ಭಾರತದ ಪ್ರಥಮ ದಲಿತ ಹೊಟೇಲ್ ಉದ್ಯಮಿ: ಎಂ. ನಾಗ್ಲೂ

Update: 2021-04-23 19:30 GMT

ಭಾರತದ ಪ್ರಪ್ರಥಮ ದಲಿತ ಸಮುದಾಯದ ಹೊಟೇಲ್ ಉದ್ಯಮಿ ಎಂ.ನಾಗ್ಲೂ ಅವರ ಆತ್ಮಕತೆ ‘ಮೈದಾರ ನಾಗಯ್ಯ’, 1908ರಲ್ಲೇ ಪ್ರಕಟವಾಗಿತ್ತು. ನಾಗ್ಲೂ ಅವರ ಪುತ್ರ ಎಂ.ಎನ್.ವೆಂಕಟಸ್ವಾಮಿ ಈ ಪುಸ್ತಕವನ್ನು ಬರೆದವರು. ಉದ್ಯಮಿಯಾಗಿ ದಲಿತನೊಬ್ಬನ ಅಸಾಧಾರಣ ಬೆಳವಣಿಗೆಯನ್ನು ಈ ಕೃತಿಯು ಅನಾವರಣಗೊಳಿಸಿದೆ.

ನಾಗ್ಲೂ ಅವರ ಪೂರ್ವಿಕರು ಹಿಂದಿನ ಮದ್ರಾಸ್ ಸಂಸ್ಥಾನಕ್ಕೆ ಸೇರಿದ ರಾಯಲಸೀಮಾ ಪ್ರಾಂತದವರಾಗಿದ್ದಾರೆ. ತಮ್ಮದು ರಾಜಪರಂಪರೆಯ ಕುಟುಂಬವೆಂದು ವೆಂಕಟಸ್ವಾಮಿ ಈ ಪುಸ್ತಕದಲ್ಲಿ ಬರೆದಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ತಮ್ಮ ಕುಟುಂಬವು ಕೆಳಗಿಳಿಯಲು ತನ್ನ ಪೂರ್ವಿಕರೊಬ್ಬರ ‘ಹೀನಾಯ’ ಕೃತ್ಯವು ಕಾರಣವೆಂದು ವೆಂಕಟಸ್ವಾಮಿ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. 1783ರ ಬರಗಾಲದ ಸಮಯವದು. ಊಟಕ್ಕೂ ತತ್ವಾರವುಂಟಾಗಿತ್ತು. ಮಾಲಾ (ಅಲೆಮಾರಿ ಸಮುದಾಯ) ಸಮುದಾಯದ ಗುಂಪೊಂದು ಒಟ್ಟಿಗೆ ಕುಳಿತು, ಸತ್ತ ದನದ ಕೊಳೆತ ಮಾಂಸವನ್ನು ತಿನ್ನುತ್ತಿತ್ತು. ಹಸಿವಿನಿಂದ ಕಂಗೆಟ್ಟಿದ್ದ ನಾಗ್ಲೂ ಅವರ ತಾತ ಮೈದಾರಾ ಗೋವಿಂದೂ ಕೂಡಾ ಅವರೊಂದಿಗೆ ಕುಳಿತು ಮಾಂಸದ ತುಂಡೊಂದನ್ನು ಸೇವಿಸಿದ್ದರಂತೆ. ರಾಜನಿಗೆ ಈ ವಿಷಯ ಗೊತ್ತಾಗಿ ಆತನನ್ನು ಜಾತಿಯಿಂದ ಹೊರಹಾಕಿದರಂತೆ ಮತ್ತು ಆನಂತರ ನಾಗ್ಲೂ ಕುಟುಂಬಿಕರೆಲ್ಲರೂ ಆಸ್ಪಶ್ಯರ ಸ್ಥಾನಮಾನದಲ್ಲಿ ಬದುಕಬೇಕಾಯಿತು.

