ಕೊರೋನ ವೈರಸ್ ಸೋಂಕು ಹೆಚ್ಚಳ: ಬಾಂಗ್ಲಾದೇಶದಲ್ಲಿ ವಾರ ಲಾಕ್‌ಡೌನ್

Update: 2021-04-03 16:13 GMT
ಸಾಂದರ್ಭಿಕ ಚಿತ್ರ

 ಢಾಕಾ (ಬಾಂಗ್ಲಾದೇಶ), ಎ. 3: ಸೋಮವಾರದಿಂದ ಒಂದು ವಾರ ಅವಧಿಯ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲು ಬಾಂಗ್ಲಾದೇಶ ಸರಕಾರ ಶನಿವಾರ ನಿರ್ಧರಿಸಿದೆ. ದೇಶಾದ್ಯಂತ ಕೋವಿಡ್-19 ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.

ಶನಿವಾರ ರಾಜಧಾನಿ ಢಾಕಾದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ರಸ್ತೆ ಸಾರಿಗೆ ಸಚಿವ ಉಬೈದುಲ್ ಖಾದರ್ ಈ ಹೇಳಿಕೆ ನೀಡಿದರು ಎಂದು ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.

ಬಾಂಗ್ಲಾದೇಶದಲ್ಲಿ ಶುಕ್ರವಾರ 6,830 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ. ಇದು ದಿನವೊಂದರಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳಾಗಿವೆ. ಇದರೊಂದಿಗೆ ದೇಶದಲ್ಲಿ ವರದಿಯಾಗಿರುವ ಒಟ್ಟು ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 6,24,594 ತಲುಪಿದೆ.

ಅದೇ ವೇಳೆ, 24 ಗಂಟೆಗಳ ಅವಧಿಯಲ್ಲಿ ಕೊರೋನ ವೈರಸ್‌ನಿಂದಾಗಿ 50 ಮಂದಿ ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 9,155 ತಲುಪಿದೆ.

ಕೊರೋನ ವೈರಸ್ ಹರಡುವ ವೇಗವನ್ನು ಕಡಿಮೆ ಮಾಡುವ ಉದ್ದೇಶದಿಂದ ಸೋಮವಾರದಿಂದ ಏಳು ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಲು ಸರಕಾರ ನಿರ್ಧರಿಸಿದೆ ಎಂದು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಖಾದರ್ ನುಡಿದರು.

ಆದರೆ, ಕಾರ್ಖಾನೆಗಳು ತೆರೆದಿರುತ್ತವೆ ಹಾಗೂ ಕೆಲಸಗಾರರು ಆರೋಗ್ಯ ನಿಯಮಗಳನ್ನು ಪಾಲಿಸುತ್ತಾ ಪಾಳಿಗಳಲ್ಲಿ ಕೆಲಸ ಮಾಡಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News