಹಾಪೂರವಾಗುತ್ತದೆ.

ಕಳೆದ ಗುರುವಾರ ತಡರಾತ್ರಿ ತನಕ ಹರಟುತ್ತಿದ್ದರು. ಭಾರತೀಯ ಕಾಲಮಾನ ಮಧ್ಯರಾತ್ರಿ 02:07 ಅವರ ವಾಟ್ಸ್ಆ್ಯಪ್ ಲಾಸ್ಟ್ ಸೀನ್. ಪವಿತ್ರ ಮಕ್ಕಾದ ಝಹ್ರತ್ ಕುದಾಯಿಯಲ್ಲಿ ವೈದ್ಯಕೀಯ ಸೇವೆಯಲ್ಲಿದ್ದ ಆ ವೈದ್ಯರು ಶುಕ್ರವಾರ ಜುಮಾ ನಮಾಝ್ ಗೆ ಜಿದ್ದಾಕ್ಕೆ ಬರುವೆನೆಂದು ಸಂಬಂಧಿಕರಲ್ಲಿ ಭರವಸೆ ನೀಡಿದ್ದರು. ಶುಕ್ರವಾರ ಬಾರದೇ ಇದ್ದಾಗ ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಸಂಶಯಗೊಂಡ ಸಂಬಂಧಿಕರು ಅವರ ಹತ್ತಿರದ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದವರಿಗೆ ಕಾಲ್ ಮಾಡಿ ವಿಚಾರಿಸಿದರು. ವೈದ್ಯರ ಕೋಣೆ ಬಾಗಿಲು ಹಾಕಲಾಗಿತ್ತು. ಎಷ್ಟೇ ತಟ್ಟಿದರೂ ಒಳಗಿಂದ ನೋ ರೆಸ್ಪಾನ್ಸ್. ಆಸ್ಪತ್ರೆ ಸಿಬ್ಬಂದಿಗಳು ಮತ್ತು ಪೊಲೀಸರು ಬಂದು ಬಾಗಿಲು ಒಡೆದರು. ಕೋಣೆಯ ಒಳಗೆ ಕಿಚನ್ ಭಾಗದಲ್ಲಿ ವೈದ್ಯರ ದೇಹ ನಿಶ್ಚಲವಾಗಿ ಮಲಗಿತ್ತು. ಮೂಗು, ಬಾಯಿಂದ ರಕ್ತ ಬರುತ್ತಿತ್ತು. ತಪಾಸಣೆಗೈದಾಗ ವೈದ್ಯರ ಪ್ರಾಣಪಕ್ಷಿ ಹಾರಿಹೋಗಿತ್ತು ಮತ್ತು ಅದಾಗಲೇ ಮೃತರಾಗಿ 10 ತಾಸು ಕಳೆದಿತ್ತು. ಗುರುವಾರ ಮಧ್ಯರಾತ್ರಿ ಸಂಬಂಧಿಕರೊಂದಿಗೆ ಮಾತನಾಡಿದ್ದ ವೈದ್ಯರು ಶುಕ್ರವಾರ ರಾತ್ರಿ ಆಗುವಾಗ ಮೃತರಾದ ಸುದ್ಧಿ ಕಿವಿಕ್ಕಪ್ಪಳಿಸಿತು.

ಈ ಎರಡೂ ಘಟನೆಯ ವೈದ್ಯರು ಒಬ್ಬರೇ..! ಅವರೇ ಸಹಸ್ರಾರು ಹಿತೈಷಿಗಳನ್ನು, ಕುಟುಂಬಿಕರನ್ನು ದುಃಖದ ಕಡಲಲ್ಲಿ ಮುಳುಗಿಸಿದ ಆಪತ್ಬಾಂಧವ ವೈದ್ಯ, ಸರಳ ವ್ಯಕ್ತಿತ್ವದ ಮಂದಸ್ಮಿತ ಡಾ. ಎ.ಕೆ. ಕಾಸಿಮ್. ಅಂದು ವಿಮಾನದಲ್ಲಿ 55ರ ಹರೆಯದ ಮಹಿಳೆಯನ್ನು ಹೃದಯಾಘಾತದಿಂದ ರಕ್ಷಿಸಿದ ಅದೇ ವೈದ್ಯರಿಗೆ ಸ್ವತಃ ಹೃದಯಾಘಾತವಾದಾಗ ರಕ್ಷಿಸಲು ಯಾರೂ ಇರಲಿಲ್ಲ. ಡಾ. ಕಾಸಿಮ್ ಗೆ ಹೃದಯಾಘಾತವಾದ ಆ ಕ್ಷಣದಲ್ಲಿ ಅವರ ಕೋಣೆಯಲ್ಲಿ ಅವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಆ ಕ್ಷಣದಲ್ಲಿ ಅವರೆಷ್ಟು ವೇದನೆ ಅನುಭವಿಸಿರಬಹುದು. ಸಹಾಯಕ್ಕಾಗಿ ಅವರೆಷ್ಟು ಕೂಗಿರಬಹುದು. ನೋವಿನಲ್ಲಿ ಅವರೆಷ್ಟು ಚೀರಾಡಿರಬಹುದು. ದೇವನೇ ಬಲ್ಲ.

