ಕ್ರಿಕೆಟ್, ಬ್ರಿಟಿಷ್ ಪತ್ರಿಕೋದ್ಯಮ ಮತ್ತು ನ್ಯಾಯದ ಆಟ

Update: 2021-03-22 19:30 GMT

ರಾಮಮನೋಹರ ಲೋಹಿಯಾರವರು ಜುಲೈ 10, 1959ರಂದು ‘ಮ್ಯಾಂಚೆಸ್ಟರ್ ಗಾರ್ಡಿಯನ್’ ಪತ್ರಿಕೆಯ
ಸಂಪಾದಕರಿಗೆ ಬರೆದದ್ದು, ಅಲ್ಲಿ ಪ್ರಕಟವಾಗದೆ ಉಳಿದದ್ದು


ನನ್ನ ದೇಶದಲ್ಲಿ ಕ್ರಿಕೆಟ್ ಆಟಕ್ಕೆ ಸರಕಾರದಿಂದ ಸಿಗುವ ನೆರವನ್ನು ನಾನು ಟೀಕಿಸುತ್ತ ಬಂದಿದ್ದೇನೆ. ಅದಕ್ಕೆ ಕಾರಣ ಇವು: ಒಂದನೆಯದಾಗಿ, ಅದು ಪಾಳೆಯಗಾರಿಕೆಯ ಕಾಲಕ್ಕೆ ಸೇರಿದ ಆಟ. ಎರಡನೆಯದಾಗಿ, ಇದು ಒಲಿಂಪಿಕ್ಸ್‌ನಲ್ಲೋ ಅಥವಾ ಅಂತಹ ಇತರ ಕ್ರೀಡಾಕೂಟಗಳಲ್ಲೋ ಅಂಗೀಕಾರ ದೊರೆಯಬಲ್ಲ, ಬೆಲೆ ತರಬಲ್ಲ ಅಂತರ್‌ರಾಷ್ಟ್ರೀಯ ಆಟವಲ್ಲ. ಮೂರನೆಯದಾಗಿ, ಅಂಗಸಾಧನೆಯ ಹಾಗೆ ಅಥವಾ ಫುಟ್ಬಾಲ್ ಆಟದ ಹಾಗೆ ಆದು ಜನಸಮೂಹದ ಶರೀರಸಂವರ್ಧನಕ್ಕೆ ಸಾಧಕವಾಗುವಂಥದ್ದಲ್ಲ. ಇಂಗ್ಲೆಂಡ್‌ನಲ್ಲಿಯಾಗಲಿ ಅಥವಾ ಇಂಗ್ಲಿಷ್ ಬಲ್ಲ ಇಂಡಿಯಾದ ಜನಗಳಲ್ಲಿಯಾಗಲಿ ಈತನಕವೂ ನನ್ನ ವಾದಕ್ಕೆ ಸಹಾನುಭೂತಿ ಸಿಕ್ಕಿಲ್ಲ. ಇದಕ್ಕೆ ಕಾರಣ, ಈ ಕ್ರಿಕೆಟ್ ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ಇರುವ ಬೆಸುಗೆ ಎಂದು ಹೇಗೋ ಮೂಡಿಬಿಟ್ಟಿರುವ ಗೂಢ ನಂಬಿಕೆ. ನಿಜವಾಗಿ ಇದು ಬೆಸುಗೆ ಅಲ್ಲ; ಬದಲು, ನಮ್ಮನ್ನು ಆಚೀಚೆ ಸಿಡಿಸಿಬಿಡುವ ಆಸ್ಫೋಟಕವೇ ಆದೀತು.