1799ರ ಶ್ರೀರಂಗಪಟ್ಟಣಂ ಯುದ್ಧದ ಸಂದರ್ಭದಲ್ಲಿ ಗೋವಿಂದೂ ಬ್ರಿಟಿಷರ ಕಾಲ್ದಳಕ್ಕೆ ಬೇಕಾದ ಎತ್ತಿನ ಗಾಡಿಗಳನ್ನು ಪೂರೈಕೆ ಮಾಡುತ್ತಿದ್ದರು ಹಾಗೂ ಅಪಾರ ಹಣವನ್ನು ಸಂಪಾದಿಸಿದ್ದರು. ತನ್ನ ಪುತ್ರ ಪೊಲಯ (ನಾಗ್ಲೂವಿನ ತಂದೆ) ಇನ್ನೂ ಬಾಲಕನಾಗಿದ್ದಾಗಲೇ ಗೋವಿಂದೂ ನಿಧನರಾದರು. ತನ್ನ ತಂದೆ ಕೂಡಿಹಾಕಿದ್ದ ಅಪಾರ ಸಂಪತ್ತ್ತನ್ನು ಅವಲಂಬಿಸಿ ಪೊಲಯ ನೆಮ್ಮದಿಯ ಜೀವನ ನಡೆಸಿದ. ಇದರ ಜೊತೆಗೆ ಆತ ಮಾಟಗಾರನಾಗಿಯೂ ಹೆಸರು ಮಾಡಿದ್ದ. ಆದರೆ ನಾಗ್ಲೂ ಬಾಲಕನಾಗಿದ್ದಾಗಲೇ ಪೊಲಯ ನಿಧನರಾದರು. ನಾಗ್ಲೂವಿನ ಇಬ್ಬರು ಸೋದರಿಯರನ್ನು ಮದುವೆ ಮಾಡಿಕೊಟ್ಟ ಆನಂತರ ಆತನ ತಾಯಿ ಆತನನ್ನು ಹೈದರಾಬಾದ್‌ಗೆ ಕರೆತಂದು ತನ್ನ ಸೋದರನ ಮನೆಯಲ್ಲಿ ಉಳಿದುಕೊಂಡಳು. ಆದರೆ ಕೆಲವೇ ತಿಂಗಳುಗಳಲ್ಲಿ ಆಕೆ ವಿಧಿವಶರಾದರು..

ಆನಂತರ ನಾಗ್ಲೂ, ಜಲ್ನಾದಲ್ಲಿರುವ ಬ್ರಿಟಿಷರ ಮಿಲಿಟರಿ ನೆಲೆಗೆ ಎತ್ತಿನ ಗಾಡಿಗಳಲ್ಲಿ ಸರಂಜಾಮುಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದರು. ವಸಾಹತುಶಾಹಿ ಆಕ್ರಮಣದ ಆರಂಭದ ದಿನಗಳಲ್ಲಿ ಬ್ರಿಟಿಷ್ ಸೇನಾಧಿಕಾರಿಗಳು ಬಹುತೇಕವಾಗಿ ಮಚಲಿಪಟ್ಟಣಂನ ದಲಿತರನ್ನು ಕೆಳಮಟ್ಟದ ಸೇವಕರಾಗಿ ಹಾಗೂ ಸಹಾಯಕರಾಗಿ ನೇಮಕ ಮಾಡಿಕೊಳ್ಳುತ್ತಿದ್ದರು. ಆಗ ಮಚಲಿಪಟ್ಟಣಂ ಬೃಹತ್ ವಾಣಿಜ್ಯ ಕೇಂದ್ರವಾಗಿತ್ತು ಹಾಗೂ ಕೋರಮಂಡಲ ಕರಾವಳಿಯಲ್ಲಿ ಯುರೋಪಿಯನ್ನರ ಆಗಮನದ ಕೇಂದ್ರವಾಗಿತ್ತು. ನಾಗ್ಲೂ ಆ ಸಮಯದಲ್ಲಿ ಜಲ್ನಾದ ರಾಯಲ್ ಹಾರ್ಸ್ ಫಿರಂಗಿದಳದ ಲೆಫ್ಟಿನೆಂಟ್ ಕರ್ನಲ್ ಅವರ ನಿವಾಸದಲ್ಲಿ ಮನೆಗೆಲಸದ ಆಳಾಗಿ ನೇಮಕಗೊಂಡಿದ್ದರು. ಆನಂತರ ಅವರು ನಾಗಪುರ ಸಮೀಪದ ಕೆಂಪ್ಟಿಗೆ ತೆರಳಿದರು ಮತ್ತು ವಿವಿಧ ಬ್ರಿಟಿಷ್ ಸೇನಾಧಿಕಾರಿಗಳಿಗೆ ಮನೆಗೆಲಸದ ಆಳಾಗಿ ಮತ್ತು ಬಾಣಸಿಗನಾಗಿ 1857ರವರೆಗೆ ಕೆಲಸ ಮಾಡಿದರು.

