ಪಾಕ್‌ಗೆ ಸರಣಿ ಜಯ: ಫಾಖರ್ ಸತತ ಎರಡನೇ ಶತಕ

Update: 2021-04-08 03:43 GMT

ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 28 ರನ್‌ಗಳ ಅಂತರದಲ್ಲಿ ಮಣಿಸಿರುವ ಪ್ರವಾಸಿ ಪಾಕಿಸ್ತಾನ ತಂಡ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

  ಗೆಲುವಿಗೆ 321 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕಾ ತಂಡ 49.3 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟಾಗಿದೆ. ಶಾಹಿನ್ ಅಫ್ರಿದಿ (58ಕ್ಕೆ 3), ಮುಹಮ್ಮದ್ ನವಾಝ್(34ಕ್ಕೆ 3), ಹಾರಿಸ್ ರವೂಪ್(45ಕ್ಕೆ 2), ಹಸನ್ ಅಲಿ(76ಕ್ಕೆ 1), ಉಸ್ಮಾನ್ ಖಾದಿರ್(48ಕ್ಕೆ 1) ದಾಳಿಯನ್ನು ಎದುರಿಸಲಾರದೆ ದ. ಆಫ್ರಿಕಾ ಗೆಲುವಿನ ದಡ ಸೇರುವಲ್ಲಿ ವಿಫಲಗೊಂಡಿತು. ಜನ್ನೆಮಾನ್ ಮಲಾನ್ (70), ಕೈಲ್ ವೆರ್ರಿನ್ನೆ (62) ಮತ್ತು ಪೆಹ್ಲುಕ್ವ್ವಾಯೊ (54) ಅರ್ಧಶತಕ ದಾಖಲಿಸಿದರು. ಬಾಬರ್ ಆಝಮ್ ಪಂದ್ಯಶ್ರೇಷ್ಠ ಮತ್ತು ಫಾಖರ್ ಝಮಾನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಾಕಿಸ್ತಾನ 320/7: ದಕ್ಷಿಣ ಆಫ್ರಿಕಾದ ವಿರುದ್ಧ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಏಳು ವಿಕೆಟ್‌ಗೆ 320 ರನ್ ಗಳಿಸಿತ್ತು. ಫಾಖರ್ ಝಮಾನ್ ಸತತ ಎರಡನೇ ಶತಕ ಮತ್ತು ನಾಯಕ ಬಾಬರ್ ಆಝಮ್ 94 ರನ್ ಗಳಿಸಿದರು.

ಜೋಹಾನ್ಸ್‌ಬರ್ಗ್‌ನಲ್ಲಿ ರವಿವಾರ ನಡೆದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳ ದಾಳಿಯನ್ನು ಪುಡಿ ಪುಡಿ ಮಾಡಿದ್ದ ಫಾಖರ್ ಮತ್ತೆ ವೇಗವಾಗಿ ಶತಕ ಗಳಿಸಿದರು. 104 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 101 ರನ್ ಗಳಿಸಿದರು. ಅವರು 50ನೇ ಪಂದ್ಯದಲ್ಲಿ 6ನೇ ಶತಕ ದಾಖಲಿಸಿದರು. ಬಾಬರ್ ಮತ್ತು ಹಸನ್ ಅಲಿ ಅವರು ಪಾಕಿಸ್ತಾನದ ಮೊತ್ತವನ್ನು 300 ರ ಗಡಿ ದಾಟಿಸಿದರು. ಇವರು 7ನೇ ವಿಕೆಟ್‌ಗೆ ಕೊನೆಯ ನಾಲ್ಕು ಓವರ್‌ಗಳಲ್ಲಿ 63 ರನ್ ಸೇರಿಸಿದರು.

  ಬಾಬರ್ 82 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 94 ರನ್ ಗಳಿಸಿ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು. ಹಸನ್ 11 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. 49ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಜಾನ್-ಜಾನ್ ಸ್ಮಟ್ಸ್ ಬೆವರಿಳಿಸಿದ ಅಲಿ ಆ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿದರು.

  ಮೋಡ ಕವಿದ ವಾತಾವರಣದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡದ ಫಾಖರ್ ಮತ್ತು ಇಮಾಮ್-ಉಲ್-ಹಕ್ (57) ಮೊದಲ ವಿಕೆಟ್‌ಗೆ 112 ರನ್‌ಗಳ ಜೊತೆಯಾಟ ನೀಡುವ ಮೂಲಕ ಭದ್ರ ಬುನಾದಿ ಹಾಕಿದರು. ದಕ್ಷಿಣ ಆಫ್ರಿಕಾದ ತಂಡದ ನಾಯಕ ತೆಂಬಾ ಬವುಮಾ 7 ಮಂದಿ ಬೌಲರ್‌ಗಳನ್ನು ದಾಳಿಗಿಳಿಸಿದರು. ಈ ಪೈಕಿ ಮಹಾರಾಜ್ ತಮ್ಮ 10 ಓವರ್‌ಗಳಲ್ಲಿ 45ಕ್ಕೆ ಮೂರು ವಿಕೆಟ್ ಪಡೆದರು. ಇಂಡಿಯನ್ ಪ್ರೀಮಿಯರ್ ಲೀಗ್ ಬದ್ಧತೆಯಿಂದಾಗಿ ಆಫ್ರಿಕಾದ ಮೂರು ಮುಂಚೂಣಿ ವೇಗದ ಬೌಲರ್‌ಗಳು ತಂಡದ ಸೇವೆಗೆ ಲಭ್ಯರಿಲ್ಲ. ಈ ಕಾರಣದಿಂದಾಗಿ ನಾಯಕ ತೆಂಬಾ ಬಾವುಮಾ ಅವರು ಅನನುಭವಿ ಬೌಲರ್‌ಗಳನ್ನು ದಾಳಿಗಿಳಿಸಬೇಕಾಯಿತು. ಆಗಾಗ್ಗೆ ಬದಲಾವಣೆಗಳನ್ನು ಮಾಡಿದರು. 50 ಓವರ್‌ಗಳಲ್ಲಿ ಸ್ಪಿನ್ನರ್‌ಗಳು 28 ಓವರ್‌ಗಳ ಬೌಲಿಂಗ್ ನಡೆಸಿದರು. ಆರು ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಯಿತು.

ಫಾಖರ್ ಝಮಾನ್‌ಗೆ 12ನೇ ಸ್ಥಾನ

ಐಸಿಸಿ ಏಕದಿನ ರ‍್ಯಾಂಕಿಂಗ್

  ದುಬೈ: ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 193 ರನ್ ಗಳಿಸಿದ ನಂತರ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಫಾಖರ್ ಝಮಾನ್ ಇತ್ತೀಚಿನ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ 12ನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News