ಮುಂದಿನ ಅಧಿಕಾರಾವಧಿಗೆ ಸ್ಪರ್ಧೆ: ಸುಳಿವು ನೀಡಿದ ಜೋ ಬೈಡನ್

Update: 2021-03-26 04:24 GMT

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಹುದ್ದೆಗೆ ಎರಡನೇ ಅವಧಿಗೆ ಸ್ಪರ್ಧಿಸುವ ಸುಳಿವನ್ನು ಹಾಲಿ ಅಧ್ಯಕ್ಷ ಜೋ ಬೈಡನ್ ನೀಡಿದ್ದಾರೆ. 2024ರಲ್ಲಿ ಮರು ಆಯ್ಕೆ ಬಯಸುವುದಾಗಿ ಹೇಳಿದ ಅವರು, ಒಂದು ಅವಧಿ ಪೂರ್ಣಗೊಂಡ ಬಳಿಕ ಬದಿಗೆ ಸರಿಯುವ ಆಯ್ಕೆಯನ್ನು ಮುಕ್ತವಾಗಿ ಇರಿಸಿಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

"ಮರು ಆಯ್ಕೆಗೆ ಸಜ್ಜಾಗುವುದು ನನ್ನ ಯೋಚನೆ. ಅದು ನನ್ನ ನಿರೀಕ್ಷೆ" ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. 2024ರ ಯೋಜನೆ ಖಚಿತವೇ ಎಂದು ಪತ್ರಕರ್ತರು ಕೇಳಿದಾಗ, "ನನ್ನ ನಿರೀಕ್ಷೆ ಎಂದಷ್ಟೇ ಹೇಳಿದ್ದೇನೆ" ಎಂದು ಜಾರಿಕೊಂಡರು. "ಅದೃಷ್ಟದ ಬಗ್ಗೆ ನನಗೆ ಗೌರವ ಇದೆ. ನಾಲ್ಕೂವರೆ ವರ್ಷ, ಮೂರೂವರೆ ವರ್ಷದ ಅವಧಿಗೆ ನಿರ್ದಿಷ್ಟವಾಗಿ ಈಗಲೇ ಯೋಜನೆ ರೂಪಿಸಲು ನಾನು ಶಕ್ತನಲ್ಲ" ಎಂದರು.

ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರು ಎರಡನೇ ಅವಧಿಗೆ ಸ್ಪರ್ಧಿಸುವುದು ಪ್ರಶ್ನೆಯಾಗುವುದೇ ಇಲ್ಲ. ಉದಾಹರಣೆಗೆ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಮರು ಆಯ್ಕೆ ಬಯಸುವ ತಮ್ಮ ನಿರ್ಧಾರ ಪ್ರಕಟಿಸಿದ್ದರು. ಆದರೆ 78ನೇ ವರ್ಷದಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಈ ಹುದ್ದೆಗೇರಿದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡ ಹಿನ್ನೆಲೆಯಲ್ಲಿ ಬೈಡನ್‌ಗೆ ಈ ಪ್ರಶ್ನೆ ಎದುರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News