×
Ad

ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿಕೆಶಿ ಮೇಲೆ ಗೂಬೆ ಕೂರಿಸುವ ಪ್ರಯತ್ನ: ಮಿಥುನ್ ರೈ

Update: 2021-03-28 13:08 IST

ಮಂಗಳೂರು, ಮಾ.27: ಸಿ.ಡಿ ಪ್ರಕರಣದ ಆರೋಪಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮಾ.28ರಿಂದ ಬೆಂಗಳೂರಿನಲ್ಲಿ ಎಸ್‌ಐಟಿ ಕಚೇರಿ ಎದುರು ಧರಣಿ ನಡೆಸುವುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ತಿಳಿಸಿದ್ದಾರೆ.

ರವಿವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಗೊಳಿ ಪ್ರಕರಣದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಉಪ ಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸಂತ್ರಸ್ತೆಯ ಕುಟುಂಬದವರು ನಡೆಸಿರುವ ಸುದ್ದಿಗೋಷ್ಠಿ ಎಸ್‌ಐಟಿ ಪ್ರಾಯೋಜಿತವಾದುದುದು. ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಗೆ ಪ್ರಾಮುಖ್ಯತೆಯೇ ಹೊರತು ಅವರ ಕುಟುಂಬದವರ ಹೇಳಿಕೆಯಲ್ಲ. ಜಾರಕಿಹೊಳಿ ಸಾಕ್ಷ್ಯನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆ ತನ್ನ ಕುಟುಂಬಿಕರಿಗೆ ಬೆದರಿಕೆ ಇದೆ ಎಂದು ಈಗಾಗಲೇ ಹೇಳಿದ್ದಾರೆ. ಕುಟುಂಬಿಕರಿಗೆ ಬೆದರಿಕೆ ಹಾಕಿ ಎಸ್‌ಐಟಿ ಬಳಿಗೆ ಕಳುಹಿಸಲಾಗಿದೆ. ಎಸ್‌ಐಟಿ ಅಧಿಕಾರಿಗಳು ಹೇಳಿಕೊಟ್ಟಂತೆ ಸಂತ್ರಸ್ತೆಯ ಕುಟುಂಬಿಕರು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಮಿಥನ್ ರೈ, ಒಂದು ವೇಳೆ ಕುಟುಂಬಿಕರಿಗೆ ಬೆದರಿಕೆ ಇಲ್ಲದಿದ್ದರೆ ಅವರು 25 ದಿನಗಳ ಅನಂತರ ಎಸ್‌ಐಟಿ ಬಳಿಗೆ ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ವಿಶ್ವಾಸದ್ರೋಹದ ಗಂಡಸುತನ: ಜಾರಕಿಹೊಳಿ ಅವರು ಡಿಕೆಶಿ ಹೆಸರು ಬಳಸಿ ಪ್ರಕರಣವನ್ನು ತಿರುಚುವ ಹುನ್ನಾರ ಮಾಡಿದ್ದಾರೆ. ಡಿಕೆಶಿ ಅವರಿಗೆ ಅವಾಚ್ಯ ಶಬ್ದ ಬಳಸಿದ್ದಾರೆ. ಈ ಮೂಲಕ ಜಾರಕಿಹೊಳಿ ತಮ್ಮ ಮರ್ಯಾದೆ ಕಳೆದುಕೊಂಡಿದ್ದಾರೆ. ಜಾರಕಿಹೊಳಿ ಕಾಂಗ್ರೆಸ್‌ನಲ್ಲಿ ಶಾಸಕರಾಗಿ, ಸಚಿವರಾಗಿ ಅನಂತರ ಪಕ್ಷಕ್ಕೆ ವಿಶ್ವಾಸ ದ್ರೋಹ ಮಾಡಿದ ಗಂಡಸು. ಮಹಿಳೆಗೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಿ ರಾಜಾರೋಷವಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡುವ ಗಂಡಸುತನ ಅವರದ್ದು. ಡಿ.ಕೆ.ಶಿವಕುಮಾರ್ ಅವರ ನಿಂದನೆ ಖಂಡನೀಯ ಎಂದು ಮಿಥುನ್ ರೈ ಹೇಳಿದ್ದಾರೆ.

ಎಸ್‌ಐಟಿ ರಮೇಶ ಜಾರಕಿಹೊಳಿ ಕೈಗೊಂಬೆಯಾಗಿದೆ. ಎಸ್‌ಐಟಿ ಅಧಿಕಾರಿಗಳ ಮೇಲೆ ಇದ್ದ ನಂಬಿಕೆಯೂ ಹೋಗಿದೆ. ಆರೋಪಿಯನ್ನು ಬಂಧಿಸುವ ಬದಲು ಸಂತ್ರಸ್ತೆಗೆ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಜಾರಕಿಹೊಳಿ ಬಂಧನ ಆಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಮಿಥುನ್ ರೈ ಹೇಳಿದ್ದಾರೆ.

ಇಂತಹ ರಾಜಕಾರಣಿಗಳನ್ನು ಆದಷ್ಟು ಬೇಗ ಪಕ್ಷದಿಂದ ಉಚ್ಚಾಟಿಸುವ ಕೆಲಸವನ್ನು ಮಾಡಬೇಕು ಎಂದವರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ಅನಿಲ್ ಕುಮಾರ್, ಅಶ್ರಫ್ ಬಜಾಲ್, ಪಕ್ಷದ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಸಂತೋಷ್ ಶೆಟ್ಟಿ, ಸುಹೈಲ್, ಕಿರಣ್, ಮೆರಿಲ್ ರೇಗೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News