×
Ad

ಡಿ.ಆರ್.ನಾಗರಾಜ್, ಲಂಕೇಶ್ ಅನುಪಸ್ಥಿತಿ ಸಾಹಿತ್ಯ ಕ್ಷೇತ್ರದಲ್ಲಿ ಖಾಲಿತನ ಸೃಷ್ಟಿಸಿದೆ: ಮೂಡ್ನಾಕೂಡು ಚಿನ್ನಸ್ವಾಮಿ

Update: 2021-03-28 18:04 IST

ಬೆಂಗಳೂರು, ಮಾ.28: ಇವತ್ತಿನ ವಿಷಮ ಪರಿಸ್ಥಿಯಲ್ಲಿ ಹಿರಿಯ ಸಾಹಿತಿಗಳಾದ ಪಿ.ಲಂಕೇಶ್ ಹಾಗೂ ಡಿ.ಆರ್.ನಾಗರಾಜ್ ದೈಹಿಕವಾಗಿ ನಮ್ಮೊಂದಿಗಿಲ್ಲದಿರುವುದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಖಾಲಿತನ ಸೃಷ್ಟಿಸಿದೆ ಎಂದು ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಿಸಿದ್ದಾರೆ. 

ರವಿವಾರ ಸಂಸ ಥಿಯೇಟರ್ ವತಿಯಿಂದ ನಗರದ ಸರಕಾರಿ ಕಲಾ ಕಾಲೇಜು ವತಿಯಿಂದ ಆಯೋಜಿಸಿದ್ದ ಡಿ.ಆರ್.ನಾಗರಾಜ್-67 ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿ.ಆರ್.ನಾಗರಾಜ್ ಹಾಗೂ ಪಿ.ಲಂಕೇಶ್‍ಗಿದ್ದ ಸಾತ್ವಿಕ ಸಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಮೌಲ್ಯಯುತ ಕೃತಿಗಳು ಪ್ರಕಟವಾಗಲು ಪ್ರಮುಖ ಕಾರಣವಾಗಿತ್ತು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ವಿಮರ್ಶೆಗೆ ಸೃಜನಶೀಲತೆಯ ಆಯಾಮ ಕೊಟ್ಟವರು ಡಿ.ಆರ್.ನಾಗರಾಜ. ತಮ್ಮ ವಿಮರ್ಶಾ ಬರಹಗಳ ಮೂಲಕ ಲೇಖಕರ ಬರವಣಿಗೆಯ ದೃಷ್ಟಿಕೋನವನ್ನು ವಿಸ್ತರಿಸುವಂತಹ ಕಾರ್ಯದಲ್ಲಿ ತೊಡಗಿದ್ದರು. ಹಾಗೂ ಬಂಡಾಯ ಚಳವಳಿಗೆ ಖಡ್ಗವಾಗಲಿ ಕಾವ್ಯವೆಂಬ ಘೋಷ ವಾಕ್ಯವನ್ನು ನೀಡಿದ್ದಾರೆಂದು ಅವರು ಅಭಿಮಾನ ವ್ಯಕ್ತಪಡಿಸಿದರು.

ಹಿರಿಯ ವಿಮರ್ಶಕ ಶಂ.ಬಾ ಜೋಶಿಯವರ ನಂತರ ಅವೈದಿಕ ಚಿಂತನೆಯನ್ನು ಮುನ್ನೆಲೆಗೆ ತಂದ ಡಿ.ಆರ್.ನಾಗರಾಜ್, ಅವೈದಿಕ ಪರಂಪರೆಗೆ ಪಾರ್ಸಿ, ಇಸ್ಲಾಂ, ಕ್ರೈಸ್ತ ತಾತ್ವಿಕತೆಯನ್ನು ಸೇರ್ಪಡೆಗೊಳಿಸಿ ವಿಮರ್ಶೆಯನ್ನು ಕೈಗೊಂಡರು. ಹಾಗೂ ಅಸ್ಪೃಶ್ಯತೆಯ ನೋವನ್ನು ಅರಿತಿದ್ದ ಅವರು, ಕರ್ನಾಟಕ ದಲಿತ ಚಳವಳಿಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದರೆಂದು ಅವರು ತಿಳಿಸಿದರು.

ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಹನುಮಂತರಾಯಪ್ಪ ಮಾತನಾಡಿ, ಇವತ್ತಿನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಹಳೆಗನ್ನಡವನ್ನು ವಿದ್ಯಾರ್ಥಿಗಳಿಗೆ ಅರ್ಥೈಸಲು ವಿಫಲರಾಗುತ್ತಿದ್ದಾರೆ. ಛಂದಸ್ಸು, ಅಲಂಕಾರಗಳು ಇವ್ಯಾವುದರ ಬಗೆಗೂ ಶಿಕ್ಷಕರಿಗೆ ಹೆಚ್ಚಿನ ಜ್ಞಾನವಿಲ್ಲ. ಹೀಗಾಗಿ ಕನ್ನಡ ಸಾಹಿತ್ಯದ ಪರಂಪರೆ, ಜ್ಞಾನ ಶಿಸ್ತುಗಳನ್ನು ಗಂಭೀರವಾಗಿ ಅಧ್ಯಯನ ಮಾಡುವಂತಹ ಕೆಲಸವಾಗಬೇಕಾಗಿದೆ ಎಂದು ಅವರು ಹೇಳಿದರು.

