ಕೊರೋನ ದುರಂತ: ಆರೋಪಿಗಳ ರಕ್ಷಣೆಗೆ ನಿಂತಿದೆಯೇ ಸು.ಕೋ.?

Update: 2021-04-26 06:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸ್ವಾತಂತ್ರೋತ್ತರದಲ್ಲಿ ಪ್ರಕೃತಿ ವಿಕೋಪವೂ ಸೇರಿದಂತೆ ನೂರಾರು ವಿಪತ್ತುಗಳು ಭಾರತವನ್ನು ಕಾಡಿವೆ. ಅವುಗಳೆಲ್ಲವನ್ನೂ ಪರಿಣಾಮಕಾರಿಯಾಗಿ ಎದುರಿಸಿ ವಿಶ್ವದ ಮುಂದೆ ತಲೆಯೆತ್ತಿ ನಿಂತಿತ್ತು ಭಾರತ. ಭೂಕಂಪ, ಪ್ಲೇಗ್, ಸುನಾಮಿ ಇವೆಲ್ಲವನ್ನು ಎದುರಿಸುತ್ತಾ ಭಾರತ ಪ್ರತಿರೋಧಕ ಶಕ್ತಿಯನ್ನು ಗಳಿಸುತ್ತಾ ಬಂತು. ಈ ವಿಪತ್ತುಗಳಿಂದ ದೇಶ ಎಂದೂ ಆರ್ಥಿಕವಾಗಿ ಕುಸಿದು ಕೂತಿರಲಿಲ್ಲ. ಆದರೆ ಇದೇ ಮೊದಲ ಬಾರಿ, ಕೊರೋನ ಕಾರಣಕ್ಕಾಗಿ ಭಾರತವನ್ನು ವಿಶ್ವ ಅನುಕಂಪದ ದೃಷ್ಟಿಯಿಂದ ನೋಡುತ್ತಿದೆ. ಭಾರತದ ಸ್ಥಿತಿಗಾಗಿ ಪಾಕಿಸ್ತಾನದಂತಹ ಪುಟ್ಟ ರಾಷ್ಟ್ರ ಮರುಗುವಂತಹ, ಸಹಾಯ ಹಸ್ತ ಚಾಚುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಟಲಿ, ಅಮೆರಿಕ, ಬ್ರಿಟನ್ ಸೇರಿದಂತೆ ಪ್ರಮುಖ ದೇಶಗಳು ಭಾರತಕ್ಕೆ ಈಗಾಗಲೇ ಪ್ರಯಾಣ ನಿರ್ಬಧವನ್ನು ಹೇರಿವೆ. ಇದು ಭಾರತದ ಆರ್ಥಿಕ ಗಾಯಗಳಿಗೆ ಇನ್ನಷ್ಟು ಬರೆ ಎಳೆಯಲಿದೆ. ಭಾರತ ವಿಶ್ವದ ಮುಂದೆ ಇಷ್ಟೊಂದು ದಯನೀಯ ಸ್ಥಿತಿಯಲ್ಲಿ ಎಂದೂ ನಿಂತಿರಲಿಲ್ಲ.

