ಅಶೋಕ ವಿ.ವಿ.ಯ ಘಟನೆ ಒಂದು ಸಣ್ಣ ಉದಾಹರಣೆಯಷ್ಟೇ..!

Update: 2021-04-14 19:30 GMT

ಕೆಲವು ಬಾರಿ ವಿಶ್ವವಿದ್ಯಾನಿಲಯಗಳು ತಮ್ಮ ಸಂಶೋಧನೆಯಿಂದ ಸುದ್ದಿ ಮಾಡಿದರೆ, ಹೆಚ್ಚಿನ ಬಾರಿ ದೇಶದ ವಿಶ್ವವಿದ್ಯಾನಿಲಯಗಳು ಇತರ ವಿಷಯಗಳಿಗೆ ಸದ್ದು ಮಾಡುವುದೇ ಹೆಚ್ಚು. ವಿಶ್ವವಿದ್ಯಾನಿಲಯಗಳು ಎಂದರೆ ಅವುಗಳನ್ನು ಸಂಕ್ಷಿಪ್ತವಾಗಿ ನಗರ ಪ್ರದೇಶದ ಬುದ್ಧಿವಂತರುಗಳ ಸಂಗಮ ಎಂದು ಕರೆಯಲಾಗುತ್ತದೆ. ಇಡೀ ವಿಶ್ವಕ್ಕೆ ಭಾರತ ಮೊದಲ ಬಾರಿಗೆ ವಿಶ್ವವಿದ್ಯಾನಿಲಯ ಎಂಬ ಪರಿಕಲ್ಪನೆ ನೀಡಿದ್ದರೂ ಭಾರತೀಯ ವಿಶ್ವವಿದ್ಯಾನಿಲಯಗಳ ಸಂಶೋಧನಾ ಕೊಡುಗೆ ತೀರಾ ಅತ್ಯಲ್ಪ. ಹಾಗಾಗಿ ಭಾರತದ ಯಾವುದೇ ವಿಶ್ವವಿದ್ಯಾನಿಲಯಗಳು ಜಾಗತಿಕ ಮಟ್ಟದ ರ್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆದ ಉದಾಹರಣೆ ಕಡಿಮೆ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಭಾರತೀಯ ವಿವಿಗಳಲ್ಲಿ ಸಂಶೋಧನೆ ನಡೆಯದಿರುವುದು, ಸರಕಾರದ ಅನುದಾನದ ಕೊರತೆ, ಉತ್ತಮ ಮಾನವ ಸಂಪನ್ಮೂಲದ ಸಮಸ್ಯೆ, ಜಾತೀಯತೆ, ಬಂಡವಾಳಶಾಹಿ ಇತ್ಯಾದಿ. ಇದರೊಂದಿಗೆ ರಾಜಕೀಯ ಪಕ್ಷಗಳ ಸಿದ್ಧಾಂತಗಳನ್ನು ಬೆಂಬಲಿಸದ ವಿವಿಗಳ ಅನುದಾನವನ್ನೇ ನಿಲ್ಲಿಸಿರುವ ಅಥವಾ ಪರೋಕ್ಷವಾಗಿ ವಿವಿಯಲ್ಲಿ ಗೊಂದಲವನ್ನು ಉಂಟುಮಾಡಿಸುವ ಉದಾಹರಣೆಗಳು ಸಹ ನಮ್ಮಲ್ಲಿ ಸಾಕಷ್ಟಿವೆ.

