ಲಿಂಗಭೇದದ ವಿರುದ್ಧ ಸಿಡಿದೆದ್ದ ದಲಿತ ಹೋರಾಟಗಾರ್ತಿ ಕೌಸಲ್ಯಾ ಬೈಸಾಂತ್ರಿ

Update: 2021-04-26 19:30 GMT

ದಲಿತ ಹೋರಾಟಗಾರ್ತಿ, ಲೇಖಕಿ, ಬೋಧಕಿ ಕೌಸಲ್ಯಾ ಬೈಸಾಂತ್ರಿ, ದಲಿತ ಮಹಿಳೆಯರ ಧ್ವನಿಯನ್ನು 80ರ ದಶಕದಲ್ಲಿ ಆಗಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರಿಗೆ ಕೇಳಿಸುವಂತೆ ಮಾಡಿದ ಧೀಮಂತ ನಾಯಕಿ.

‘ದೋಹ್ರಾ ಅಭಿಶಾಪ್’ ಆತ್ಮಕಥನದ ಮೂಲಕ ಅವರು ತನ್ನ ಬದುಕಿನ ಸಿಹಿಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅತ್ಮಕಥನವನ್ನು ಬರೆದಂತಹ ಪ್ರಪ್ರಥಮ ದಲಿತ ಮಹಿಳೆಯೆನಿಸಿಕೊಂಡಿದ್ದಾರೆ. ಅವರ ದೋಹ್ರಾ ಅಭಿಶಾಪ್ ಆತ್ಮಕಥನವು 1999ರಲ್ಲಿ ಪ್ರಕಟವಾಗಿತ್ತು.

ಕೌಸಲ್ಯಾ ಅವರ ತಂದೆ ನಾಗಪುರದ ಎಕ್ಸ್‌ಪ್ರೆಸ್ ಮಿಲ್‌ನಲ್ಲಿ ಯಂತ್ರಗಳಿಗೆ ಎಣ್ಣೆಯನ್ನು ಲೇಪಿಸುವ ಉದ್ಯೋಗಿಯಾಗಿದ್ದರು ಹಾಗೂ ಆಕೆಯ ತಾಯಿ ಅದೇ ಮಿಲ್‌ನಲ್ಲಿ ಜವಳಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗನಿಗೆ ಶಿಕ್ಷಣ ನೀಡಲು ಅವರು ಕಷ್ಟಪಟ್ಟು ದುಡಿಯುತ್ತಿದ್ದರು. ಕೌಸಲ್ಯಾ ಅವರು ಧೈರ್ಯ ಹಾಗೂ ಕಠಿಣ ಪರಿಶ್ರಮವನ್ನು ತನ್ನ ತಂದೆತಾಯಿಗಳಿಂದ ಕಲಿತುಕೊಂಡರು.

ಬಾಲ್ಯದಲ್ಲೇ ಕೌಸಲ್ಯಾ ಅವರು ಅಂಬೇಡ್ಕರ್ ಸಿದ್ಧಾಂತದಿಂದ ಪ್ರೇರಿತರಾಗಿದ್ದರು. ‘ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಹೋರಾಟ’ ಸಂಘಟನೆಯ ಯುವನಾಯಕಿಯಾಗಿ ಹೊರಹೊಮ್ಮಿದರು. ಅವರು ಜಯಾ ಬಾಯಿ ಚೌಧುರಿ ವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದರು. ದಲಿತ ಸಮುದಾಯದ ಪ್ರಬಲ ನಾಯಕಿ ಹಾಗೂ ಸ್ತ್ರೀವಾದಿ ಚಳವಳಿಯ ನಾಯಕಿಯಾದ ಜಯಾ ಬಾಯಿ ಚೌಧುರಿ ಅವರು ಯುವ ದಲಿತ ಬಾಲಕಿಯರ ಶಿಕ್ಷಣಕ್ಕಾಗಿ ಸತತವಾಗಿ ಹೋರಾಡಿದ್ದರು. ಜಯಾ ಬಾಯಿ ಚೌಧುರಿಯವರಿಂದ ಕೌಸಲ್ಯಾ ಅಪಾರವಾಗಿ ಪ್ರೇರಿತರಾಗಿದ್ದರು. ಸಣ್ಣ ವಯಸ್ಸಿನಿಂದಲೇ ಕೌಸಲ್ಯಾ ಅವರು ಮಹಿಳೆಯರ ಹಕ್ಕುಗಳ ಬಗ್ಗೆ ತುಂಬಾ ಸಂವೇದನೆ ಹಾಗೂ ಕಾಳಜಿಯನ್ನು ಹೊಂದಿದ್ದರು.