ಮಾನ್ಯರೇ,
ನಾನು ಕ್ರಿಕೆಟನ್ನು, ಬ್ರಿಟಿಷರ ಪ್ರತಿಮೆಗಳನ್ನು ಮತ್ತು ಇಂಗ್ಲಿಷ್ ಭಾಷೆಯನ್ನು, ಅವೆಲ್ಲ ಬ್ರಿಟಿಷರವು ಎನ್ನುವ ಕಾರಣ ಬೇಡವಾಗಿ ಕಾಣುತ್ತಿದ್ದೇನೆಂದು ನಿಮ್ಮ ಪತ್ರಿಕೆಯಲ್ಲಿ ಅನೇಕ ಸಲ ವರದಿಯಾಗಿದೆ. ಈ ಬಗ್ಗೆ ನನ್ನ ನಿಲುವನ್ನು ನಿಮಗೆ ಸ್ಪಷ್ಟ ತಿಳಿಸಬೇಕೆಂದು ನಾನು ಆಗೀಗ ಯೋಚಿಸಿದ್ದರೂ ನನ್ನ ಮಾತನ್ನು ಹೆಚ್ಚು ಸಹಾನುಭೂತಿಯಿಂದ ಕೇಳಬಹುದೆನ್ನುವಂತಹ ಅವಕಾಶಕ್ಕಾಗಿ ಕಾಯುತ್ತಿದ್ದೆ, ಅಂತಹ ಅವಕಾಶ ಈಗ ಸಿಕ್ಕಿದೆ.

ಇಂಡಿಯಾದವರ ಕ್ರಿಕೆಟ್ ಆಟದ ಬಗ್ಗೆ ಬ್ರಿಟಿಷರು ಮಾಡುವ ಕಟುವಿಮರ್ಶೆಯ ಬಗ್ಗೆ ಇಲ್ಲಿನ ಇಂಗ್ಲಿಷ್ ಬಲ್ಲ ಜನ ಬಹುತೇಕ ಏನು ಭಾವಿಸುತ್ತಾರೋ ತಿಳಿಯದು. ಅಂತೂ ಅಂತಹವರಲ್ಲಿ ನಾನು ತಿಳಿದ ಹಾಗೆ ಕನಿಷ್ಠ ಒಬ್ಬನಾದರೂ ಹೀಗೆ ಭಾವಿಸುತ್ತಾನೆ: ಇಂಡಿಯಾದ ಜನಕ್ಕೆ ಮೂರು ದಿನಗಳ ಕ್ರಿಕೆಟ್ ಟೆಸ್ಟ್ ಹೆಚ್ಚು; ಹೀಗೆ ಮೂರು ದಿನ ಆಡುವುದಾದರೆ (ಅಥವಾ ಈಗಿನ ರೂಢಿಯಂತೆ ಐದು ದಿನ ಆಡುವುದಾದರಂತೂ ಹೇಳುವುದೇ ಬೇಡ) ಇಂಡಿಯಾದ ಕ್ರಿಕೆಟ್ ಆಟಗಾರರೆಲ್ಲ ಮಣ್ಣು ಮುಕ್ಕುವುದೇ ಸರಿ. ಸಾಧಾರಣವಾಗಿ, ಒಂದು ಪಕ್ಷದವರಿಗೆ ಉಂಟಾಗತಕ್ಕ ಅಡಚಣೆಗಳು ಅವರು ಎದುರು ಪಕ್ಷಕ್ಕೆ ತೀರ ಸುಲಭ ಸೋತುಬಿಡುವಷ್ಟು ಹೆಚ್ಚಿನದಾಗಬಾರದು. ಕನಿಷ್ಠ ಡ್ರಾ(ಸಮ)ಆಗುವಂತಾದರೂ ಇರಬೇಕು. ಒಮ್ಮೆ ಎರಡು ದಿನಗಳ ಟೆಸ್ಟ್ ಆಡುವುದಾದರೆ ಇಂಡಿಯಾದ ಆಟಗಾರರಿಗೆ ಸಮ ಮಾಡಿಕೊಳ್ಳುವುದಕ್ಕಾದರೂ ಅವಕಾಶ ಉಳಿದೀತು.