1857ರ ಆನಂತರ ನಾಗ್ಲೂ ಅವರು ನಾಗಪುರದಿಂದ ಬಾಂಬೆ (ಈಗಿನ ಮುಂಬೈ)ವರೆಗೆ ಎತ್ತಿನ ಗಾಡಿಯಲ್ಲಿ ಸರಕು ಸಾಗಿಸುವ ಉದ್ಯಮವನ್ನು ಆರಂಭಿಸಿದರು ಹಾಗೂ ಇದೇ ವೇಳೆ ಬಾಂಬೆ ಪದಾತಿದಳದ ಕ್ಯಾಪ್ಟನ್ ಆರ್.ಎಚ್. ಬೋಲ್ಟನ್ ಹಾಗೂ ‘ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೆ’ಯ ಮುಖ್ಯ ಇಂಜಿನಿಯರ್ ರಾಬರ್ಟ್ ಬೆರೆಟನ್‌ರಿಗಾಗಿ ಕೆಲಸ ಮಾಡಿದರು ಈ ಇಬ್ಬರೂ ಇಂಜಿನಿಯರ್‌ಗಳು ನಾಗ್ಲೂ ಅವರಿಗೆ ರೈಲ್ವೆ ಸ್ಲೀಪರ್‌ಗಳಿಗೆ ಬೇಕಾದ ಬಾಳಿಕೆ ಬರುವಂತಹ ಮರದ ದಿಮ್ಮಿಗಳ ಖರೀದಿಯ ಜವಾಬ್ದಾರಿಯನ್ನು ವಹಿಸಿದರು. ರೈಲು ದಿಮ್ಮಿಗಳ ಗುತ್ತಿಗೆಯಿಂದ ದೊರೆಯುವ ಲಾಭಗಳು ಹಾಗೂ ಸಾರಿಗೆ ಉದ್ಯಮದಿಂದ ಬಂದ ಲಾಭದಿಂದ ನಾಗ್ಲೂ ಅವರು 1864ರ ಮಾರ್ಚ್ 20ರಂದು ನಾಗಪುರದಲ್ಲಿ ಹೊಟೇಲ್ ಒಂದನ್ನು ಸ್ಥಾಪಿಸಿದರು. ಬ್ರಿಟಿಷ್ ವಸಾಹತುಶಾಹಿಯ ಅಧಿಕಾರದ ಬಲವರ್ಧನೆ ಹಾಗೂ ಕೇಂದ್ರೀಯ ಪ್ರಾಂತದ ರಚನೆಯ ಜೊತೆಗೆ ರೈಲ್ವೆ ಮಾರ್ಗಗಳ ವಿಸ್ತರಣೆಯು ವಿವಿಧ ಪ್ರದೇಶಗಳ ನಡುವೆ ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸಿತು. ಇದಕ್ಕಿಂತಲೂ ಹೆಚ್ಚಾಗಿ ನಾಗಪುರವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿರುವ ಬ್ರಿಟಿಷ್ ಅಧಿಕಾರಿಗಳು ಹಾಗೂ ವ್ಯಾಪಾರಿಗಳು ಒಳನಾಡಿನ ಪ್ರದೇಶಗಳನ್ನು ಸಂಪರ್ಕಿಸುವುದು ಅಧಿಕಗೊಂಡಿತು. ಇದರಿಂದಾಗಿ ನಾಗ್ಲೂ ಅವರ ಹೊಟೇಲ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಇಂಗ್ಲಿಷ್ ಗ್ರಾಹಕರು ಆಗಮಿಸುವಂತಾಯಿತು. ಅಷ್ಟೇ ಅಲ್ಲದೆ, ಕೇಂದ್ರೀಯ ಪಡೆಗಳ ಪ್ರಥಮ ಮುಖ್ಯ ಆಯುಕ್ತರಾದ ರಿಚರ್ಡ್ ಟೆಂಪಲ್ ಅವರು ನಾಗ್ಲೂಗೆ ಉಚಿತವಾಗಿ ಜಮೀನು, ಗ್ರಾಹಕರು ಹಾಗೂ ಪ್ರೋತ್ಸಾಹವನ್ನು ನೀಡುವ ಮೂಲಕ ಅವರ ಉದ್ಯಮವನ್ನು ವಿಸ್ತರಿಸಲು ನೆರವಾದರು.