ಇಂದು ವಿವಿಧ ದೇಶಗಳು ಭಾರತದ ಕಡೆಗೆ ನೆರವಿನ ಕೈ ಚಾಚುತ್ತಿವೆಯಾದರೂ, ಭಾರತ ತನಗೆ ತಾನೇ ಮಾಡಿಕೊಂಡ ಘಾಸಿಯ ಕುರಿತಂತೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿ ಬರುತ್ತಿವೆ. ಎರಡನೇ ಅಲೆಯನ್ನು ಎದುರಿಸಲು ಇರುವ ಎಲ್ಲ ಅವಕಾಶಗಳನ್ನು ಭಾರತ ಕೈ ಚೆಲ್ಲಿತು. ಮೊದಲನೇ ಅಲೆಯ ಹೊತ್ತಿಗೆ ಭಾರತ ಅನಿವಾರ್ಯವಾಗಿ ಲಾಕ್‌ಡೌನ್‌ನ್ನು ಅವಲಂಬಿಸಿತು. ಈ ಸಂದರ್ಭದಲ್ಲಿ ದೇಶದ ಜನರೂ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದರು. ಆದರೆ ಇದೇ ಹೊತ್ತಿಗೆ, ಕೊರೋನವನ್ನು ಎದುರಿಸಲು ಭವಿಷ್ಯಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿತ್ತು. ಲಾಕ್‌ಡೌನ್‌ನಿಂದ ಕೊರೋನವನ್ನು ಎದುರಿಸಲು ಸಾಧ್ಯವಿಲ್ಲ. ಬೀಸುವ ದೊಣ್ಣೆಯಿಂದ ಪಾರಾಗುವುದಕ್ಕಷ್ಟೇ ಲಾಕ್‌ಡೌನ್‌ನ್ನು ವಿವಿಧ ದೇಶಗಳು ಬಳಸಿದ್ದವು. ಕೊರೋನವನ್ನು ಎದುರಿಸಲು ಲಾಕ್‌ಡೌನನ್ನೇ ನೆಚ್ಚಿ ಕೂತ ಒಂದೇ ಒಂದು ದೇಶ ಭಾರತ. ಪೂರ್ವ ಸಿದ್ಧತೆಯ ಭಾಗವಾಗಿ ಭಾರತ ಆಕ್ಸಿಜನ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿತ್ತು. ಆದರೆ ಅತಿ ಹೆಚ್ಚು ಆಕ್ಸಿಜನ್‌ನ್ನು ಭಾರತ ಕಳೆದ ವರ್ಷ ರಫ್ತು ಮಾಡಿರುವುದು ವರದಿಗಳಿಂದ ಬಹಿರಂಗವಾಗಿದೆ.

‘ಸ್ವದೇಶಿ ಲಸಿಕೆ’ಯ ಮಹಿಮೆಯನ್ನು ಸ್ವಯಂ ಕೊಂಡಾಡುತ್ತಾ, ವಿಶ್ವಕ್ಕೆ ಲಸಿಕೆಗಳನ್ನು ರಫ್ತು ಮಾಡಿರುವ ಬಗ್ಗೆ ಕೊಚ್ಚಿಕೊಳ್ಳುತ್ತಾ ಭಾರತ ಕಾಲಹರಣ ಮಾಡಿತು. ಯೋಜನೆಗಳನ್ನು ರೂಪಿಸಬೇಕಾದ, ಅದಕ್ಕಾಗಿ ಹಣವನ್ನು ಬಿಡುಗಡೆ ಮಾಡಬೇಕಾಗಿದ್ದ ಪ್ರಧಾನಿ, ಚುನಾವಣಾ ರ್ಯಾಲಿಗಳಲ್ಲಿ ಮಗ್ನರಾದರು. ಕೋಟ್ಯಂತರ ಜನರು ಸೇರುವ ಕುಂಭಮೇಳಕ್ಕೆ ಅನುಮತಿ ನೀಡುವ ಮೂಲಕ ಇಡೀ ದೇಶವನ್ನು ಗೊತ್ತಿದ್ದೂ ಕೊರೋನಾ ಬಾಯಿಗೆ ತಳ್ಳಿದರು. ಈಗ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ‘ಎಚ್ಚರ, ಕರ್ಫ್ಯೂ, ಲಾಕ್‌ಡೌನ್’ ಎಂಬಿತ್ಯಾದಿಯಾಗಿ ಬಡಬಡಿಸುತ್ತಿದ್ದಾರೆ. ಆಕ್ಸಿಜನ್, ವೆಂಟಿಲೇಟರ್, ಆಸ್ಪತ್ರೆ ಬೆಡ್‌ಗಳಿಗೆ ಗಮನ ನೀಡಿದ್ದಿದ್ದರೆ, ಈಗ ನಡೆಯುತ್ತಿರುವ ಸಾವುಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಬಹುದಿತ್ತು. ಆದರೆ ಇಂದು ಆಸ್ಪತ್ರೆಗಳು ಅಸಹಾಯಕವಾಗಿವೆ. ಸ್ವತಃ ವೈದ್ಯರುಗಳು ಹತಾಶರಾಗಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಸಾವುಗಳ ಹೊಣೆಯನ್ನು ನೇರವಾಗಿ ಆಳುವವರೇ ವಹಿಸಿಕೊಳ್ಳಬೇಕಾಗಿದೆ. ದೇಶದ ಜನರ ಕುರಿತ ಕಾಳಜಿಯನ್ನು ಸಂಪೂರ್ಣ ನಿರ್ಲಕ್ಷಿಸಿದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ.

