ಕಾನೂನಿನ ದುರುಪಯೋಗ ಎಂದು ಎನ್‌ಎಸ್‌ಎ ಅಡಿ ದಾಖಲಾಗಿದ್ದ 94 ಪ್ರಕರಣಗಳನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್

Update: 2021-04-06 12:23 GMT
ಉ.ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ 

ಲಕ್ನೋ,ಎ.6: ಉತ್ತರ ಪ್ರದೇಶದಲ್ಲಿ 2018 ಜನವರಿ ಮತ್ತು 2020 ಡಿಸೆಂಬರ್ ನಡುವೆ ಅಧಿಕಾರಿಗಳು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಒಟ್ಟು 120 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು,ಈ ಪೈಕಿ 41,ಅಂದರೆ ಮೂರನೇ ಒಂದು ಭಾಗಕ್ಕಿಂತ ಅಧಿಕ ಪ್ರಕರಣಗಳನ್ನು ಗೋಹತ್ಯೆ ಆರೋಪಿಗಳ ವಿರುದ್ಧ ಹೇರಲಾಗಿತ್ತು ಮತ್ತು ಈ ಎಲ್ಲ ಆರೋಪಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು indianexpress.com ಮಂಗಳವಾರ ವರದಿ ಮಾಡಿದೆ.

ಸದ್ರಿ ಮಾಧ್ಯಮವು ಪೊಲೀಸ್ ಮತ್ತು ನ್ಯಾಯಾಲಯದ ದಾಖಲೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಿದೆ.

2018 ಜನವರಿ ಮತ್ತು 2020 ಡಿಸೆಂಬರ್ ನಡುವಿನ ಅವಧಿಯಲ್ಲಿ ಎನ್‌ಎಸ್‌ಎ ಅಡಿ ಬಂಧನಗಳನ್ನು ಪ್ರಶ್ನಿಸಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ 120 ಹೇಬಿಯಸ್ ಕಾರ್ಪಸ್ ಅರ್ಜಿಗಳು ಸಲ್ಲಿಕೆಯಾಗಿದ್ದವು. 94 ಪ್ರಕರಣಗಳಲ್ಲಿ ರಾಜ್ಯದ 32 ಜಿಲ್ಲೆಗಳ ದಂಡಾಧಿಕಾರಿಗಳ ಆದೇಶಗಳನ್ನು ರದ್ದುಗೊಳಿಸಿದ ನ್ಯಾಯಾಲಯವು ಬಂಧಿತರನ್ನು ಬಿಡುಗಡೆಗೊಳಿಸಿದೆ.

ಎನ್‌ಎಸ್‌ಎ ಅಡಿ ದಾಖಲಾಗಿದ್ದ 41 ಪ್ರಕರಣಗಳನ್ನು ಗೋಹತ್ಯೆ ಆರೋಪಿಗಳ ವಿರುದ್ಧ ಹೇರಲಾಗಿದ್ದು,ಈ ಪೈಕಿ 30 ಪ್ರಕರಣಗಳಲ್ಲಿ ಉತ್ತರ ಪ್ರದೇಶ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದು, ಇದು ಕಾನೂನಿನ ದುರುಪಯೋಗ ಎಂದ ಉಚ್ಚ ನ್ಯಾಯಾಲಯವು,ಆರೋಪಿಗಳ ವಿರುದ್ಧದ ಎನ್‌ಎಸ್‌ಎ ಆದೇಶಗಳನ್ನು ರದ್ದುಗೊಳಿಸಿದೆ. ಉಳಿದ 11 ಪ್ರಕರಣಗಳಲ್ಲಿ ಗೋಹತ್ಯೆಗಾಗಿ ಆರೋಪಿಗಳ ಬಂಧನವನ್ನು ಅದು ಎತ್ತಿ ಹಿಡಿದಿದೆ. ಅಂತಿಮವಾಗಿ ಈ ಪೈಕಿ 10 ಪ್ರಕರಣಗಳಲ್ಲಿ ಕೆಳ ನ್ಯಾಯಾಲಯ ಅಥವಾ ಖುದ್ದು ಉಚ್ಚ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದವು ಎಂದು indianexpress.com ವರದಿ ಮಾಡಿದೆ.

2020 ಜೂನ್‌ನಲ್ಲಿ ಗೋಹತ್ಯೆಗಾಗಿ ಜೈಲು ಶಿಕ್ಷೆಯನ್ನು 10 ವರ್ಷಗಳವರೆಗೆ ಮತ್ತು ದಂಡವನ್ನು ಐದು ಲಕ್ಷ ರೂ.ವರೆಗೆ ಹೆಚ್ಚಿಸುವ ಅಧ್ಯಾದೇಶಕ್ಕೆ ಉ.ಪ್ರ.ಸಂಪುಟವು ಒಪ್ಪಿಗೆಯ ಮುದ್ರೆಯನ್ನೊತ್ತಿತ್ತು.

