ಕರ್ತವ್ಯ ಲೋಪದ ಆರೋಪ: ಹಲಸೂರು ಗೇಟ್ ಪಿಎಸ್ಸೈ ಸಹಿತ ಇಬ್ಬರು ಅಮಾನತು

Update: 2021-04-07 06:46 GMT

ಬೆಂಗಳೂರು, ಎ.7: ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಹಲಸೂರುಗೇಟ್ ಪೊಲೀಸ್ ಠಾಣೆಯ ಪಿಎಸ್ಸೈ ಪಿ.ಜಿ. ಸಂತೋಷ್ ಮತ್ತು ಹೆಡ್‌ಕಾನ್‌ಸ್ಟೇಬಲ್ ವೆಂಕಪ್ಪ ಹೂಗಾರ್​ ಅವರನ್ನು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಅಮಾನತುಗೊಳಿಸಿದ್ದಾರೆ.

ಏನಿದು ಆರೋಪ: ಮಾ.12ರಂದು ಸಂಜೆ ಸಿದ್ದೇಶ್ವರ್ ಹರಿಬಾ ಶಿಂಧೆ ಅವರಿಗೆ ಸೇರಿದ ಡಿ.ಕೆ.ಮಾರುಕಟ್ಟೆಯಲ್ಲಿರುವ ಸಂಸ್ಕಾರ್ ಎಂಟರ್‌ಪ್ರೈಸಸ್ ಅಂಗಡಿ ಹಾಗೂ ಗೋಲ್ಡ್ ರಿಫೈನರಿ ವಾಣಿಜ್ಯ ಮಳಿಗೆ ಮೇಲೆ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಶಿವಕುಮಾರ್, ಪಿಎಸ್ಸೈ ಸಂತೋಷ್, ವೆಂಕಪ್ಪ ಹೂಗಾರ್ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿದ್ದರು.  ಈ ಸಂದರ್ಭದಲ್ಲಿ ಲಕ್ಷಾಂತರ ರೂ. ನಗದು, ಚಿನ್ನದ ಗಟ್ಟಿ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಆದರೆ ಸಂತೋಷ್ ಮತ್ತು ವೆಂಕಪ್ಪ ಹೂಗಾರ್ ದಾಳಿ ನಡೆಸಿದ ಮಳಿಗೆಯಲ್ಲಿ ಪತ್ತೆಯಾದ ನಗದು ಮತ್ತು ಚಿನ್ನದ ಗಟ್ಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಿಲ್ಲ. ಜತೆಗೆ ನಗದು ಮತ್ತು ಚಿನ್ನ ಮಾಲಕರಿಗೂ ವಾಪಸ್ ನೀಡಿಲ್ಲ. ಆದರೆ, ಮಾಲಕರಿಗೆ ಐಟಿಗೆ ಮಾಹಿತಿ ನೀಡಿರುವುದಾಗಿ ಸುಳ್ಳು ಹೇಳಿದ್ದರು. ಅಷ್ಟೇ ಅಲ್ಲದೇ ಸಂತೋಷ್​ ಮತ್ತು ವೆಂಕಪ್ಪ ದಾಳಿ ನಡೆದಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಿಲ್ಲ. ಠಾಣಾ ದಿನಚರಿಯಲ್ಲೂ ನೋಂದಾಯಿಸಿಲ್ಲ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು.

ಮಾ.13ರಂದು ಠಾಣಾ ದಿನಚರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಹಾಜರುಪಡಿಸಿ ವರದಿ ನೀಡಿರುತ್ತೇವೆಂದು ನೋಂದಾಯಿಸಲಾಗಿತ್ತು. ದಾಳಿ ವೇಳೆ ವಶಕ್ಕೆ ಪಡೆಯಲಾದ ಶೇ. 88.35ರಷ್ಟು ಪ್ಯೂರಿಟಿಯ 266.74 ಗ್ರಾಂ ಚಿನ್ನದ ಗಟ್ಟಿ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ ಎಂದು ಆರೋಪಿಸಿ ಪಿಎಸ್ಸೈ ಸಂತೋಷ್ ಮತ್ತು ಹೆಡ್‌ಕಾನ್‌ಸ್ಟೇಬಲ್ ವೆಂಕಪ್ಪ ಹೂಗಾರ್ ವಿರುದ್ಧ ಮಳಿಗೆ ಮಾಲೀಕ ಸಿದ್ದೇಶ್ವರ್ ಹರಿಬಾ ಶಿಂಧೆ ಅವರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಾಥಮಿಕ ವಿಚಾರಣೆ ನಡೆಸಿರುವ  ಹಿರಿಯ ಅಧಿಕಾರಿಗಳು ಪಿಎಸ್ಸೈ ಮತ್ತು ಹೆಡ್​ ಕಾನ್ಸ್​ಟೇಬಲ್​ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News