ಕೊಳಚೆ ಪ್ರದೇಶ ವಾಸಿಗಳ ಸಂವಹನ ಮತ್ತು ಅಭಿವೃದ್ಧಿ

Update: 2021-04-05 19:30 GMT

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಹಂತಗಳಲ್ಲಿ ಅರ್ಥಪೂರ್ಣ ನೀತಿಯೊಂದನ್ನು ರೂಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಮಂಡಳಿಗಳನ್ನು ಸ್ಥಾಪಿಸಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ನೇರವಾಗಿ ಅನುದಾನವನ್ನು ಬಿಡುಗಡೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ನಿವಾಸಿಗಳಿಗೆ ಜೀವನೋಪಾಯ ಮಾರ್ಗಗಳು, ಕನಿಷ್ಠ ಅಗತ್ಯಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಬೇಕು.


ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರು ಹಳ್ಳಿಗಳಿಂದ ಜೀವನೋಪಾಯ ಮಾರ್ಗಗಳನ್ನು ಅರಸಿ ನಗರಗಳಿಗೆ ವಲಸೆ ಬಂದವರೇ ಆಗಿದ್ದಾರೆ. ಇವರು ಮೂಲಭೂತವಾಗಿ ತಳಸಮುದಾಯಗಳಿಂದ ಬಂದವರಾಗಿದ್ದು ಭೂಮಿ, ಬಂಡವಾಳ, ಉದ್ಯೋಗ ಮತ್ತು ಬದುಕುವ ಅವಕಾಶಗಳಿಂದ ವಂಚಿತರಾಗಿದ್ದಾರೆ. ಇವರಿಗೆ ತಮ್ಮ ಹುಟ್ಟೂರಿನಲ್ಲಿ ಸಮರ್ಪಕವಾಗಿ ಜೀವನ ಸಾಗಿಸಲು ಅವಶ್ಯಕವಾದ ಕನಿಷ್ಠ ಅಗತ್ಯಗಳು, ಮೂಲಭೂತ ಸೌಕರ್ಯಗಳು, ಜೀವನೋಪಾಯ ಮಾರ್ಗಗಳು ಮೊದಲಾದವುಗಳು ಇಲ್ಲದ ಕಾರಣ ಅನಿವಾರ್ಯವಾಗಿ ಇವರು ಉದ್ಯೋಗವನ್ನು ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಅಲ್ಲಿ ಇವರು ಸಹಜವಾಗಿ ಇತರ ದುರ್ಬಲ ವರ್ಗಗಳೊಂದಿಗೆ ಸಂಪರ್ಕ ಸಾಧಿಸಿ ಕೊಳಚೆ ಪ್ರದೇಶಗಳಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುತ್ತಾರೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುವರೆಲ್ಲರೂ ಅಸಂಘಟಿತ ವಲಯದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇವರಿಗೆ ತಲೆ ಮೇಲೆ ಸೂರು, ಉದ್ಯೋಗಾವಕಾಶ, ಜೀವನ ಭದ್ರತೆ ಮತ್ತು ಆರ್ಥಿಕ ಭದ್ರತೆಗಳು ಇಲ್ಲದ ಕಾರಣ ಅಸಹಾಯಕ ಪರಿಸ್ಥಿತಿಯಲ್ಲಿ ಕುಶಲಕರ್ಮಿಗಳು ಮತ್ತು ಕಾರ್ಮಿಕರಾಗಿ ಜೀವನ ಸಾಗಿಸುವ ಅನಿವಾರ್ಯ ಉಂಟಾಗಿದೆ.