ಕೇಂದ್ರೀಯ ಪ್ರಾಂತದಲ್ಲಿ ಉದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ವಿಪುಲ ಅವಕಾಶಗಳಿರುವುದನ್ನು ಪ್ರಚಾರ ಮಾಡಲು 1866ರಲ್ಲಿ ರಿಚರ್ಡ್ ಟೆಂಪಲ್ ಅವರು ನಾಗಪುರದಲ್ಲಿ ವಸ್ತುಪ್ರದರ್ಶವೊಂದನ್ನು ಏರ್ಪಡಿಸಿದರು. ಈ ವಸ್ತುಪ್ರದರ್ಶನದಲ್ಲಿ ನಾಗ್ಲೂ ಅವರಿಗೆ ಸಾರಿಗೆ, ಆಹಾರ ಹಾಗೂ ವಸತಿ ವ್ಯವಸ್ಥೆಯ ಉಸ್ತುವಾರಿಯನ್ನು ವಹಿಸಲಾಯಿತು. ಬ್ರಿಟಷ್ ಆಡಳಿತದ ಈ ಅಧಿಕೃತ ಪ್ರೋತ್ಸಾಹವು ನಾಗ್ಲೂ ಅವರಿಗೆ ಆರ್ಥಿಕವಾಗಿ ತನ್ನ ಉದ್ಯಮವನ್ನು ಬೆಳೆಸಲು ಮತ್ತು ವಿಶೇಷವಾಗಿ ಜಾತಿ ಪದ್ಧತಿ ಬಲವಾಗಿ ಬೇರು ಬಿಟ್ಟಿರುವ ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ಸಾಧ್ಯವಾಯಿತು. ವಸ್ತುಪ್ರದರ್ಶನದಲ್ಲಿ ನಾಗ್ಲೂ ಅವರು ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಹಾಗೂ ಬ್ರಿಟಿಷ್ ಅಧಿಕಾರಿಗಳು ನೀಡಿದ ಪ್ರೋತ್ಸಾಹವು, ಅವರಿಗೆ ಸಮಾಜದಲ್ಲಿನ ತನ್ನ ಅಸ್ಪಶ್ಯತಾ ಸ್ಥಾನಮಾನವನ್ನು ಮೀರಿ ನಿಲ್ಲಲು ಸಾಧ್ಯವಾಯಿತು. ಸ್ಥಳೀಯ ಮೇಲ್ಜಾತಿ ಹಿಂದೂಗಳು ಮತ್ತು ಶ್ರೀಮಂತವರ್ಗದ ಮುಸ್ಲಿಮರು ಕೂಡಾ ವಿಶೇಷ ಸಮಾರಂಭಗಳಲ್ಲಿ ಊಟೋಪಚಾರದ ವ್ಯವಸ್ಥೆಯ ಉಸ್ತುವಾರಿಯನ್ನು ನಾಗ್ಲೂ ಅವರಿಗೆ ವಹಿಸ ತೊಡಗಿದರು.