ಡಾ. ಎ.ಕೆ. ಕಾಸಿಮ್ ಮಕ್ಕಾ ನಗರದ ಝಹ್ರತ್ ಕುದಾಯಿಯಲ್ಲಿರುವ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ. ಮೂಲತಃ ಉಪ್ಪಳದ ಅಟ್ಟೆಗೋಳಿಯವರಾದರೂ ಪ್ರಸ್ತುತ ಮಂಗಳೂರಿನ ಫಳ್ನೀರ್ ನಿವಾಸಿ. ಊರಿಗೆ ಬರಲು ಸಜ್ಜಾಗಿದ್ದರೂ ಕೋವಿಡ್ ಕಾರಣದಿಂದ ತಡವಾಗಿತ್ತು. ಊರಲ್ಲಿ ಅವರ ಹೆತ್ತವರು, ಪತ್ನಿ, ಮಕ್ಕಳು ಬರುವಿಕೆಗಾಗಿ ಕಾತರರಾಗಿದ್ದರು. ಆದರೆ ಖಾಸಿಮ್ ಬಾರದ ಲೋಕಕ್ಕೆ ಪಯಣಿಸಿದರು. ಅವರ ಮೃತದೇಹವನ್ನು ಶನಿವಾರ ಮಗ್ರಿಬ್ ನಮಾಝ್ ಬಳಿಕ ಮಕ್ಕಾ ಮಸ್ಜಿದ್ ನಲ್ಲಿ ಮಯ್ಯತ್ ನಮಾಝ್ ಮಾಡಿ ಹರಮ್ ಸಮೀಪದ ಪುಣ್ಯಭೂಮಿ ಜನ್ನಾತುಲ್ ಮೊಅಲ್ಲಾದಲ್ಲಿ ದಫನ ಮಾಡಲಾಯಿತು.

ಖದೀಜಾ ಬೀವಿಯವರ ದಫನ ಸ್ಥಳದ ಹಿಂಬದಿಯೇ ಡಾ. ಕಾಸಿಮ್ ಅವರಿಗೆ ಮಣ್ಮರೆಯಾಗುವ ಸುಯೋಗ ಒದಗಿತಾದರೂ ಸಹಸ್ರಾರು ಮಂದಿ ಅಭಿಮಾನಿಗಳ ನೋವು ಇನ್ನೂ ಆರಿಲ್ಲ. ದಫನ ಕಾರ್ಯದಲ್ಲಿ ದಾಖಲಾತಿ ಒದಗಿಸುವುದರಿಂದ ಹಿಡಿದು ಎಲ್ಲವನ್ನೂ ಮಾಡಿಕೊಟ್ಟ ಕೆಎಂಸಿಸಿ ಸಂಸ್ಥೆಗೆ ಕೃತಜ್ಞತೆಗಳು.