ಉಪನ್ಯಾಸಕ ಎಚ್.ಎಸ್.ರೇಣುಕಾರಾಧ್ಯ ಮಾತನಾಡಿ, ಇವತ್ತು ಮೇಲ್ಜಾತಿಗಳು ಮೀಸಲಾತಿಗೆ ಕೈಚಾಚುತ್ತಿರುವ ಹಾಗೂ ದಿನೇ ದಿನೇ ರಾಜ್ಯ, ದೇಶದಲ್ಲಿ ಹೆಚ್ಚುತ್ತಿರುವ ಕೋಮುವಾದದ ಸಂದರ್ಭದಲ್ಲಿ ಡಿ.ಆರ್.ನಾಗರಾಜ್ ಪ್ರತಿಪಾದಿಸಿದ್ದ ಅವೈದಿಕ ಪರಂಪರೆಯ ಕುರಿತು ಚರ್ಚಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಕಾಲದಿಂದ ಕಾಲಕ್ಕೂ ಪ್ರಭುತ್ವಶಾಹಿಗಳು ವೈದಿಕ ಚಿಂತನೆಯ ಬೆಂಬಲವಾಗಿ ನಿಂತಿದೆ. ಇವತ್ತಿನ ಆಧುನಿಕ, ಮಾಹಿತಿ ತಂತ್ರಜ್ಞಾನದ ಯುಗದಲ್ಲೂ ವೈದಿಕಶಾಹಿ ಚಿಂತನೆಗಳೇ ಮುನ್ನೆಲೆಗೆ ಬರುತ್ತಿವೆ. ಈ ಚಿಂತನೆಗೆ ಪರ್ಯಾಯವಾಗಿ ಅವೈದಿಕ ಬಹುಮುಖಿ ನೆಲೆಗಳು ಮುನ್ನೆಲೆಗೆ ಬಂದಾಗ ಮಾತ್ರ ದೇಶಾದ್ಯಂತ ಜಾತ್ಯತೀತ ಮೌಲ್ಯಗಳು ಭದ್ರಗೊಳ್ಳಲು ಸಾಧ್ಯವೆಂದು ಅವರು ತಿಳಿಸಿದರು.

ವಿಮರ್ಶಕ ಸುರೇಶ್ ನಾಗಲಮಂಡಿಕೆ ಮಾತನಾಡಿ, ರಾಜ್ಯದಲ್ಲಿ ಬಹುಮುಖಿ ಚಿಂತನೆಗಳನ್ನು ಭಿತ್ತಿದ ಅವಧೂತರ ಪಟ್ಟಿ ನಮ್ಮಲಿಲ್ಲ. ಈ ಕುರಿತು ಕೂಲಂಕಶವಾಗಿ ಅಧ್ಯಯನ ಮಾಡಿರುವ ಕೃತಿಯೂ ಇಲ್ಲ. ಅವೈದಿಕತೆಯ ಪರಂಪರೆಯಲ್ಲಿಯೇ ಬರುವ ವಿವಿಧ ಚಿಂತನೆ ಹಾಗೂ ತತ್ವ ಮಾರ್ಗಗಳಲ್ಲಿರುವ ವ್ಯತ್ಯಾಸಗಳ ಕುರಿತು ಅಧ್ಯಯನ ಆಗಬೇಕಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸರಕಾರಿ ಕಲಾ ಕಾಲೇಜಿನ ಪ್ರೊ.ಕೋಡದ ರಾಜಶೇಖರಪ್ಪ, ಸಹಾಯಕ ಪ್ರಾಧ್ಯಾಪಕ ಡಾ. ರುದ್ರೇಶ್ ಅದರಂಗಿ, ಅಧ್ಯಾಪಕ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ಮತ್ತಿತರರಿದ್ದರು.

ಹುಬ್ಬಳ್ಳಿಯಲ್ಲಿ ನಡೆದ 59ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್.ಸಿ.ಹಿರೇಮಠ ಆಯ್ಕೆಯಾದಾಗ, ಅದನ್ನು ವಿರೋಧಿಸಿ ಡಿ.ಆರ್.ನಾಗರಾಜ್ ಹಾಗೂ ಪಿ.ಲಂಕೇಶ್ ನೇತೃತ್ವದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪರ್ಯಾಯ ಸಮಾವೇಶ ನಡೆಸಿದ್ದರು. ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೌಲ್ಯಿಕತೆ ಇರಬೇಕೆಂದು ಅವರು ಸದಾ ಬಯಸುತ್ತಿದ್ದರು. ಆದರೆ, ಈಗ ಯಾರಿಗೆ ಬೇಕಾದರು ಪ್ರಶಸ್ತಿ ಕೊಡಬಹುದು, ಅಧ್ಯಕ್ಷರನ್ನಾಗಿ ಮಾಡಬಹುದು ಯಾರೂ ಕೇಳುವವರಿಲ್ಲ. ಇತ್ತೀಚಿಗೆ ತುಮಕೂರಿನಲ್ಲಿ ಸಾವನ್ನಪ್ಪಿದ ದಲಿತ ಸಮುದಾಯದ ಮಗುವನ್ನು ಅಂತ್ಯಸಂಸ್ಕಾರ ಮಾಡಿದ್ದ ಜಾಗದಿಂದ ಹೊರ ತೆಗೆಸಿದ ಪ್ರಕರಣ ನೆನೆದಾಗಲೆಲ್ಲ ಪಿ.ಲಂಕೇಶ್ ಹಾಗೂ ಡಿ.ಆರ್.ನಾಗರಾಜ್ ಇರಬೇಕಿತ್ತೆಂದು ಅನಿಸುತ್ತಿದೆ

-ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News