ಹರ್ಯಾಣದ ಅಶೋಕ ವಿಶ್ವವಿದ್ಯಾನಿಲಯ ಒಂದು ಖಾಸಗಿ ವಿಶ್ವವಿದ್ಯಾನಿಲಯ. ಈ ವಿಶ್ವವಿದ್ಯಾನಿಲಯ ಇತ್ತೀಚೆಗೆ ಬಹಳ ಸುದ್ದಿಯಲ್ಲಿದೆ. ಅದರಲ್ಲಿನ ಇಬ್ಬರು ಪ್ರಮುಖ ಪ್ರಾಧ್ಯಾಪಕರು ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಸ್ವಾಯತ್ತತೆ ಮತ್ತು ಬೌದ್ಧಿಕ ಸ್ವಾತಂತ್ರ್ಯಕ್ಕೆ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಹಾಕಿದ ನಿರಂತರ ಅಡ್ಡಗಾಲು ಮತ್ತು ಪರೋಕ್ಷವಾಗಿ ಶೈಕ್ಷಣಿಕ ಚಿಂತನೆಗಳನ್ನು ನಿಯಂತ್ರಿಸಲು ವಿವಿ ತಂದ ಹಲವಾರು ತಲೆಬುಡವಿಲ್ಲದ ನಿಯಮಗಳು ಮತ್ತು ಪ್ರಮುಖ ಕಾರಣಗಳನ್ನು ಕೊಟ್ಟು ರಾಜಕೀಯ ಪ್ರಾಧ್ಯಾಪಕರಾದ ಪ್ರತಾಪ್ ಬಾನು ಮೆಹ್ತಾ ಮತ್ತು ಆರ್ಥಿಕ ತಜ್ಞ ಅರವಿಂದ ಸುಬ್ರಹ್ಮಣ್ಯನ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಭಾರತೀಯ ಉನ್ನತ ಶಿಕ್ಷಣದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಪ್ರೊಫೆಸರ್ ಮೆಹ್ತಾರವರು ‘‘ನಾನು ಆ ವಿಶ್ವವಿದ್ಯಾನಿಲಯಕ್ಕೆ ಒಂದು ರೀತಿಯಲ್ಲಿ ರಾಜಕೀಯ ಭಾರವಾಗಿದ್ದೆ’’ (ಪೊಲಿಟಿಕಲ್ ಲಯೆಬಿಲಿಟಿ) ಎಂಬುದನ್ನು ಒತ್ತಿ ಹೇಳುತ್ತಾರೆ. ಕೆಲವು ಮೂಲಗಳ ಪ್ರಕಾರ ಪ್ರೊಫೆಸರ್ ಮೆಹ್ತಾ ಅವರನ್ನು ವಜಾಗೊಳಿಸದಿದ್ದಲ್ಲಿ ‘ಅಶೋಕ ವಿಶ್ವವಿದ್ಯಾನಿಲಯ ಹೊಸ ಕಟ್ಟಡಗಳನ್ನು ಕಟ್ಟಲು ಗುರುತಿಸಿದ್ದ ಭೂಮಿಯನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವುದಿಲ್ಲ, ಅಲ್ಲದೆ ಆ ಕೋಟಿಗಟ್ಟಲೆ ಬೆಲೆ ಬಾಳುವ ಭೂಮಿ ವಿವಿಯ ಕೈತಪ್ಪಿಹೋಗುತ್ತದೆ’ ಎಂದು ಬಹಳ ರಾಜಕೀಯ ಒತ್ತಡ ಇತ್ತು ಎನ್ನಲಾಗುತ್ತಿದೆ.

ಇತ್ತೀಚಿನ ದಶಕದಲ್ಲಿ ಭಾರತದ ಉನ್ನತ ಶಿಕ್ಷಣದಲ್ಲಿ ಅದರಲ್ಲೂ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಶೈಕ್ಷಣಿಕ ಸ್ವಾಯತ್ತತೆ ಮತ್ತು ಚಿಂತನಾ ಸ್ವಾತಂತ್ರ್ಯದ ಕುರಿತು ಹಲವಾರು ಅನುಮಾನಗಳು ಮೂಡುತ್ತಿವೆ. ಅದರಲ್ಲೂ ಉನ್ನತ ಶಿಕ್ಷಣ ಖಾಸಗೀಕರಣಗೊಂಡ ನಂತರ ಡೀಮ್ಡ್ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗುತ್ತಿದ್ದಂತೆ ಶೈಕ್ಷಣಿಕ ಸ್ವಾತಂತ್ರ್ಯ ಕುಂಟಲಾರಂಭಿಸಿತು. ಏಕೆಂದರೆ ಇಂದು ಭಾರತದ ನೂರಕ್ಕೆ 95 ಶೇಕಡಾ ವಿಶ್ವವಿದ್ಯಾನಿಲಯಗಳು ಪರೋಕ್ಷವಾಗಿ ಅಥವಾ ನೇರವಾಗಿ ಒಂದಲ್ಲ ಒಂದು ರಾಜಕೀಯ ಪಕ್ಷಗಳೊಂದಿಗೆ ಅಥವಾ ಚಿಂತನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಇದರ ಹಿನ್ನೆಲೆಯಲ್ಲಿ ಅಲ್ಲಿನ ಅಧ್ಯಾಪಕರಿಗೆ ಸರಕಾರದ ನೀತಿ ನಿಯಮಗಳ ಕುರಿತು ಮುಕ್ತವಾಗಿ ಚಿಂತಿಸಲು ಮತ್ತು ಚರ್ಚಿಸಲು ಅವಕಾಶಗಳು ತುಂಬಾ ಕಡಿಮೆ ಇರುತ್ತವೆ.