ನನ್ನ ದೇಶದಲ್ಲಿ ಕ್ರಿಕೆಟ್ ಆಟಕ್ಕೆ ಸರಕಾರದಿಂದ ಸಿಗುವ ನೆರವನ್ನು ನಾನು ಟೀಕಿಸುತ್ತ ಬಂದಿದ್ದೇನೆ. ಅದಕ್ಕೆ ಕಾರಣ ಇವು: ಒಂದನೆಯದಾಗಿ, ಆದು ಪಾಳೆಯಗಾರಿಕೆಯ ಕಾಲಕ್ಕೆ ಸೇರಿದ ಆಟ. ಎರಡನೆಯದಾಗಿ, ಇದು ಒಲಿಂಪಿಕ್ಸ್‌ನಲ್ಲೋ ಅಥವಾ ಅಂತಹ ಇತರ ಕ್ರೀಡಾಕೂಟಗಳಲ್ಲೋ ಅಂಗೀಕಾರ ದೊರೆಯಬಲ್ಲ, ಬೆಲೆ ತರಬಲ್ಲ ಅಂತರ್‌ರಾಷ್ಟ್ರೀಯ ಆಟವಲ್ಲ. ಮೂರನೆಯದಾಗಿ, ಅಂಗಸಾಧನೆಯ ಹಾಗೆ ಅಥವಾ ಫುಟ್ಬಾಲ್ ಆಟದ ಹಾಗೆ ಆದು ಜನಸಮೂಹದ ಶರೀರಸಂವರ್ಧನಕ್ಕೆ ಸಾಧಕವಾಗುವಂಥದ್ದಲ್ಲ. ಇಂಗ್ಲೆಂಡ್‌ನಲ್ಲಿಯಾಗಲಿ ಅಥವಾ ಇಂಗ್ಲಿಷ್ ಬಲ್ಲ ಇಂಡಿಯಾದ ಜನಗಳಲ್ಲಿಯಾಗಲಿ ಈತನಕವೂ ನನ್ನ ವಾದಕ್ಕೆ ಸಹಾನುಭೂತಿ ಸಿಕ್ಕಿಲ್ಲ. ಇದಕ್ಕೆ ಕಾರಣ, ಈ ಕ್ರಿಕೆಟ್ ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ಇರುವ ಬೆಸುಗೆ ಎಂದು ಹೇಗೋ ಮೂಡಿಬಿಟ್ಟಿರುವ ಗೂಢ ನಂಬಿಕೆ. ನಿಜವಾಗಿ ಇದು ಬೆಸುಗೆ ಅಲ್ಲ; ಬದಲು, ನಮ್ಮನ್ನು ಆಚೀಚೆ ಸಿಡಿಸಿಬಿಡುವ ಆಸ್ಫೋಟಕವೇ ಆದೀತು.