ಡಾ. ಕಾಸಿಮ್ ಒಬ್ಬನಲ್ಲಿ ಒಂದು ನಿಮಿಷ ಮಾತಿಗಿಳಿದರೆ ಸಾಕು. ಆತ ಕಾಸಿಮ್ ಗೆ ಆಪ್ತನಾಗಿ ಬಿಡುತ್ತಾನೆ. ಅಂತಹ ಕಾಂತ ಶಕ್ತಿ ಅವರಲ್ಲಿದೆ. ಮುಖದಲ್ಲಿ ಸದಾ ಮುಗುಳ್ನಗೆ. ಆ ನಗುವೇ ಅವರ ವ್ಯಕ್ತಿತ್ವದ ದೊಡ್ಡ ಆಸ್ತಿ. ಪವಿತ್ರ ಮಕ್ಕಾವನ್ನು ನಾನು ಮೂರು ಬಾರಿ ಸಂದರ್ಶಿಸಿದ್ದೇನೆ. ಅಲ್ಲಿಗೆ ಹೋದಾಗಲೆಲ್ಲಾ ನನಗೆ ಒಡನಾಡಿಯಾಗಿದ್ದವರು ಡಾ. ಕಾಸಿಮ್. ಅವರ ಜೊತೆಗೆ ಸುತ್ತದ ಸ್ಥಳವಿಲ್ಲ. ಅವರ ಜೊತೆ ತಿನ್ನದ ಆಹಾರವಿಲ್ಲ. ಅವರ ಜೊತೆ ಹರಟದ ವಿಚಾರಗಳಿಲ್ಲ. ಮಕ್ಕಾಕ್ಕೆ ಬಂದರೆ ರೂಮ್ ಮಾಡ್ಬೇಡ ಮಾರಾಯ. ನನ್ನ ಫ್ಲ್ಯಾಟಲ್ಲಿ ನಾನೊಬ್ನೇ. ಇಲ್ಲಿಗೇ ಬಾ ಅಂತಿದ್ರು. ಪತ್ನಿ, ಮಗಳ ಜೊತೆ ಮಕ್ಕಾ ಹೋಗಿದ್ದಾಗ ಡಾ. ಕಾಸಿಮ್ ಅವರ ಫ್ಲ್ಯಾಟಲ್ಲೇ ಒಂದು ವಾರ ವಾಸ್ತವ್ಯವಿದ್ದೆ. ಅವರ ಸ್ನೇಹಿತ ಕೇರಳದ ಸಮೀರ್ ಕಾರು ವ್ಯವಸ್ಥೆಯನ್ನೂ ಮಾಡಿದ್ದರು. ಎಲ್ಲಾ ಕಡೆ ಸುತ್ತಾಡಿಸಿದ್ದರು. ತಾಯಿಫ್ ಮಲೆಯ ತುದಿಗೆ ಹೋಗಿದ್ದೆವು. ಜಿದ್ದಾದಲ್ಲೂ ತಿರುಗಾಡಿದ್ದೆವು. ನಮ್ಮ ಜೊತೆ ಮದೀನಾಕ್ಕೂ ಬಂದಿದ್ದರು. ತುಂಬಾ ಹೆಲ್ಪ್ ಫುಲ್ ಮನುಷ್ಯ. ಮತ್ತೊಮ್ಮೆ ನನ್ನ ತಂದೆ ಜೊತೆಗೆ ಉಮ್ರಾ ಹೋಗಿದ್ದಾಗ ಮಕ್ಕಾದಲ್ಲಿ ತಂದೆಗೆ ಅನಾರೋಗ್ಯ ಕಾಡಿತ್ತು. ಆ ಸಂದರ್ಭ ಅಪತ್ಬಾಂಧವರಾಗಿ ನನ್ನ ಜೊತೆಗಿದ್ದವರು ಡಾ. ಕಾಸಿಮ್. ತಂದೆಗೆ ಚಿಕಿತ್ಸೆ ನೀಡಿ ಧೈರ್ಯ ತುಂಬಿದ್ದರು. ತಂದೆ ಮತ್ತೆ ಚೇತರಿಸಿಕೊಂಡಿದ್ದರು.

ದಿನನಿತ್ಯ ಹರಟುತ್ತಿದ್ದೆವು, ಮೆಸೇಜ್ ಮಾಡುತ್ತಿದ್ದೆವು. ನನ್ನ ದೇಹ ಕರಗಿಸಲು ದಿನನಿತ್ಯ ಸಲಹೆ ನೀಡುತ್ತಿದ್ದರು. ಅವರ ಸಲಹೆಯಂತೆ ಡಯಟ್ ಮಾಡಿ 4 ತಿಂಗಳು ಅಕ್ಕಿ, ಸಕ್ಕರೆ ಬಿಟ್ಟಿದ್ದೆ. 4 ಕೆಜಿ ಕಡಿಮೆಯಾಗಿದ್ದೆ. ಮತ್ತೆ ಉದಾಸೀನವಾಗಿ ಬಿಟ್ಟಿದ್ದೆ. ಆದರೆ ಡಾ. ಕಾಸಿಮ್ ಆರೋಗ್ಯ ಕಾಪಾಡು ಮಾರಾಯ ಅಂತ ಅಂಗಲಾಚುತ್ತಿದ್ದರು. ನಾನವರನ್ನು ಡಾಕ್ಟ್ರೇ ಅಂತ ಕರೆಯೋದು. ನಮ್ಮ ಎಂ.ಫ್ರೆಂಡ್ಸ್ ಪಾಲಿಗೆ ಅವರು "ಅಮುಲ್ ಬೇಬಿ". ನನ್ನನ್ನವರು ಪ್ರೀತಿಯಿಂದ "ರಶೀದಣ್ಣ" ಅಂತ ಸಂಭೋದಿಸುತ್ತಿದ್ದರು. ವೆಕೇಶನಲ್ಲಿ ಊರಿಗೆ ಬಂದಾಗ ಹೆಚ್ಚಾಗಿ ನಾವು ಜೊತೆಗಿರುತ್ತಿದ್ದೆವು. ಇರುವ ಸಮಯವೆಲ್ಲಾ ಸೋಶಿಯಲ್ ಮೂವ್ಮೆಂಟೇ ಜಾಸ್ತಿ. ಅವರು ಜಾತಿ ಮತ ಬೇಧವಿಲ್ಲದೇ ಆರೋಗ್ಯ ರಂಗದಲ್ಲಿ ಮಾಡಿರುವ ಬಡಜನರ ಸೇವೆ ಅಷ್ಟಿಷ್ಟಲ್ಲ. ಅವರು ಯಾವತ್ತೂ ಕಮರ್ಷಿಯಲ್ ವೈದ್ಯರಾಗಿರಲಿಲ್ಲ. ಕಿಸೆಯಲ್ಲಿದ್ದುದನ್ನು ಅಶಕ್ತರಿಗೆ ನೀಡುವ ಉದಾರ ಮನುಷ್ಯ. ನೂರಾರು ವ್ಹೀಲ್ ಚೆಯರ್ ಗಳನ್ನು ವಿಕಲಾಂಗರಿಗೆ ಪ್ರಾಯೋಜಿಸಿದ್ದಾರೆ.

