ಗಾಂಧೀಜಿ ನನಗಾಗಿ ಕೊಟ್ಟ ಪತ್ರ ಕೊಡದೆ ನೆಹರೂ ನನಗೆ ಮೋಸ ಮಾಡಿದ್ದಾರೆ: ರವೀಶ್ ಕುಮಾರ್

Update: 2021-03-27 03:39 GMT

ಹೊಸದಿಲ್ಲಿ, ಮಾ. 27: ಬಾಂಗ್ಲಾ ವಿಮೋಚನೆ ಸಂದರ್ಭ ನಾನು ಅದಕ್ಕಾಗಿ ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿದ್ದೇನೆ ಎಂಬ ಪ್ರಧಾನಿ ಮೋದಿ ಹೇಳಿಕೆ ತೀವ್ರ ಟ್ರೋಲ್ ಆಗುತ್ತಿರುವ ನಡುವೆಯೇ ಈ ಬಗ್ಗೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ರಾತ್ರಿ ಫೇಸ್ ಬುಕ್ ಪೋಸ್ಟ್ ಹಾಕಿರುವ ರವೀಶ್, ಜವಾಹರ್ ಲಾಲ್ ನೆಹರೂ ನನಗೂ ಮೋಸ ಮಾಡಿದ್ದಾರೆ. ನನಗೆ ಗಾಂಧೀಜಿ ತಲುಪಿಸಲು ಹೇಳಿದ ಪತ್ರವನ್ನು ತಲುಪಿಸದೆ ತಾವೇ ಇಟ್ಟುಕೊಂಡು ನಾನು ದಂಡಿ ಯಾತ್ರೆಯಲ್ಲಿ ಸತ್ಯಾಗ್ರಹಿ ಆಗುವುದನ್ನು ತಪ್ಪಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. 

ಅವರ ಪೋಸ್ಟ್ ನ ಯಥಾವತ್ ಅನುವಾದ ಇಲ್ಲಿದೆ : 

ನನ್ನ ಪ್ರೀತಿಯ ಸೋದರರೇ ಮತ್ತು ಮೂರ್ಖರೇ ,
ಇವತ್ತು ನಾನೊಂದು ಬಹುಮುಖ್ಯ ಮಾಹಿತಿ ನೀಡಲಿದ್ದೇನೆ. ನೆಹರೂ ಅವರು ನನಗೆ ವಂಚಿಸಿದ್ದಾರೆ. ಅವತ್ತು ದಂಡಿ ಯಾತ್ರೆಯಲ್ಲಿ ನಾನು ಸತ್ಯಾಗ್ರಹಿಯಾಗಬೇಕು ಎಂದು ಗಾಂಧೀಜಿ ಬಯಸಿದ್ದರು. ಅವರು ನನಗೆ ಪತ್ರ ಬರೆದು ನೆಹರೂ ಅವರಲ್ಲಿ ಕೊಟ್ಟು ನನ್ನನ್ನು ಹುಡುಕಿ ನನಗೆ ತಲುಪಿಸಲು ಹೇಳಿದ್ದರು. ಆಗ ನಾನು ಪ್ರೈಮ್ ಟೈಮ್ ನಿಂದ ಮಾರ್ಚ್ 31ರವರೆಗೆ ರಜೆ ತೆಗೆದುಕೊಂಡಿದ್ದೆ ಮತ್ತು ನಾನು ಎಲ್ಲಿದ್ದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಗಾಂಧೀಜಿ ನನ್ನ ಮಾತು ನಂಬಿ ಟಿವಿ ನೋಡುವುದನ್ನು ಬಿಟ್ಟು ಬಿಟ್ಟಿದ್ದರು. ಇದರ ಲಾಭ ಪಡೆದ ನೆಹರೂ ಅವರು ಪತ್ರವನ್ನು ತನ್ನ ಬಳಿಯೇ ಇಟ್ಟುಕೊಂಡರು. ದಂಡಿ ಯಾತ್ರೆಗೆ ಹೊರಡುವ ಮುನ್ನ ಗಾಂಧೀಜಿ ನನಗಾಗಿ ಕಾಯುತ್ತಿದ್ದರು. ಕೊನೆಗೂ ನನ್ನನ್ನು ಕಾಣದೆ ನಿರಾಶರಾಗಿ ಅವರು ಹೊರಟರು. ಅವತ್ತಿನಿಂದಲೇ ವಾಟ್ಸ್ ಆಪ್ ವಿಶ್ವವಿದ್ಯಾಲಯದಲ್ಲಿ ನೆಹರೂ ಅವರನ್ನು ಲೇವಡಿ ಮಾಡಿ ಯಾವುದೇ ಮೀಮ್ (ವ್ಯಂಗ್ಯ ಪೋಸ್ಟರ್ ) ಬಂದರೂ ನಾನು ಮೆದುಳನ್ನು ಒಂಚೂರು ಬಳಸದೆ ನಂಬಿ ಬಿಡುತ್ತೇನೆ.

