ಸಚಿವರನ್ನು ಸ್ವಾಗತಿಸುವಲ್ಲಿ ನಿರತರಾದ ಆಸ್ಪತ್ರೆ ಅಧಿಕಾರಿಗಳು: ಕೋವಿಡ್‌ ನಿಂದ ಮೃತಪಟ್ಟ ಮಾಜಿ ಯೋಧ

Update: 2021-04-14 11:22 GMT
photo: Ndtv

ಪಾಟ್ನಾ: ಕೋವಿಡ್‌ ನಿಂದ ಬಳಲುತ್ತಿದ್ದ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಮಾಜಿ ಯೋಧ ಯಾವುದೇ ಚಿಕಿತ್ಸೆ ಲಭ್ಯವಾದೇ ಮೃತಪಟ್ಟ ಘಟನೆ ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆದಿದೆ. ರಾಜ್ಯ ಆರೋಗ್ಯ ಸಚಿವ ಮಂಗಲ್‌ ಪಾಂಡೆ ಆಸ್ಪತ್ರೆಗೆ ಭೇಟಿ ನೀಡುವುದರ ಕುರಿತಾದಂತೆ ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಈ ವೇಳೆ ಕರೆತಂದ ವಾಹನದಲ್ಲೇ ಮಾಜಿ ಯೋಧ ವಿನೋದ್‌ ಸಿಂಗ್‌ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ವಿನಂತಿಸಿದರೂ, ಅಧಿಕಾರಿಗಳು ದಾಖಲಿಸಿಕೊಳ್ಳಲು ನಿರಾಕರಿಸಿದರು ಎಂದು ವರದಿ ಉಲ್ಲೇಖಿಸಿದೆ.

"ನನ್ನ ತಂದೆಗೆ ಕೋವಿಡ್‌ ಪಾಸಿಟಿವ್‌ ಆಗಿತ್ತು. ಎಲ್ಲಾ ಆಸ್ಪತ್ರೆಗಳೂ ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದವು. ಎನ್‌ʼಎಂಸಿಎಚ್‌ ಆಸ್ಪತ್ರೆ ದಾಖಲಿಸಿಕೊಳ್ಳಲು ಮುಂದಾಯಿತು ಹಾಗೂ ಆಸ್ಪತ್ರೆಯ ಹೊರಗಡೆಯೇ ನಮ್ಮನ್ನು ಒಂದೂವರೆ ಗಂಟೆಗಳಿಗೂ ಹೆಚ್ಚು ಕಾಯಿಸಿದರು ಎಂದು ವಿನೋದ್‌ ಸಿಂಗ್‌ ರ ಪುತ್ರ ಹೇಳಿಕೆ ನೀಡಿದ್ದಾಗಿ ANI ವರದಿ ಮಾಡಿದೆ.

ಸೋಮವಾರ ಸಂಜೆ ಅವರನ್ನು ಪಾಟ್ನಾಗೆ ಕರೆ ತರಲಾಗಿತ್ತು. ಈ ವೇಳೆ ಅವರನ್ನು ಏಮ್ಸ್‌ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಕರೆದೊಯ್ದಾಗ ಅವರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಆಸ್ಪತ್ರೆಯಲ್ಲಿ ಬೆಡ್‌ ಗಳಿಲ್ಲ ಎಂದು ವೈದ್ಯರು ಹೇಳಿದರು. ಅಲ್ಲಿಂದ ನಾವು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದೆವು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಅವರನ್ನು ನಲಂದ ಮೆಡಿಕಲ್‌ ಕಾಲೇಜಿಗೆ ಕರೆದುಕೊಂಡು ಹೋದಾಗ ಎಲ್ಲರೂ ಆರೋಗ್ಯ ಸಚಿವರನ್ನು ಸ್ವಾಗತಿಸುವಲ್ಲಿ ನಿರತರಾಗಿದ್ದರು" ಎಂದು ವಿನೋದ್‌ ಸಿಂಗ್‌ ಪುತ್ರ ಅಭಿಮನ್ಯು ಕುಮಾರ್‌ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News