ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ಹಾರಾಟ, ಕನಿಷ್ಠ 8 ಜನರು ಮೃತ್ಯು, ಬಂದೂಕುಧಾರಿ ಆತ್ಮಹತ್ಯೆ

Update: 2021-04-16 16:09 GMT

ವಾಶಿಂಗ್ಟನ್, ಎ. 16: ಅಮೆರಿಕದ ಇಂಡಿಯಾನಪೊಲಿಸ್ ನಗರದಲ್ಲಿ ನಡೆದ ಗುಂಡು ಹಾರಾಟದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಬಂದೂಕುಧಾರಿಯು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು ಎಂಬುದಾಗಿ ಭಾವಿಸಲಾಗಿದೆ.

ಫೆಡೆಕ್ಸ್ ಎಂಬ ಕಂಪೆನಿಯಲ್ಲಿ ಗುರುವಾರ ತಡ ರಾತ್ರಿ ಗುಂಡಿನ ದಾಳಿ ನಡೆಯಿತು ಎಂದು ಪೊಲೀಸ್ ವಕ್ತಾರೆ ಜೆನೀ ಕುಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ಹಲವಾರು ಮಂದಿ ಈಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಅವರ ಪೈಕಿ ಕನಿಷ್ಠ ಓರ್ವ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದೆ ಎಂದರು.

‘‘ಸಬ್ ಮಶೀನ್ ಗನ್ ಹಿಡಿದುಕೊಂಡ ವ್ಯಕ್ತಿಯೊಬ್ಬನು ಮನಬಂದಂತೆ ಗುಂಡು ಹಾರಿಸುವುದನ್ನು ನಾನು ನೋಡಿದೆ. 10ಕ್ಕೂ ಅಧಿಕ ಗುಂಡಿನ ಸದ್ದು ನನಗೆ ಕೇಳಿತು’’ ಎಂದು ಕಂಪೆನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದರು.

ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಗುಂಡಿನ ದಾಳಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಪೊಲೀಸ್ ವಕ್ತಾರೆ ತಿಳಿಸಿದರು. ಬಂದೂಕುಧಾರಿಯು ತನಗೆ ತಾನೇ ಗುಂಡು ಹಾರಿಸಿಕೊಂಡು ಸತ್ತಿರಬಹುದು ಎಂದು ಪೊಲೀಸ್ ಇಲಾಖೆ ಭಾವಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News