ಅಮೆರಿಕ ಸಂಸತ್ ಮೇಲೆ ಮತ್ತೆ ದಾಳಿ: ಭದ್ರತಾ ಪಡೆಯ ಸಿಬ್ಬಂದಿ, ದಾಳಿಕೋರ ಮೃತ್ಯು

Update: 2021-04-03 02:08 GMT
File Photo: Credit: AP/PTI

ವಾಷಿಂಗ್ಟನ್: ಆಗಂತುಕನೊಬ್ಬ ಭದ್ರತಾ ಕೋಟೆಯನ್ನು ಭೇದಿಸಿ ಅಮೆರಿಕದ ಸಂಸತ್ ಭವನಕ್ಕೆ ವಾಹನ ನುಗ್ಗಿಸಿ ದಾಂಧಲೆ ನಡೆಸಿದ್ದಾನೆ. ಘಟನೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ದಾಳಿಕೋರನನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ್ದಾರೆ.

ಟ್ರಂಪ್ ಬೆಂಬಲಿಗರ ಗುಂಪೊಂದು ಅಮೆರಿಕ ಕಾಂಗ್ರೆಸ್ ಮೇಲೆ ದಾಳಿ ನಡೆಸಿದ ಮೂರು ತಿಂಗಳ ಒಳಗೆ ಮತ್ತೊಂದು ಅಂತಹದ್ದೇ ಘಟನೆ ನಡೆದಿರುವುದು ಇಡೀ ಅಮೆರಿಕವನ್ನು ಬೆಚ್ಚಿ ಬೀಳಿಸಿದೆ. ದಾಳಿಕೋರ ವಾಹನವನ್ನು ನುಗ್ಗಿಸಿ ಬ್ಯಾರಿಕೇಡ್‍ಗೆ ಢಿಕ್ಕಿ ಹೊಡೆದಿದ್ದು, ಕಾರಿನಿಂದ ಹಾರಿ ಚಾಕು ಹಿಡಿದು ಪೊಲೀಸರತ್ತ ಧಾವಿಸುತ್ತಿದ್ದ ದಾಳಿಕೋರನನ್ನು ಕ್ಯಾಪಿಟೊಲ್ ಪೊಲೀಸರು ಗುಂಡಿಕ್ಕಿ ಸಾಯಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಯುಸ್ ಕ್ಯಾಪಿಟೊಲ್ ಪ್ರದೇಶದಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ.

ಈಸ್ಟರ್ ಹಾಲಿಡೇಗಾಗಿ ಕ್ಯಾಂಪ್ ಡೇವಿಡ್‍ಗೆ ಪ್ರಥಮ ಮಹಿಳೆ ಜಿಲ್ ಬೈಡೆನ್ ಜತೆ ಆಗಮಿಸಿರುವ ಅಧ್ಯಕ್ಷ ಜೋ ಬೈಡೆನ್, ದಾಳಿಯಲ್ಲಿ ಹತರಾಗಿರುವ ಹಿರಿಯ ಪೊಲೀಸ್ ಅಧಿಕಾರಿ ವಿಲಿಯಮ್ ಇವಾನ್ಸ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

"ಯುಎಸ್ ಕ್ಯಾಪಿಟೋಲ್ ಮೈದಾನದಲ್ಲಿ ನಡೆದ ಈ ಭೀಕರ ದಾಳಿಯ ವಿಷಯ ತಿಳಿದು ಜಿಲ್ ಮತ್ತು ನನಗೆ ತೀವ್ರ ಆಘಾತವಾಗಿದೆ" ಎಂದು ಬೈಡೆನ್ ಹೇಳಿಕೆ ನೀಡಿದ್ದಾರೆ.

ದಾಳಿಕೋರನನ್ನು ಇಂಡಿಯಾನಾದ ನೊಹ್ ಗ್ರೀನ್ (25) ಎಂದು ಗುರುತಿಸಲಾಗಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News