ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: ನಾಲ್ವರ ಸಜೀವ ದಹನ

Update: 2021-04-10 03:44 GMT
Photo credit: twitter@ANI

ನಾಗ್ಪುರ, ಎ,10: ಮಹಾರಾಷ್ಟ್ರದ ನಾಗ್ಪುರದ ಕೋವಿಡ್-19 ಚಿಕಿತ್ಸಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇತರ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.

"ಘಟನೆ ಹಿನ್ನೆಲೆಯಲ್ಲಿ 27 ರೋಗಿಗಳನ್ನು ಸುರಕ್ಷಿತವಾಗಿ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯಸ್ಥಿತಿ ಬಗ್ಗೆ ನಾವು ಹೇಳುವಂತಿಲ್ಲ. ಆಸ್ಪತ್ರೆಯನ್ನು ಸಂಪೂರ್ಣ ತೆರವುಗೊಳಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಅವರ ದೇಹಗಳು ಪತ್ತೆಯಾಗಿವೆ. ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವರಿಬ್ಬರ ಸ್ಥಿತಿ ಗಂಭೀರವಾಗಿದೆ. 30 ಹಾಸಿಗೆಗಳ ಸಾಮರ್ಥ್ಯದ ನಾಗ್ಪುರ ವಾಡಿ ಆಸ್ಪತ್ರೆಯಲ್ಲಿ 15 ತೀವ್ರ ನಿಗಾ ಘಟಕದ ಬೆಡ್‌ಗಳಿದ್ದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

"ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಐಸಿಯು ಬಳಿ ಇದ್ದ ಎಸಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಅದೇ ಮಹಡಿಗೆ ಸೀಮಿತವಾಗಿದ್ದು, ಮುಂದೆ ಹರಡಿಲ್ಲ ಎಂದು ನಾಗ್ಪುರ ಪಾಲಿಕೆ ಮುಖ್ಯ ಅಗ್ನಿಶಾಮಕ ಅಧಿಕಾರಿ ರಾಜೇಂದ್ರ ಉಚ್ಕೆ ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News