ಶಿಕ್ಷಣದ ಬಗ್ಗೆ ಅಪಾರವಾದ ಅಸ್ಥೆ ಹೊಂದಿದ್ದ ಕೌಸಲ್ಯಾ 21ನೇ ವಯಸ್ಸಿನಲ್ಲಿ ವಿವಾಹವಾದರು. ತನ್ನ ಸ್ನೇಹಿತೆಯರು ಹಾಗೂ ತನ್ನ ವಯಸ್ಸಿನ ಇತರ ಮಹಿಳೆಯರಿಗೆ ಹೋಲಿಸಿದರೆ ಆಕೆ ಮದುವೆಯಾದುದು ಸ್ವಲ್ಪ ತಡವೇ ಎನ್ನಬಹುದು. ಅಂಬೇಡ್ಕರ್‌ವಾದಿ ವಿದ್ಯಾರ್ಥಿಗಳ ಚಳವಳಿಯಲ್ಲಿ ಕೌಸಲ್ಯಾ ಅವರು ದೇವೇಂದ್ರ ಬೈಸಾಂತ್ರಿಯವರನ್ನು ಭೇಟಿಯಾದರು. ಆನಂತರ ಅವರಿಬ್ಬರೂ ನ್ಯಾಯಾಲಯದ ಮೂಲಕ ವಿವಾಹವಾದರು.

ಆದರೆ ಅವರ ದಾಂಪತ್ಯ ಜೀವನವು ಆಕೆಗೆ ಸಂತಸಕ್ಕಿಂತ ಹೆಚ್ಚಾಗಿ ನೋವನ್ನೇ ತಂದುಕೊಟ್ಟಿತು. ಕಾಲ ಕಳೆದಂತೆ ಆಕೆಯ ಪತಿಯ ಮೇಲೆ ಬ್ರಾಹ್ಮಣ್ಯವಾದಿ ಪಿತೃಪ್ರಧಾನ ವ್ಯವಸ್ಥೆಯ ಪ್ರಭಾವವುಂಟಾಯಿತು. ಪತಿಯೊಂದಿಗೆ ವಿರಸವುಂಟಾಗಿ ಆಕೆ ಮನೆಯಿಂದ ಹೊರನಡೆದು ತನ್ನ ಮಗಳು ಸುಜಾತಾ ಜೊತೆ ನೆಲೆಸಿದರು. ಮದುವೆಯಾಗಿ 40 ವರ್ಷಗಳ ಬಳಿಕ ಕೌಸಲ್ಯಾ ತನ್ನ ಪತಿಯ ವಿರುದ್ಧ ಗೃಹ್ಯ ಹಿಂಸೆ ಹಾಗೂ ದೌರ್ಜನ್ಯದ ದೂರು ನೀಡಿದರು. ಕೌಸಲ್ಯಾ ಅವರ ಕಾನೂನು ಹೋರಾಟದಲ್ಲಿ ಅವರ ಪುತ್ರಿ ಮತ್ತು ಪುತ್ರ ನೆರವಾದರು.

ದಾಂಪತ್ಯ ಜೀವನದಲ್ಲಿ ತಾನು ಅನುಭವಿಸಿದ ಯಾತನಾಮಯ ಘಟನೆಗಳನ್ನು ಕೌಸಲ್ಯಾ ಅವರು ತನ್ನ ಆತ್ಮಕಥನದಲ್ಲಿ ಬರೆದಿದ್ದು ಅದು ಓದುಗರನ್ನು ಬೆಚ್ಚಿಬೀಳಿಸುತ್ತವೆ.

