ತಮಿಳು ನಟ ವಿವೇಕ್‌ ನಿಧನಕ್ಕೆ ರಜಿನಿಕಾಂತ್‌, ಕಮಲಹಾಸನ್ ಸೇರಿದಂತೆ ಹಲವು ದಿಗ್ಗಜರ ಸಂತಾಪ

Update: 2021-04-17 07:13 GMT
photo: twitter

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ವಿವೇಕ್‌ (೫೯) ಹೃದಯಾಘಾತದ ಕಾರಣದಿಂದ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ತಮಿಳು ಚಿತ್ರರಂಗದ ಅತ್ಯಂತ ಪ್ರೀತಿಪಾತ್ರ ನಟರಾಗಿದ್ದ ವಿವೇಕ್‌ ಹಲವಾರು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮತ್ತು ಅಭಿಮಾನಿಗಳನ್ನು ರಂಜಿಸಿದ್ದಾರೆ. ನಿನ್ನೆ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರಾವಸ್ಥೆಯಲ್ಲಿದ್ದ ಅವರಿಗೆ ಹಲವಾರು ಹೃದಯ ಸಂಬಂಧಿ ಚಿಕಿತ್ಸೆಗಳನ್ನು ನಡೆಸಿದರೂ ಅದು ಫಲಕಾರಿಯಾಗಿರಲಿಲ್ಲ.‌

ಕುತೂಹಲಕಾರಿ ವಿಚಾರವೇನೆಂದರೆ, ಅವರು ತಮ್ಮ ನಟನಾ ಕರ್ತವ್ಯದ ಜೊತೆಗೆ ಪರಿಸರ ಸಂರಕ್ಷಣೆಯ ಕಾರ್ಯವನ್ನೂ ಮಾಡುತ್ತಿದ್ದರು. ಹಲವು ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುತ್ತಿದ್ದು, ಒಟ್ಟು 33.23 ಲಕ್ಷ ಗಿಡಗಳನ್ನು ನೆಟ್ಟಿರುವುದಾಗಿ ಸ್ವತಃ ವಿವೇಕ್‌ ರವರು ತಮ್ಮ ಟ್ವಿಟರ್‌ ನಲ್ಲಿ ಉಲ್ಲೇಖಿಸಿದ್ದರು. 2009ರಲ್ಲಿ ಒಟ್ಟು ಒಂದು ಕೋಟಿ ಗಿಡಗಳನ್ನು ನೆಡುವಂತೆ ಅಬ್ದುಲ್‌ ಕಲಾಂ ಹೇಳಿದ್ದರೆನ್ನಲಾಗಿದೆ. ಅಂದಿನಿಂದ ಇಂದಿನವರೆಗೆ ʼಗ್ರೀನ್‌ ಕಲಾಂ ಪ್ರಾಜೆಕ್ಟ್‌ʼ ಮೂಲಕ ಒಟ್ಟು 33.23 ಲಕ್ಷ ಗಿಡಗಳನ್ನು ವಿವೇಕ್‌ ನೆಟ್ಟಿದ್ದಾರೆ. ಅವರ ಟ್ವಿಟರ್‌ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ಹಲವು ಫೋಟೊಗಳನ್ನು ಕಾಣಬಹುದಾಗಿದೆ. ಸದ್ಯ ಒಂದು ಕೋಟಿ ಸಸಿಗಳು ಪೂರ್ಣಗೊಳ್ಳುವ ಮೊದಲೇ ಅವರು ನಿಧನರಾಗಿದ್ದು ವಿಷಾದನೀಯ.

ಇಂದು ನಿಧನರಾದ ವಿವೇಕ್‌ ರಿಗೆ ತಮಿಳು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಿವಾಜಿ ಹಾಗೂ ಇನ್ನಿತರ ಚಿತ್ರಗಳಲ್ಲಿ ಸಹನಟರಾಗಿ ಅಭಿನಯಿಸಿದ್ದ ವಿವೇಕ್‌ ಕುರಿತು ಟ್ವೀಟ್‌ ಮಾಡಿದ ರಜಿನಿಕಾಂತ್‌ ""ಚಿನ್ನಕಲೈವಾನಾರ್, ಸಮಾಜ ಸೇವಕ ಮತ್ತು ನನ್ನ ಆತ್ಮೀಯ ಆಪ್ತ ವಿವೇಕ್ ಅವರ ನಿಧನ ತುಂಬಾ ನೋವಿನಿಂದ ಕೂಡಿದೆ. ಶಿವಾಜಿಯ ಚಿತ್ರೀಕರಣದ ಸಮಯದಲ್ಲಿ ನಾನು ಅವರೊಂದಿಗೆ ಕಳೆದ ಪ್ರತಿದಿನವೂ ನನ್ನ ಜೀವನದಲ್ಲಿ ಮರೆಯಲಾಗದ ದಿನಗಳು. ದುಃಖಿತ ಕುಟುಂಬಕ್ಕೆ ನನ್ನ ಸಂತಾಪ. ಅವರ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲಿ." ಎಂದು ಟ್ವೀಟ್‌ ಮಾಡಿದ್ದಾರೆ,

"ಓರ್ವ ನಟನ ಕರ್ತವ್ಯವು ನಟನೆಯೊಂದಿಗೇ ಕೊನೆಗೊಳ್ಳುವುದಿಲ್ಲ. ಅದನ್ನೂ ಮೀರಿ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತವನ್ನು ಸ್ನೇಹಿತ ವಿವೇಕ್‌ ಹೊಂದಿದ್ದರು ಮತ್ತು ಮಾಡಿ ತೋರಿಸಿದರು. ವಿವೇಕ್‌ ಎಪಿಜೆ ಅಬ್ದುಲ್‌ ಕಲಾಂರ ಉನ್ನತ ಆದರ್ಶಗಳನ್ನು ನಂಬಿದ್ದರು ಮತ್ತು ಓರ್ವ ಹಸಿರು ಯೋಧರಾಗಿದ್ದರು. ಅವರ ನಿಧನವು ನಮಗೆ ಅತಿದೊಡ್ಡ ನಷ್ಟವಾಗಿದೆ" ಎಂದು ಕಮಲಹಾಸನ್‌ ಟ್ವೀಟ್‌ ಮಾಡಿದ್ದಾರೆ. ಇನ್ನು ನಟ ಪ್ರಕಾಶ್‌ ರೈ, ಧನುಶ್‌, ಎ.ಆರ್‌ ರಹ್ಮಾನ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News