ಇಂಗ್ಲೆಂಡಿನ ಮಟ್ಟಿಗೆ ಹೇಳುವುದಾದರೆ ಇವೊತ್ತಿಗೂ ಅಲ್ಲಿ ವಿರಾಮವುಳ್ಳ ಒಂದು ಜನವರ್ಗವಿದೆ. ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ಅಥವಾ ವೆಸ್ಟ್ ಇಂಡೀಸ್ ಶ್ರೀಮಂತ ದೇಶಗಳಲ್ಲ ನಿಜ. ಆದರೂ, ಅವರ ವಿಸ್ತಾರವಾದ ಹೊಲ, ಹುಲ್ಲುಗಾವಲು, ಪಶುಪಾಲನೆ ಅಥವಾ ಪ್ರವಾಸಿ ಆದಾಯ ಇವು ಆ ದೇಶಗಳಲ್ಲಿ ವಿರಾಮದ ಆಟವಾದ ಕ್ರಿಕೆಟನ್ನು ಆಡಲು ಅನುಕೂಲತೆಯುಳ್ಳ ಒಂದು ಜನವರ್ಗವನ್ನು ಬೆಳೆಸಿವೆ. ಇಂಡಿಯಾದ ಸ್ಥಿತಿ ಬೇರೆ. ಸದ್ಯ ಅದು, ಬ್ರಿಟಿಷರ ಕಾಲದಲ್ಲಿದ್ದ ಪ್ರದರ್ಶನಪ್ರಿಯ ರಾಜರ ಹಾಗೂ ಶ್ರೀಮಂತ ಭೂಮಾಲಕರ ಗೊಡವೆಯಿಂದ ಪಾರಾಗಲು ಹಠ ಹೊತ್ತು ನಿಂತಿದೆ. ಭವಿಷ್ಯದಲ್ಲಿ ಕೂಡ, ಇನ್ನೂ ದೀರ್ಘಕಾಲ ಈ ದೇಶದ ಆರ್ಥಿಕ ಸ್ಥಿತಿ ಸಮೃದ್ಧವಾಗಲಾರದು. ಆದಕಾರಣ ಇಲ್ಲಿ ಇರಬೇಕಾದ ಆಟಗಳು ಹಾಕಿ, ಟೆನಿಸ್, ಫುಟ್ಬಾಲ್ ಮತ್ತು ಇವಕ್ಕಿಂತ ಹೆಚ್ಚಾಗಿ ಅಂಗಸಾಧನೆ, ಈಜುಗಾರಿಕೆ ಮುಂತಾದವು. ಇವು ಗಂಡಾಗಲಿ, ಹೆಣ್ಣಾಗಲಿ, ಬೇರೊಂದು ಉದ್ಯೋಗದಲ್ಲಿ ತೊಡಗಿದ್ದುಕೊಂಡೇ ಕನಿಷ್ಠ ಹವ್ಯಾಸಿಗಳ ಮಟ್ಟದಲ್ಲಾದರೂ ಅಭ್ಯಾಸಮಾಡಲು ಸಾಧ್ಯವಿರುವ ಆಟಗಳು. ಫುಟ್ಬಾಲ್ ಆಟಗಾರರಲ್ಲೂ ಈಗೀಗ ಹವ್ಯಾಸೀ ಆಟಗಾರರು ಅಪರೂಪವಾಗಿಬಿಟ್ಟಿದ್ದಾರೆ ಎಂದು ಕೇಳಿದ್ದೇನೆ. ಹಾಗಿದ್ದರೂ ಅದರಿಂದ ನನ್ನ ವಾದಕ್ಕೆ ಬಾಧಕವಿಲ್ಲ. ಕ್ರಿಕೆಟ್‌ಗಿಂತ ಹೆಚ್ಚಾಗಿ ಫುಟ್ಬಾಲ್ ಬ್ರಿಟಿಷರ ರಾಷ್ಟ್ರೀಯ ಕ್ರೀಡೆಯಾಗಿದೆ ಎಂಬುದನ್ನೂ ಗಮನಿಸಬೇಕು. ಫುಟ್ಬಾಲ್ ಜನಗಳ ಆಟ; ಕ್ರಿಕೆಟ್ ವರ್ಗಗಳ ಆಟ.

