ಕಡುಬಡ ರಾಷ್ಟ್ರಗಳಿಗೆ ಲಸಿಕೆ ತ್ವರಿತ ಪೂರೈಕೆಯಾಗಲಿ: ಈಸ್ಟರ್ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಕರೆ

Update: 2021-04-04 17:10 GMT

ವ್ಯಾಟಿಕನ್,ಎ.4: ಪೋಪ್ ಫ್ರಾನ್ಸಿಸ್ ಅವರು ರವಿವಾರ ಜಗತ್ತಿನ ಕ್ರೈಸ್ತ ಸಮುದಾಯಕ್ಕೆ ನೀಡಿದ ಸಂದೇಶದಲ್ಲಿ ಕೊರೋನ ಸಾಂಕ್ರಾಮಿಕದ ಹಾವಳಿಯನ್ನು ಕೊನೆಗೊಳಿಸುವಲ್ಲಿ ಲಸಿಕೆಗಳು ಅತ್ಯಗತ್ಯವಾದ ಅಸ್ತ್ರವಾಗಿದ್ದು, ಅವುಗಳನ್ನು  ಕಡುಬಡ ರಾಷ್ಟ್ರಗಳಿಗೆ ಕ್ಷಿಪ್ರವಾಗಿ ಪೂರೈಕೆ ಮಾಡಬೇಕೆಂದು ಶ್ರೀಮಂತ ರಾಷ್ಟ್ರಗಳಿಗೆ ಕರೆ ನೀಡಿದರು.

ಪೋಪ್ ತನ್ನ ಈ ಸಲದ ಈಸ್ಟರ್ ಸಂದೇಶದಲ್ಲಿ, ಜಗತ್ತಿನ ಅತ್ಯಂತ ದುರ್ಬಲರಾದ ರೋಗಿಗಳು, ವಲಸಿಗರು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವವರು, ಸಿರಿಯ, ಯೆಮನ್ ಹಾಗೂ ಲಿಬಿಯಗಳಂತಹ ಯುದ್ಧವಲಯಗಳಲ್ಲಿ ವಾಸಿಸುತ್ತಿರುವವರ ಬಗ್ಗೆ ಗಮನಸೆಳೆದರು.
  
‘‘ಕೊರೋನ ಸಾಂಕ್ರಾಮಿಕವು ಈಗಲೂ ಹರಡುತ್ತಿದೆ. ಅದರಿಂದಾಗಿ ಉಂಟಾಗಿರುವ ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟು ಅತ್ಯಂತ ಗಂಭೀರವಾಗಿದ್ದು, ವಿಶೇಷವಾಗಿ ಬಡಜನರು ಬಾಧಿತರಾಗಿದ್ದಾರೆಂದು, 84 ವರ್ಷದ ಪೋಪ್ ಫ್ರಾನ್ಸಿಸ್ ವಿಷಾದ ವ್ಯಕ್ತಪಡಿಸಿದರು.
 
ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ಸಲದ ಈಸ್ಟರ್ ಭಾಷಣವನ್ನು ಸೈಂಟ್ ಪೀಟರ್ಸ್ ಬ್ಯಾಸಿಲಿಕಾದ ಒಳಾವರಣದಲ್ಲಿ ಸುಮಾರು 100 ಮಂದಿಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
   
2013ರಲ್ಲಿ ಪೋಪ್ ಸ್ಥಾನಕ್ಕೇರಿದಾಗಿನಿಂದ ಸಮಾಜದ ದುರ್ಬಲ ಸಮೂಹಗಳ ಯಾತನೆ ಬಗ್ಗೆ ವಿಶ್ವದ ಗಮನಸೆಳೆಯುತ್ತಲೇ ಬಂದಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಶ್ರೀಮಂತ ರಾಷ್ಟ್ರಗಳು ಲಸಿಕೆಯನ್ನು ದಾಸ್ತಾನು ಮಾಡುವುದರ ವಿರುದ್ಧ ಧ್ವನಿಯೆತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News