ನನಗೆ ಸತ್ಯಾಗ್ರಹಿಯಾಗಲು ಸಾಧ್ಯವಾಗಲಿಲ್ಲ. ಪರವಾಗಿಲ್ಲ, ಮತ್ತೆ ಆಗುತ್ತೇನೆ ಎಂದು ಸಮಾಧಾನ ಮಾಡಿಕೊಂಡೆ. ಆ ಬಳಿಕ ಎರಡು ಅವಕಾಶಗಳು ಬಂದವು. ಬಾಂಗ್ಲಾದೇಶ ವಿಮೋಚನೆಯ ಮಾಹಿತಿ ಇಂದಿರಾ ಗಾಂಧಿ ನನಗೆ ಕೊಡಲಿಲ್ಲ. ಏಕೆಂದರೆ ಆಗ ನಾನು ಮೊಬೈಲ್ ನಂಬರ್ ಬದಲಾಯಿಸಿದ್ದೆ ಮತ್ತು ಆರ್.ಕೆ ಧವನ್ ಅವರ ನಂಬರ್ ಬ್ಲಾಕ್ ಮಾಡಿದ್ದೆ. ಹಾಗಾಗಿ ದಂಡಿ ಯಾತ್ರೆಯ ಬಳಿಕ ಮತ್ತೆ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲೂ ನನಗೆ ಸತ್ಯಾಗ್ರಹಿಯಾಗಲು ಸಾಧ್ಯವಾಗಲಿಲ್ಲ. ಅವತ್ತು ನನಗೆ ಇಂದು ಜೀ ಬಾಂಗ್ಲಾದೇಶ ನಿರ್ಮಾಣದಲ್ಲಿ ಸತ್ಯಾಗ್ರಹಿಯಾಗುವ ಅವಕಾಶ ನೀಡಿದ್ದರೆ ನಾನು ಇವತ್ತು ಅದೇ ಬಾಂಗ್ಲಾದೇಶದಿಂದ ಬಂದ ಜನರಿಗೆ  ಓಖಅ ಮಾಡುತ್ತಿರಲಿಲ್ಲ. ಈಗ ನಾನು ಸ್ವಲ್ಪ ತುರ್ತಿನಲ್ಲಿದ್ದೇನೆ. ರಾಜೀವ್ ಗಾಂಧಿ ಅವರ ವಿಮಾನ ಹಾರಿಸುತ್ತಿದ್ದೇನೆ. ನಾಳೆ ಬೆಳಗ್ಗೆ ಮಂಡೇಲರನ್ನು ಭೇಟಿಯಾಗಬೇಕಿದೆ. ಸತ್ಯಾಗ್ರಹಕ್ಕಾಗಿ.  

ಈಗ ಈ ಪತ್ರ ಬರೆಯಬೇಕಾಯಿತು. ನೀವೆಲ್ಲರೂ ಮೋದಿಜಿ ಅವರನ್ನು ತಮಾಷೆ ಮಾಡುತ್ತಿದ್ದೀರಿ ಎಂದು ತಿಳಿದು ಬಹಳ ಬೇಸರವಾಯಿತು. 
ಮೋದಿಜಿ ಬಾಂಗ್ಲಾದೇಶದ ವಿಮೋಚನೆಗಾಗಿ ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿದ್ದರು. ಇದನ್ನು ನಂಬದವರು ಅದೇ ಪುಲ್ವಾಮಾ ದಾಳಿಯ ಬಗ್ಗೆ ಪುರಾವೆ ಕೇಳುವಂತಹ ಜನರೇ ಆಗಿದ್ದಾರೆ. ಅವರು ಆಗ ತನಿಖೆಗೂ ಬೇಡಿಕೆ ಇಟ್ಟಿದ್ದರು. ಹೀಗೆ ಲೇವಡಿ ಮಾಡುವವರ ಬಗ್ಗೆ ನನ್ನದು ಒಂದೇ ಚಿಂತೆ. ಎಲ್ಲಾದರೂ ಅವರು ಬುದ್ಧಿ ವಾಪಸ್ ಬಂದು ಬಿಟ್ಟಿದೆಯೇ ಎಂದು. ಇದು ಸರಿಯಲ್ಲ. ಮೂರ್ಖತನ ಅತ್ಯಂತ ಅಮೂಲ್ಯವಾದುದು. ಅದನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಬೇಕು. 

ನಿಮ್ಮ
ರವೀಶ್ ಕುಮಾರ್ 
ವಿಶ್ವದ ಪ್ರಪ್ರಥಮ ಝೀರೋ ಟಿಆರ್ ಪಿ ಆಂಕರ್  

मेरे प्यारे भाइयों और मूर्खों, मैं आज एक अहम जानकारी देने जा रहा हूँ । नेहरू जी ने मेरे साथ धोखा किया। हुआ यूँ कि...

Posted by Ravish Kumar on Friday, 26 March 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News