ಈ ರಾಜ್ಯದಲ್ಲಿ ಶಾಲಾ ಮಕ್ಕಳು ಭಾರತೀಯ ಸಂವಿಧಾನದ ಬಗ್ಗೆ ಅಧ್ಯಯನ ಮಾಡುವುದು ಕಡ್ಡಾಯ

Update: 2021-03-31 04:20 GMT

ರಾಯಪುರ: ಮುಂದಿನ ಶೈಕ್ಷಣಿಕ ವರ್ಷದಿಂದ ಛತ್ತೀಸ್‌ಗಢದಲ್ಲಿ ಶಾಲಾ ಮಕ್ಕಳು ಭಾರತೀಯ ಸಂವಿಧಾನದ ಬಗ್ಗೆ ಅಧ್ಯಯನ ಮಾಡುವುದು ಕಡ್ಡಾಯ.

ಛತ್ತೀಸ್‌ಗಢ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್‌ಸಿಇಆರ್‌ಟಿ) ಸಂವಿಧಾನದ ಬಗೆಗಿನ ಪ್ರತ್ಯೇಕ ಪಠ್ಯಗಳನ್ನು ಪ್ರಾಥಮಿಕ, ಮಾಧ್ಯಮಿಕ ಮತ್ತು ಹೈಸ್ಕೂಲ್ ಹಂತದ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದೆ. ಸಂವಿಧಾನದ ಮೂಲತತ್ವಗಳು ಮತ್ತು ಮೌಲ್ಯಗಳ ಬಗ್ಗೆ, ನೈತಿಕತೆ ಬಗ್ಗೆ ಶೈಕ್ಷಣಿಕ ಪಠ್ಯಕ್ರಮದಲ್ಲಿ ಬೋಧಿಸಲಾಗುವುದು.

"ಛತ್ತೀಸ್‌ಗಢದಲ್ಲಿ ಇದು ಇಂಥ ಮೊದಲ ಪ್ರಯೋಗ. ನಾವು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಪ್ರತ್ಯೇಕ ಪಠ್ಯವನ್ನು ಪ್ರಕಟಿಸುತ್ತಿದ್ದೇವೆ. ಇದು ಭಾರತ ಸಂವಿಧಾನದ ಮೂಲತತ್ವಗಳನ್ನು ಒಳಗೊಂಡಿರುತ್ತದೆ ಹಾಗೂ ಸಂವಿಧಾನ ಪೀಠಿಕೆಯ ಹಿಂದಿನ ಆದರ್ಶಗಳನ್ನು ಮುಖ್ಯ ಮೌಲ್ಯಗಳ ರೂಪದಲ್ಲಿ ಹೊಂದಿರುತ್ತದೆ. ಭಾಷೆಗಳು, ವಿಷಯವಸ್ತು ಮತ್ತು ಚಿತ್ರರೂಪವನ್ನು ಬಳಸಿಕೊಳ್ಳುವ ಮೂಲಕ ನಮ್ಮ ಸಂವಿಧಾನದ ಸ್ಫೂರ್ತಿಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ಪುಸ್ತಕ ಲಭ್ಯವಾಗಲಿದೆ" ಎಂದು ಶಾಲಾ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಅಲೋಕ್ ಶುಕ್ಲಾ ಹೇಳಿದ್ದಾರೆ.

ಎಳೆ ವಯಸ್ಸಿನಲ್ಲೇ ಮಕ್ಕಳಿಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಹಾಗೂ ಸಂವಿಧಾನ, ಅದರ ಇತಿಹಾಸ ಹಾಗೂ ಮೂಲಸಂರಚನೆ ಬಗ್ಗೆ ಅವರು ಅರಿವು ಹೊಂದಿರಬೇಕು ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

"ಮಕ್ಕಳು ಆರಂಭಿಕ ದಿನಗಳಿಂದಲೇ ತಮ್ಮಲ್ಲಿ ನೈಜ ರಾಷ್ಟ್ರೀಯತೆಯ ಭಾವನೆಯನ್ನು ರೂಢಿಸಿಕೊಳ್ಳಬೇಕು ಹಾಗೂ ಭಾರತೀಯ ಸಂವಿಧಾನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಶಿಕ್ಷಣ ಸಚಿವ ಪ್ರೇಮ್‌ ಸಾಯಿ ಸಿಂಗ್ ಟೆಕಮ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News