ಉ.ಪ್ರ. ಗೋಹತ್ಯೆ ಕಾಯ್ದೆ,1955ನ್ನು ಪದೇಪದೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಕ್ಟೋಬರ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯವು, ಅಮಾಯಕರನ್ನು ಸಿಲುಕಿಸಲು ಈ ಕಾಯ್ದೆಯ ಬಳಕೆಯಾಗುತ್ತಿದೆ ಎಂದು ಬೆಟ್ಟುಮಾಡಿತ್ತು. ತನ್ನ ಸರಕಾರವು ಯಾವುದೇ ಬೆಲೆಯನ್ನಾದರೂ ತೆತ್ತು ಗೋವುಗಳನ್ನು ರಕ್ಷಿಸುತ್ತದೆ ಎಂದು ಆದಿತ್ಯನಾಥ್ ಇದಕ್ಕೆ ಪ್ರತಿಕ್ರಿಯಿಸಿದ್ದರು.

ಗೋಹತ್ಯೆ ಆರೋಪದ ಪ್ರಕರಣಗಳ ಮೇಲೆ ಎನ್‌ಎಸ್‌ಎ ಹೇರಿದ್ದನ್ನು ರದ್ದುಗೊಳಿಸಿದ್ದ ಸಂದರ್ಭದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯವು ಹಲವಾರು ಲೋಪಗಳನ್ನು ಎತ್ತಿ ತೋರಿಸಿತ್ತು. 11 ಪ್ರಕರಣಗಳಲ್ಲಿ ಎಸ್‌ಎಸ್‌ಎ ಅಡಿ ಬಂಧನಕ್ಕೆ ಆದೇಶವನ್ನು ಹೊರಡಿಸುವಾಗ ಜಿಲ್ಲಾ ದಂಡಾಧಿಕಾರಿಗಳು ವಿವೇಚನೆಯನ್ನು ಬಳಸಿರಲಿಲ್ಲ ಮತ್ತು 13 ಪ್ರಕರಣಗಳಲ್ಲಿ ಎನ್‌ಎಸ್‌ಎ ಅನ್ನು ಪ್ರಶ್ನಿಸುವಾಗ ಬಂಧಿತ ವ್ಯಕ್ತಿಗಳಿಗೆ ತಮ್ಮನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳಲು ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ನ್ಯಾಯಾಲಯವು ಹೇಳಿತ್ತು.

ಏಳು ಪ್ರಕರಣಗಳು ಕಾನೂನು ಮತ್ತು ಸುವ್ಯವಸ್ಥೆಯ ವ್ಯಾಪ್ತಿಯಲ್ಲಿವೆ ಮತ್ತು ಎನ್‌ಎಸ್‌ಎ ಹೇರುವ ಅಗತ್ಯವಿರಲಿಲ್ಲ ಎಂದು ಹೇಳಿದ್ದ ನ್ಯಾಯಾಲಯವು ಆರು ಪ್ರಕರಣಗಳಲ್ಲಿ ಏಕೈಕ ಪ್ರಕರಣದ ಆಧಾರದಲ್ಲಿ ಎನ್‌ಎಸ್‌ಎ ಅನ್ನು ಹೇರಲಾಗಿತ್ತು ಮತ್ತು ಇಲ್ಲಿ ಆರೋಪಿಗಳು ಯಾವುದೇ ಕ್ರಿಮಿನಲ್ ಪೂರ್ವಚರಿತ್ರೆಯನ್ನು ಹೊಂದಿರಲಿಲ್ಲ ಎಂದಿದೆ.

ಇದರ ಜೊತೆಗೆ ಗೋಹತ್ಯೆ ಪ್ರಕರಣಗಳ ದಾಖಲೆಗಳಲ್ಲಿ ಹಲವಾರು ಅಸಂಗತತೆಗಳು ಮತ್ತು ಲೋಪಗಳನ್ನೂ ನ್ಯಾಯಾಲಯವು ಬೆಟ್ಟು ಮಾಡಿದೆ. ಹಲವಾರು ಪ್ರಕರಣಗಳಲ್ಲಿ ಎನ್‌ಎಸ್‌ಎ ಹೇರಲು ಒಂದೇ ರೀತಿಯ ಕಾರಣಗಳನ್ನು ಅಧಿಕಾರಿಗಳು ತೋರಿಸಿದ್ದರು. ಎಫ್‌ಐಆರ್‌ಗಳಲ್ಲಿಯ ವಿಷಯ ಮಾತ್ರವಲ್ಲ, ಎನ್‌ಎಸ್‌ಎ ಆದೇಶಗಳಲ್ಲಿ ಜಿಲ್ಲಾ ದಂಡಾಧಿಕಾರಿಗಳು ಉಲ್ಲೇಖಿಸಿದ್ದ ಬಂಧನ ಕಾರಣಗಳೂ ಒಂದೇ ಆಗಿದ್ದವು ಎನ್ನುವುದನ್ನು ನ್ಯಾಯಾಲಯವು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News