ಕೊರೋನ ಪರಿಸ್ಥಿತಿಯಲ್ಲಿ ಸರಕಾರ ಜನರ ಜೊತೆಗಿರಲಿ

Update: 2021-04-28 19:30 GMT

ದೇಶದಲ್ಲಿ ಕೊರೋನ ಎರಡನೇ ಅಲೆ ಬಹಳಷ್ಟು ತೀವ್ರವಾಗಿ ಹರಡುತ್ತಿದೆ. ಊಹಿಸಲಾಗದಷ್ಟು ವೇಗದಲ್ಲಿ ಸಮುದಾಯಕ್ಕೆ ಹರಡುತ್ತಿದೆ. ಇದನ್ನು ತಡೆಗಟ್ಟಲು ರಾಜ್ಯ ಸರಕಾರ ಕಳೆದ ವಾರ ರಾತ್ರಿ ಕರ್ಫ್ಯೂ ಹಾಗೂ ಶನಿವಾರ ಮತ್ತು ರವಿವಾರ ದಿನಪೂರ್ತಿ ಕರ್ಫ್ಯೂ ವಿಧಿಸಿತು. ತದನಂತರ ಏಪ್ರಿಲ್ 27ರ ರಾತ್ರಿ 9 ಗಂಟೆಯಿಂದ ಎರಡು ವಾರಗಳ ಕಾಲ ಕಠಿಣ ರೀತಿಯ ‘ಕೊರೋನ ಕರ್ಫ್ಯೂ’ ವಿಧಿಸಿದೆ.

ಕೊರೋನ ತಡೆಗಟ್ಟಲು ಇಂತಹ ಕ್ರಮಗಳು ಸರಿಯಾದ ಮಾರ್ಗವಾದರೂ ಮತ್ತು ಈ ಸಮಯ ಉಳ್ಳವರಿಗೆ ನೆಮ್ಮದಿ ತಂದರೂ, ಬಡವರು ಸಂಕಷ್ಟಕ್ಕೀಡಾಗುವುದು ಶತಸಿದ್ಧ. ಕೊರೋನ ಕರ್ಫ್ಯೂ ವಿಧಿಸದಿದ್ದರೆ ಕೊರೋನ ನಿಯಂತ್ರಣಕ್ಕೆ ಬರುವುದಿಲ್ಲ, ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದಿಲ್ಲ, ಸಾವಿನ ಸಂಖ್ಯೆ ಪ್ರಮಾಣದಲ್ಲಿ ಏರಿಕೆಯಾಗುವುದು ನಿಜ. ಆದರೆ ಎರಡನೇ ಅಲೆ ತೀವ್ರವಾಗುತ್ತಿದ್ದ ಸಮಯದಲ್ಲಿ ಸರಕಾರ ಮಾಡುತ್ತಿದ್ದುದಾದರೂ ಏನು? ಕಳೆದ ವರ್ಷವೇ ಕೊರೋನ ತನ್ನ ಸ್ವರೂಪವನ್ನು ತೋರಿಸಿತು. ತಜ್ಞರು ಎಚ್ಚರಿಸಿದ್ದರೂ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯದ ಆಡಳಿತ ಸರಕಾರ ಬಹುತೇಕ ಸೋತಿದೆ. ಈಗಲೂ ಸಹ ಸೋಲುತ್ತಿದೆ. ಬಹುತೇಕ ರಾಷ್ಟ್ರಗಳು ಕಳೆದ ವರ್ಷದ ಆರಂಭದಲ್ಲೇ ಲಸಿಕೆಯ ಬಗ್ಗೆ ತೀವ್ರ ಚಿಂತನೆ ನಡೆಸಿ, ಜನರಿಗೆ ಲಸಿಕೆಯನ್ನು ಪೂರೈಸುವುದರಲ್ಲಿ ಯಶಸ್ವಿಯಾದವು, ಆದರೆ ಭಾರತ ಒಂದು ವರ್ಷ ಮೌನ ವಹಿಸಿದ್ದಕ್ಕೆ ಸೋಂಕಿನ ಪ್ರಮಾಣ ತೀವ್ರವಾಯಿತು. ನಂತರ ಈ ವರ್ಷದ ಆರಂಭದಲ್ಲಿ ಕೇಂದ್ರ ಸರಕಾರ ‘‘ಕೊರೋನ ಹೋರಾಟದಲ್ಲಿ ಯಶಸ್ವಿಯಾಗಿದ್ದೇವೆ’’ ಎಂಬ ಹುಸಿ ಘೋಷಣೆ ಕೂಗಿತು. ಕಳೆದ ವರ್ಷ ಕೊರೋನದಿಂದ ಬದುಕಿನ ಹೋರಾಟದಲ್ಲಿ ನೊಂದ ಜನ ಈ ವರ್ಷದ ಆರಂಭದಲ್ಲಿ ಈ ಘೋಷಣೆಗೆ ಮನದಲ್ಲೇ ಮನ್ನಣೆ ಕೊಟ್ಟರು.

ಆದರೆ ಆಗಿದ್ದೇ ಬೇರೆ. ಕಳೆದ ತಿಂಗಳಿನ ಅಂತ್ಯದವರೆಗೂ ದೇಶದಲ್ಲಿ 1ಲಕ್ಷದ ಒಳಗೆ ಬರುತ್ತಿದ್ದ ಸೋಂಕಿನ ಸಂಖ್ಯೆ, ದಿಢೀರನೆ ಮೂರು ಪಟ್ಟು ಹೆಚ್ಚಿತು. ಹೀಗಾದರೆ ಮತದಾರರು ಸರಕಾರದ ಮಾತನ್ನು ನಂಬುವುದಾದರೂ ಹೇಗೆ? ಬದುಕುವುದಾದರೂ ಹೇಗೆ?

