ವಿಶ್ವದಾದ್ಯಂತ 30 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2021-04-18 17:22 GMT

ವಾಶಿಂಗ್ಟನ್,ಎ.18: ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನ ಹಾವಳಿ ಉಲ್ಬಣಗೊಂಡಿದ್ದು, ವಿವಿಧ ದೇಶಗಳು ಸೋಂಕಿನ ವಿರುದ್ಧ ಲಸಿಕೆ ಅಭಿಯಾನವನ್ನು ವ್ಯಾಪಕವಾಗಿ ಕೈಗೊಂಡಿರುವ ಹೊರತಾಗಿಯೂ ಶನಿವಾರದವರೆಗೆ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 30 ಲಕ್ಷವನ್ನು ದಾಟಿದೆ.

 ಜಾಗತಿಕವಾಗಿ ಪ್ರತಿದಿನವೂ ಸರಾಸರಿ 12 ಸಾವಿರಕ್ಕಿಂತಲೂ ಅಧಿಕ ಮಂದಿ ಕೊರೋನದಿಂದ ಸಾವನ್ನಪ್ಪುತ್ತಿದ್ದಾರೆ. 2019ರಲ್ಲಿ ಚೀನಾದ ವುಹಾನ್ ನಗರದಲ್ಲಿ ಕೊರೋನ ಸೋಂಕು ಪತ್ತೆಯಾದಾಗಿನಿಂದ ಈವರೆಗೆ 30 ಲಕ್ಷ ಮಂದಿ ಸಾವನ್ನಪ್ಪಿದ್ದು, ಇದು ಜಮೈಕಾ ಅಥವಾ ಆರ್ಮೇನಿಯಾ ದೇಶಗಳ ಜನಸಂಖ್ಯೆಗಿಂತಲೂ ಅಧಿಕವಾಗಿದೆ. ಕೊರೋನಕ್ಕೆ ಈವರೆಗೆ ಬಲಿಯಾದವರ ಸಂಖ್ಯೆಯು 1980ರಿಂದ 1988ರವರೆಗೆ ನಡೆದ ಇರಾನ್-ಇರಾಕ್ ಯುದ್ದಕ್ಕಿಂತಲೂ ಅಧಿಕವಾಗಿದೆ.

 ಭಾರತ, ಬ್ರೆಝಿಲ್, ರಶ್ಯ, ಟರ್ಕಿ ದೇಶಗಳಲ್ಲಿ ಸೋಂಕಿನ ಹಾವಳಿ ತೀವ್ರಗೊಂಡಿದೆ. ಕೊರೋನ ಸಾಂಕ್ರಾಮಿಕ ಹಾವಳಿ ಇಳಿಮುಖವಾಗುತ್ತಿರುವ ಲಕ್ಷಣ ಕಾಣದಿರುವುದು ತಜ್ಞರನ್ನು ಕಂಗೆಡಿಸಿದೆ. ಶುಕ್ರವಾರ ಒಂದೇ ದಿನದಲ್ಲಿ ಜಗತ್ತಿನಾದ್ಯಂತ 8,29, 596 ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಈವರೆಗಿನ ಒಂದು ದಿನದ ಗರಿಷ್ಠ ಸಂಖ್ಯೆಯಾಗಿದೆ.

 ದಕ್ಷಿಣ ಏಶ್ಯದ ರಾಷ್ಟ್ರಗಳಲ್ಲಿ ಕೊರೋನ ಆರ್ಭಟ ಮಿತಿ ಮೀರಿದ್ದು, ಭಾರತದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 2 ಲಕ್ಷವನ್ನು ದಾಟುತ್ತಿದೆ. ನೆರೆಯ ರಾಷ್ಟ್ರಗಳಾದ ಬಾಂಗ್ಲಾ, ಪಾಕಿಸ್ತಾನಗಳಲ್ಲಿಯೂ ಕೊರೋನ ರುದ್ರ ನರ್ತನ ಮುಂದುವರಿದಿದ್ದು, ಅಲ್ಲಿಯೂ ಹಲವೆಡೆ ಲಾಕ್‌ಡೌನ್, ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ.

