ಜಾಗತಿಕ ಕೊರೋನ ವೈರಸ್ ಏರಿಕೆಗೆ ಭಾರತದಿಂದ ಅಗಾಧ ದೇಣಿಗೆ

Update: 2021-04-20 17:08 GMT

ವಾಶಿಂಗ್ಟನ್, ಎ. 20: ಕೊರೋನ ವೈರಸ್ ಸಾಂಕ್ರಾಮಿಕದ ಆಕ್ರಮಣ ಆರಂಭಗೊಂಡ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯ ಬಳಿಕ, ಜಗತ್ತು ಮತ್ತೊಮ್ಮೆ ವೈರಸ್ ನ ತೆಕ್ಕೆಯೊಳಗೆ ಸಿಕ್ಕಿಹಾಕಿಕೊಂಡಿದೆ. ವೈರಸ್ ನ ಎರಡನೇ ಅಲೆಯು ಮೊದಲ ಅಲೆಗಿಂತಲೂ ಭೀಕರವಾಗಿದ್ದು, ಸಾವು-ನೋವಿನ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ದಾಪುಗಾಲಿಡುತ್ತಿದೆ.

‘‘ಸೋಂಕು ಪ್ರಕರಣಗಳು ಮತ್ತು ಸಾವುಗಳು ಆಘಾತಕಾರಿ ಪ್ರಮಾಣದಲ್ಲಿ ನಿರಂತರವಾಗಿ ಏರುತ್ತಿವೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಶುಕ್ರವಾರ ಹೇಳಿದ್ದಾರೆ.

ಈ ಹೆಚ್ಚಳಕ್ಕೆ ಪ್ರಮುಖ ಕಾರಣ ಭಾರತದ ಎರಡನೇ ಅಲೆಯ ತೀವ್ರತೆ. ಜಗತ್ತಿನಲ್ಲಿ ವರದಿಯಾಗುತ್ತಿರುವ ಪ್ರತಿ ಮೂರು ಹೊಸ ಸೋಂಕು ಪ್ರಕರಣಗಳ ಪೈಕಿ ಒಂದು ಭಾರತದಲ್ಲಿ ವರದಿಯಾಗುತ್ತಿದೆ. ಭಾರತದ ಎರಡನೇ ಅಲೆಯು ಗಾತ್ರ ಮತ್ತು ವೇಗದಲ್ಲಿ ಅಗಾಧವಾಗಿದೆ.

ಯಾಕಾಯಿತು?

ಭಾರತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆಂದು ಯಾರೂ ಭಾವಿಸಿರಲಿಲ್ಲ. ವರ್ಷದ ಆರಂಭದಲ್ಲಿ, ಕೊರೋನವನ್ನು ಭಾರತ ಎದುರಿಸಿ ನಿಂತಿದೆ ಎಂಬಂತೆ ಕಂಡುಬಂದಿತ್ತು. ದೈನಂದಿನ ಪ್ರಕರಣಗಳ ಸಂಖ್ಯೆ 10,000ಕ್ಕಿಂತಲೂ ಕೆಳಗೆ ಕುಸಿದಿತ್ತು ಹಾಗೂ ಸರಕಾರವು ಸ್ಥಳೀಯವಾಗಿ ಉತ್ಪಾದನೆಯಾದ ಲಸಿಕೆಗಳ ಮೂಲಕ ಲಸಿಕೆ ಹಾಕುವ ಅಭಿಯಾನವನ್ನು ಆರಂಭಿಸಿತ್ತು.

ಪ್ರಸಕ್ತ ಭಾರತದಲ್ಲಿ ದಿನವೊಂದಕ್ಕೆ 2.50 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಇದೇ ಪ್ರವೃತ್ತಿ ಮುಂದುವರಿದರೆ, ತಿಂಗಳಲ್ಲಿ ಈ ಸಂಖ್ಯೆ 5 ಲಕ್ಷವನ್ನು ತಲುಪಬಹುದು ಎಂದು ಮಿಶಿಗನ್ ವಿಶ್ವವಿದ್ಯಾನಿಲಯದ ಜೈವಿಕ ಅಂಕಿಸಂಖ್ಯೆ ತಜ್ಞ (ಬಯೋಸ್ಟೇಟಿಶಿಯನ್) ಭ್ರಮರ್ ಮುಖರ್ಜಿ ಹೇಳುತ್ತಾರೆ.

ದೇಶದ ರಾಜಧಾನಿ ದಿಲ್ಲಿ ಮತ್ತು ಆರು ರಾಜ್ಯಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿವೆ. ಹೊಸ ದೈನಂದಿನ ಪ್ರಕರಣಗಳ ಪೈಕಿ ಮೂರನೇ ಎರಡರಷ್ಟು ಅಲ್ಲಿಯೇ ವರದಿಯಾಗುತ್ತಿವೆ. ಭಾರತದ ಆರ್ಥಿಕ ರಾಜಧಾನಿ ಮುಂಬೈ ಇರುವ ಮಹಾರಾಷ್ಟ್ರದಲ್ಲಿ ದೇಶದ ಒಟ್ಟು ಪ್ರಕರಣಗಳ ಕಾಲು ಭಾಗ ಪ್ರಕರಣಗಳಿವೆ.

