ಶೈಕ್ಷಣಿಕ ಪ್ರಗತಿಗೆ 50.25 ಲಕ್ಷ ರೂ. ವಿದ್ಯಾರ್ಥಿ ವೇತನ ಬಿಡುಗಡೆ

Update: 2021-04-11 18:32 GMT

ಬೆಂಗಳೂರು, ಎ.11: ಎಂಬಿಬಿಎಸ್, ಇಂಜಿನಿಯರಿಂಗ್, ಬಿ.ಇಡಿ, ಕಾನೂನು ಸೇರಿದಂತೆ ವಿವಿಧ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕೆ 50.25 ಲಕ್ಷ ರೂ.ಗಳನ್ನು ಡ್ಯಾನಿಷ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ಬಿಡುಗಡೆ ಮಾಡಲಾಯಿತು.

ರವಿವಾರ ನಗರದ ಡ್ಯಾನಿಷ್ ಎಜುಕೇಶನಲ್ ಟ್ರಸ್ಟ್ ಕಚೇರಿಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನ 195ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 50.25 ಲಕ್ಷರೂ. ವಾರ್ಷಿಕ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಟ್ರಸ್ಟ್ ಸಂಸ್ಥಾಪಕಿ ಹುಸ್ನಾ ಝೀಯಾವುಲ್ಲಾ ಶರೀಫ್, ಪ್ರಸ್ತುತ ಸಾಲಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ 45 ವಿದ್ಯಾರ್ಥಿಗಳಿಗೆ ತಲಾ 35 ಸಾವಿರ ರೂ., ಇಂಜಿನಿಯರಿಂಗ್‍ನ 62 ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂ., ಪದವಿ ವ್ಯಾಸಂಗದ 11 ವಿದ್ಯಾರ್ಥಿಗಳಿಗೆ ತಲಾ 30 ಸಾವಿರ ರೂ., ಬಿ.ಇಡಿ ಕೋರ್ಸಿನ 43 ವಿದ್ಯಾರ್ಥಿಗಳಿಗೆ 15 ಸಾವಿರ ರೂ., ವಿದೇಶದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿರುವ ಓರ್ವ ವಿದ್ಯಾರ್ಥಿಗೆ 1 ಲಕ್ಷ ರೂ., ಸೇರಿದಂತೆ ವಿವಿಧ ಕೋರ್ಸ್‍ಗಳ 195 ವಿದ್ಯಾರ್ಥಿಗಳಿಗೆ 50.25 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ವ್ಯಾಪ್ತಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕಾರಣದಿಂದಾಗಿ 2006ನೇ ಸಾಲಿನಲ್ಲಿ ಡ್ಯಾನಿಷ್ ಎಜುಕೇಶನಲ್ ಟ್ರಸ್ಟ್ ಸ್ಥಾಪಿಸಲಾಗಿದ್ದು, ಅಂದಿನಿಂದ ಇದುವರೆಗೂ ಸಾವಿರಾರು ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಶಿಷ್ಯವೇತನ ವಿತರಣೆ ಮಾಡುತ್ತಿದೆ. ಈ ಹಣವನ್ನು ಪಾಲಕರು ದುರುಪಯೋಗ ಮಾಡಿಕೊಳ್ಳದೆ ತಮ್ಮ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದ ಅವರು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮತ್ತಷ್ಟು ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಲು ಉದ್ದೇಶಿಸಲಾಗಿದೆ. ಜತೆಗೆ ಈ ಬಾರಿ ಕೋವಿಡ್ ಕಾರಣದಿಂದಾಗಿ ಚೆಕ್‍ಗಳನ್ನು ವಿತರಣೆ ಮಾಡದೆ, ಎಲ್ಲ ವಿದ್ಯಾರ್ಥಿಗಳ ಬ್ಯಾಂಕಿನ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದರು.

ಉದ್ಯಮಿಯೂ ಆದ ಉರ್ದು ಕವಿ ಝೀಯಾವುಲ್ಲಾ ಶರೀಫ್ ಮಾತನಾಡಿ, ದೇಶದ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಆದ್ಯಕರ್ತವ್ಯ. ಸರಕಾರದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್‍ನ ಹೀನಾ ಅಹ್ಮದ್, ಸಿಗ್ಮಾ ಫೌಂಡೇಶನ್ ಅಧ್ಯಕ್ಷ ಅಮೀನ್ ಮುದಸ್ಸರ್, ತನ್ವೀರ್ ಅಹ್ಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News