ರಾಜ್ಯದೆಲ್ಲೆಡೆ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ ಸಾರಿಗೆ ನೌಕರರು

Update: 2021-04-07 06:21 GMT

ಬೆಂಗಳೂರು, ಎ.7: ವೇತನ ಹೆಚ್ಚಳ ಹಾಗೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ  ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ಸಾರಿಗೆ ನೌಕರರು ಇಂದಿನಿಂದ ಮುಷ್ಕರ ನಡೆಸುತ್ತಿರುವ ಪರಿಣಾಮ ರಾಜ್ಯದೆಲ್ಲೆಡೆ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದು, ಖಾಸಗಿ ಬಸ್ಸುಗಳಲ್ಲಿ ನೂಕುನುಗ್ಗಲು ಕಂಡುಬರುತ್ತಿದೆ.

ಸಾರಿಗೆ ಮುಷ್ಕರಕ್ಕೆ ನೌಕರರು ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿದ್ದು, ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದರೆ, ಪರ್ಯಾಯವಾಗಿ ಸರ್ಕಾರ ಖಾಸಗಿ ಬಸ್‌ಗಳಿಗೆ ಅವಕಾಶ ಕಲ್ಪಿಸಿದೆ.

ಬೆಂಗಳೂರಿನ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದೊಳಗೆ ಖಾಸಗಿ ಬಸ್‌ಗಳ ನಿಲುಗಡೆಗೆ ಅನುಮತಿ ನೀಡಲಾಗಿದ್ದು, ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಆದರೆ, ಮುಷ್ಕರದ ಮಾಹಿತಿ ಇರುವ ಕಾರಣ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ.

ಖಾಸಗಿ ಬಸ್‌ಗಳು ಯಾವ ಮಾರ್ಗದಲ್ಲಿ ಸಂಚರಿಸಬೇಕು, ದರ ಎಷ್ಟು ಪಡೆಯಬೇಕು ಎಂಬ ಪಟ್ಟಿಯನ್ನು ಸರಕಾರವೇ ನಿಗದಿ ಮಾಡಿದೆ. ಆದರೆ, ಅದಕ್ಕೂ ಹೆಚ್ಚು ದರ ಪಡೆಯಲಾಗುತ್ತಿದೆ ಎಂಬ ಆರೋಪಗಳನ್ನೂ ಪ್ರಯಾಣಿಕರು ಮಾಡುತ್ತಿದ್ದಾರೆ.

ಮತ್ತೊಂದೆಡೆ ಬಿಎಂಟಿಸಿ ಬಸ್‌ ಇಲ್ಲದ ಕಾರಣ ಮೆಟ್ರೊ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆಟೋರಿಕ್ಷಾ, ಟ್ಯಾಕ್ಸಿಗಳಲ್ಲಿ ದಬಾರಿ ದರ ನೀಡಿ ಪ್ರಯಾಣಿಕರು ತೆರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.

ಬೆಂಗಳೂರು ಸೇರಿದಂತೆ ವಿವಿಧಮಾರ್ಗದಲ್ಲಿ ಸಂಚರಿಸುವ ಬಸ್ ನಿಲ್ದಾಣ ಜಾಗ ಖಾಲಿಯಾಗಿತ್ತು. ಬಸ್‌ ಚಾಲಕರು, ನಿರ್ವಾಹಕರಿಲ್ಲದೇ ನಿಲ್ದಾಣ ಬಣಗುಡುತ್ತಿತ್ತು. ಬರುವ ಒಂದೊಂದೇ ಬಸ್‌ಗೆ ಪ್ರಯಾಣಿಕರು ಮುಗಿಬೀಳುತ್ತಿದ್ದರು. ಬಸ್‌ಗಾಗಿ ಪ್ರಯಾಣಿಕರು ಕಾದು ಕಾದು ಸುಸ್ತಾದರು. ಹೀಗಾಗಿ, ಖಾಸಗಿ ವಾಹನಗಳ ಮೊರೆ ಹೋದರು.

ಗಂಟೆಗಟ್ಟಲೆ ಕಾದ ಬಳಿಕ ಬಸ್‌ಗಳು ಬರುತ್ತಿದ್ದ ಕಾರಣ ಪ್ರಯಾಣಿಕರು ಬಸ್ ಹತ್ತಲು ನೂಕುನುಗ್ಗಲು ನಡೆಸುತ್ತಿದ್ದರು. ಈ ವೇಳೆ, ಸಾಮಾಜಿಕ ಅಂತರ ಕಣ್ಮರೆಯಾಗಿತ್ತು. ಕೊರೋನ ಸೋಂಕಿನ ಭಯವನ್ನು ಮರೆತು ಬಸ್ ಹತ್ತಲು ಪ್ರಯಾಣಿಕರು ಮುಗಿಬೀಳುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News