ಸರಕಾರಿ ವಿವಿಗಳಲ್ಲಿ ನಿಯಮಾವಳಿಗಳ ಹೆಸರಿನಲ್ಲಿ ಮುಕ್ತ ಶೈಕ್ಷಣಿಕ ಚಿಂತನೆಗೆ ಬೇಲಿ ಹಾಕಿದ್ದರೆ, ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತ ಮಂಡಳಿ ತನ್ನ ಅಧಿಕಾರವನ್ನು ನಿರ್ದಯವಾಗಿ ಚಲಾಯಿಸಿ ಅಧ್ಯಾಪಕರ ಶೈಕ್ಷಣಿಕ ಸ್ವಾತಂತ್ರ್ಯವನ್ನು ನುಂಗಿ ಹಾಕುತ್ತದೆ. ಅಶೋಕದಲ್ಲಿ ಏನಾಗಿದೆ ಎಂಬುದು ನಮಗೆ ಒಂದು ಪ್ರಮುಖ ಪಾಠವನ್ನು ನೀಡುತ್ತದೆ. ಅದು ಶೈಕ್ಷಣಿಕ ಸ್ವಾತಂತ್ರ್ಯವನ್ನು ಖಾಸಗಿ ಬಂಡವಾಳದ ಗೋಡೆಗಳಿಂದ ಕಾಪಾಡುವುದು ಅಷ್ಟು ಸುಲಭವಲ್ಲ ಮತ್ತು ಸರ್ವಾಧಿಕಾರವಾದದ ದಬ್ಬಾಳಿಕೆಯ ಅಡಿಯಲ್ಲಿ ಬೌದ್ಧಿಕ ಸ್ವಾತಂತ್ರ್ಯ ಮತ್ತು ಮುಕ್ತ ಮನೋಭಾವವನ್ನು ಪ್ರಾಧ್ಯಾಪಕರು ಯಾವ ಕಾರಣಕ್ಕೂ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿದೆ. ಇದರಿಂದ ಸೃಜನಶೀಲತೆ ಮತ್ತು ನಾವೀನ್ಯತೆ ಎರಡೂ ಇಂದು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಇಲ್ಲದಂತಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಜಾತಿರಹಿತ ಚಿಂತನೆಗಳು ಮುಕ್ತವಾಗಿ ಹರಿದಾಡುವುದು ತೀರಾ ಅಪರೂಪವಾಗಿ ಬಿಟ್ಟಿದೆ. ಕೆಲ ವರ್ಷಗಳ ಹಿಂದೆ ಇತಿಹಾಸತಜ್ಞ ರಾಮಚಂದ್ರ ಗುಹಾ ಅಂಬೇಡ್ಕರ್ ವಿವಿಯ ಅಧ್ಯಾಪಕರಾಗಿ ಸೇರಲು ಯತ್ನಿಸಿದಾಗ ಕೆಲವು ಸಂಘಟನೆಗಳು ಅಂದು ತೀವ್ರವಾಗಿ ವಿರೋಧಿಸಿದ್ದವು. ಪ್ರೊಫೆಸರ್‌ರ ರಾಜೀನಾಮೆಯನ್ನು ಇತರ ಶೈಕ್ಷಣಿಕ ತಜ್ಞರು ಭಾರತದ ಉನ್ನತ ಶಿಕ್ಷಣದಲ್ಲಿ ಇದು ಒಂದು ರೀತಿಯ ‘ಅಪಾಯಕಾರಿ ಪ್ರವೃತ್ತಿ’ ಎಂದು ಬಣ್ಣಿಸಿದ್ದಾರೆ. ಅಶೋಕ ವಿವಿಯ ಪ್ರೊಫೆಸರ್ ಮೆಹ್ತಾ ತಮ್ಮ ಪತ್ರದಲ್ಲಿ ಈಗೆ ಬರೆಯುತ್ತಾರೆ.

