ಜಾತಿ ವ್ಯವಸ್ಥೆ ಹೋಗದೆ ಸಮ ಸಮಾಜ ನಿರ್ಮಾಣ ಅಸಾಧ್ಯ: ಮಾಜಿ ಸಿಎಂ ಸಿದ್ದರಾಮಯ್ಯ

Update: 2021-03-21 17:52 GMT

ಬೆಂಗಳೂರು, ಮಾ.21: ಸಮ ಸಮಾಜ ನಿರ್ಮಾಣಕ್ಕಾಗಿ ಬಹಳಷ್ಟು ಹೋರಾಟ ನಡೆದಿದ್ದರೂ ಜಾತಿ ವಾಸ್ತವ, ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಈ ವ್ಯವಸ್ಥೆ ಹೋಗದೆ ಬದಲಾವಣೆ ಅಸಾಧ್ಯ. ಹೀಗಾಗಿ, ನಾವು ಅದರ ಬೇರುಗಳನ್ನು ಕತ್ತರಿಸುವ ಕಡೆಗೆ ಪ್ರಯತ್ನಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ನಗರದ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನ ಪೂರ್ಣಿಮಾ ಪ್ಯಾಲೇಸ್‍ನ ದೇವಂಹಾಲ್‍ನಲ್ಲಿ ಎಚ್.ಎಂ.ರೇವಣ್ಣ ಪ್ರತಿಷ್ಠಾನ ಆಯೋಜಿಸಿದ್ದ ಎಚ್.ಎಂ.ರೇವಣ್ಣ ಅವರು ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೇವಣ್ಣ ಅವರ ಜೀವನ ಕುರಿತಾದ ಸಂಗತ ಮತ್ತು ದೃಶ್ಯಯಾನ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದರು.

ಅವಕಾಶ ಬಳಸಿಕೊಂಡವರು ನಾಯಕರಾಗಿ ಬೆಳೆಯುತ್ತಾರೆ. ಇಲ್ಲವಾದರೆ ಬೆಳೆಯಲು ಸಾಧ್ಯವಾಗುವುದಿಲ್ಲ. ರಾಜಕಾರಣಕ್ಕೆ ಬರುವವರಿಗೆ ಸಿದ್ಧಾಂತದ ಸ್ಪಷ್ಟತೆ ಇರಬೇಕು. ಹಣ, ಅಧಿಕಾರಕ್ಕಾಗಿ ಬರಬಾರದು. ಇಂದಿರಾಗಾಂಧಿ ಅವರಲ್ಲಿ ಸಿದ್ಧಾಂತ ಹಾಗೂ ಸ್ಪಷ್ಟತೆ ಇತ್ತು. ಹೀಗಾಗಿ, ಅವರು ಬಡವರಿಗೆ ಶಕ್ತಿ ತುಂಬಲು ಶ್ರಮಿಸಿದರು. ನನಗೆ ಹಾಗೂ ರೇವಣ್ಣನವರಿಗೆ ಆ ಸ್ಪಷ್ಟತೆ ಇದೆ ಎಂದು ಹೇಳಿದರು.

ಮೊದಲು ಅಧಿಕಾರಿಗಳು, ಜನಪ್ರತಿನಿಧಿಗಳು ಭ್ರಷ್ಟಾಚಾರ ಮಾಡಲು ಹೆದರುತ್ತಿದ್ದರೂ ಆದರೆ ಈಗ ಭ್ರಷ್ಟಾಚಾರ ಎನ್ನುವುದು ಗಂಭೀರ ವಿಷಯವೇ ಆಗಿಲ್ಲ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಟೋಪಿ ಹಾಕುತ್ತಿದ್ದಾರೆ. ಪೆಟ್ರೋಲ್ ಬೆಲೆ ನೂರು ರೂಪಾಯಿಗೆ ಏರಿಕೆಯಾಗಿದ್ದರೂ ಜನ ಪ್ರತಿಭಟಿಸುತ್ತಿಲ್ಲ. ಇದು ದುರಂತ ಎಂದರು.

ರೇವಣ್ಣ ಸಂಘಟನಾ ಚತುರ. ಸಾಮಾಜಿಕ ನ್ಯಾಯದ ಪರ ಇರುವ ರಾಜಕಾರಣಿ. ಎಸ್‍ಟಿ ಪರ ಹೋರಾಟದಲ್ಲಿ ಜನ ಪಾಲ್ಗೊಳ್ಳಲು ನಾನು ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ರೇವಣ್ಣ ಎಲ್ಲೆಡೆ ಹೇಳಿದ್ದೇ ಕಾರಣ ಎಂದು ತಿಳಿಸಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರೇವಣ್ಣ ಅವರು ಕಾಲೇಜು ದಿನಗಳ ಗೆಳೆಯರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಪ್ರಬಲವಾಗಿ ಕಟ್ಟಲು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್‍ನ್ನು ಸಂಘಟಿಸಬೇಕಿದೆ. ರೇವಣ್ಣ ಅವರು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಇನ್ನಷ್ಟು ಬೆಳೆಯಲಿ ಎಂದು ಹೇಳಿದರು. ಹಿರಿಯ ಕವಿ ಸಿದ್ದಲಿಂಗಯ್ಯ, ಕಮ್ಯೂನಿಟಿ ಸೆಂಟರ್ ಕಾಲೇಜಿನ ಅಧ್ಯಕ್ಷ ಕೆಂ.ಎಂ.ನಾಗರಾಜ್ ಮಾತನಾಡಿ, ರೇವಣ್ಣನವರೊಂದಿಗಿನ ಒಡನಾಟವನ್ನು ಸುದೀರ್ಘವಾಗಿ ನೆನಪಿಸಿಕೊಂಡರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ರಾಜಕಾರಣ ಮುಂದೆ ಬರಲು ಜಾತಿ ಬೆಂಬಲಕ್ಕಿಂತ ಜನರೊಂದಿಗಿನ ಉತ್ತಮ ಒಡನಾಟ ಅಗತ್ಯ. ಅನೇಕ ಜನ ಅತ್ಯುತ್ತಮ ಸಾಮಥ್ರ್ಯ ಹೊಂದಿದ್ದರೂ ಅವರು ರಾಜಕಾರಣದಿಂದ ಅಧಿಕಾರ ಪಡೆಯಲಾಗಿಲ್ಲ, ಆದರೆ, ನಾನು ಅಧಿಕಾರಾನುಭವಿಸುವಂತಾಗಿದ್ದರ ಬಗ್ಗೆ ಸಮಾಧಾನ ಇದೆ. ನಾನು ಎಷ್ಟೇ ಬೆಳೆದರೂ ನಾನು ಮಾಗಡಿ ರೇವಣ್ಣನೆ ಹೊರತು, ಬೆಂಗಳೂರಿನ ರೇವಣ್ಣ ಅಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News