ವಾರಣಾಸಿ: ಶೇ.50ರಷ್ಟು ಕೋವಿಡ್-19 ಸಾವುಗಳು ಅಧಿಕೃತವಾಗಿ ದಾಖಲಾಗುತ್ತಿಲ್ಲ !

Update: 2021-04-17 16:58 GMT
Photo: Thewire

ಹೊಸದಿಲ್ಲಿ,ಎ.17: ವಾರಣಾಸಿಯ ಹರಿಶ್ಚಂದ್ರ ಘಾಟ್ನ ಕೋವಿಡ್-19 ದಾಖಲೆಗಳು,ಮಣಿಕರ್ಣಿಕಾ ಘಾಟ್ನಿಂದ ಲಭ್ಯ ಸ್ಥಳೀಯ ಮಾಹಿತಿಗಳು ಮತ್ತು ಇತರ ಸ್ಮಶಾನಗಳ ಅಂದಾಜು ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು ಸುದ್ದಿ ಜಾಲತಾಣ (The Wire) ನಡೆಸಿರುವ ವಿಶ್ಲೇಷಣೆಯು ಕೊರೋನ ವೈರಸ್ನ ಎರಡನೇ ಅಲೆಯಲ್ಲಿ ಸಾಂಕ್ರಾಮಿಕದಿಂದಾಗಿ ಸಂಭವಿಸಿದ ಕನಿಷ್ಠ ಶೇ.50ರಷ್ಟು ಸಾವುಗಳು ಉತ್ತರ ಪ್ರದೇಶ ಸರಕಾರವು ಕೋವಿಡ್ ಸಾವುಗಳ ಕುರಿತಂತೆ ಎ.1ಮತ್ತು ಎ.15ರ ನಡುವೆ ಹೊರಡಿಸಿದ ಅಧಿಕೃತ ಬುಲೆಟಿನ್ಗಳಲ್ಲಿ ಉಲ್ಲೇಖಗೊಂಡಿಲ್ಲ ಎನ್ನುವುದನ್ನು ಬಹಿರಂಗಗೊಳಿಸಿದೆ.

ಉತ್ತರ ಪ್ರದೇಶದ ಸ್ಥಿತಿಯು ಬಹಳ ವೇಗವಾಗಿ ಕೈಮೀರುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಹಲವಾರು ಹಿರಿಯ ಅಧಿಕಾರಿಗಳು ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ. ಎಪ್ರಿಲ್ ತಿಂಗಳ ಮೊದಲ 14 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಏಳು ಪಟ್ಟು ಹೆಚ್ಚಾಗಿದ್ದರೆ, ಎಪ್ರಿಲ್ 13ರಿಂದ 14ರವರೆಗೆ ಅವುಗಳ ಸಂಖ್ಯೆಯಲ್ಲಿ ಶೇ.31ರಷ್ಟು ಏರಿಕೆಯಾಗಿತ್ತು.

ರಾಜ್ಯದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ತೀವ್ರ ಕೊರತೆಯಿದ್ದು,ಆ್ಯಂಬುಲನ್ಸ್ಗಳಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಫಾರ್ಮಸಿಗಳಿಂದ ಅಗತ್ಯ ಔಷಧಿಗಳು ಮಾಯವಾಗಿದ್ದು,ಕಾಳಸಂತೆಯಲ್ಲಿ ಗಗನಚುಂಬಿ ಬೆಲೆಗಳಲ್ಲಿ ಮಾರಾಟವಾಗುತ್ತಿವೆ. ಚಿತಾಗಾರಗಳಲ್ಲಿ ಶವಗಳ ಅಂತ್ಯಕ್ರಿಯೆಗಳಿಗಾಗಿ ಗಂಟೆಗಳ ಕಾಲ ಸರದಿಗಳಲ್ಲಿ ಕಾದು ನಿಲ್ಲಬೇಕಾಗಿದೆ.

14.5 ಮಿಲಿಯನ್ಗೂ ಅಧಿಕ ಕೋವಿಡ್ ಪ್ರಕರಣಗಳೊಂದಿಗೆ ಭಾರತವು ಈಗ ಅಮೆರಿಕದ ನಂತರ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ 1,341 ಸಾವುಗಳು ಸಂಭವಿಸಿದ್ದು,ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸಾವುಗಳ ಸಂಖ್ಯೆ ಶನಿವಾರ 1,75,649ಕ್ಕೇರಿದೆ.

ತನ್ಮಧ್ಯೆ ಎರಡನೇ ಅಲೆಗೆ ಸಂಬಂಧಿಸಿದಂತೆ ಉ.ಪ್ರ.ಸರಕಾರದ ಕೋವಿಡ್ ಅಂಕಿಸಂಖ್ಯೆಗಳು ಸಂಶಯದ ಸುಳಿಯಲ್ಲಿ ಸಿಲುಕಿವೆ. ಕೋವಿಡ್ ಪ್ರಕರಣಗಳು ಮತ್ತು ಸಾವುಗಳು ವಾಸ್ತವಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ರಾಜಧಾನಿ ಲಕ್ನೋದಲ್ಲಿ ಅಧಿಕೃತ ಸಾವುಗಳ ಸಂಖ್ಯೆಗೂ ಚಿತಾಗಾರಗಳಲ್ಲಿ ಶವಗಳ ಸಂಖ್ಯೆಗೂ ತಾಳಮೇಳವಿಲ್ಲದಿರುವುದು ಕೋವಿಡ್ನಿಂದ ಸತ್ತವರ ಪೈಕಿ ಕೇವಲ ಅರ್ಧದಷ್ಟು ಜನರ ಹೆಸರುಗಳು ಸರಕಾರದ ಅಧಿಕೃತ ದಾಖಲೆಯಲ್ಲಿ ಸೇರಿವೆ ಎನ್ನುವುದನ್ನು ಸೂಚಿಸುತ್ತಿದೆ.
ರಾಜ್ಯದಲ್ಲಿ ಹಾಲಿ 1.5 ಲ.ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು,ಮಹಾರಾಷ್ಟ್ರ ಮತ್ತು ಛತ್ತೀಸ್ಗಡಗಳ ನಂತರದ ಸ್ಥಾನದಲ್ಲಿದೆ.
  