ಕೊಳಚೆ ಪ್ರದೇಶಗಳಲ್ಲಿ ವಸತಿ, ಕುಡಿಯುವ ನೀರು, ಶೌಚಾಲಯ, ವಿದ್ಯುಚ್ಛಕ್ತಿ, ಶಾಲೆ, ಆಸ್ಪತ್ರೆ, ತರಬೇತಿ ಸೌಲಭ್ಯ ಮೊದಲಾದವುಗಳಿಂದ ವಂಚಿತರಾಗಿ ಇಲ್ಲಿನ ನಿವಾಸಿಗಳು ದಯನೀಯ ಬದುಕನ್ನು ನಡೆಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಅಸಹಾಯಕರೇ ಇದ್ದಾರೆ. ಇಂತಹ ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರಕಾರದಿಂದ ಸೌಲಭ್ಯಗಳು ಸಿಗಬೇಕಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ಬಹುಜನ ಸಮುದಾಯಗಳು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರು ನಗರೀಕರಣ, ಕೈಗಾರಿಕರಣ, ವಾಣಿಜ್ಯೀಕರಣ, ಮೂಲಸೌಕರ್ಯಗಳ ಅಭಿವೃದ್ಧಿ ಮೊದಲಾದ ಪ್ರಕ್ರಿಯೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಆದಾಗ್ಯೂ ಇವರು ವಿಧಿಯಿಲ್ಲದೆ ಕೊಳಚೆ ಪ್ರದೇಶಗಳಲ್ಲಿ ತಮ್ಮ ಬದುಕನ್ನು ಸವೆಸುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ ಸರಕಾರ ಪ್ರತ್ಯೇಕ ಮಂಡಳಿಯೊಂದನ್ನು ಸ್ಥಾಪಿಸಿದೆ. ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊಳಚೆ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಿ ಸಾಮಾನ್ಯ ಜನರ ಜೀವನ ಮಟ್ಟವನ್ನು ಸುಧಾರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಮುಖ್ಯವಾಹಿನಿ ಮಾಧ್ಯಮಗಳು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ದುರ್ಬಲ ವರ್ಗಗಳ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಕಾರ್ಯಪ್ರವೃತ್ತವಾಗಿಲ್ಲ.

ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ಮತ್ತು ದುರ್ಬಲ ವರ್ಗಗಳ ಪಾಲಿಗೆ ಸಾಮಾಜಿಕ ಮಾಧ್ಯಮಗಳು ಪರ್ಯಾಯ ಮಾಧ್ಯಮಗಳಾಗಿ ರೂಪುಗೊಂಡಿವೆ. ಕೊಳಚೆ ಪ್ರದೇಶ ವಾಸಿಗಳಿಗೆ ಕನಿಷ್ಠ ನಾಗರಿಕ ಸೌಲಭ್ಯಗಳು, ಮೂಲಭೂತ ಸೌಕರ್ಯಗಳು, ಸುವ್ಯವಸ್ಥೆ, ಸುರಕ್ಷತೆ, ಮೊದಲಾದವುಗಳು ಇಲ್ಲವಾಗಿವೆ. ಇಂದು ಕೊಳಚೆ ಪ್ರದೇಶವಾಸಿಗಳ ಶಿಕ್ಷಣ, ಸಂಘಟನೆ, ಪರಿವರ್ತನೆ ಮತ್ತು ಪ್ರಗತಿಗಾಗಿ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ದುಡಿಯುತ್ತಿವೆ. ಪ್ರಸ್ತುತ ಸಂದರ್ಭದಲ್ಲಿ ಭಾರತವೂ ಸೇರಿದಂತೆ ವಿವಿಧ ಅಭಿವೃದ್ಧಿಶೀಲ ದೇಶಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಭೂರಹಿತ ಕೃಷಿ ಕಾರ್ಮಿಕರು, ಕುಶಲಕರ್ಮಿಗಳು, ರೈತರು, ದುರ್ಬಲ ವರ್ಗಗಳು ಮೊದಲಾದವರು ಜೀವನೋಪಾಯ ಮಾರ್ಗಗಳನ್ನು ಅರಸಿ ವಲಸೆ ಬರುತ್ತಿರುವುದು ಸಾಮಾನ್ಯವಾಗಿದೆ. ಕೊಳಚೆ ಪ್ರದೇಶ ವಾಸಿಗಳು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ನಗರಾಭಿವೃದ್ಧಿ, ಕೈಗಾರಿಕಾಭಿವೃದ್ಧಿ, ಮೂಲ ಸೌಕರ್ಯಗಳ ಅಭಿವೃದ್ಧಿ ಮೊದಲಾದವುಗಳಿಗೆ ನಿರ್ಣಾಯಕ ಕೊಡುಗೆ ನೀಡುತ್ತಿದ್ದಾರೆ. ಆದಾಗ್ಯೂ, ಕೊಳಚೆ ಪ್ರದೇಶ ವಾಸಿಗಳು ಮೂಲಸೌಕರ್ಯಗಳಾದ ವಸತಿ, ನೀರು, ವಿದ್ಯುಚ್ಛಕ್ತಿ, ಶಾಲೆ, ಆಸ್ಪತ್ರೆ, ಗ್ರಂಥಾಲಯ, ತರಬೇತಿ ಕೇಂದ್ರ, ಸ್ವಯಂ ಉದ್ಯೋಗಾವಕಾಶಗಳು, ಆರ್ಥಿಕ ಸಂಪನ್ಮೂಲಗಳು ಮತ್ತು ಸರಕಾರದ ನೆರವಿನಿಂದ ವಂಚಿತರಾಗಿ ಬಡತನ ರೇಖೆಯಿಂದ ಕೆಳಗೆ ವಾಸಿಸುತ್ತಿರುವುದಾಗಿ ಅಧ್ಯಯನಗಳು ದೃಢಪಡಿಸಿವೆ.

