ವೇಗದ ಯುರೇನಿಯಮ್ ಸಂವರ್ಧನೆಗಾಗಿ ಸುಧಾರಿತ ಸೆಂಟ್ರಿಫ್ಯೂಜ್‌ಗಳ ಬಳಕೆ ಆರಂಭ

Update: 2021-04-10 16:46 GMT

 ಟೆಹರಾನ್ (ಇರಾನ್), ಎ. 10: ಯುರೇನಿಯಮನ್ನು ಕ್ಷಿಪ್ರವಾಗಿ ಸಂವರ್ಧಿಸುವ ಸುಧಾರಿತ ಸೆಂಟ್ರಿಫ್ಯೂಜ್‌ಗಳ ಬಳಕೆಯನ್ನು ತಾನು ಆರಂಭಿಸಿರುವುದಾಗಿ ಇರಾನ್ ಶನಿವಾರ ಘೋಷಿಸಿದೆ. ಇದರೊಂದಿಗೆ ಅದು 2015ರ ಪರಮಾಣು ಒಪ್ಪಂದದಡಿ ತಾನು ನಿಭಾಯಿಸಬೇಕಾಗಿದ್ದ ಇನ್ನೊಂದು ಬದ್ಧತೆಯನ್ನು ಉಲ್ಲಂಘಿಸಿದಂತಾಗಿದೆ.

ಇರಾನ್ ಅಧ್ಯಕ್ಷ ಹಸನ್ ರೂಹಾನಿ, ನತಾಂಝ್ ಯುರೇನಿಯಮ್ ಸಂವರ್ಧನೆ ಸ್ಥಾವರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ 164 ಐಆರ್-6 ಸೆಂಟ್ರಿಫ್ಯೂಜ್ ಕ್ಯಾಸ್ಕೇಡ್‌ಗಳು ಮತ್ತು 30 ಐಆರ್-5 ಸೆಂಟ್ರಿಫ್ಯೂಜ್ ಕ್ಯಾಸ್ಕೇಡ್‌ಗಳ ಬಳಕೆಗೆ ಅಧಿಕೃತ ಚಾಲನೆ ನೀಡಿದರು ಎಂದು ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

ಆದರೆ, ಕ್ಯಾಸ್ಕೇಡ್‌ಗಳ ಚಿತ್ರಗಳನ್ನು ಟೆಲಿವಿಶನ್ ಪ್ರಸಾರ ಮಾಡಿಲ್ಲ. ಆದರೆ, ರೂಹಾನಿಯಿಂದ ಆದೇಶ ಪಡೆದ ಬಳಿಕ ತಾವು ಹೆಕ್ಸಾಫ್ಲೋರೈಡ್ ಅನಿಲವನ್ನು ಕ್ಯಾಸ್ಕೇಡ್‌ಗಳಿಗೆ ಸಂಪರ್ಕಿಸಿರುವುದಾಗಿ ಸ್ಥಾವರಲ್ಲಿ ಇಂಜಿನಿಯರ್‌ಗಳು ಹೇಳುವ ದೃಶ್ಯವೊಂದನ್ನು ಅದು ಪ್ರಸಾರ ಮಾಡಲಿದೆ.

ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸುವುದು ಮತ್ತು ಪರಮಾಣು ಒಪ್ಪಂದದ ಅಂಶಗಳಿಗೆ ಇರಾನ್ ಬದ್ಧವಾಗಿರುವಂತೆ ಮಾಡುವುದು ಮುಂತಾದ ವಿಷಯಗಳ ಬಗ್ಗೆ ಇರಾನ್ ಸೇರಿದಂತೆ ಒಪ್ಪಂದಕ್ಕೆ ಸಹಿ ಹಾಕಿರುವ ಏಳು ದೇಶಗಳ ನಡುವೆ ವಿಯೆನ್ನಾದಲ್ಲಿ ಮಾತುಕತೆಗಳು ನಡೆಯುತ್ತಿರುವ ಹಂತದಲ್ಲೇ ಇರಾನ್ ಈ ಕ್ರಮಕ್ಕೆ ಮುಂದಾಗಿರುವುದು ಗಮನಾರ್ಹವಾಗಿದೆ.

ಪರಮಾಣು ಒಪ್ಪಂದಕ್ಕೆ ಇರಾನ್, ಅಮೆರಿಕ, ರಶ್ಯ, ಚೀನಾ, ಬ್ರಿಟನ್, ಫ್ರಾನ್ಸ್, ಜರ್ಮನಿ ದೇಶಗಳು 2015ರಲ್ಲಿ ಸಹಿ ಹಾಕಿವೆ.

 ಐಆರ್-5 ಮತ್ತು ಐಆರ್-6 ಸೆಂಟ್ರಿಫ್ಯೂಜ್‌ಗಳ ಮೂಲಕ ಯುರೇನಿಯಮನ್ನು ಇರಾನ್‌ನ ಮೊದಲ ತಲೆಮಾರಿನ ಸೆಂಟ್ರಿಫ್ಯೂಜ್‌ಗಳಿಗಿಂತ ವೇಗವಾಗಿ ಸಂವರ್ಧನೆಗೊಳಿಸಬಹುದಾಗಿದೆ. ಆದರೆ, 2015ರ ಪರಮಾಣು ಒಪ್ಪಂದವು ಇರಾನ್ ಮೊದಲ ತಲೆಮಾರಿನ ಸೆಂಟ್ರಿಫ್ಯೂಜ್‌ಗಳನ್ನು ಮಾತ್ರ ಬಳಸಬೇಕು ಎಂದು ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News