ಆದುದರಿಂದ, ಈ ನಿರ್ಲಕ್ಷಕ್ಕೆ ಕಾರಣವಾದವರು ಕಟಕಟೆಯಲ್ಲಿ ನಿಲ್ಲಲೇ ಬೇಕಾಗಿದೆ. ನ್ಯಾಯಾಲಯಗಳು ಸ್ವಯಂ ಪ್ರಕರಣವನ್ನು ದಾಖಲಿಸಿ ಸರಕಾರವನ್ನು ಪ್ರಶ್ನಿಸುವ ಸಂದರ್ಭ ಇದಾಗಿದೆ. ಈಗಾಗಲೇ ವಿವಿಧ ಹೈಕೋರ್ಟ್‌ಗಳು ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿವೆ ಕೂಡ. ವಿಪರ್ಯಾಸವೆಂದರೆ, ಕೊರೋನಕ್ಕೆ ಸಂಬಂಧಿಸಿ ಸರಕಾರಗಳ ವೈಫಲ್ಯಗಳನ್ನು ಹೈಕೋರ್ಟ್‌ಗಳು ವಿಚಾರಣೆಗೆ ತೆಗೆದುಕೊಂಡ ಬೆನ್ನಿಗೇ, ಸುಪ್ರೀಂಕೋರ್ಟ್ ಈ ಬಗ್ಗೆ ಏಕಾಏಕಿ ಆಸಕ್ತಿ ವಹಿಸಿತು. ಹೈಕೋರ್ಟ್‌ನ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸಿತು. ಈ ಹಿಂದೆ, ಕಾರ್ಮಿಕರ ವಲಸೆಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ಸುಪ್ರೀಂಕೋರ್ಟ್ ಇದೀಗ, ಹೈಕೋರ್ಟ್‌ಗಳು ಸರಕಾರದ ವೈಫಲ್ಯಗಳನ್ನು ವಿಚಾರಣೆ ನಡೆಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದೆ.

ಸುಪ್ರೀಂಕೋರ್ಟ್‌ನ ಅನಿರೀಕ್ಷಿತ ಆಸಕ್ತಿಗೆ ಕಾರಣ ಹುಡುವುದು ಕಷ್ಟವೇನಿಲ್ಲ. ಹೈಕೋರ್ಟ್ ನಡೆಸುತ್ತಿರುವ ವಿಚಾರಣೆ ಕೇಂದ್ರದ ನಿದ್ದೆಗೆಡಿಸಿದೆ. ಯಾಕೆಂದರೆ, ಕೊರೋನ ಸಂಬಂಧಿತವಾಗಿ ಕೇಂದ್ರ ಮತ್ತು ಸರಕಾರಗಳು ಭಾರೀ ತಪ್ಪುಗಳನ್ನು ಮಾಡಿವೆ. ಹೈಕೋರ್ಟ್ ಈ ವಿಚಾರಣೆಯನ್ನು ಗಂಭೀರವಾಗಿ ಕೈಗೆತ್ತಿಕೊಂಡರೆ ಸರಕಾರಗಳ ಕುತ್ತಿಗೆಗೆ ಬರುತ್ತದೆ. ಆದುದರಿಂದಲೇ ಕೇಂದ್ರ ಸರಕಾರ ಈಗಾಗಲೇ ತನಗೆ ಪೂರಕವಾದ ಹಲವು ತೀರ್ಪುಗಳನ್ನು ನೀಡಿದ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸುವಂತೆ ಮಾಡಿದೆ. ಆದರೆ ಸುಪ್ರೀಂಕೋರ್ಟ್‌ನ ಹಲವು ನ್ಯಾಯವಾದಿಗಳು ಇದರ ವಿರುದ್ಧ ಧ್ವನಿಯೆತ್ತಿದ್ದಾರೆ. ಹೈಕೋರ್ಟ್‌ನ ಅಧಿಕಾರದ ಮೇಲೆ ಸವಾರಿ ಮಾಡುತ್ತಿರುವ ಸುಪ್ರೀಂಕೋರ್ಟ್‌ನ ವರ್ತನೆಯ ಕುರಿತಂತೆ ಬಹಿರಂಗವಾಗಿ ಟೀಕಿಸಿದ್ದಾರೆ.