ಎಂ.ಫ್ರೆಂಡ್ಸ್ ಸಂಸ್ಥೆಯ ಏನೇ ಸೇವಾ ಯೋಜನೆಯಿರಲಿ, ಅದರಲ್ಲಿ ಡಾ. ಕಾಸಿಮ್ ಇದ್ದೇ ಇರುತ್ತಾರೆ. ಅವರು ನಮ್ಮ ಸಂಸ್ಥೆಗೆ ಬಲಿಷ್ಟ ವ್ಯಕ್ತಿಯಾಗಿದ್ದರು. ಮಕ್ಕಾದಲ್ಲಿ ಹಜ್ ಸಂದರ್ಭ 24×7 ಉಚಿತ ವೈದ್ಯಕೀಯ ಕೆಲಸ ಮಾಡುವ ಅಪರೂಪದ ವೈದ್ಯ ಈ ಕಾಸಿಮ್. 26 ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಉಪ್ಪಳದ ಕೈಕಂಬ, ಮಂಗಳೂರು ಹಾಗೂ ಸೌದಿ ಅರೇಬಿಯಾದಲ್ಲಿ ಅವರು ಮಾಡಿರುವ ಕೈಂಕರ್ಯ ಶ್ರೇಷ್ಠವಾದುದು.

ಡಾ. ಕಾಸಿಮ್ ಅವರ ಅಕಾಲಿಕ ನಿಧನ ಎಲ್ಲರಲ್ಲೂ ದುಖದ ಛಾಯೆ ಮೂಡಿಸಿದೆ. ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು. ಮಕ್ಕಳಾದ ಕಾಮಿಲ್ ಮತ್ತು ಶಾಮಿಲ್ ಪ್ರತಿಭಾವಂತರು. ಇಬ್ಬರೂ ವೈದ್ಯಕೀಯ ವಿದ್ಯಾರ್ಥಿಗಳು. ತಂದೆಯ ಆದರ್ಶವನ್ನು ಮುಂದುವರಿಸಬಹುದೆಂಬ ನಂಬಿಕೆ ನಮಗಿದೆ. ಕಾಸಿಮ್ ತಂದೆ 86ರ ಹರೆಯದ ಅಬ್ದುಲ್ ಹಮೀದ್ ಉಪ್ಪಳದ ಅಟ್ಟೆಗೋಳಿಯಲ್ಲಿದ್ದಾರೆ. ಹಿರಿಜೀವ ದುಃಖತಪ್ತವಾಗಿದೆ. ಅವರ ಆಪ್ತರು, ಕುಟುಂಬಿಕರು ಕೂಡಾ ಕಾಸಿಮ್ ನಿಧನವನ್ನು ಅರಗಿಸಿಕೊಳ್ಳದೇ ಪೇಚಾಟದಲ್ಲಿದ್ದಾರೆ. ಸೃಷ್ಟಿಕರ್ತನು ಎಲ್ಲರಿಗೂ ದುಖ ಸಹಿಸುವ ಶಕ್ತಿ ನೀಡಲಿ, ಡಾ. ಕಾಸಿಮ್ ಅವರಿಗೆ ಜನ್ನಾತುಲ್ ಫಿರ್ದೌಸ್ ನೀಡಿ ಅನುಗ್ರಹಿಸಲಿ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News