“ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ವಿವಿಪ್ಯಾಟ್ 50 ನಿಮಿಷ ಬಳಕೆಯಾಗಿತ್ತು, 15 ಮತಗಳಿದ್ದವು”

Update: 2021-04-10 14:02 GMT

ಚೆನ್ನೈ,ಎ.10: ಬೃಹತ್ ಚೆನ್ನೈ ಮಹಾನಗರ ಪಾಲಿಕೆಯ ಅಧಿಕಾರಿಯೋರ್ವ ಎ.6ರಂದು ಬೈಕ್‌ನಲ್ಲಿ ಸಾಗಿಸುತ್ತಿದ್ದಾಗ ಪತ್ತೆಯಾಗಿದ್ದ ವಿವಿಪ್ಯಾಟ್ ಯಂತ್ರದಲ್ಲಿ 15 ಮತಗಳಿದ್ದವು ಮತ್ತು ಅದನ್ನು ಅಂದು 50 ನಿಮಿಷಗಳ ಕಾಲ ಬಳಸಲಾಗಿತ್ತು ಎಂದು ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಸತ್ಯವ್ರತ ಸಾಹೂ ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮತ್ತು ಡಿಎಂಕೆ,ಈ ಇವಿಎಂ ಬಳಕೆಯಾಗಿದ್ದ ಮತಗಟ್ಟೆಯಲ್ಲಿ ಮರುಚುನಾವಣೆಗೆ ಆಗ್ರಹಿಸಿದ್ದವು. ಘಟನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯು ತನ್ನ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿದೆ.

ಬೈಕ್‌ನಲ್ಲಿ ಎರಡು ಇವಿಎಂಗಳು,ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಯಂತ್ರದ ಸಾಗಾಣಿಕೆಯು ಚುನಾವಣಾ ನಿಯಮಗಳ ಉಲ್ಲಂಘನೆಯಾಗಿದ್ದು,ಈ ಬಗ್ಗೆ ಕ್ರಮಕ್ಕಾಗಿ ವರದಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ ಸಾಹೂ,ಈ ಪೈಕಿ ವಿವಿಪ್ಯಾಟ್ ಯಂತ್ರವು ಮಾತ್ರ ಮತದಾನಕ್ಕೆ ಬಳಕೆಯಾಗಿತ್ತು ಮತ್ತು ಅದರಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ 15 ಮತಗಳ ಚಲಾವಣೆಯ ಬಳಿಕ ಅದನ್ನು ಬಳಸಲಾಗಿರಲಿಲ್ಲ ಎಂದರು.

ಚೆನ್ನೈನ ವೆಳಚೇರಿಯಲ್ಲಿ ಮತದಾನದ ನಂತರ ಈ ಘಟನೆ ನಡೆದಿದ್ದು,ಇದನ್ನು ವಿವಿಧ ರಾಜಕೀಯ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.

ಇವಿಎಂಗಳನ್ನು ಮತದಾನಕ್ಕೆ ಬಳಸಲಾಗಿರಲಿಲ್ಲ ಮತ್ತು ಯಂತ್ರಗಳು ವೆಳಚೇರಿಯ ಡಿಎವಿ ಸ್ಕೂಲ್ ಮತಗಟ್ಟೆಗೆ ಸೇರಿದ್ದಾಗಿದ್ದವು ಎನ್ನುವುದು ಜಿಲ್ಲಾ ಚುನಾವಣಾಧಿಕಾರಿಗಳು ನಡೆಸಿದ್ದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಮತದಾನ ಯಂತ್ರಗಳನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸುವುದು ಚುನಾವಣಾ ನಿಯಮಗಳ ಉಲ್ಲಂಘನೆಯಾಗಿರುವುದರಿಂದ ಚುನಾವಣಾ ಆಯೋಗಕ್ಕೆ ವರದಿಯನ್ನು ಕಳುಹಿಸಲಾಗಿದೆ ಎಂದ ಸಾಹೂ,ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.

ಚುನಾವಣಾ ಆಯೋಗವು ತನಗೆ ಸಲ್ಲಿಸಲಾಗಿರುವ ಮತಗಟ್ಟೆ ದಾಖಲೆಗಳು ಮತ್ತು ಮತದಾನದ ಲೆಕ್ಕವನ್ನು ಪರಿಶೀಲಿಸಲಿದೆ,ವ್ಯತ್ಯಾಸ ಕಂಡುಬಂದರೆ ಮತಗಟ್ಟೆಯಲ್ಲಿ ಮರುಮತದಾನಕ್ಕೆ ಆದೇಶಿಸುತ್ತದೆ ಎಂದೂ ಸಾಹೂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News