ನಾಗ್ಲೂ ಅವರ ಹೊಟೇಲ್ ಜಾಗತಿಕವಾಗಿ ಹೆಸರು ಗಳಿಸಿತು. ಬ್ರಿಟನ್ ಹಾಗೂ ಅಮೆರಿಕದಿಂದ ಬಂದ ಪ್ರವಾಸಿಗರು ತಮ್ಮ ಪ್ರವಾಸಕಥನಗಳಲ್ಲಿ ನಾಗ್ಲೂ ಅವರ ಹೊಟೇಲ್ ಬಗ್ಗೆ ಪ್ರಸ್ತಾವಿಸಿದ್ದಾರೆ. ‘ಪಂಚ್’ ಎಂಬ ಬ್ರಿಟಿಷ್ ಪತ್ರಿಕೆಯು ಈ ಹೊಟೇಲ್‌ನ ಕುರಿತಾಗಿ ಜಾಹೀರಾತನ್ನು ಕೂಡಾ ಪ್ರಕಟಿಸಿತ್ತು. ನಾಗ್ಲೂ ಅವರ ಹೊಟೇಲ್ ಉಚ್ಛ್ರಾಯದ ಸ್ಥಿತಿಯಲ್ಲಿದ್ದಾಗ ಆಗಿನ ಪ್ರಸಿದ್ಧ ಉದ್ಯಮಿ ಟಾಟಾ, ಅದನ್ನು 1 ಲಕ್ಷ ರೂ.ಗೆ ಖರೀದಿಸಲು ಬಯಸಿದ್ದರು. ಆದರೆ ನಾಗ್ಲೂ ಅದನ್ನು ಮಾರಾಟ ಮಾಡಲು ನಿರಾಕರಿಸಿದರು. ಅವರು ಯಶಸ್ಸಿನ ಉತ್ತುಂಗವನ್ನು ತಲುಪುತ್ತಿದ್ದಂತೆಯೇ, ಮೇಲ್ಜಾತಿಯ ಹಿಂದೂಗಳ ಜೊತೆ ದ್ವೇಷವನ್ನು ಕಟ್ಟಿಕೊಂಡರು ಮತ್ತು ಕೋರ್ಟ್ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಅಂತಿಮವಾಗಿ ದಾರಿಕಾಣದೆ ಅವರು ತನ್ನ ಆಸ್ತಿಯನ್ನು ಬ್ರಿಟಿಷರಿಗೆ ಸಲ್ಲಿಸಬೇಕಾಯಿತು. ಇದಕ್ಕಾಗಿ ಅವರಿಗೆ ಕೇವಲ 10 ಸಾವಿರ ರೂ. ಪರಿಹಾರವಷ್ಟೇ ದೊರೆಯಿತು. ಆನಂತರ ಬ್ರಿಟಿಷರು ಈ ಹೊಟೇಲನ್ನು ಬೆಂಗಾಲ್-ನಾಗಪುರ ರೈಲ್ವೆ ಮುಖ್ಯ ಕಾರ್ಯಾಲಯವಾಗಿ ಪರಿವರ್ತಿಸಿದರು. ತನ್ನ ಪತನದಿಂದ ತೀವ್ರವಾಗಿ ನೊಂದ ನಾಗ್ಲೂ ಅವರು ಪಾರ್ಶ್ವವಾಯುವಿಗೆ ತುತ್ತಾದರು ಹಾಗೂ ಕೆಲ ಸಮಯದ ಬಳಿಕ ಕೊನೆಯುಸಿರೆಳೆದರು. ವಸಾಹತುಶಾಹಿ ಕಾಲದ ಭಾರತದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬ ಜಾತಿಯ ಎಲ್ಲೆಗಳನ್ನು ಮೀರಿ ತನ್ನ ಸಾಮರ್ಥ್ಯದಿಂದ ಅಂತರ್‌ರಾಷ್ಟ್ರೀಯ ಮಟ್ಟದ ಹೆಸರಾಂತ ಉದ್ಯಮಿಯಾದ ನಾಗ್ಲೂ ಅವರ ಬದುಕು ನಿಜಕ್ಕೂ ರೋಚಕ ಹಾಗೂ ಆದರ್ಶಪ್ರಾಯವಾಗಿದೆ.

theprint.in

Writer - ಚಿನ್ನಯ್ಯ ಜಂಗಮ್

contributor

Editor - ಚಿನ್ನಯ್ಯ ಜಂಗಮ್

contributor

Similar News