‘‘ವಿಶ್ವವಿದ್ಯಾನಿಲಯದ ಸಂಸ್ಥಾಪಕರೊಂದಿಗಿನ ನಿರಂತರ ಸಭೆಗಳ ನಂತರ ವಿಶ್ವವಿದ್ಯಾನಿಲಯದೊಂದಿಗಿನ ನನ್ನ ಒಡನಾಟವನ್ನು ರಾಜಕೀಯ ಭಾರ ಎಂದು ವಿವಿಯು ಪರಿಗಣಿಸಿದೆ ಎಂಬುದು ನನಗೆ ಸಾಕಷ್ಟು ಸ್ಪಷ್ಟವಾಗಿದೆ. ಶೈಕ್ಷಣಿಕ ಸ್ವಾತಂತ್ರ್ಯ, ಸಾಂವಿಧಾನಿಕ ಮೌಲ್ಯ ಮತ್ತು ರಾಜಕೀಯ ಸಿದ್ಧಾಂತಗಳನ್ನು ಬೆಂಬಲಿಸುವ ಅಥವಾ ವಿರೋಧಿಸುವ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ. ಇದು ನನ್ನ ವೃತ್ತಿ ಮತ್ತು ಬರವಣಿಗೆಯ ಮೇಲೆ ಹಾಗೂ ಕೊನೆಯದಾಗಿ ವಿಶ್ವವಿದ್ಯಾನಿಲಯಕ್ಕೆ ಅಪಾಯಗಳನ್ನುಂಟು ಮಾಡುತ್ತದೆ. ವಿಶ್ವವಿದ್ಯಾನಿಲಯದ ಹಿತದೃಷ್ಟಿಯಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ.’’ ಖಾಸಗಿ ಉನ್ನತ ಶಿಕ್ಷಣದಲ್ಲಿ ಬೌದ್ಧಿಕ ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎನ್ನುವುದು ಈಗ ಚಿಂತಿಸಬೇಕಾದ ವಿಚಾರ. ಹೆಚ್ಚಿನ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಬೌದ್ಧಿಕ ಸ್ವಾತಂತ್ರಕ್ಕೆ ಸ್ಥಾನವೇ ಇರುವುದಿಲ್ಲ. ಏಕೆಂದರೆ ಅವುಗಳು ಸಂಪೂರ್ಣವಾಗಿ ಸರಕಾರದ ಹತೋಟಿಯಲ್ಲಿರುತ್ತವೆ. ಹಾಗೆ ನೋಡಿದರೆ ಕೆಲವರ ಪ್ರಕಾರ ಖಾಸಗಿ ವಿವಿಗಳಲ್ಲಿ ಒಂದು ಮಟ್ಟಿಗೆ ಬೌದ್ಧಿಕ ಸ್ವಾತಂತ್ರವನ್ನು ಪಡೆಯಲು ಸಾಧ್ಯ. ಆದರೆ ಅಶೋಕದ ಉದಾರಣೆಗೆ ಗಮನಿಸಿದರೆ ಈಗ ಅದು ಕೂಡ ಭಾರತದಲ್ಲಿ ಸಾಧ್ಯವಿಲ್ಲ ಅನಿಸುತ್ತಿದೆ. ಅಶೋಕ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯನ್ನು ಗಮನಿಸಿದರೆ ಹೆಚ್ಚಿನವರು ವ್ಯಾಪಾರಿಗಳೇ. ಅವರಿಗೆ ಸರಕಾರದ ಕೃಪಾಕಟಾಕ್ಷ ಬೇಕಾದರೆ ಅವರಲ್ಲಿನ ಪ್ರಾಧ್ಯಾಪಕರು ಸರಕಾರದ ನೀತಿಗಳ ಪರವಾಗಿಯೇ ಮಾತನಾಡಬೇಕಾಗುತ್ತದೆ ಮತ್ತು ಸರಕಾರಗಳನ್ನು ಟೀಕಿಸಲು ಅವರಿಗೆ ಸಾಧ್ಯವಾಗುವುದಿಲ್ಲ.