ಒಮ್ಮೆಲೆ ಏರಿದ ಕೊರೋನ ಪ್ರಕರಣಗಳು

ಕೊರೋನದ ದಿನಗಳು ಮುಗಿದವು ಎಂದು ಭಾವಿಸಿ ದಿಲ್ಲಿಯಲ್ಲಿ ಹೆಚ್ಚಿನ ಆಸ್ಪತ್ರೆಗಳು ತಮ್ಮ ಕೊರೋನ ವಾರ್ಡ್ಗಳ ಗಾತ್ರವನ್ನು ಕಡಿಮೆ ಮಾಡಿದ್ದವು. ಎಪ್ರಿಲ್ 9ರಂದು ದಿಲ್ಲಿಯಲ್ಲಿ 8,500 ಕೊರೋನ ಪ್ರಕರಣಗಳು ವರದಿಯಾದವು. ನಾಲ್ಕು ದಿನಗಳ ಬಳಿಕ ಸಂಖ್ಯೆ 13,500ಕ್ಕೆ ಏರಿತು. ಅದರ ನಾಲ್ಕು ದಿನಗಳ ಬಳಿಕ ದಿನವೊಂದರಲ್ಲಿ 24,000 ಪ್ರಕರಣಗಳು ವರದಿಯಾದವು.

ರೋಗಿಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ, ನಗರದ ಆಸ್ಪತ್ರೆಗಳು ತೀವ್ರ ಒತ್ತಡಕ್ಕೆ ಗುರಿಯಾಗಿವೆ. ನಗರವು ಆಮ್ಲಜನಕದ ತೀವ್ರ ಅಭಾವವನ್ನು ಎದುರಿಸುತ್ತಿದೆ. ಬಹುತೇಕ ಎಲ್ಲ ತೀವ್ರ ನಿಗಾ ಹಾಸಿಗೆಗಳು ಭರ್ತಿಯಾಗಿವೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.

ಆಸ್ಪತ್ರೆಗಳು, ಚಿತಾಗಾರಗಳ ಮೇಲೆ ಅಗಾಧ ಒತ್ತಡ

ಗುಜರಾತ್ನಲ್ಲಿ ಕೊರೋನ ವೈರಸ್ ಎರಡನೇ ಅಲೆಯು ಆಸ್ಪತ್ರೆಗಳು ಮತ್ತು ಚಿತಾಗಾರಗಳ ಮೇಲೆ ಅಗಾಧ ಒತ್ತಡ ಹೇರಿದೆ. ಅಹ್ಮದಾಬಾದ್ನಲ್ಲಿರುವ ಪ್ರಮುಖ ಕೊರೋನ ಆಸ್ಪತ್ರೆಯ ಹೊರಗೆ ರೋಗಿಗಳನ್ನು ಹೊತ್ತ ಆ್ಯಂಬುಲೆನ್ಸ್ಗಳು ಗಂಟೆಗಟ್ಟಳೆ ಕಾಯುತ್ತಿವೆ.
ನೈಜ ಸಾವಿನ ಸಂಖ್ಯೆ ಮತ್ತು ಅಧಿಕೃತ ಸಂಖ್ಯೆಗಳು ತಾಳೆಯಾಗುತ್ತಿಲ್ಲ ಎಂಬ ವರದಿಗಳು ಪ್ರತಿದಿನ ಪತ್ರಿಕೆಗಳಲ್ಲಿ ಬರುತ್ತಿವೆ.

ಕಳೆದ ವಾರ ಚಿತಾಗಾರಗಳ ನಿರಂತರ ಬಳಕೆಯಿಂದಾಗಿ ಆರು ಹೊಗೆಕೊಳವೆಗಳ ಪೈಕಿ ಎರಡರ ಉಕ್ಕಿನ ಪೈಪ್ಗಳು ಕರಗಿದವು ಎಂದು ಸೂರತ್ ನಗರದ ಚಿತಾಗಾರ ಟ್ರಸ್ಟ್ ನ ಅಧ್ಯಕ್ಷ ಕಮಲೇಶ್ ಸೈಲೋರ್ ಹೇಳಿದರು. ಅಲ್ಲಿಗೆ ಸಾಮಾನ್ಯವಾಗಿ ದಿನಕ್ಕೆ 20 ಮೃತದೇಹಗಳು ಬರುತ್ತಿದ್ದವು. ಈಗ ಸಂಖ್ಯೆ 100ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News