ತನ್ನ ಪತಿ ದೇವೇಂದ್ರ ಕುಮಾರ್‌ಗೆ ಆತನ ದೈಹಿಕ ಅಗತ್ಯಗಳನ್ನು ಈಡೇರಿಸುವ ಹಾಗೂ ಆತನಿಗೆ ಆಹಾರವನ್ನು ಸಿದ್ಧಪಡಿಸಿಕೊಡುವುದಕ್ಕಾಗಿ ಮಾತ್ರವೇ ಹೆಂಡತಿ ಬೇಕಾಗುತ್ತದೆ ಎಂದು ಕೌಸಲ್ಯ ತನ್ನ ಆತ್ಮಕಥಾನಕದಲ್ಲಿ ಬರೆದಿದ್ದಾರೆ.

ಜಾತಿ ಹಾಗೂ ಲಿಂಗಭೇದದ ಶಾಪದ ನಡುವೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ವ್ಯವಸ್ಥೆಯು ಕೌಸಲ್ಯಾ ಅವರಿಗೆ ಅತ್ಯಂತ ಕರಾಳ ಹಾಗೂ ಯಾತನಾಮಯ ದಿನಗಳನ್ನು ತಂದುಕೊಟ್ಟಿತು.

ಮನೆಯಲ್ಲಿ ಒಂದೆಡೆ ಪತಿಯ ಶೋಷಣೆಯಿಂದ ನರಳುತ್ತಿದ್ದರೂ, ಕೌಸಲ್ಯಾ ಧೃತಿಗೆಡದೆ ದಲಿತ ಮಹಿಳಾವಾದಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಆಕೆಯ ಚಿಂತನೆಗಳು ಜನಸಮೂಹಕ್ಕೆ ಮೆಚ್ಚುಗೆಯಾದರೂ ಆಕೆಯ ಪತಿ ಅದನ್ನು ತಿರಸ್ಕರಿಸಿದ್ದರು.

ಕೌಸಲ್ಯಾ ಅವರು ಜಾಗೃತ ನಾಗರಿಕಳಾಗಿದ್ದರು. ದಲಿತ ಮಹಿಳೆಯರಲ್ಲಿ ಜಾಗೃತಿಯನ್ನು ಹರಡುವುದು ತನ್ನ ಕರ್ತವ್ಯವೆಂದು ಆಕೆ ಭಾವಿಸಿದ್ದರು. ಕೌಸಲ್ಯಾ ಅವರು ಮರಾಠಿ ಭಾಷೆಯಿಂದ ಹಲವಾರು ಪ್ರಬಂಧಗಳು ಹಾಗೂ ಲೇಖನಗಳನ್ನು ಹಿಂದಿಗೆ ಭಾಷಾಂತರಿಸಿದರು. ಜಯಾ ಬಾಯಿ ಚೌಧುರಿ ಹಾಗೂ ಮುಕ್ತಾ ಬಾಯಿ ಅವರಂತಹ ಉದಾತ್ತ ಮಹಿಳಾ ಚಿಂತಕರು, ಹೋರಾಟಗಾರ್ತಿಯರನ್ನು ಅವರು ಓದುಗರಿಗೆ ಪರಿಚಯಿಸಿದರು. ಅಸ್ಪಶ್ಯತೆ ಹಾಗೂ ಅದರ ಕೆಡುಕಿನ ಬಗ್ಗೆ ಆಕೆ ತನ್ನ ಲೇಖನಗಳಲ್ಲಿ ಬರೆದಿದ್ದರು. ಹಲವಾರು ಅನುವಾದಿತ ಹಾಗೂ ಸ್ವರಚಿತ ಲೇಖನಗಳ ಬಳಿಕ ಕೌಸಲ್ಯಾ ಹಿಂದಿಯಲ್ಲಿ ಬರೆದ ಆತ್ಮಕಥೆ ‘ದೋಹ್ರಾ ಅಭಿಶಾಪ್’ ಹಿಂದಿ ಸಾಹಿತ್ಯದ ಮೈಲುಗಲ್ಲುಗಳಲ್ಲೊಂದಾಗಿದೆ.