ಒಂದೊಮ್ಮೆ ಅಲ್ಲಿನ ಪ್ರಾಧ್ಯಾಪಕರು ತಮ್ಮ ಧ್ವನಿಯನ್ನು ಏರಿಸಿದರೆ ಸರಕಾರದ ಒತ್ತಡಕ್ಕೆ ಆಡಳಿತ ಮಂಡಳಿ ಸಿಲುಕಿ ಅಲ್ಲಿನ ಪ್ರಾಧ್ಯಾಪಕರ ಧ್ವನಿಯನ್ನು ಅಡಗಿಸಲು ಮಂಡಳಿಗಳು ಖಂಡಿತವಾಗಿಯೂ ಪ್ರಯತ್ನ ಪಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಖಾಸಗಿ ವಿವಿಗಳಲ್ಲಿ ಕುಲಪತಿ/ ಉಪಕುಲಪತಿಗಳು ಸಹ ಆಡಳಿತ ಮಂಡಳಿಯ ಕೈಗೊಂಬೆಗಳಾಗಿ ಇರುತ್ತಾರೆ. ಇಲ್ಲಿ ಬೌದ್ಧಿಕ ಸ್ವಾತಂತ್ರ್ಯಕ್ಕಿಂತ ಶೈಕ್ಷಣಿಕ ವ್ಯಾಪಾರವೇ ಮುಖ್ಯವಾಗಿರುತ್ತದೆ. ಸದ್ಯ ಮೇಲ್ಕಂಡ ಇಬ್ಬರು ಪ್ರೊಫೆಸರರು ರಾಜೀನಾಮೆ ನೀಡಲು ನಿಖರವಾದ ಕಾರಣ ತಿಳಿದು ಬರದಿದ್ದರೂ ಅವರ ಧ್ವನಿ ಅಡಗಿಸಲು ಅಶೋಕ ಆಡಳಿತ ಮಂಡಳಿ ಯಾವುದೋ ಸರಕಾರದ ಆಣತಿಯಂತೆ ನಡೆದುಕೊಂಡಿದೆ ಎಂದು ಮೇಲ್ನೋಟಕ್ಕೆ ಖಂಡಿತವಾಗಿಯೂ ಹೇಳಬಹುದು. ಆದರೆ ಅಶೋಕ ವಿವಿಯ ಕುಲಪತಿ ಹೇಳಿಕೆ ಪ್ರಕಾರ ಆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಬೌದ್ಧಿಕ ಸ್ವಾತಂತ್ರ್ಯದಲ್ಲಿ ಆಡಳಿತ ಮಂಡಳಿಯು ಯಾವ ಹಸ್ತಕ್ಷೇಪವನ್ನೂ ಮಾಡಿಲ್ಲ. ಆದರೆ ಅಶೋಕ ವಿವಿಯಲ್ಲಿರುವ ಕೆಲವು ಅವ್ಯವಸ್ಥೆಗಳ ಬಗ್ಗೆ ಮತ್ತು ಇರುವ ಸಮಸ್ಯೆಗಳ ಬಗ್ಗೆ ಕುಲಪತಿಗಳು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ!. ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳ ಪರಿಕಲ್ಪನೆಯೇ ಒಳಗೊಳ್ಳುವಿಕೆಯ ಉನ್ನತ ಶಿಕ್ಷಣ. ಅಂದರೆ ಸರಕಾರವೊಂದೇ ಉನ್ನತ ಶಿಕ್ಷಣವನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ.

