ಭಾರತದಲ್ಲಿ ಮಾನವಹಕ್ಕು ಸಮಸ್ಯೆ ವ್ಯಾಪಕ : ಅಮೆರಿಕ ವರದಿ

Update: 2021-03-31 05:32 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್ : ಕಾನೂನುಬಾಹಿರ ಹತ್ಯೆ ಮತ್ತು ಬೇಕಾಬಿಟ್ಟಿಯಾಗಿ ಕೊಲ್ಲುವುದೂ ಸೇರಿದಂತೆ ಭಾರತದಲ್ಲಿ ಹಲವು ಮಹತ್ವದ ಮಾನವಹಕ್ಕು ಸಮಸ್ಯೆಗಳಿವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧ, ಭ್ರಷ್ಟಾಚಾರ, ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿದ ಪ್ರಕರಣಗಳ ಸಹಿಷ್ಣುತೆ ಸೇರಿದಂತೆ ಹಲವು ವಿವಾದಗಳಿವೆ ಎಂದು ಅಮೆರಿಕದ ವರದಿಯೊಂದು ಹೇಳಿದೆ.

ಅಮೆರಿಕ ಸಂಸತ್ತಿಗೆ ಸಲ್ಲಿಸಲಾಗಿರುವ "2020 ಕಂಟ್ರಿ ರಿಪೋರ್ಟ್ಸ್ ಆನ್ ಹ್ಯೂಮನ್ ರೈಟ್ಸ್ ಪ್ರಾಕ್ಟೀಸಸ್’ ಎಂಬ ವರದಿಯಲ್ಲಿ ಅಮೆರಿಕದ ರಕ್ಷಣಾ ಇಲಾಖೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವಹಕ್ಕು ಪರಿಸ್ಥಿತಿ ಸುಧಾರಿಸಿದ್ದನ್ನೂ ಉಲ್ಲೇಖಿಸಿದೆ.

"ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜತೆಯನ್ನು ಪುನಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಮುಂದುವರಿಸಿದೆ. ನಿಧಾನವಾಗಿ ಕೆಲ ಭದ್ರತಾ ಮತ್ತು ಸಂವಹನ ನಿರ್ಬಂಧಗಳನ್ನು ತೆಗೆದುಹಾಕುತ್ತಿದೆ" ಎಂದು ಭಾರತ ವಿಭಾಗದ ಕುರಿತ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಸರ್ಕಾರ ಹಲವು ರಾಜಕೀಯ ಹೋರಾಟಗಾರರನ್ನು ಬಂಧನದಿಂದ ಬಿಡುಗಡೆ ಮಾಡಿದೆ ಎಂದೂ ಹೇಳಿದೆ.

ರಕ್ಷಣಾ ಇಲಾಖೆ ತನ್ನ ವರದಿಯಲ್ಲಿ ಮಾನವ ಹಕ್ಕು ಉಲ್ಲಂಘನೆಯ ಹಲವು ಪ್ರಕರಣಗಳನ್ನು ಉಲ್ಲೇಖಿಸಿದೆ. ಪೊಲೀಸರೇ ಕಾನೂನು ಬಾಹಿರವಾಗಿ ಮತ್ತು ಬೇಕಾಬಿಟ್ಟಿಯಾಗಿ ಹತ್ಯೆ ಮಾಡುತ್ತಿರುವುದು; ಚಿತ್ರಹಿಂಸೆ, ಪೊಲೀಸರು ಅಮಾನವೀಯ ಮತ್ತು ಕ್ರೌರ್ಯದಿಂದ ನಡೆದು ಕೊಳ್ಳುವುದು, ವ್ಯಕ್ತಿಯ ಗೌರವಕ್ಕೆ ಚ್ಯುತಿ ಬರುವ ರೀತಿ ಪೊಲೀಸರ ಹಾಗೂ ಜೈಲು ಅಧಿಕಾರಿಗಳ ನಡತೆ ಮತ್ತು ಶಿಕ್ಷೆ ವಿಧಿಸುವುದು, ಸರ್ಕಾರಿ ಅಧಿಕಾರಿಗಳಿಂದ ಬೇಕಾಬಿಟ್ಟಿ ಬಂಧನ ಮತ್ತು ಅಕ್ರಮವಾಗಿ ಕೂಡಿಹಾಕುವುದು, ತೀರಾ ಕಠಿಣ ಹಾಗೂ ಜೀವಾಪಾಯದ ಜೈಲು ಸ್ಥಿತಿಗತಿ, ರಾಜಕೀಯ ಕೈದಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಮತ್ತಿತರ ಪ್ರಕರಣಗಳನ್ನು ಪಟ್ಟಿ ಮಾಡಿದೆ. ಇಂಥದ್ದೇ ವರದಿಯನ್ನು ಭಾರತ ಈ ಹಿಂದೆ ತಿರಸ್ಕರಿಸಿತ್ತು.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದ್ದು, ಹಿಂಸೆ, ಹಿಂಸೆಯ ಬೆದರಿಕೆ ಅಥವಾ ನ್ಯಾಯಸಮ್ಮತವಲ್ಲದ ಬಂಧನ ಅಥವಾ ಪತ್ರಕರ್ತರ ವಿರುದ್ಧ ತನಿಖೆ, ಸಾಮಾಜಿಕ ಜಾಲತಾಣ ಮೂಲಕ ಅಭಿವ್ಯಕ್ತಿಗಳಿಗೆ ಅಪರಾಧ ಪ್ರಕರಣ ದಾಖಲಿಸುವುದು, ಸೆನ್ಸಾರ್‌ಶಿಪ್ ಮತ್ತು ಜಾಲತಾಣ ಸೈಟ್‌ಗಳನ್ನು ಬ್ಲಾಕ್ ಮಾಡುವುದನ್ನು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News