ಹೀಗೇ, ಭಾಷಾಸಮಸ್ಯೆಯ ಬಗ್ಗೆಯೂ ನಿಮ್ಮ ಪತ್ರಿಕೆಯಲ್ಲಿ ನನ್ನ ಅಭಿಪ್ರಾಯಗಳನ್ನು ತಪ್ಪಾಗಿ ವರದಿಮಾಡಲಾಗಿದೆ. ವಾಸ್ತವವಾಗಿಯೂ, ನಾನೇ ಇಂಗ್ಲಿಷನ್ನು ಜರ್ಮನ್ ಭಾಷೆಯಷ್ಟೇ ಅಥವಾ ಹೆಚ್ಚು ಕಡಿಮೆ ನನ್ನ ಸ್ವಂತ ಮಾತೃಭಾಷೆಯಷ್ಟೇ ಪ್ರೀತಿಸುತ್ತೇನೆ. ಆದರೆ ಇಲ್ಲಿರುವುದು ಯಾವುದೇ ಭಾಷೆಯನ್ನು ಪ್ರೀತಿಸುವ ಅಥವಾ ಪ್ರೀತಿಸದಿರುವ ಪ್ರಶ್ನೆಯಲ್ಲ. ಒಂದು ಸಣ್ಣ ಅಲ್ಪಸಂಖ್ಯಾಕ ವರ್ಗ ಬೃಹತ್ತಾದ ಬಹುಸಂಖ್ಯಾಕವರ್ಗದ ಮೇಲೆ ದಬ್ಬಾಳಿಕೆ ನಡೆಸುವ ಸಾಧನವಾಗಿ ಭಾಷೆ ಬಳಕೆಯಾಗುವುದು ಸಾಧುವೇ, ಸರಿಯೇ ಎಂಬುದು ಇಲ್ಲಿನ ಪ್ರಶ್ನೆ. ನಾನು ಇಂಗ್ಲಿಷ್ ವಿರೋಧಿಸುವುದು ಅದು ವಿದೇಶಿ ಭಾಷೆ ಎಂಬ ಕಾರಣದಿಂದಲ್ಲ, ಭಾರತದ ಈಗಿನ ಪರಿಸ್ಥಿತಿಯಲ್ಲಿ ಅದು ಪಾಳೆಗಾರಿಕೆಯ ಭಾಷೆಯಾಗಿಬಿಟ್ಟಿದೆ ಎಂಬ ಕಾರಣದಿಂದ ಸಂಸ್ಕೃತದ ಬಗ್ಗೆ ಕೂಡ ನನ್ನ ವಿರೋಧ ಇಷ್ಟೇ ಬಲವತ್ತರವಾದದ್ದು. ಇಂಡಿಯಾದ ರಾಷ್ಟ್ರಭಾಷೆಯಾಗಿ ಇಂಗ್ಲಿಷ್‌ಗೆ ಬದಲು ಅದನ್ನು ಬಳಸಬೇಕು ಎಂಬ ಮಾತು ಬಂದಾಗ ಮಾತ್ರ ಸಂಸ್ಕೃತದ ಬಗೆಗೆ ನನ್ನ ವಿರೋಧ.

ಇಂಗ್ಲಿಷ್ ಜನ ಇಂಡಿಯಾದಲ್ಲಿ ತಮ್ಮ ಭಾಷೆ ಯಾವ ಪ್ರಯೋಜನಕ್ಕಾಗಿ ಬಳಕೆಯಾಗುತ್ತಿದೆ ಎಂಬುದನ್ನು ಅರಿತಿದ್ದಾರೋ ಇಲ್ಲವೋ ನನಗೆ ಸರಿಯಾಗಿ ತಿಳಿಯದು. ಈ ದೇಶದಲ್ಲಿ ತತ್ವಹೀನ ಅಲ್ಪಸಂಖ್ಯಾಕ ವರ್ಗವೊಂದು ಇಂಗ್ಲಿಷನ್ನು ಮುಷ್ಟಿಯಲ್ಲಿಟ್ಟುಕೊಂಡು ಆ ಮೂಲಕ ತನ್ನ ಆಡಳಿತವನ್ನು ಸತತಗೊಳಿಸಿಕೊಳ್ಳುತ್ತ ಹೋಗುತ್ತಿದೆ. ಇವೊತ್ತಿನ ಇಂಡಿಯಾದ ಆಡಳಿತಗಾರ ವರ್ಗದ ಮುಖ್ಯ ಲಕ್ಷಣಗಳು ಈ ಮೂರು: ಮೇಲು ಜಾತಿ, ಶ್ರೀಮಂತಿಕೆ ಮತ್ತು ಇಂಗ್ಲಿಷ್ ಜ್ಞಾನ. ಇವುಗಳಲ್ಲಿ ಯಾವುದೇ ಎರಡು ಲಕ್ಷಣಗಳಿದ್ದರೂ ಸಾಕು, ಅಂತಹವನು ದೇಶದ ಆಡಳಿತಗಾರ ವರ್ಗದಲ್ಲಿ ಸೇರಿಕೊಳ್ಳಲು ಅರ್ಹತೆ ಪಡೆಯುತ್ತಾನೆ. ಅಂತಹ ಜನಗಳ ಸಂಖ್ಯೆ ಒಂದು ಅಂದಾಜಿನಲ್ಲಿ ಸುಮಾರು ಮೂರು ಮಿಲಿಯ ಇದ್ದೀತು. ಈ ಮೂರು ಮಿಲಿಯ ದೇಶೀಯ ಇಂಡಿಯನ್ನರು ಸುಮಾರು ನಾಲ್ಕು ನೂರು ಮಿಲಿಯ ಸ್ವದೇಶೀಯರ ಎದೆಯ ಮೇಲೆ ಗಟ್ಟಿ ಕೂತು ಅವರನ್ನು ಹತ್ತಿಕ್ಕಿದ್ದಾರೆ. ಶಕ್ತಿ ಇಷ್ಟೇ ಎಂದು ಹೇಳಲಿಕ್ಕಾಗದ ಎರಡು ಆಯುಧಗಳು ಅವರ ಕೈಯಲ್ಲಿವೆ-ಒಂದು, ಕೋವಿ; ಇನ್ನೊಂದು, ಅದಕ್ಕಿಂತ ಹೆಚ್ಚಿನದು, ಇಂಗ್ಲಿಷ್ ಭಾಷೆ.

