ಕೋವಿಡ್-19:ಎರಡೂ ಅಲೆಗಳಲ್ಲಿ ಶೇ.70ಕ್ಕೂ ಅಧಿಕ ರೋಗಿಗಳು 40 ವರ್ಷ ಮೇಲ್ಪಟ್ಟವರು

Update: 2021-04-19 17:12 GMT

ಹೊಸದಿಲ್ಲಿ,ಎ.19: ಎರಡೂ ಅಲೆಗಳಲ್ಲಿ ಶೇ.70ಕ್ಕೂ ಅಧಿಕ ಕೋವಿಡ್-19 ರೋಗಿಗಳು 40 ವರ್ಷ ಮೇಲ್ಪಟ್ಟವರಾಗಿದ್ದಾರೆ ಮತ್ತು ಹಿರಿಯ ನಾಗರಿಕರು ಈಗಲೂ ಸುಲಭವಾಗಿ ಸಾಂಕ್ರಾಮಿಕಕ್ಕೆ ತುತ್ತಾಗುತ್ತಿದ್ದಾರೆ ಎಂದು ಕೇಂದ್ರವು ಸೋಮವಾರ ಹೇಳಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಮಹಾನಿರ್ದೇಶಕ ಬಲರಾಮ ಭಾರ್ಗವ ಅವರು,ಮೊದಲ ಮತ್ತು ಎರಡನೇ ಅಲೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಸಾವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡನೇ ಅಲೆಯಲ್ಲಿ ಆಮ್ಲಜನಕದ ಅಗತ್ಯ ಹೆಚ್ಚಾಗಿದ್ದರೆ ವೆಂಟಿಲೇಟರ್ಗಳ ಅಗತ್ಯ ಕಡಿಮೆಯಾಗಿದೆ ಎಂದು ತಿಳಿಸಿದರು.

ಎರಡನೇ ಅಲೆಯಲ್ಲಿ ಉಸಿರಾಟದ ತೊಂದರೆ ಕೊಂಚ ಹೆಚ್ಚಾಗಿ ಕಂಡುಬರುತ್ತಿದೆ, ಮೊದಲ ಅಲೆಯಲ್ಲಿ ಗಂಟಲು ಕೆರೆತ, ಒಣಕೆಮ್ಮು ಮತ್ತು ಇತರ ಲಕ್ಷಣಗಳು ಹೆಚ್ಚಿದ್ದವು. ಮೊದಲ ಅಲೆಯಲ್ಲಿ ಶೇ.41.5ರಷ್ಟು ರೋಗಿಗಳಿಗೆ ಆಮ್ಲಜನಕದ ಅಗತ್ಯವಿದ್ದರೆ ಎರಡನೇ ಅಲೆಯಲ್ಲಿ ಇದು ಶೇ.54.5ಕ್ಕೇರಿದೆ ಎಂದರು.

ಎರಡೂ ಅಲೆಗಳಲ್ಲಿ ಶೇ.70ಕ್ಕೂ ಅಧಿಕ ರೋಗಿಗಳು 40 ವರ್ಷ ಮೇಲ್ಪಟ್ಟ ಪ್ರಾಯದವರಾಗಿದ್ದಾರೆ ಮತ್ತು ಯುವರೋಗಿಗಳ ಸಂಖ್ಯೆಯು ಅಲ್ಪ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಎರಡನೇ ಅಲೆಯಲ್ಲಿ ಲಕ್ಷಣರಹಿತ ರೋಗಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಎರಡನೇ ಅಲೆಯಲ್ಲಿನ 7,600 ಮತ್ತು ಮೊದಲ ಅಲೆಯಲ್ಲಿನ 1,885 ರೋಗಿಗಳ ಕುರಿತು ಅಧ್ಯಯನ ವರದಿಯನ್ನು ಉಲ್ಲೇಖಿಸಿ ಭಾರ್ಗವ ತಿಳಿಸಿದರು.

ಮೊದಲ ಅಲೆಯಲ್ಲಿ ಶೇ.31ರಷ್ಟು ಕೋವಿಡ್-19 ರೋಗಿಗಳು 30 ವರ್ಷಕ್ಕೂ ಕಡಿಮೆ ವಯೋಮಾನದವರಾಗಿದ್ದರು,ಆದರೆ ಈ ಬಾರಿ ಅವರ ಸಂಖ್ಯೆ ಶೇ.32ಕ್ಕೇರಿದೆ. ಈ ಕುರಿತು ಎರಡೂ ಅಲೆಗಳಲ್ಲಿ ಅಂತಹ ವ್ಯತ್ಯಾಸವೇನಿಲ್ಲ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ.ಪೌಲ್ ತಿಳಿಸಿದರು.

ಆಮ್ಲಜನಕವನ್ನು ವ್ಯರ್ಥಗೊಳಿಸದೆ ಅದನ್ನು ವಿವೇಚನೆಯಿಂದ ಬಳಸಬೇಕು ಎಂದು ಭಾರ್ಗವ ಕೋರಿಕೊಂಡರೆ,ರೆಮ್ಡೆಸಿವರ್ ಅನ್ನು ಆಸ್ಪತ್ರೆಗೆ ದಾಖಲಾಗಿ ಆಮ್ಲಜನಕದ ನೆರವಿನಲ್ಲಿರುವ ರೋಗಿಗಳಿಗೆ ಬಳಸಬೇಕೇ ಹೊರತು ಮನೆಗಳಲ್ಲಿರುವ ರೋಗಿಗಳಿಗೆ ನೀಡಬಾರದು ಎಂದು ಪೌಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News