ಕೊರೋನ ನಿರ್ಮೂಲನೆಗೆ ಏರ್‌ ಪೋರ್ಟ್‌ ನಲ್ಲಿ ʼಪೂಜೆʼ ಕೈಗೊಂಡ ಮಧ್ಯಪ್ರದೇಶ ಸಚಿವೆ

Update: 2021-04-10 07:44 GMT

ಭೋಪಾಲ್‌: ಸದ್ಯ ಕೊರೋನ ವೈರಸ್‌ ಎರಡನೇ ಅಲೆಯು ದೇಶದಲ್ಲಿ ಪ್ರಾರಂಭವಾಗಿದ್ದು, ಹಲವಾರು ಕಟ್ಟೆಚ್ಚರಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಡುವೆ ವಿಮಾನ ನಿಲ್ದಾಣದಲ್ಲಿ ಕೊರೋನ ವೈರಸ್‌ ನಿರ್ಮೂಲನೆಗೆಂದು ವಿಮಾನ ನಿಲ್ದಾಣ ಸಿಬ್ಬಂದಿಗಳೊಂದಿಗೆ ಮಂತ್ರ ಘೋಷಗಳೊಂದಿಗೆ ಪೂಜೆ ಕೈಗೊಂಡ ಮಧ್ಯಪ್ರದೇಶ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಷಾ ಠಾಕೂರ್‌ ಸುದ್ದಿಯಾಗಿದ್ದಾರೆ.

ಇಂಧೋರ್‌ ವಿಮಾನ ನಿಲ್ದಾಣದಲ್ಲಿರುವ ದೇವಿ ಅಹಲ್ಯಾ ಬಾಯಿ ಹೋಲ್ಕರ್‌ ಪ್ರತಿಮೆಯ ಮುಂದುಗಡೆ ಸಚಿವರು ಪೂಜೆ ಮಾಡುತ್ತಿರುವುದು ಕಂಡು ಬಂದಿದೆ. ಇಂಧೋರ್‌ ನ ಮೋವ್‌ ಸೀಟ್‌ ನ ಶಾಸಕಿಯೂ ಆಗಿರುವ ಅವರು ದೇವಿಯ ಪ್ರತಿಮೆಯ ಮುಂಭಾಗದಲ್ಲಿ ಚಪ್ಪಾಳೆ ತಟ್ಟುತ್ತಾ ಭಜನೆ ಹಾಡುತ್ತಿದ್ದು, ಅವರೊಂದಿಗೆ ವಿಮಾನ ನಿಲ್ದಾಣದ ನಿರ್ದೇಶಕ ಆರ್ಯಮಾ ಸನ್ಯಾಸ್‌ ಹಾಗೂ ಇನ್ನಿತರ ಸಿಬ್ಬಂದಿಗಳು ಜೊತೆಯಾಗಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.

ಪೂಜೆಯ ವೇಳೆ ಸಚಿವೆ ಮಾಸ್ಕ್‌ ಧರಿಸಿರಲಿಲ್ಲ ಎಂದು ವರದಿ ತಿಳಿಸಿದ್ದು, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಅವರು ಮಾಸ್ಕ್‌ ಧರಿಸುವುದಿಲ್ಲ ಎನ್ನಲಾಗಿದೆ. ಈ ಹಿಂದೆ Ndtv.com ನೊಂದಿಗೆ ಮಾತನಾಡುವ ವೇಳೆ, "ನಾನು ಮಾಸ್ಕ್‌ ಧರಿಸಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ನಾನು ಪ್ರತಿದಿನವೂ ಹವನ ನಡೆಸುತ್ತೇನೆ ಮತ್ತು ಹನುಮಾನ ಚಾಲೀಸ ಪಠಿಸುತ್ತೇನೆ" ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ.

ಈ ವೇಳೆ "ಸೆಗಣಿಯಿಂದ ಹವನ ಮಾಡಿದರೆ ಮನೆಯನ್ನು 12 ಗಂಟೆಗಳ ಕಾಲ ಶುದ್ಧಿಯಾಗಿರಿಸಬಹುದು" ಎಂದು ಅವರು ಹೇಳಿಕೆ ನೀಡಿದ್ದು ಸಾಮಾಜಿಕ ತಾಣದಾದ್ಯಂತ ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News