ಕೊಳಚೆ ಪ್ರದೇಶ ನಿವಾಸಿಗಳ ಸಮಗ್ರ ಅಭಿವೃದ್ಧಿ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಸುಗಮ ಆಡಳಿತ, ಒಳಗೊಳ್ಳುವ ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ರಕ್ಷಣೆಯ ವಾರಸುದಾರರು ಮತ್ತು ಮಧ್ಯಸ್ಥಗಾರರು ಕೊಳಚೆ ಪ್ರದೇಶ ವಾಸಿಗಳ ಸಬಲೀಕರಣದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಕೊಳಚೆ ಪ್ರದೇಶ ಅಭಿವೃದ್ಧಿ ಕೇಂದ್ರಿತ ಸಲಹೆಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಹಂತಗಳಲ್ಲಿ ಅರ್ಥಪೂರ್ಣ ನೀತಿಯೊಂದನ್ನು ರೂಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಮಂಡಳಿಗಳನ್ನು ಸ್ಥಾಪಿಸಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ನೇರವಾಗಿ ಅನುದಾನವನ್ನು ಬಿಡುಗಡೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ನಿವಾಸಿಗಳಿಗೆ ಜೀವನೋಪಾಯ ಮಾರ್ಗಗಳು, ಕನಿಷ್ಠ ಅಗತ್ಯಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪಡಿತರ ವ್ಯವಸ್ಥೆ, ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ಘಟಕ, ಕೌಶಲ್ಯಾಭಿವೃದ್ಧಿ ಕೇಂದ್ರ, ಉದ್ಯಮಶೀಲತೆ ಅಭಿವೃದ್ಧಿ ತರಬೇತಿ, ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ, ಆರೋಗ್ಯ ವಿಮೆ ಯೋಜನೆ, ಸಾಮಾಜಿಕ ಸುರಕ್ಷತೆ ಕಾರ್ಯಕ್ರಮಗಳು ಮೊದಲಾದವುಗಳನ್ನು ಅನುಷ್ಠಾನಗೊಳಿಸಬೇಕು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ಯುವಜನರ ಕಲ್ಯಾಣ, ವಿಶೇಷ ಚೇತನರ ಕಲ್ಯಾಣ, ವೃದ್ಧರಿಗೆ ರಕ್ಷಣೆ ಮೊದಲಾದವುಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಅನುಷ್ಠಾನಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸ್ವಸಹಾಯ ಸಂಘಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಮಕ್ಕಳು ಮತ್ತು ಯುವಜನರನ್ನು ಸಮಾಜ ವಿರೋಧಿ ಚಟುವಟಿಕೆಗಳಿಂದ ದೂರವಿರಿಸಲು ಅವಶ್ಯಕ ಮಾನವಾಭಿವೃದ್ಧಿ ಯೋಜನೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ನೆರವಿನಿಂದ ವಕಾಲತ್ತು ಜಾಲ ಯೋಜನೆ, ಮಾನವ ಹಕ್ಕುಗಳ ರಕ್ಷಣೆ, ಲಿಂಗ ತಾರತಮ್ಯ ನಿವಾರಣೆ, ಅಸ್ಪಶ್ಯತೆ ನಿವಾರಣೆ ಮತ್ತು ಒಳಗೊಳ್ಳುವ ಅಭಿವೃದ್ಧಿ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಬೇಕು.