ಈ ವರ್ಷದ ಆರಂಭದಲ್ಲಿ ಲಸಿಕೆ ಬಿಡುಗಡೆಗೊಳಿಸಿ ದರೂ ಕೂಡ ಪೂರ್ಣ ಪ್ರಮಾಣದಲ್ಲಿ ಜನ ಸಾಮಾನ್ಯನಿಗೆ ಲಸಿಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಬೆಲೆ ರೂ. 600, 700 ಇದೆ. ಮೇ 1ರಿಂದ ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತ ಎಂದು ಮುಖ್ಯಮಂತ್ರಿಘೋಷಿಸಿದ್ದಾರೆ. ಆದರೆ ಜನ ಸಾಮಾನ್ಯನಿಗೆ ತಲುಪುವವರೆಗೂ ಸರಕಾರ ಜನರ ಬೆನ್ನ ಹಿಂದೆ ಇರಲೇಬೇಕು. ಚುನಾವಣಾ ಸಂದರ್ಭದಲ್ಲಿ ಶೇಕಡಾ ಇಂತಿಷ್ಟು ಪ್ರಮಾಣದಲ್ಲಿ ಚುನಾವಣೆ ನಡೆದಿದೆ ಎಂದು ಅಂದಾಜು ಮಾಡುತ್ತಾರೆ. ಆದರೆ ಲಸಿಕೆ ಪ್ರಮಾಣ ಪತ್ತೆ ಹಚ್ಚುವುದಕ್ಕೆ ಸರಕಾರಕ್ಕೆ ಕಷ್ಟವಾಗುತ್ತಿರುವುದೇಕೆ? ಕೊರೋನ ಲಸಿಕೆಯ ಕುರಿತು ಜಾಗೃತಿಯ ಕಾರ್ಯಕ್ರಮಗಳನ್ನು ಸರಕಾರ ಮಾಡುತ್ತಿಲ್ಲ. ಕೇವಲ ಮಾತಿನಲ್ಲಿ ಲಸಿಕೆ ಪಡೆಯಿರಿ ಎಂಬ ಘೋಷಣೆ ಸಾಕಾಗುವುದಿಲ್ಲ. ಬಹುತೇಕರು ಲಸಿಕೆ ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಲಸಿಕೆಯ ಕುರಿತು ಜನಸಾಮಾನ್ಯರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು. ಕೊರೋನ ವಿಪತ್ತಿನಲ್ಲಿ ಕೇಂದ್ರದಿಂದ ಮೆಟ್ರೋ ರೈಲಿಗೆ ಅನುಮತಿ ಸಿಕ್ಕಿದೆ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವಾಗ, ಲಸಿಕೆಯ ಕುರಿತು ಜಾಗೃತಿ ಏಕೆ ಮಾಡಬಾರದು?

ಕೊರೋನ ಕರ್ಫ್ಯೂ ಸಂದರ್ಭದಲ್ಲಿ ಜನ ಸಾಮಾನ್ಯನ ಕೈ ಹಿಡಿಯಬೇಕಾದದ್ದು ಸರಕಾರದ ಕರ್ತವ್ಯವಾಗಿದೆ. ಕಳೆದ ವರ್ಷ ಕೊರೋನ ಮತ್ತು ಲಾಕ್‌ಡೌನ್‌ನಿಂದ ನೊಂದ ಬಡ ಮತ್ತು ಮಧ್ಯಮವರ್ಗದ ಕುಟುಂಬ ಇಂದಿಗೂ ಬದುಕನ್ನು ಸುಧಾರಿಸಿಕೊಳ್ಳಲು ಒದ್ದಾಡುತ್ತಿದೆ. ಸಾವಿರ ರೂಪಾಯಿ ಉಳಿತಾಯವೂ ಸಾಧ್ಯವಾಗುತ್ತಿಲ್ಲ. ದಿನ ಬಳಕೆಯ ಸಾಮಗ್ರಿಗಳ ಬೆಲೆಗಳನ್ನು ಗಮನಿಸಿದರೆ ಭಯವಾಗುತ್ತಿದೆ. ಖಾಸಗಿ ಸಂಸ್ಥೆಗಳ ಮಾಲಕರಂತೂ ಸಂಬಳ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ಸಂಸ್ಥೆಗಳು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿವೆ. ಈ ಬಾರಿ ಹೇಗಾಗುವುದೆಂಬುದು ದೇವರಿಗೇ ಗೊತ್ತು.

ಒಟ್ಟಿನಲ್ಲಿ ಕೊರೋನದ ಜೊತೆಗೆ ಹಸಿವಿನಿಂದ ಜನ ಪ್ರಾಣ ಕಳೆದುಕೊಳ್ಳಬಾರದು. ಅವರ ಮೂಲ ಮೂಲಭೂತ ಅಗತ್ಯಗಳಿಗೆ ಕೊರತೆಯಾಗದಂತೆ ಇನ್ನಾದರೂ ಸರಕಾರ ಕ್ರಮಕೈಗೊಳ್ಳಬೇಕಾಗಿದೆ. ದೇಶ ದುರಂತದ ಕಡೆಗೆ ಸಾಗದಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News