ಲಂಕಾ ಸ್ಪಿನ್ ಮಾಂತ್ರಿಕನಿಗೆ ಚೆನ್ನೈಯಲ್ಲಿ ಆಂಜಿಯೊಪ್ಲಾಸ್ಟಿ

Update: 2021-04-19 04:01 GMT

ಚೆನ್ನೈ, ಎ.19: ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ಅವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೊಪ್ಲಾಸ್ಟಿ ನಡೆಸಲಾಗಿದೆ. ಇದು ಯೋಜಿತ ಪ್ರಕ್ರಿಯೆಯಾಗಿದ್ದು, ಮಾಜಿ ಕ್ರಿಕೆಟಿಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಐಪಿಎಲ್ ಪ್ರಕಟಿಸಿದೆ.

"ಮಾರ್ಚ್ ಕೊನೆಗೆ ಮುರಳೀಧರನ್ ಅವರ ಹೃದಯದಲ್ಲಿ ತಡೆ ಕಾಣಿಸಿಕೊಂಡಿತ್ತು. ಆದ್ದರಿಂದ ಆಂಜಿಯೋಪ್ಲಾಸ್ಟಿ ನಡೆಸಬೇಕಾಯಿತು. ಇದೀಗ ಆರೋಗ್ಯವಾಗಿದ್ದಾರೆ" ಎಂದು ಐಪಿಎಲ್ ಮೂಲಗಳು ಹೇಳಿವೆ.

ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 1347 ವಿಕೆಟ್ ಪಡೆದ ಅಗ್ರಗಣ್ಯ ಬೌಲರ್ ಆಗಿದ್ದಾರೆ. ಮುರಳೀಧರನ್ ಶ್ರೀಲಂಕಾ ತಂಡವನ್ನು 133 ಟೆಸ್ಟ್, 350 ಏಕದಿನ ಹಾಗೂ 12 ಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 800 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 534, ಟಿ-20 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ್ದರು. 1996ರಲ್ಲಿ ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಸದಸ್ಯರಾಗಿದ್ದರು.
2015ರಿಂದೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News