‘‘ಇತರ ಹಲವಾರು ಮಹಿಳೆಯರಿಗೂ ಕೂಡಾ ತಮ್ಮ ದಾಂಪತ್ಯ ಜೀವನದಲ್ಲಿ ನನಗಾದಂತಹದೇ ಅನುಭವಗಳಾಗಿರಬಹುದು. ಆದರೆ ಸಮಾಜ ಮತ್ತು ಕುಟುಂಬಕ್ಕೆ ಹೆದರಿ ಅವರು ತಮ್ಮ ದುರಂತ ಕತೆಯನ್ನು ಬಹಿರಂಗಪಡಿಸಲು ಹೆದರುತ್ತಾರೆ ಮತ್ತು ಉಸಿರುಗಟ್ಟುವಂತಹ ವಾತಾವರಣದಲ್ಲಿ ಜೀವನವಿಡೀ ಸವೆಸುತ್ತಾರೆ. ಸಮಾಜದ ಕಣ್ಣುಗಳನ್ನು ತೆರೆಸಲು ಇಂತಹ ದಾರುಣ ಕತೆಗಳು ಅನಾವರಣಗೊಳ್ಳುವುದು ಅಗತ್ಯವಾಗಿದೆ’’ ಎಂದು ಕೌಸಲ್ಯಾ ಬರೆಯುತ್ತಾರೆ.

ಕೌಸಲ್ಯಾ ಅವರು ತನ್ನ ಸ್ನೇಹಿತೆಯರು ಹಾಗೂ ಪರಿಚಯಸ್ಥರನ್ನು ಆಹ್ವಾನಿಸುವ ಮೂಲಕ ದಲಿತ ಮಹಿಳೆಯರನ್ನು ಸಂಘಟಿಸುವ ಕೆಲಸದಲ್ಲಿ ತೊಡಗುತ್ತಾರೆ. ಆಗ ನಗರದಲ್ಲಿ ದಲಿತ ಮಹಿಳೆಯರ ಅಹವಾಲುಗಳಿಗೆ ಧ್ವನಿಗೂಡಿಸುವ ಯಾವುದೇ ಸಂಘಟನೆಯಿರಲಿಲ್ಲ. ಹೀಗಾಗಿ ನೂತನ ಸಂಘಟನೆಯೊಂದನ್ನು ನಿರ್ಮಿಸುವ ಸಾಹಸಕ್ಕೆ ಮುಂದಾದರು. ಪ್ರತಿ ತಿಂಗಳ ಎರಡನೇ ಶನಿವಾರದ ಕೌಟುಂಬಿಕ ಪಿಕ್‌ನಿಕ್ ಕಾರ್ಯಕ್ರಮದಂತೆ ಸದಸ್ಯೆಯರು ಒಂದೆಡೆ ಕಲೆಯುತ್ತಿದ್ದರು. ಆದರೆ ಸದಸ್ಯರ ಸಂಖ್ಯೆ ಹೆಚ್ಚತೊಡಗಿದಂತೆ ಅವರು ತಮ್ಮ ಸಂಘಟನೆಗೆ ಹೊಸ ಸ್ವರೂಪವನ್ನು ನೀಡಿದರು ಮತ್ತು ಅದಕ್ಕೆ ‘ಮಹಿಳಾ ಸಮತಾ ಸಮಾಜ್’ ಎಂಬುದಾಗಿ ನಾಮಕರಣ ಮಾಡಿದರು. ಕೌಸಲ್ಯಾ ಅವರ ದೃಢನಿರ್ಧಾರ ಹಾಗೂ ನಿರಂತರ ಪರಿಶ್ರಮದ ಫಲವಾಗಿ ಈ ಸಂಘಟನೆಯು ದಿಲ್ಲಿಯಲ್ಲಿ ಮಾತ್ರವಲ್ಲ ಅಖಿಲ ಭಾರತ ಮಟ್ಟದಲ್ಲಿಯೂ ಮನ್ನಣೆಯನ್ನು ಪಡೆದುಕೊಂಡಿತು. ಕೌಸಲ್ಯಾ ದಿಲ್ಲಿಯ ಪ್ರಪ್ರಥಮ ದಲಿತ ಮಹಿಳಾ ಪ್ರತಿನಿಧಿಯಾಗಿ, ಆಗಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್‌ರನ್ನು ಭೇಟಿಯಾಗಿ ದಲಿತ ಮಹಿಳೆಯರ ಅಹವಾಲುಗಳನ್ನು ಸಲ್ಲಿಸುವ ಮೂಲಕ ದೇಶದ ಗಮನಸೆಳೆದರು.

