ಸ್ವಚ್ಛತಾ ಅಭಿಯಾನ ಆ್ಯಪ್‌ನಲ್ಲಿ ಮಲ ಹೊರುವ ಪದ್ಧತಿ ಕುರಿತು ಉತ್ತರ ಪ್ರದೇಶದಿಂದ ಹೆಚ್ಚಿನ ದೂರುಗಳು

Update: 2021-04-08 15:21 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.8: ನರೇಂದ್ರ ಮೋದಿ ಸರಕಾರವು ಕಳೆದ ವರ್ಷ ಆರಂಭಿಸಿರುವ ಸ್ವಚ್ಛತಾ ಅಭಿಯಾನ ಆ್ಯಪ್‌ನಲ್ಲಿ ದಾಖಲಾಗಿರುವ ದೂರುಗಳಂತೆ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಅನೈರ್ಮಲ್ಯದಿಂದ ಕೂಡಿದ ಶೌಚಾಲಯಗಳ ಬಳಕೆ ಈಗಲೂ ಮುಂದುವರಿದಿದ್ದು, ಕಾನೂನುಬಾಹಿರವಾದ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅಥವಾ ಮಲಹೊರುವ ಪದ್ಧತಿಯು ಚಾಲ್ತಿಯಲ್ಲಿದೆ.

14 ರಾಜ್ಯಗಳಿಂದ ದೂರುಗಳು ಆ್ಯಪ್‌ನಲ್ಲಿ ದಾಖಲಾಗಿದ್ದು,863 ದೂರುಗಳೊಂದಿಗೆ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದ್ದರೆ ಮಹಾರಾಷ್ಟ್ರ (36) ಮತ್ತು ಪಶ್ಚಿಮ ಬಂಗಾಳ (30) ನಂತರದ ಸ್ಥಾನಗಳಲ್ಲಿವೆ.

ಮ್ಯಾನ್ಯುವಲ್ ಸ್ಕಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ,2013ರಡಿ ದೇಶದಲ್ಲಿ ಅನಾರೋಗ್ಯಕರ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ಮಲ ಹೊರಲು ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ಪುನರ್ವಸತಿಗೆ ಸಂಬಂಧಿಸಿದಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಲಭ್ಯ ಇತ್ತೀಚಿನ ಮಾಹಿತಿಗಳಂತೆ 2013-14ರಿಂದ ರಾಜ್ಯಗಳಿಂದ ಸಮೀಕ್ಷೆಗಳು ಮತ್ತು 2018-19ರಲ್ಲಿ ರಾಷ್ಟ್ರೀಯ ಸಮೀಕ್ಷೆಯ ಮೂಲಕ 66,000ಕ್ಕೂ ಅಧಿಕ ಮ್ಯಾನ್ಯುವಲ್ ಸ್ಕಾವೆಂಜರ್‌ಗಳನ್ನು ಗುರುತಿಸಲಾಗಿದೆ.

ದೇಶದಲ್ಲಿ ಸುಮಾರು 26 ಲಕ್ಷ ಅನಾರೋಗ್ಯಕರ ಶೌಚಾಲಯಗಳಿದ್ದು,ಈ ಪೈಕಿ ಏಳು ಲಕ್ಷಕ್ಕೂ ಅಧಿಕ ಕಕ್ಕಸುಗುಂಡಿಗಳ ಸ್ವಚ್ಛತೆಗೆ ಮನುಷ್ಯರನ್ನು ಬಳಸಲಾಗುತ್ತಿದೆ ಎಂದು 2011ರ ಜನಗಣತಿಯು ವರದಿ ಮಾಡಿತ್ತು.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಗರ ಪ್ರದೇಶಗಳಲ್ಲಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೊಳಿಸಿರುವ ಸ್ವಚ್ಛ ಭಾರತ ಅಭಿಯಾನದಡಿ ಹೆಚ್ಚಿನ ಅನಾರೋಗ್ಯಕರ ಶೌಚಾಲಯಗಳನ್ನು ನೆಲಸಮಗೊಳಿಸಿ ಸ್ವಚ್ಛ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಆದರೆ ಕೆಲವು ಪ್ರದೇಶಗಳಲ್ಲಿ ಈಗಲೂ ಅನಾರೋಗ್ಯಕರ ಶೌಚಾಲಯಗಳಿರುವುದು ಮತ್ತು ಕೆಲವರನ್ನು ಮ್ಯಾನ್ಯುವಲ್ ಸ್ಕಾವೆಂಜರ್‌ಗಳಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ವರದಿಗಳಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News