ಉನ್ನತ ಶಿಕ್ಷಣವನ್ನು ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೆ ತಲುಪಿಸಲು ಸಾಧ್ಯವಾಗುವಂತೆ ಮಾಡಲೆಂದೇ ಖಾಸಗಿ ವಿಶ್ವವಿದ್ಯಾನಿಲಯಗಳು ಹುಟ್ಟಿಕೊಂಡವು. ಆದರೆ ಅಂಚಿನ ಸಮುದಾಯದ ವಿದ್ಯಾರ್ಥಿಗಳು ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯುವಷ್ಟು ಸುಲಭವಾಗಿ ಖಾಸಗಿ ಅಥವಾ ಡೀಮ್ಡ್ ವಿಶ್ವವಿದ್ಯಾನಿಲಯಗಳಲ್ಲಿ ಪಡೆಯಲು ಸಾಧ್ಯವಿಲ್ಲ. ಇಂತಹ ಹೆಚ್ಚಿನ ವಿವಿಗಳಲ್ಲಿ ಒಂದಕ್ಕೆ ಹತ್ತರಷ್ಟು ಹಣವನ್ನು ವಿದ್ಯಾರ್ಥಿಗಳು ನೀಡಬೇಕು. ಇಲ್ಲಿ ಪ್ರಶ್ನೆ ಬರುವುದು ವಿಶ್ವವಿದ್ಯಾನಿಲಯಗಳ ಖಾಸಗಿ ಅಥವಾ ಸಾರ್ವಜನಿಕ ಎನ್ನುವುದು ಅಲ್ಲ. ಉನ್ನತ ಶಿಕ್ಷಣವು ವಿಶ್ವವಿದ್ಯಾನಿಲಯಗಳ ಮೂಲಕ ಎಷ್ಟರ ಮಟ್ಟಿಗೆ ಒಳಗೊಳ್ಳುವಿಕೆಯನ್ನು ಸಾಧಿಸಿದೆ ಎನ್ನುವುದು ಮುಖ್ಯ. ಎಷ್ಟು ಜನ ಅಂಚಿನ ಸಮುದಾಯಗಳಿಗೆ ವಿಶ್ವವಿದ್ಯಾನಿಲಯಗಳು ಇದುವರೆಗೆ ತಲುಪಿವೆ ಎನ್ನುವುದೇ ಮುಖ್ಯ ಪ್ರಶ್ನೆಯಾಗಬೇಕು. ಎಷ್ಟು ಜನ ಅಂಚಿನ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಹಕ್ಕನ್ನಾಗಿ (ಸರಕಾರಿ ವಿವಿಗಳಂತೆ) ಪರಿಗಣಿಸಲು ಸಾಧ್ಯ? ಎನ್ನುವುದು ಎಲ್ಲದಕ್ಕಿಂತಲೂ ಮುಖ್ಯವಾದ ಪ್ರಶ್ನೆ. ಭಾರತದ ವಿಶ್ವವಿದ್ಯಾನಿಲಯಗಳು ಇಂದು ಅತೀ ಸಂಕೀರ್ಣವಾದ ಮತ್ತು ಸಂಕ್ರಮಣದ ಸ್ಥಿತಿಯಲ್ಲಿವೆ.

ಹೆಚ್ಚಿನ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಅತಿಯಾದ ಸರಕಾರದ ಹಸ್ತಕ್ಷೇಪಕ್ಕೆ, ಜಾತಿ ರಾಜಕಾರಣ ಮತ್ತು ಭ್ರಷ್ಟಾಚಾರಗಳಿಗೆ ನಿರಂತರವಾಗಿ ಬಲಿಯಾಗುತ್ತಿವೆ ಎನ್ನುವ ಆರೋಪವಿದೆ. ಜಿಲ್ಲೆಗೊಂದು, ತಾಲೂಕಿಗೊಂದು ರಾಜಕೀಯ ಮತ್ತು ಬಂಡವಾಳಶಾಹಿಗಳ ತೆವಲುಗಳಿಗೆ ಹುಟ್ಟಿಕೊಂಡಿರುವ ಸರಕಾರಿ ಮತ್ತು ಖಾಸಗಿ ವಿವಿಗಳು ಇಂದು ಹತ್ತು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿವೆ. ಇಂದು ಹೆಚ್ಚಿನ ಖಾಸಗಿ ವಿವಿಗಳು ಕೌಟುಂಬಿಕ ವಿವಿಗಳಾಗಿ ಪರಿವರ್ತನೆ ಹೊಂದಿವೆ. ಕುಲಪತಿ, ಉಪಕುಲಪತಿ, ಕುಲಸಚಿವರು ಮುಂತಾದ ಎಲ್ಲಾ ಹುದ್ದೆಗಳು ಅವರ ಕುಟುಂಬದ ಸದಸ್ಯರ ಹತ್ತಿರವೇ ಇರುತ್ತವೆ! ವಿಶ್ವವಿದ್ಯಾನಿಲಯಗಳು ಕೇವಲ ಹೆಸರಿಗೆ ಮಾತ್ರ ಸ್ವಾಯತ್ತ ಸಂಸ್ಥೆಗಳಾಗಿವೆ. ವಿಶ್ವವಿದ್ಯಾನಿಲಯಗಳು ವಿಶ್ವಮಟ್ಟಕ್ಕೆ ಏರಲು ಅಲ್ಲಿ ಮುಕ್ತವಾದ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳಿಗೆ ಅವಕಾಶವಿರಬೇಕು. ಇಲ್ಲದಿದ್ದಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ಉನ್ನತ ಶಿಕ್ಷಣದ ಅಸ್ಮಿತೆ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದುಕೊಳ್ಳುತ್ತದೆ ಮತ್ತು ‘ವಿಶ್ವಗುರು’ ಎಂಬ ಪರಿಕಲ್ಪನೆಗೆ ಅರ್ಥವೇ ಇರುವುದಿಲ್ಲ. ಇಂದು ಪಟ್ಟಭದ್ರ ಹಿತಾಸಕ್ತಿಗಳಿಂದ ಸಾಂಸ್ಥಿಕ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಮತ್ತೆ ಪಡೆಯಲು ವಿಶ್ವವಿದ್ಯಾನಿಲಯಗಳು ಬಹುದೊಡ್ಡ ಹೋರಾಟವನ್ನು ನಡೆಸಬೇಕಾಗಿದೆ.

