ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ರೈತರ ಪಟ್ಟು: ಬೃಹತ್ ಮೆರವಣಿಗೆ ಮೂಲಕ ‘ವಿಧಾನಸೌಧ ಚಲೋ’

Update: 2021-03-22 13:06 GMT

ಬೆಂಗಳೂರು, ಮಾ.22: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಸೋಮವಾರ ಬೃಹತ್ 'ವಿಧಾನಸೌಧ ಚಲೋ' ಪ್ರತಿಭಟನೆ ನಡೆಸಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಜಮಾಯಿಸಿದ ರೈತ ನಾಯಕರು, ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ಮೆರವಣಿಗೆ ನಡೆಸಿ, ಕೃಷಿ ಕಾಯ್ದೆಗಳ ಜತೆಗೆ ಬೆಲೆ ಏರಿಕೆ, ಖಾಸಗೀಕರಣ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ವಿದ್ಯುತ್ ಮಸೂದೆ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಕೂಡಲೇ ರದ್ದಾಗಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಡಾ.ಎಂ.ಎಸ್.ಸ್ವಾಮಿನಾಥನ್ ಶಿಫಾರಸಿನನ್ವಯ ಬೆಂಬಲ ಬೆಲೆ (ಎಂಎಸ್‍ಪಿ) ಖಾತ್ರಿ ಮಾಡುವ ಕಾನೂನುಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿ ಮಾಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಭಾವನಾತ್ಮಕ ವಿಷಯಗಳ ಮೂಲಕ ಸರಕಾರ ಪ್ರಯತ್ನಿಸುತ್ತಿದೆ. ಅಲ್ಲದೆ, ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ರೈತ ನಾಯಕರು ಎಚ್ಚರಿಕೆ ನೀಡಿದರು.

ಜೇನುನೊಣಗಳ ದಾಳಿ!

ರೈತರ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರ ಮೇಲೆ ಜೇನು ನೊಣಗಳು ದಾಳಿ ನಡೆಸಿರುವ ಘಟನೆ ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ನಡೆದಿದೆ.

ಪ್ರತಿಭಟನಾ ಸ್ಥಳದಲ್ಲಿ ಸಾಕಷ್ಟು ಮರಗಳಿದ್ದು, ಜೇನು ನೊಣಗಳು ಗೂಡುಗಳನ್ನು ಕಟ್ಟಿದ್ದವು. ಪ್ರತಿಭಟನೆಗೆ ಬಂದ ರೈತರಿಗೆ ಮತ್ತು ಕಾರ್ಮಿಕರಿಗೆ ಅಡುಗೆ ತಯಾರು ಮಾಡಲಾಗುತ್ತಿತ್ತು. ಈ ವೇಳೆ ಕಟ್ಟಿಗೆಗಳ ಹೊಗೆ ಎದ್ದಿದ್ದರಿಂದ ಜೇನುನೊಣಗಳು ಹಾರಾಡಲು ಆರಂಭಿಸಿದವು. ಹೊಗೆಯಾಡಿದ ಪರಿಣಾಮ ಚದುರಿದ ಜೇನುನೊಣಗಳು ರೈತರ ವಿಧಾನಸೌಧ ಚಲೋ ತಡೆಯಲು ಭದ್ರತೆಗಾಗಿ ನಿಂತಿದ್ದ ಪೊಲೀಸರ ಮೇಲೆ ದಾಳಿ ಮಾಡಿದವು.

ಸಂಚಾರ ದಟ್ಟಣೆ

ರೈತರ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ಮೆಜೆಸ್ಟಿಕ್, ಆನಂದರಾವ್ ವೃತ್ತ, ಶೇಷಾದ್ರಿರಸ್ತೆ, ಕೆ.ಆರ್.ರಸ್ತೆ, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿ ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿಯೇ ನಿಂತಿದ್ದ ದೃಶ್ಯ ಕಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News