ಎ. 9ರಿಂದ ಐಪಿಎಲ್ ಆರಂಭ: ವಿವಿಧ ಕಾರಣದಿಂದ ಮೊದಲಾರ್ಧದಲ್ಲಿ ಕೆಲವು ಆಟಗಾರರು ಅಲಭ್ಯ

Update: 2021-04-01 04:29 GMT

ಹೊಸದಿಲ್ಲಿ:ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಪಿಎಲ್)ಎಪ್ರಿಲ್ 9ರಿಂದ ಆರಂಭವಾಗಲಿದ್ದು, ಕೆಲವು ಆಟಗಾರರು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿ ಆಡಬೇಕಾದ ಬದ್ದತೆ, ಗಾಯದ ಸಮಸ್ಯೆಗಳು ಇಲ್ಲವೇ ವೈಯಕ್ತಿಕ ಕಾರಣಕ್ಕೆ ಟೂರ್ನಿಯ ಮೊದಲಾರ್ಧದಲ್ಲಿ ಆಡುತ್ತಿಲ್ಲ. ಇದರಿಂದ ಎಲ್ಲ ತಂಡಗಳಿಗೆ ಪ್ರತಿಕೂಲ ಪರಿಣಾಮಬೀರಿದೆ.

 ಟೂರ್ನಿಯ ಆರಂಭದಲ್ಲಿ ಸ್ಟಾರ್ ಆಟಗಾರರಾದ ಜೋಫ್ರಾ ಆರ್ಚರ್ ಹಾಗೂ ಕಾಗಿಸೊ ರಬಾಡ ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂಬ ವಿಚಾರ ಬಹಿರಂಗವಾಗಿದ್ದು, ಈ ಇಬ್ಬರ ಅನುಪಸ್ಥಿತಿಯು ಕೆಲವು ಆಟಗಾರರಿಗೆ ತಮ್ಮ ಪ್ರತಿಭೆ ಹೊರಹಾಕಲು ಅವಕಾಶ ಕಲ್ಪಿಸುತ್ತಿದೆ.

► ಡೆಲ್ಲಿ ಕ್ಯಾಪಿಟಲ್ಸ್

ಮುಂದಿನ ವಾರ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯ ಆತಿಥ್ಯವಹಿಸಲಿದ್ದು, ಎಲ್ಲ ಪ್ರಮುಖ ಆಟಗಾರರು ಈ ಸರಣಿಯಲ್ಲಿ ಭಾಗಿಯಾಗಲಿದ್ದಾರೆ. ಸರಣಿಯ ಕೊನೆಯ ಪಂದ್ಯವು ಎಪ್ರಿಲ್ 7ರಂದು ನಡೆಯಲಿದ್ದು, ಪಂದ್ಯದ ಬಳಿಕ ಆಟಗಾರರು ಸೆಂಚೂರಿಯನ್‌ನಿಂದ ಭಾರತಕ್ಕೆ ನಿರ್ಗಮಿಸಲಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿಗಳಾದ ಕಾಗಿಸೊ ರಬಾಡ ಹಾಗೂ ಅನ್ರಿಚ್ ನೊರ್ಟ್ಜೆ ಮೊದಲ ಮೂರು-ನಾಲ್ಕು ಪಂದ್ಯಗಳಲ್ಲಿ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ವರದಿಯಾಗಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಫೀಲ್ಡಿಂಗ್ ಮಾಡುವಾಗ ಭುಜನೋವಿಗೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಮುಂದಿನ 6 ರಿಂದ 8 ವಾರಗಳ ಕಾಲ ಲಭ್ಯವಿರುವುದಿಲ್ಲ. ಹೀಗಾಗಿ ಅವರು ಐಪಿಎಲ್‌ನ ಹೆಚ್ಚಿನ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.

► ಚೆನ್ನೈ ಸೂಪರ್ ಕಿಂಗ್ಸ್

 ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯ ಆರಂಭದಲ್ಲಿ ಬೌಲಿಂಗ್ ವಿಭಾಗದಲ್ಲಿ ಕೆಲವು ಪ್ರಮುಖ ಬೌಲರ್‌ಗಳ ಸೇವೆಯಿಂದ ವಂಚಿತವಾಗಲಿದೆ. ಲುಂಗಿ ಗಿಡಿ ಮುಂದಿನ ವಾರ ದಕ್ಷಿಣ ಆಫ್ರಿಕಾದಿಂದ ಬಂದು ತಂಡವನ್ನು ಸೇರಿಕೊಳ್ಳಲಿದ್ದಾರೆ. ರವೀಂದ್ರ ಜಡೇಜ ಸಕ್ರಿಯ ಕ್ರಿಕೆಟ್‌ಗೆ ವಾಪಸಾಗುವ ಕುರಿತಾಗಿ ಪ್ರಶ್ನೆ ಎದ್ದಿದೆ. ಜನವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಸರಣಿಯ ಬಳಿಕ ಹೆಬ್ಬೆರಳ ಗಾಯದಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

► ರಾಜಸ್ಥಾನ ರಾಯಲ್ಸ್

ಕಳೆದ ವರ್ಷ ವರ್ಷದ ಆಟಗಾರ ಪ್ರಶಸ್ತಿ ಪಡೆದಿದ್ದ ಜೋಫ್ರಾ ಆರ್ಚರ್ ಈ ವರ್ಷ ಟೂರ್ನಿಯ ಆರಂಭದಲ್ಲಿ ಆಡುವುದರಿಂದ ವಂಚಿತರಾಗಲಿದ್ದಾರೆ. ಆರ್ಚರ್ ಮೊದಲ 4 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ.

► ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆಡಮ್ ಝಾಂಪ ವಿವಾಹವಾಗುತ್ತಿರುವ ಕಾರಣ ಟೂರ್ನಿಯ ಆರಂಭದಲ್ಲಿ ಆರ್‌ಸಿಬಿ ತಂಡದಲ್ಲಿರುವುದಿಲ್ಲ ಎಂದು ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕರಾದ ಮೈಕ್ ಹೆಸ್ಸನ್ ದೃಢಪಡಿಸಿದ್ದಾರೆ.

► ಸನ್ ರೈಸರ್ಸ್ ಹೈದರಾಬಾದ್

ಮಿಚೆಲ್ ಮಾರ್ಚ್ ಹೈದರಾಬಾದ್ ತಂಡದ ಭಾಗವಾಗಿರುವುದಿಲ್ಲ. ದೀರ್ಘ ಸಮಯ ಜೈವಿಕ ಸುರಕ್ಷಾ ಬಬಲ್‌ನಲ್ಲಿ ಸಮಯ ಕಳೆಯಲು ಅಸಮರ್ಥರಾಗಿದ್ದಾರೆ ಎಂದು ಕ್ರಿಕ್‌ಬಝ್ ತಿಳಿಸಿದೆ. ಹೈದರಾಬಾದ್ ತಂಡ ಮಾರ್ಷ್ ಬದಲಿಗೆ ಇತ್ತೀಚೆಗೆ ಕೊನೆಗೊಂಡ ಭಾರತ ವಿರುದ್ಧ ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರನೊಂದಿಗೆ ಸಹಿಹಾಕಲು ಯೋಜಿಸಿದೆ.

► ಮುಂಬೈ ಇಂಡಿಯನ್ಸ್

 ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಮೊದಲ ನಾಲ್ಕು ಪಂದ್ಯಗಳು ಮುಗಿದ ಬಳಿಕ ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News