ಇಂದು ಕೊರೋನದಿಂದ ದೇಶ ತತ್ತರಿಸುತ್ತಿದ್ದರೆ ಅದರ ಹಿಂದೆ ಸುಪ್ರೀಂಕೋರ್ಟ್‌ನ ಪಾತ್ರವಿದೆ ಎಂದು ಸಂವಿಧಾನ ತಜ್ಞರು ಆರೋಪಿಸುತ್ತಾರೆ. ಸರಕಾರದ ಅನಿರೀಕ್ಷಿತ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಈ ದೇಶದ ಬಡಜನರು ಅನುಭವಿಸಿದ ಸಂಕಷ್ಟಗಳನ್ನು ಸುಪ್ರೀಂಕೋರ್ಟ್ ಆಲಿಸುವುದಕ್ಕೆ, ಕಣ್ತೆರೆದು ನೋಡುವುದಕ್ಕೆ ನಿರಾಕರಿಸಿತು. ಅಷ್ಟೇ ಅಲ್ಲ, ಅದೇ ಸಂದರ್ಭದಲ್ಲಿ ರಾಷ್ಟ್ರೀಯ ಕೋವಿಡ್ ಯೋಜನೆಯೊಂದನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ಆದೇಶ ನೀಡಲು ಮುಂದಾಗಿದ್ದರೆ ಇಂದು ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಚುನಾವಣಾ ರ್ಯಾಲಿಗಳನ್ನು ಹಮ್ಮಿಕೊಂಡ ನಾಯಕರ ವಿರುದ್ಧ ನಿಷ್ಠುರವಾಗಿ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರೂ ಇಂದು ಜನರು ಸ್ಮಶಾನದಲ್ಲಿ ಹೆಣಗಳನ್ನಿಟ್ಟು ಸರದಿಗೆ ಕಾಯುವ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ.

ಕುಂಭಮೇಳವನ್ನು ತಡೆಯುವುದಕ್ಕೂ ಸುಪ್ರೀಂಕೋರ್ಟ್ ಆಸಕ್ತಿವಹಿಸಲಿಲ್ಲ. ಈಗ ಹೈಕೋರ್ಟ್‌ಗಳು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ಮುಂದಾದಾಗ ಸುಪ್ರೀಂಕೋರ್ಟ್ ಎಚ್ಚರಗೊಂಡಿದೆ. ಆದರೆ, ಈ ಹಿಂದೆ ಕೇಂದ್ರ ಸರಕಾರದ ಪರವಾಗಿ ನಿಂತ ಸುಪ್ರೀಂಕೋರ್ಟ್ ಈ ಬಾರಿ ಸಂಬಂಧಪಟ್ಟವರನ್ನು ಕಟಕಟೆಯಲ್ಲಿ ನಿಲ್ಲಿಸುತ್ತದೆ ಎನ್ನುವುದನ್ನು ಊಹಿಸುವುದೂ ಸಾಧ್ಯವಿಲ್ಲ. ಬದಲಿಗೆ ಕೇಂದ್ರ ಸರಕಾರವನ್ನು ರಕ್ಷಿಸುವುದಕ್ಕಾಗಿಯೇ ಸುಪ್ರೀಂಕೋರ್ಟ್, ತನ್ನ ಮುಂದೆ ಅಧಿಕೃತವಾಗಿ ಬಾರದ ಪ್ರಕರಣವೊಂದನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದೆ. ಕೊರೋನ ದುರಂತದಷ್ಟೇ ಆತಂಕಕಾರಿಯಾಗಿದೆ ಸುಪ್ರೀಂಕೋರ್ಟ್‌ನ ಈ ನಡೆ. ಕೇಂದ್ರ ಸರಕಾರದ ವೈಫಲ್ಯಗಳನ್ನು ಮುಚ್ಚಿಡುವುದೇ ತನ್ನ ಕರ್ತವ್ಯ ಎಂದು ಸುಪ್ರೀಂಕೋರ್ಟ್ ಬಾವಿಸಿ ಕಾರ್ಯ ನಿರ್ವಹಿಸಿದರೆ, ಈ ದೇಶದ ಜನಸಾಮಾನ್ಯರ ಸಂಕಟಗಳಿಗೆ ನ್ಯಾಯ ನೀಡುವವರು ಯಾರು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News