ತನ್ಮಧ್ಯೆ ಅಂಕಿಅಂಶಗಳನ್ನು ತಿರುಚುತ್ತಿರುವ ಆಘಾತಕಾರಿ ವರದಿಗಳು ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಎ.14ರಂದು ಅಧಿಕೃತ ಬುಲೆಟಿನ್ನಂತೆ ಮೂರು ಕೋವಿಡ್ ಸಾವುಗಳು ಸಂಭವಿಸಿದ್ದವು,ಆದರೆ ಸ್ಥಳೀಯ ಹರಿಶ್ಚಂದ್ರ ಘಾಟ್ನಲ್ಲಿ ಅಂದು ಅಧಿಕೃತ ಕೋವಿಡ್ ಸುರಕ್ಷತಾ ಶಿಷ್ಟಾಚಾರಗಳಿಗೆ ಅನುಗುಣವಾಗಿ ಆರು ಶವಗಳ ಅಂತ್ಯಸಂಸ್ಕಾರ ನಡೆದಿತ್ತು.
 
ರಾಜ್ಯದ 46 ಜಿಲ್ಲೆಗಳಲ್ಲಿ ಕಳೆದ 30 ದಿನಗಳಿಂದ ಅತ್ಯಧಿಕ ದೈನಂದಿನ ಪ್ರಕರಣಗಳು ವರದಿಯಾಗುತ್ತಿದ್ದು,ಇವುಗಳಲ್ಲಿ ವಾರಣಾಸಿಯೂ ಒಂದಾಗಿದೆ. ಎ.16ರಂದು ಗರಿಷ್ಠ ಪ್ರಕರಣಗಳು (6,598) ಲಕ್ನೋದಿಂದ ವರದಿಯಾಗಿದ್ದರೆ 2,344 ಹೊಸ ಪ್ರಕರಣಗಳೊಂದಿಗೆ ವಾರಣಾಸಿ ಎರಡನೇ ಸ್ಥಾನದಲ್ಲಿತ್ತು.

ಸರಕಾರದ ಅಧಿಕೃತ ಅಂಕಿಅಂಶಗಳಂತೆ ವಾರಣಾಸಿ ಜಿಲ್ಲೆಯಲ್ಲಿ ಈಗ ಸುಮಾರು 15,000 ಕೋವಿಡ್-19 ಸಕ್ರಿಯ ಪ್ರಕರಣಗಳಿದ್ದು,497 ಸಾವುಗಳು ವರದಿಯಾಗಿವೆ. ಆದರೆ ಈ ಅಂಕಿಅಂಶಗಳನ್ನು ನಂಬಬಹುದೇ ಎಂಬ ಶಂಕೆಯನ್ನು (The Wire)ನ ವಿಶ್ಲೇಷಣೆಯು ಸೃಷ್ಟಿಸಿದೆ. ಏಕೆಂದರೆ ಸರಕಾರದ ದೈನಂದಿನ ಅಧಿಕೃತ ಬುಲೆಟಿನ್ಗಳಲ್ಲಿಯ ಸಾವುಗಳ ಸಂಖ್ಯೆಗೂ ಚಿತಾಗಾರಗಳಿಗೆ ತರಲಾಗುತ್ತಿರುವ ಶವಗಳ ಸಂಖ್ಯೆಗೂ ಪ್ರತಿದಿನವೂ ಎಂಬಂತೆ ಅಗಾಧ ವ್ಯತ್ಯಾಸವಿದೆ. 

ವಾರಣಾಸಿ ಮಹಾನಗರ ಪಾಲಿಕೆಯು ನಿರ್ವಹಿಸುತ್ತಿರುವ ಹರಿಶ್ಚಂದ್ರ ಘಾಟ್ನ ಕೋವಿಡ್-19 ದಾಖಲೆಗಳು ಈ ಶಂಕೆಗೆ ಇನ್ನಷ್ಟು ಪುಷ್ಟಿಯನ್ನು ನೀಡಿವೆ. ಅತ್ತ ಮಣಿಕರ್ಣಿಕಾ ಘಾಟ್ನಲ್ಲಿ ಕಳೆದೊಂದು ವಾರದಿಂದ ಪ್ರತಿದಿನವೂ ಸುಮಾರು 150 ಶವಗಳ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ,ಎಲ್ಲರೂ ಕೊರೋನವೈರಸ್ನಿಂದಲೇ ಸತ್ತಿದ್ದಾರೆ ಎಂದಲ್ಲ. ಆದರೆ ಅಂತ್ಯಸಂಸ್ಕಾರಗಳ ಸಂಖ್ಯೆ ಎಷ್ಟು ತೀವ್ರವಾಗಿ ಹೆಚ್ಚಿದೆಯೆಂದರೆ ಹೆಚ್ಚಿನ ಶವಗಳು ಕೋವಿಡ್ನಿಂದಾಗಿ ಸತ್ತವರದಾಗಿವೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News