ಪಾಳೆಗಾರಿಕೆಯ ಅಲ್ಪಸಂಖ್ಯಾಕರು ತಾವು ಆಳುವ ಜನರಲ್ಲಿ ನೈಚ್ಯತೆಯ ಭಾವನೆಯನ್ನು ತುಂಬಿ ಅವರನ್ನು ಹಿಡಿತ ತಪ್ಪದಂತೆ ಇಟ್ಟುಕೊಳ್ಳುವುದು ಹಿಂದಿನಿಂದಲೂ ಬಂದ ರೂಢಿ. ಅದೇ ರೀತಿಯಲ್ಲೇ ಇಂಡಿಯಾದ ಆಡಳಿತಗಾರ ವರ್ಗ ಇಂಗ್ಲಿಷ್ ಮಾತಾಡಲು ಅಥವಾ ತಿಳಿದುಕೊಳ್ಳಲು ಬಾರದಿರುವುದೇ ಒಂದು ಅವಮಾನ ಎಂಬ ಭಾವನೆ ಮೂಡಿಸಿ ಜನಸಾಮಾನ್ಯರ ಮೇಲೆ ತಮ್ಮ ಆಡಳಿತ ಬಿಗಿದಿದ್ದಾರೆ. ಈ ದೇಶದಲ್ಲಿ ವಿದ್ಯಾರ್ಥಿಗಳ ಅನುತ್ತೀರ್ಣತೆ ಯಾವುದೇ ಪರೀಕ್ಷೆಯಲ್ಲೂ ಶೇ. ಐವತ್ತಕ್ಕೆ ಕಡಿಮೆ ಯಾಗದಂತೆ ಮಾಡಲು ಈ ಭಾಷೆಯನ್ನು ಬಳಸಲಾಗುತ್ತಿದೆ ಎಂಬ ವಿಷಯವೂ ಇಂಗ್ಲಿಷ್ ಜನರ ಗಮನಕ್ಕೆ ಬರಬೇಕು. ಈ ವರ್ಷ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಈ ದೇಶದ ಅರ್ಧ ಮಿಲಿಯ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಉತ್ತೀರ್ಣರಾಗಿರುವವರ ಸಂಖ್ಯೆ ಇದಕ್ಕಿಂತ ಕೊಂಚ ಕಡಿಮೆ. ಈ ಅನುತ್ತೀರ್ಣತೆಗೆ ಹೆಚ್ಚು ಭಾಗ ಕಾರಣ ಇಂಗ್ಲಿಷ್ ಕಡ್ಡಾಯವಾಗಿರುವುದು. ಇಂಡಿಯಾದ ಆಡಳಿತಗಾರ ವರ್ಗ ಇಂಗ್ಲಿಷಿನ ಕಡ್ಡಾಯವನ್ನು ಗಟ್ಟಿ ಹಿಡಿದುಕೊಂಡಿದೆ. ಏಕೆಂದರೆ, ಉನ್ನತ ವಿದ್ಯಾಭ್ಯಾಸ ತಮ್ಮ ಕಿರಿಸುತ್ತಿಗೇ ಸೀಮಿತವಾಗಿರಬೇಕು ಎಂಬುದು ಅವರ ಇಚ್ಛೆ; ಸಾಮಾನ್ಯ ಜನವರ್ಗ ಬದುಕಿನ ಪ್ರಶಸ್ತ ವಸ್ತುಗಳ ಕಡೆ ಕೈ ಚಾಚಬಾರದೆಂದು ಅವರ ಆಸೆ.

