ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಪೊರಕೆ ಹಿಡಿದು ಕಾಂಗ್ರೆಸ್ ಧರಣಿ
ಬೆಂಗಳೂರು, ಮಾ.28: ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಅತ್ಯಾಚಾರ ಆರೋಪಕ್ಕೆ ಸಿಲುಕಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಈ ಕೂಡಲೇ ಬಂಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದರು.
ರವಿವಾರ ನಗರದ ಕಾಂಗ್ರೆಸ್ ಭವನದ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ರಮೇಶ್ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಪೊರಕೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ ಯುವತಿಯನ್ನು ವಂಚಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಆದರೂ, ಆಕೆ ಪರಿಚಯವೇ ತನಗಿಲ್ಲ, ಅದು ನಕಲಿ ವಿಡಿಯೊ ಎಂದು ಹೇಳಿಕೆ ನೀಡಿದ್ದಾರೆ. ಈ ಅಸಂಬದ್ದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಪ್ರತಿಭಟನಾ ನಿರತರು ಹೇಳಿದರು.
ಈ ಬಗ್ಗೆ ಆಕೆ ನೀಡಿರುವ ದೂರಿನ ಅನ್ವಯ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು. ಜತೆಗೆ ಸಂತ್ರಸ್ತೆಗೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮನೋಹರ್ ಒತ್ತಾಯ ಮಾಡಿದರು.
ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ
ಡಿ.ಕೆ.ಶಿವಕುಮಾರ್ ವಿರುದ್ಧ ಅವಾಚ್ಯ ಶಬ್ಧದಿಂದ ಮಾತನಾಡಿರುವ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಾರಕಿಹೊಳಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ರವಿವಾರ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದ ಬಳಿ ಜಮಾಯಿಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ರಮೇಶ್ ಜಾರಕಿಹೊಳಿ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಅಷ್ಟೇ ಅಲ್ಲದೆ, ಡಿ.ಕೆ. ಶಿವಕುಮಾರ್ ವಿರುದ್ಧ ಅವಾಚ್ಯ ಶಬ್ಧದಿಂದ ಮಾತನಾಡಿರುವ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಮಾತಿನಿಂದ ಇಡೀ ರಾಜ್ಯ ನಗೆಪಾಟಲಿಗೀಡಾಗಿದೆ. ಒಂದು ವೇಳೆ ಅವರು ಡಿಕೆಶಿ ಬಳಿ ಕ್ಷಮೆ ಕೇಳಲಿಲ್ಲವೆಂದರೆ, ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತದನಂತರ, ರಮೇಶ್ ಜಾರಕಿಹೊಳಿ ಅವರ ನಿವಾಸದ ಕಡೆ ಪ್ರತಿಭಟನಾಕಾರರು ಸಾಗಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದುರು.
ಜಾರಕಿಹೊಳಿ, ಸಿಎಂ ನಿವಾಸಕ್ಕೆ ಹೆಚ್ಚಿದ ಭದ್ರತೆ..!
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆ ಇಲ್ಲಿನ ಸದಾಶಿವನಗರದಲ್ಲಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ ವ್ಯಾಪ್ತಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಜಾರಕಿಹೊಳಿ ವಿರುದ್ಧ ದೂರು
ಕಾಂಗ್ರೆಸ್ ಪ್ರದೇಶ ಪ್ರಚಾರ ಸಮಿತಿಯಿಂದ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಮತ್ತೊಂದು ದೂರು ಸಲ್ಲಿಸಲಾಗಿದೆ.
ಕಾಂಗ್ರೆಸ್ ಪ್ರದೇಶ ಪ್ರಚಾರ ಸಮಿತಿಯ ಬೆಂಗಳೂರು ಕೇಂದ್ರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ವೈ.ಪುಟ್ಟರಾಜು ದೂರು ಸಲ್ಲಿಸಿದ್ದು, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪದಡಿ ಮೊಕದ್ದಮೆ ದಾಖಲಾಗಿರುವ ಹಿನ್ನೆಲೆ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.