   ಆದರೆ ಸಾಮೂಹಿಕವಾಗಿ ಲಸಿಕೆ ನೀಡಿಕೆ ಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸಿದ ಬ್ರಿಟನ್‌ನಂತಹ ಮುಂದುವರಿದ ರಾಷ್ಟ್ರಗಳಲ್ಲಿ ಸೋಂಕಿನ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿರುವುದನ್ನು ಕಾಣಬಹುದಾಗಿದೆ. ಬ್ರಿಟನ್ ಈಗಾಗಲೇ ತನ್ನ ಒಟ್ಟು ಜನಸಂಖ್ಯೆಯ ಶೇ.60ರಷ್ಟು ಮಂದಿಗೆ ಕೊರೋನ ಲಸಿಕೆಯ ಮೊದಲ ಡೋಸ್ ನೀಡುವಲ್ಲಿ ಸಫಲವಾಗಿದೆ. ಪ್ರಸಕ್ತ ಬ್ರಿಟನ್‌ನಲ್ಲಿ ಸರಾಸರಿ ಒಂದು ದಿನದಲ್ಲಿ 30 ಕೊರೋನ ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದರೆ, ಇದೇ ವರ್ಷ ಜನವರಿಯಲ್ಲಿ ಈ ಸೋಂಕಿನಿಂದ ಪ್ರತಿದಿನ 1200ಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದರು.

    ದಕ್ಷಿಣ ಏಶ್ಯದ ಪುಟ್ಟ ರಾಷ್ಟ್ರವಾದ ಥೈಲ್ಯಾಂಡ್‌ನಲ್ಲಿ ಶನಿವಾರ ಸತತ ನಾಲ್ಕನೆ ದಿನವೂ 1 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದೆ. ಜಪಾನ್‌ನಲ್ಲಿಯೂ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು, ಈ ವರ್ಷ ಅಲ್ಲಿ ನಡೆಯಲಿದ್ದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದುಪಡಿಸುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

ಜಗತ್ತಿನಲ್ಲೇ ಭಾರತ, ಅಮೆರಿಕ ಬಳಿಕ ಅತ್ಯಧಿಕ ಕೊರೋನ ಪ್ರಕರಣಗಳು ದಾಖಲಾಗುತ್ತಿರುವ ಬ್ರೆಝಿಲ್‌ನಲ್ಲಿ ಶವಗಳನ್ನು ಹೂಳಲು ಜಾಗದ ಅಭಾವ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಹೊಸ ಸ್ಮಶಾನಗಳನ್ನು ನಿರ್ಮಿಸಲು ಕಾರ್ಮಿಕರು ರಾತ್ರಿ ಪಾಳಿಯಲ್ಲಿಯೂ ದುಡಿಯುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.

   ಆದರೆ ಯುರೋಪ್‌ನ ಬಹುತೇಕ ರಾಷ್ಟ್ರಗಳಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಇಟಲಿ, ಸ್ವೀಡನ್, ಜರ್ಮನಿ ಸೇರಿದಂತೆ ವಿವಿಧ ರಾಷ್ಟ್ರಗಳು ಸೋಂಕು ಹರಡುವಿಕೆ ತಡೆಗಾಗಿ ವಿಧಿಸಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಿವೆ. ಕಳೆದ ವರ್ಷ ಕೋವಿಡ್-19 ಹಾವಳಿಯಿಂದ ತತ್ತರಿಸಿದ್ದ ಇಟಲಿಯು ಎಪ್ರಿಲ್ 26ರಂದು ಕೊರೋನ ನಿರ್ಬಂಧಗಳನ್ನು ಸಡಿಲಿಸುವುದಾಗಿ, ಶಾಲಾಕಾ ಲೇಜು, ರೆಸ್ಟಾರೆಂಟ್‌ಗಳನ್ನು ತೆರೆಯುವುದಾಗಿ ಘೋಷಿಸಿದೆ.

‘ದಕ್ಷಿಣ ಏಶ್ಯದಲ್ಲಿ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆಯು ನಿಜಕ್ಕೂ ಭಯಭೀತಗೊಳಿಸುವಂತಿದೆ ಹಾಗೂ ಇದು ಇಡೀ ಜಗತ್ತಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ .ಈ ಸಾಂಕ್ರಾಮಿಕದ ಹಾವಳಿಯ ವಿರುದ್ಧ ಗೆಲುವು ಸಾಧಿಸಬೇಕಾದರೆ ಲಸಿಕೆಗಳು ಪ್ರತಿಯೊಬ್ಬರಿಗೂ ಎಲ್ಲೆಡೆಯೂ, ಬಡವ, ಶ್ರೀಮಂತರೆಂಬ ಭೇದವಿಲ್ಲದೆ ಲಭ್ಯವಾಗಬೇಕಿದೆ ’

ಉದಯ ರೆಗಿ

  ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಅಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News