ಹೀಗೇ ಮುಂದುವರಿಸಬಹುದು, ಆದರೆ ನಾನು ಈ ಪತ್ರವನ್ನು ಮುಗಿಸಬೇಕು. ಬ್ರಿಟಿಷ್ ಪ್ರತಿಮೆಗಳ ಬಗ್ಗೆ, ಅಷ್ಟು ಮಾತ್ರವಲ್ಲ ಯಾವುದೇ ಪ್ರತಿಮೆಗಳ ಬಗ್ಗೆ ನನಗಿರುವ ಅಭಿಪ್ರಾಯಗಳನ್ನು ತಿಳಿಯುವ ಕುತೂಹಲ ನಿಮಗಿದ್ದರೆ, ಅವು ಪ್ರಕಟವಾಗಿರುವ ಪತ್ರಿಕೆಗಳನ್ನು ತಮಗೆ ಕಳಿಸಬಲ್ಲೆ. ಯಾವ ಮಹನೀಯನಿಗೆ, ಕೆಲವು ಇಂಗ್ಲಿಷ್ ಜನರೇ ಪ್ರಾಯಶಃ ಕ್ರೋಧದಿಂದ-ಆದರೆ ಪೂರಾ ಸತ್ಯವಾಗಿ-ಇಂಡಿಯಾದಲ್ಲಿನ ಕೊನೆಯ ಬ್ರಿಟಿಷ್ ವೈಸರಾಯ್ ಎಂದು ಹೆಸರಿಟ್ಟರೋ ಆತನಿಗಿಂತ ಹೆಚ್ಚು ಬ್ರಿಟಿಷ್ ವಿರೋಧಿಯಲ್ಲ ನಾನು, ನಂಬಿ. ಬದಲಾಗುತ್ತಿರುವ ಕಾಲದ ಜೊತೆ ಜೊತೆ ಓಡಿ ಕೂಡಿಕೊಳ್ಳಲು ಸ್ವಲ್ಪ ಹೆಚ್ಚು ಮುಂದಾಗಿರುವವನು ಅಷ್ಟೆ. ಬರುವ ವರ್ಷಗಳಲ್ಲಿ ಇಂಗ್ಲೆಂಡ್ ಮತ್ತು ಇಂಡಿಯಾದ ಸಂಬಂಧ ಉಳಿದು ಬೆಳೆದು ಬರುವುದು ಕ್ರಿಕೆಟ್ ಆಟದ ಆಕಸ್ಮಿಕದ ಮೇಲಂತೂ ಅಲ್ಲವೇ ಅಲ್ಲ; ಇಂಗ್ಲಿಷ್ ಭಾಷೆಯ ಮೇಲೂ ಅಲ್ಲ; ವಾಣಿಜ್ಯ, ಸಂಘಟನೆಗಳು ಮತ್ತು ಚಿಂತನೆಗಳ ತಾಳಿಕೆಯ ಸತ್ಯದ ಮೇಲೆ ಮುಂದಾದರೂ ಸಂಘಟನೆ ಮತ್ತು ಚಿಂತನೆಗಳ ಕೊಡು-ಕೊಳ್ಳುವಿಕೆ ಇಂಗ್ಲೆಂಡ್ ಮತ್ತು ಇಂಡಿಯಾದ ನಡುವೆ ಬೆಳೆಯುತ್ತಾ ಹೋಗಲಿ ಎಂದು ಆಶಿಸುತ್ತೇನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು)

Writer - ರಾಮಮನೋಹರ ಲೋಹಿಯಾ

contributor

Editor - ರಾಮಮನೋಹರ ಲೋಹಿಯಾ

contributor

Similar News