ಲಿಂಗ ಸಮಾನತೆಗಾಗಿ ಕೌಸಲ್ಯಾ ಅವರು ಅವಿಶ್ರಾಂತವಾಗಿ ಹೋರಾಡಿದರು ಹಾಗೂ ದಲಿತ ಮಹಿಳೆಯರ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದರು. ಕೌಸಲ್ಯಾ ಅವರ ವೈಯಕ್ತಿಕ ಬದುಕು ಯಾತನಾಮಯವಾಗಿತ್ತಾದರೂ ಅದೆಲ್ಲವನ್ನೂ ಮೀರಿ ನಿಂತು ಅವರು ಜನಸಮೂಹದ ಧ್ವನಿಯಾದರು.

ಕೌಸಲ್ಯಾ ಬೈಸಾಂತ್ರಿ ನಿಜವಾದ ಅಂಬೇಡ್ಕರ್‌ವಾದಿಯಾಗಿದ್ದರು. ಯಾಕೆಂದರೆ ಆಕೆ ತನ್ನ ಹೃದಯಾಂತರಾಳದಿಂದಲೇ ಅಂಬೇಡ್ಕರ್‌ವಾದವನ್ನು ಆಚರಿಸುತ್ತಿದ್ದರು. ಡಾ.ಅಂಬೇಡ್ಕರ್ ಪ್ರತಿಪಾದಿಸಿದಂತಹ ‘ಸುಶಿಕ್ಷಿತರನ್ನಾಗಿಸಿ, ಪ್ರತಿಭಟಿಸಿ, ಸಂಘಟಿಸಿ’ ಎಂಬ ತತ್ವವನ್ನು ಆಕೆ ತನ್ನ ಬದುಕಿನಲ್ಲಿ ಅನುಸರಿಸಿದ್ದರು. ಭಾರತದ ಮಹಿಳಾವಾದಿ ಚಳವಳಿಗೆ ಕೌಸಲ್ಯಾ ಅವರ ಕೊಡುಗೆ ಅಗಾಧವಾದುದು. ಅಂಬೇಡ್ಕರ್ ಅವರ ಬಗ್ಗೆ ಓದುವುದು ಅಥವಾ ತಮ್ಮ ವೃತ್ತಿ ಜೀವನದಲ್ಲಿ ಮೇಲೇರುವುದು ಮಾತ್ರವೇ ಸಾಕಾಗದು. ನಿಜವಾದ ಅಂಬೇಡ್ಕರ್‌ವಾದಿಯಾಗ ಬೇಕಾದರೆ ಆತ/ಆಕೆ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಅನುಸರಿಸಬೇಕು ಹಾಗೂ ಚಳವಳಿಯ ಕಿಚ್ಚು ಹೊತ್ತಿಕೊಂಡೇ ಇರುವಂತೆ ನೋಡಿಕೊಳ್ಳಬೇಕು ಎಂಬುದಕ್ಕೆ ಕೌಸಲ್ಯಾ ಅವರ ಬದುಕು, ಹೋರಾಟ ಉಜ್ವಲ ನಿದರ್ಶನವಾಗಿದೆ.

ಕೃಪೆ: theprint.in

Writer - ಸಿದ್ದೇಶ್ ಗೌತಮ್

contributor

Editor - ಸಿದ್ದೇಶ್ ಗೌತಮ್

contributor

Similar News