ಕೊಳಚೆ ಪ್ರದೇಶಗಳಲ್ಲಿ ಸಂವಹನ ಅಭಿವೃದ್ಧಿ  
ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಮುದಾಯ ಬಾನುಲಿ ಕೇಂದ್ರ, ಮಾಧ್ಯಮ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ಸಾಮಾಜಿಕ ಮಾಧ್ಯಮ ಬಳಕೆ ಮೊದಲಾದವುಗಳನ್ನು ಸ್ಥಳೀಯ ಮಟ್ಟದಲ್ಲಿ ವಿಸ್ತರಿಸಿ ಕೊಳಚೆ ಪ್ರದೇಶ ವಾಸಿಗಳಲ್ಲಿ ಹೊಸ ಅರಿವು ಮತ್ತು ಹೊಣೆಗಾರಿಕೆಗಳನ್ನು ಮೂಡಿಸಬೇಕು. ಕೊಳಚೆ ಪ್ರದೇಶ ವಾಸಿಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಸಕ್ರಿಯವಾಗಿ ಹಾಗೂ ರಚನಾತ್ಮಕವಾಗಿ ವಿವಿಧ ಅಭಿವೃದ್ಧಿ ಉದ್ದೇಶಗಳಿಗಾಗಿ ಬಳಸುವ ನಿಟ್ಟಿನಲ್ಲಿ ಅವಶ್ಯಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೀತಿ ನಿರೂಪಕರು, ಅಭಿವೃದ್ಧಿ ಸಿಬ್ಬಂದಿ, ಸ್ವಯಂ ಸೇವಕರು, ಚಳವಳಿಗಾರರು ಮೊದಲಾದವರು ಕೊಳಚೆ ಪ್ರದೇಶವಾಸಿಗಳ ಸಾಮಾಜಿಕ ಜಾಲ ನಿರ್ಮಾಣ ಮತ್ತು ಸಾಮಾಜಿಕ ಬಂಡವಾಳ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯ ಸಾಧ್ಯತೆಯನ್ನು ಉತ್ತೇಜಿಸಬೇಕು. ಕೊಳಚೆ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಇತರ ಅಲಕ್ಷಿತ ಜನವರ್ಗಗಳ ವಿಮೋಚನೆ ಮತ್ತು ಸಬಲೀಕರಣಗಳಿಗಾಗಿ ಸಾಮಾಜಿಕ ಮಾಧ್ಯಮಗಳನ್ನು ಪರ್ಯಾಯ ಮಾಧ್ಯಮಗಳನ್ನಾಗಿ

ಬಳಸಿಕೊಳ್ಳುವ ಪ್ರಯತ್ನಗಳಿಗೆ ವಿಶೇಷ ಚಾಲನೆಯನ್ನು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ನೀಡಬೇಕು.
ಭಾರತದಲ್ಲಿ ಅಸ್ಪಶ್ಯರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಸಮಾಜದ ಹಿತವಂಚಿತ ಜನವರ್ಗಗಳನ್ನು ಶೋಷಣೆ ಮತ್ತು ದಬ್ಬಾಳಿಕೆಗಳಿಂದ ರಕ್ಷಿಸಲು ಬುದ್ಧಿಜೀವಿಗಳು, ಸಂಘಟಕರು ಮತ್ತು ಹೋರಾಟಗಾರರು ಸಾಮಾಜಿಕ ಮಾಧ್ಯಮಗಳನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಪ್ರಾಯೋಗಿಕವಾಗಿ ಬಹುಸಂಖ್ಯಾತ ದುರ್ಬಲ ವರ್ಗಗಳು ಮತ್ತು ಅಂಚಿಗೆ ನೂಕಲ್ಪಟ್ಟ ಜನವರ್ಗಗಳು ಕೊಳಚೆ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಸಂಘಟಿತ ಕ್ರಿಯಾಶೀಲತೆಯಿಂದ ಕೊಳಚೆ ಪ್ರದೇಶ ವಾಸಿಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ವಿವಿಧ ಅಭಿವೃದ್ಧಿ ಉದ್ದೇಶಗಳಿಗಾಗಿ ಬಳಸುವ ಸಾಧ್ಯತೆ ಎಂದಿಗಿಂತ ಇಂದು ಹೆಚ್ಚಾಗಿದೆ. ಕೊಳಚೆ ಪ್ರದೇಶ ವಾಸಿಗಳು ಮತ್ತು ಇತರ ದಮನಿತ ಸಮುದಾಯಗಳು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು, ಸಾಮಾಜಿಕ ಜಾಲತಾಣವನ್ನು ಅಭಿವೃದ್ಧಿಪಡಿಸಲು, ಸಂಘಟಿತ ಹೋರಾಟ ನಡೆಸಲು ಮತ್ತು ಸಬಲೀಕರಣ ಹೊಂದಲು ಸಾಮಾಜಿಕ ಮಾಧ್ಯಮಗಳನ್ನು ಪ್ರಧಾನವಾಗಿ ಅವಲಂಬಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕೊಳಚೆ ಪ್ರದೇಶ ವಾಸಿಗಳ ಲೋಕಶಿಕ್ಷಣ, ಸಾಮಾಜಿಕ ಜಾಲತಾಣ ಅಭಿವೃದ್ಧಿ ಮತ್ತು ಸಮಗ್ರ ಸಬಲೀಕರಣಕ್ಕೆ ಸಾಮಾಜಿಕ ಮಾಧ್ಯಮಗಳು ಖಂಡಿತವಾಗಿಯೂ ಸಹಕಾರಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News