ಇಬ್ಬರು ಪ್ರಾಮಾಣಿಕ ಮತ್ತು ಬುದ್ಧಿವಂತ ಪ್ರೊಫೆಸರ್‌ಗಳ ನಿರ್ಗಮನದ ಕುರಿತು ಅಶೋಕ ವಿವಿಯ ವಿದ್ಯಾರ್ಥಿಗಳು ಕಾರ್ಲ್‌ಮಾರ್ಕ್ಸ್ ಫೋಟೊಗಳನ್ನು ಹಿಡಿದುಕೊಂಡು ಮುಷ್ಕರವನ್ನು ಕೂಡಾ ನಡೆಸಿದ್ದಾರೆ. ಇದರ ಮೂಲಕ ಮುಂದೆ ತಾವು ಯಾವುದಾದರೂ ವಿವಿಯಲ್ಲಿ ವೃತ್ತಿಯನ್ನು ಕೈಗೊಂಡಾಗ ತಾವು ಅನುಭವಿಸಬಹುದಾದ ಸಮಸ್ಯೆಗಳನ್ನು ಕುರಿತು ಮತ್ತು ಯಾವುದೇ ಪೂರ್ವಭಾವಿ ಷರತ್ತು ಇಲ್ಲದ ಬೌದ್ಧಿಕ ಸ್ವಾತಂತ್ರ್ಯದ ಮಹತ್ವವು ಉನ್ನತ ಶಿಕ್ಷಣದಲ್ಲಿ ಎಷ್ಟು ಮುಖ್ಯ ಎನ್ನುವುದು ವಿದ್ಯಾರ್ಥಿಗಳ ತಿಳುವಳಿಕೆಗೆ ಈ ಘಟನೆಯಿಂದ ಈಗಾಗಲೇ ತಿಳಿದಿರುತ್ತದೆ. ಇವರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯೊಂದಿಗೆ ಮುಕ್ತ ಚರ್ಚೆಗೆ ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ, ಹಾರ್ವರ್ಡ್ ವಿಶ್ವವಿದ್ಯಾನಿಲಯ ಪ್ರಕಟಿತ ‘ಹಣ ಯಾವುದನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ?’ ಎಂಬ ಪುಸ್ತಕವನ್ನು ಎಲ್ಲಾ ವಿವಿಯ ಪಠ್ಯಕ್ರಮವನ್ನಾಗಿ ಮಾಡುವ ಸಮಯ ಇದೀಗ ಬಂದೊದಗಿದೆ.

Writer - ಡಾ. ಡಿ. ಸಿ.ನಂಜುಂಡ

contributor

Editor - ಡಾ. ಡಿ. ಸಿ.ನಂಜುಂಡ

contributor

Similar News